ಅಂಕಣಗಳು

ಹೌದು, ಹೆಣ್ಣುಮಕ್ಕಳು ಸುಂದರವಾಗಿರಬಾರದು...

Published On :

ಹತ್ತನೇ ತರಗತಿ ಮುಗಿಯುತ್ತಿದ್ದಂತೆಯೇ ರಾಜೇಶ್ವರಿಗೆ ಮದುವೆಯಾಯಿತು. 'ಅಯ್ಯೋ, ಇಷ್ಟೊಂದು ಚಿಕ್ಕ ವಯಸ್ಸಿಗೇ ಮದುವೆ ಮಾಡುವುದಾ? ಇದು ಬಾಲ್ಯವಿವಾಹ ಅಲ್ಲವಾ. ಕಾನೂನಿನ ದೃಷ್ಟೀಲಿ ಇದು ಅಪರಾಧ ಅಲ್ಲವಾ ಎಂದು ನಮ್ಮೂರಿನ ಒಂದಿಬ್ಬರು ರಾಗ ತೆಗೆದರು. ಆ ಸಂದರ್ಭದಲ್ಲಿ ಅವರ ಮುಂದೆ ಕೈ ಮುಗಿದು ನಿಂತ ರಾಜೇಶ್ವರಿಯ ತಾಯಿ ಲಲಿತಮ್ಮ, 'ನನ್ನ ಮಗಳು ಶ್ರೀಮಂತ ಕುಟುಂಬದ ಸೊಸೆ ಆಗ್ತಾಯಿರೋ ಈ ಶುಭ ಸಂದರ್ಭದಲ್ಲಿ ಏನೂ ಕೆಟ್ಟದು ಮಾಡಬೇಡಿ ಕಣ್ರಪ್ಪಾ' ಅಂದುಬಿಟ್ಟಳು. ಪರಿಣಾಮವಾಗಿ, ಸಣ್ಣದೊಂದು ವಿರೋಧವೂ ಇಲ್ಲದೆ ರಾಜೇಶ್ವರಿಯ ಮದುವೆ ನಡೆದುಹೋಯಿತು.
ಲಲಿತಮ್ಮ, ತಾಲೂಕಾಫೀಸಿನಲ್ಲಿ ಗುತ್ತಿಗೆ ಆಧಾರದಲ್ಲಿ ಕ್ಲರ್ಕ್ ಕೆಲಸ ಮಾಡಿಕೊಂಡಿದ್ದರು. ಅದೇ ಆಫೀಸಿನಲ್ಲಿ ಮೇನೇಜರ್ ಆಗಿದ್ದರು ಭಾರತೀದೇವಿ. ಈಕೆಯ ಗಂಡ ಬ್ಯಾಂಕ್‌ನ ಕ್ಲಕ್ ಆಗಿದ್ದರು. ಈ ದಂಪತಿಗೆ, ಮದುವೆ ವಯಸ್ಸಿಗೆ ಬಂದ ಮಗನಿದ್ದ. ಆಫೀಸಿನ ಕೆಲಸಗಳ ಮಧ್ಯೆ ಅದೂ ಇದೂ ಮಾತನಾಡುತ್ತಾ, 'ನಮಗೆ ಒಬ್ಬನೇ ಮಗ. ಊರಲ್ಲಿ ಪಿತ್ರಾರ್ಜಿತವಾಗಿ ಬಂದ ಜಮೀನು-ತೋಟ ಇದೆ. ನಮ್ಮಿಬ್ಬರ ದುಡಿಮೆಯ ಹಣವೂ ಬ್ಯಾಂಕ್‌ಗಳಲ್ಲಿದೆ. ನಿಜ ಹೇಳಬೇಕು ಅಂದ್ರೆ ಎರಡು ತಲೆಮಾರು ಕೂತು ತಿಂದ್ರೂ ಸಾಕಾಗುವಷ್ಟು ಆಸ್ತಿ ಮಾಡಿದೀವಿ. ಮಗನಿಗೆ ಬೇಗ ಮದುವೆ ಮಾಡಬೇಕು. ಅವನು ಹೆಂಡತಿ ಜೊತೆ ಖುಷಿಯಿಂದ ಇರುವುದನ್ನು ನೋಡಬೇಕು ಎಂಬುದೇ ನಮ್ಮ ಆಸೆ' ಎಂದು ಭಾರತಿದೇವಿ ಹೇಳಿಕೊಂಡಿದ್ದಳು. ಈ ವೇಳೆಗೆ ಲಲಿತಮ್ಮನೂ ತಮ್ಮದೇ ಜಾತಿಗೆ ಸೇರಿದವರು ಎಂದೂ ಆಕೆಗೆ ತಿಳಿದುಹೋಗಿತ್ತು.
