ಮತದಾನಕ್ಕೂ ಮೊದಲು ನೀವು ತೂರಬೇಕಿರುವ ಪ್ರಶ್ನೆಗಳ ಬಾಣ
ಕರ್ನಾಟಕದ ರಾಜಧಾನಿ ಬೆಂಗಳೂರು ರಾಜ್ಯದ ಆದಾಯದಲ್ಲಿ ಶೇ. 50ಕ್ಕಿಂತ ಹೆಚ್ಚು ಕೊಡುಗೆಯನ್ನು ಸಲ್ಲಿಸುತ್ತದೆ. ಆದರೆ ಇದು ನಗರದ ಮೂಲ ಸೌಕರ್ಯ ಅಭಿವೃದ್ಧಿಯಲ್ಲಾಗಲೀ ನಾಗರಿಕ ಸೌಲಭ್ಯಗಳನ್ನು ಕೊಡುವುದರಲ್ಲಾಗಲೀ ಪ್ರತಿಬಿಂಬಿಸುತ್ತಿಲ್ಲ. ಇವತ್ತಿಗೂ ಬೆಂಗಳೂರು ನಗರವು ಕುಂಠಿತ ಅಭಿವೃದ್ಧಿ, ಅಹೋರಾತ್ರಿ ಟ್ರಾಫಿಕ್ ಕಿರಿಕಿರಿ, ರಸ್ತೆಗಳ ಅಸಮರ್ಪಕ ನಿರ್ವಹಣೆ, ವಿದ್ಯುತ್ ಮತ್ತು ನೀರು ಸರಬರಾಜು ವ್ಯವಸ್ಥೆಯಲ್ಲಿನ ಕೊರತೆ, ಸಾರ್ವಜನಿಕ ಸಾರಿಗೆ ಲೋಪ, ಘನತ್ಯಾಜ್ಯ ನಿರ್ವಹಣೆಯಲ್ಲಿ ವೈಫಲ್ಯ, ಭೂಮಿಯ ಅಕ್ರಮ ಡಿನೋಟಿಫಿಕೇಷನ್‌ಗಳು, ಅಧಿಕಾರಿ ವರ್ಗ ಉತ್ತರದಾಯಿ ಅಲ್ಲದಿರುವುದು ಇವೇ ಮುಂತಾದ ಸಮಸ್ಯೆಗಳಿಂದ ಬಳಲುತ್ತಿದೆ. ನಗರದ ಜೀವನಮಟ್ಟವನ್ನು ಸುಧಾರಿಸುವುದಕ್ಕೆ ಪರಿಣತರ ಸಮಿತಿ ನೀಡಿದ್ದ ಸಲಹೆಗಳು ಅಧಿಕಾರದ ಪಡಸಾಲೆಯಲ್ಲಿ ಧೂಳು ತಿನ್ನುತ್ತ ಕುಳಿತಿವೆ. ಸಮಸ್ಯೆಗಳಿಂದ ತೊಂದರೆಗೆ ಒಳಗಾದವರ ದೂರನ್ನು ಕೇಳಿಸಿಕೊಳ್ಳಬೇಕಾದ ಕಿವಿಗಳು ಕೆಪ್ಪಾಗಿವೆ.
ಇದೀಗ ಚುನಾವಣಾ ಸಮಯ. ನಮ್ಮ ಹಕ್ಕನ್ನು ಚಲಾಯಿಸುವುದಕ್ಕೆ ಮುನ್ನ ಮತದಾರರಾಗಿ ಕೆಲ ಹೋಮ್‌ವರ್ಕ್‌ಗಳನ್ನು ಮಾಡಿಕೊಳ್ಳಬೇಕಿದೆ. ನಿರ್ಣಾಯಕ ವಿಷಯಗಳ ಕುರಿತು ಈಗ ವಿಧಾನಸಭೆ ಉಮೇದುವಾರರಾಗಿರುವವರಿಗೆ ಪ್ರಶ್ನೆಗಳನ್ನು ಕೇಳಬೇಕಿದೆ. ಅವರು ಕೊಡುವ ಉತ್ತರಗಳಿಂದ, ಅವರ ಧ್ವನಿಯಲ್ಲಿರುವ ಪ್ರಾಮಾಣಿಕತೆಯ ಪ್ರಮಾಣದಿಂದ ಅವರನ್ನು ಮೌಲ್ಯಮಾಪನ ಮಾಡಬೇಕಾದ ಅಗತ್ಯವಿದೆ. ಹೀಗೆ ಅಳೆದುತೂಗಿದ ಮೇಲಷ್ಟೇ ಸೂಕ್ತ ಅಭ್ಯರ್ಥಿ ಯಾರೆಂದು ನಿರ್ಧರಿಸಿ. ಹಾಗಲ್ಲದೇ ಆಮೇಲೆ ಪರಿತಪಿಸುವುದರಿಂದ ಏನೂ ಲಾಭವಾಗದು.
ನಮ್ಮ ಬೆಂಗಳೂರು ಫೌಂಡೇಷನ್, ನಾಗರಿಕರ ಪರವಾಗಿ ಅಭ್ಯರ್ಥಿಗಳಿಗೆ ಕೇಳಬೇಕಾದ ಪ್ರಶ್ನೆಗಳ ಪಟ್ಟಿಯೊಂದನ್ನು ಸಿದ್ಧಪಡಿಸಿದೆ. ಬೆಂಗಳೂರಿನ ಎಲ್ಲ 28 ಸ್ಥಾನಗಳಿಗೆ ಸ್ಪರ್ಧಿಸಿರುವವರ ಬಳಿ ಈ ಪ್ರಶ್ನೆಗಳಿಗೆಲ್ಲ ಲಿಖಿತ ಉತ್ತರವನ್ನು ಪಡೆದು ಅಭ್ಯರ್ಥಿಗಳಿಂದ ಬದ್ಧತೆ ನಿರೀಕ್ಷಿಸುವ ಕೆಲಸವನ್ನು 'ನಮ್ಮ ಬೆಂಗಳೂರು ಫೌಂಡೇಷನ್' ಮಾಡಲಿದೆ. ನಾಗರಿಕರು ಇದೇ ಪಟ್ಟಿಯನ್ನು ತಮ್ಮ ಮನೆಬಾಗಿಲಿಗೆ ಮತ ಕೇಳುವುದಕ್ಕೆ ಬರುವ ಅಭ್ಯರ್ಥಿಗಳನ್ನು ಪ್ರಶ್ನೆಗೆ ಒಳಪಡಿಸುವುದಕ್ಕೆ ಬಳಸಿಕೊಳ್ಳಬಹುದು. ಇದರ ಜತೆಗೆ ಆಯಾ ಮತಕ್ಷೇತ್ರಕ್ಕೆ