ಈ ಮಧ್ಯೆ, ಯಾವುದೋ ಹಬ್ಬದ ನೆಪದಲ್ಲಿ ಮಗಳನ್ನು ಕರೆದುಕೊಂಡೇ ಭಾರತಿದೇವಿಯ ಮನೆಗೆ, ಆಕೆಯ ಗಂಡನ ಊರಿಗೆ ಹೋಗಿ ಬಂದಳು ಲಲಿತಮ್ಮ. ಈ ಸಂದರ್ಭದಲ್ಲಿ ರಾಜೇಶ್ವರಿಯನ್ನು ಸೊಸೆಯನ್ನಾಗಿ ಮಾಡಿಕೊಳ್ಳುವ ಮಾತು ಭಾರತಿದೇವಿಯ ಕಡೆಯಿಂದಲೇ ಬಂತು. ಲಕ್ಷ ಲಕ್ಷ ಆಸ್ತಿ ಹೊಂದಿರುವ ಕುಟುಂಬಕ್ಕೆ ಸೊಸೆಯಾಗಿ ಹೋದರೆ ಮಗಳು ನೆಮ್ಮದಿಯಿಂದ ಬದುಕುತ್ತಾಳೆ ಎಂದು ಲಲಿತಮ್ಮನ ನಂಬಿಕೆ. ಆಕೆ ಅದನ್ನೇ ಗಂಡನಿಗೂ ಹೇಳಿದಳು. ಅದೇ ಮಾತು ಹೇಳಿ ಮಗಳನ್ನೂ ಒಪ್ಪಿಸಿಬಿಟ್ಟಳು. ಹಾಂ ಹೂಂ ಅನ್ನುವ ಮೊದಲೇ ರಾಜೇಶ್ವರಿ ಗೃಹಿಣಿಯಾದದ್ದು ಹೀಗೆ.
ಶ್ರೀಮಂತರ ಮನೆಯ ಸುದ್ದಿಗಳೆಲ್ಲಾ ವಕ್ರವಕ್ರ ಎಂಬ ಮಾತಿದೆ. ರಾಜೇಶ್ವರಿಯ ವಿಷಯದಲ್ಲೂ ಅದು ನಿಜವಾಯಿತು. ಆಕೆಯ ಗಂಡ ಮಹಾ ಕುಡುಕನಾಗಿದ್ದ. ಸ್ತ್ರೀ ಲೋಲನಾಗಿದ್ದ. ಶುದ್ಧ ಸೋಮಾರಿಯಾಗಿದ್ದ. ಕುಡಿತಕ್ಕೆ, ಇತರೆ ಶೋಕಿಗಳಿಗೆ ಹಣ ಕೊಡದೇ ಹೋದರೆ ಹೆತ್ತವರೊಂದಿಗೆ ಜಗಳಕ್ಕೆ ನಿಲ್ಲುತ್ತಿದ್ದ. ನಾನು ಹೇಳಿದಂತೆ ಕೇಳದೆ ಹೋದ್ರೆ ನೇಣು ಹಾಕ್ಕೊಂಡು ಸತ್ತು ಹೋಗ್ತೇನೆ ಎಂದು ಬ್ಲಾಕ್ ಮೇಲ್ ಮಾಡುತ್ತಿದ್ದ. ಹೆಂಡತಿಯೊಬ್ಬಳು ಜೊತೆಯಾದರೆ ಮಗ ಸರಿದಾರಿಗೆ ಬರಬಹುದು ಎಂದು ಭಾರತಿದೇವಿಯ ನಂಬಿಕೆಯಾಗಿತ್ತು. ರಾಜೇಶ್ವರಿಗೂ ಅದನ್ನೇ ಹೇಳಿದ್ದರು. 'ಅವನನ್ನು ಸರಿದಾರಿಗೆ ತರಬೇಕಿರೋದು ನಿನ್ನ ಕರ್ತವ್ಯ' ಎಂದಿದ್ದರು. ಆದರೆ, ರಾಜೇಶ್ವರಿಯ ಗಂಡ, ಯಾರನ್ನೂ ಕೇರ್ ಮಾಡದೆ ಬದುಕತೊಡಗಿದ. ಒಂದೆರಡು ಬಾರಿ ರಾಜೇಶ್ವರಿ ಅಸಹನೆಯಿಂದ ಪ್ರಶ್ನಿಸಿದ್ದಕ್ಕೆ ಅವಳಿಗೆ ದನಕ್ಕೆ ಬಡಿದಂತೆ ಬಡಿದುಬಿಟ್ಟ. ಅಂದಿನಿಂದ, ಆಗಿಂದ್ದಾಗ್ಗೆ ಗಂಡನಿಂದ ಹೊಡೆತ ತಿನ್ನುವುದು ರಾಜೇಶ್ವರಿಯ ಪಾಲಿಗೆ ಅನಿವಾರ್ಯ ಕರ್ಮವಾಯಿತು. ಹೀಗೇ ಎರಡು ವರ್ಷ ಕಳೆದವು. ಗಂಡ-ಹೆಂಡತಿಯ ಮಧ್ಯೆ ಹೊಂದಾಣಿಕೆಯೇ ಇಲ್ಲದ ಕಾರಣ ಮಕ್ಕಳೂ ಆಗಲಿಲ್ಲ. ಈಗ, ಭಾರತಿದೇವಿಯ ಆಸಹನೆ ರಾಜೇಶ್ವರಿಯ ಕಡೆಗೆ ತಿರುಗಿತು. ಮಗನನ್ನು ಕಂಟ್ರೋಲ್‌ನಲ್ಲಿ ಇಟ್ಟುಕೊಳ್ಳದಿದ್ದ ಮೇಲೆ ಸೊಸೆ ಇದ್ದರೆಷ್ಟು, ಬಿಟ್ಟರೆಷ್ಟು ಎಂದೇ ಆಕೆ ಯೋಚಿಸಿದಳು. ಒಂದು ಮಗುವಾದ್ರೂ ಆಗಿದ್ರೆ ಮಗ ಬದಲಾಗ್ತಿದ್ದ. ಆದ್ರೆ ಅದೂ ಆಗಲಿಲ್ಲ. ನಿನ್ನಲ್ಲೇ ಏನೋ ತೊಂದ್ರೆ ಇರಬೇಕು. ಏನೋ, ಬಡವರ ಮನೆ ಹುಡುಗೀನ ಉದ್ಧಾರ ಮಾಡೋಣ ಅಂತ ಮದುವೆ ಮಾಡಿಕೊಂಡ್ರೆ ನೀನೂ ನಮಗೆ ಹೊರೆ ಆಗಿಬಿಟ್ಟಲ್ಲೇ ಎಂದು ಹಂಗಿಸಿದರು. ಆನಂತರದಲ್ಲಿ ರಾತ್ರಿಯ ಹೊತ್ತು ಗಂಡನಿಂದ, ಬೆಳಗಿನ ಹೊತ್ತು ಅತ್ತೆಯಿಂದ ಮೂದಲಿಕೆಯ ಮಾತು ಕೇಳಿ ಕೇಳಿ ಕಂಗಾಲಾಗಿ ಹೋದ ರಾಜೇಶ್ವರಿ, ಕಡೆಗೊಂದು ದಿನ ಗಂಡನಿಗೆ ಡೈವೋರ್ಸ್ ನೀಡಿ ತವರಿಗೆ ವಾಪಸ್ಸಾದಳು.
ಹೇಳಿ ಕೇಳಿ ನಮ್ಮದು ಪುಟ್ಟ ಊರು. ಮದುವೆಯಾದ ಮೂರೇ ವರ್ಷಕ್ಕೆ ಗಂಡನನ್ನು ಬಿಟ್ಟು ಬಂದ ರಾಜೇಶ್ವರಿಯ ಬಗ್ಗೆ ಜನ ತಲೆಗೊಂದು ಮಾತಾಡಿದರು. ಈ ವೇಳೆಗೆ ಲಲಿತಮ್ಮನಿಗೆ ಬಾಸ್ ಆಗಿದ್ದ ಭಾರತೀದೇವಿ, ಆಫೀಸಿನಲ್ಲಿ ಎಲ್ಲರ ಮುಂದೆ ಛೀಮಾರಿ ಹಾಕಿ ಬಿಟ್ಟಳು. ದುಡ್ಡಿರುವ ಜನ ಏನು ಮಾಡಲೂ ಹೇಸುವುದಿಲ್ಲ ಎಂಬುದು ಮತ್ತೆ ಸಾಬೀತಾಯಿತು. ಭಾರತೀದೇವಿಯ ಕಿರುಕುಳದಿಂದ ಕಂಗಾಲಾದ ಲಲಿತಮ್ಮ, ತನ್ನ ಹಂಗಾಮಿ ನೌಕರಿಗೆ ಗುಡ್‌ಬೈ ಹೇಳಿ ಮನೆ ಸೇರಿಕೊಂಡಳು. ಹೀಗೇ ಮತ್ತೂ ಒಂದು ವರ್ಷ ಕಳೆಯಿತು. ರಾಜೇಶ್ವರಿಗೆ ಯಾವುದೇ ಹೊಸ ಸಂಬಂಧವೂ ಬರಲಿಲ್ಲ. ನೋಡಲು ತುಂಬ ಚೆಂದಕ್ಕಿದ್ದ ಈ ಹುಡುಗಿಯ ಭವಿಷ್ಯವನ್ನು -'ಗಂಡನನ್ನು ಬಿಟ್ಟವಳು' ಎಂಬ ಒಂದೇ ಮಾತು ಅಡ್ಡಡ್ಡ ನುಂಗಿಹಾಕಿತು. ಊರಲ್ಲಿಯೇ ಉಳಿದರೆ ಸುತ್ತಲಿನ ಜನರಿಂದ ಚುಚ್ಚುಮಾತು ಕೇಳುತ್ತಲೇ ಇರಬೇಕಾಗ್ತದೆ ಅನ್ನಿಸಿದಾಗ ಅಮ್ಮನಿಗೆ ಧೈರ್ಯ ಹೇಳಿ, ಬೆಂಗಳೂರಿನ ಬಸ್ ಹತ್ತಿದ್ದಳು ರಾಜೇಶ್ವರಿ. ಎಸ್ಸೆಸ್ಸೆಲ್ಸಿಗೇ ಓದು ನಿಲ್ಲಿಸಿದ್ದ ಆಕೆಗೆ ದೊಡ್ಡ ಸಂಬಳದ ಕೆಲಸ ಸಿಗುವುದಾದರೂ ಹೇಗೆ? ಏನೂ ತೊಂದರೆಯಾಗದಿರಲಿ ಎಂಬ ಉದ್ದೇಶದಿಂದಲೇ ಈಕೆ ಒಂದೆರಡು ಕಡೆಗಳಲ್ಲಿ ತನ್ನ ಹಳೆಯ ಕಥೆಯನ್ನು ಹೇಳಿಕೊಂಡಳು. ಆನಂತರದಲ್ಲಿ ಆಫೀಸಿನ ಜನ ಅವಳನ್ನು ನೋಡುವ ರೀತಿಯೇ ಬದಲಾಗಿ ಹೋಯಿತು. ಕೆಲವರು ಆಕೆಯನ್ನು ಪಿಕ್‌ನಿಕ್‌ಗೆ ಕರೆದರು. ಸಿನಿಮಾಕ್ಕೆ ಹೋಗಿ ಬರೋಣ ಬನ್ರೀ ಎಂದರು. ಮತ್ತೊಂದಿಬ್ಬರು, ಹೀಗೆ ಒಂಟಿಯಾಗಿ ಅದೆಷ್ಟು ದಿನ ಇರ್ತೀರ? ಎಂಜಾಯ್ ಮಾಡ್ರೀ ಎಂದೂ ಉಪದೇಶ ನೀಡಿದರು. ಬೆಂಗಳೂರಲ್ಲಿ ನಾಲ್ಕು ವರ್ಷಗಳು ಕಳೆದು ಹೋದಾಗ, ತೀರಾ ಸಲುಗೆಯಿಂದಿದ್ದ ಒಬ್ಬನ ಮುಂದೆ ನಿಂತು -'ನನ್ನನ್ನು ಮದುವೆಯಾಗ್ತೀರಾ?' ಎಂದು ಕೇಳಿದಳಂತೆ ರಾಜೇಶ್ವರಿ. ಅದಕ್ಕೆ ಅವನು -'ಮದುವೆಯ ಮಾತಾಡಬೇಡ. ಆದ್ರೆ ಗರ್ಲ್‌ಫ್ರೆಂಡ್ ಥರಾ ಒಟ್ಟಿಗಿರು' ಅಂದನಂತೆ!
ಮೊನ್ನೆ ಯುಗಾದಿಯ ನೆಪದಲ್ಲಿ ಊರಿಗೆ ಬಂದಿದ್ದ ರಾಜೇಶ್ವರಿ ಇದನ್ನೆಲ್ಲ ಹೇಳಿಕೊಂಡಳು. ನಾನು, ಯೋಗ್ಯ ಸಂಗಾತಿಯ ಹುಡುಕಾಟದಲ್ಲಿದ್ದೀನಿ. ಆದರೆ ನನಗೆ ಅಯೋಗ್ಯ ಗಂಡಸರೇ ಸಿಕ್ತಾ ಇದಾರೆ. ಎಲ್ಲರಿಗೂ ನನ್ನ ದೇಹದ ಮೇಲೆಯೇ ಕಣ್ಣು. ಇಷ್ಟು ದಿನ ಕಳೆದರೂ ಕಾಮುಕರಿಗೆ ಬಲಿಯಾಗದೆ ಉಳಿದಿದ್ದೀನಲ್ಲ; ಅದು ನಿಜವಾದ ಪವಾಡ. ಒಂದು ಮಾತು ಹೇಳ್ತೇನೆ: ಹೆಣ್ಣು ಮಕ್ಕಳು ಸುಂದರವಾಗಿ ಹುಟ್ಟಲೇಬಾರದು. ಸೌಂದರ್ಯವೇ ಅವರಿಗೆ ಶಾಪ ಆಗಿಬಿಡುತ್ತೆ. ಸುಂದರವಾಗಿರುವ ಹುಡುಗಿ ಒಂಟಿಯಾಗಿದ್ದಾಳೆ ಅಂತ ಗೊತ್ತಾದ್ರೆ ಅವಳನ್ನು ಬೇಟೆಯಾಡಲಿಕ್ಕೆ ಗಂಡಸರು ತುದಿಗಾಲಲ್ಲಿ ನಿಂತಿರ್ತಾರೆ...' ಎನ್ನುತ್ತಾ ಕಣ್ತುಂಬಿಕೊಂಡಳು. ಇದನ್ನೆಲ್ಲ ನಿಮ್ಮೊಂದಿಗೆ ಹೇಳಿಕೊಳ್ಳಬೇಕು ಅನ್ನಿಸ್ತು. ಯಾಕೋ..

-ನಾನು ಪ್ರಣತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.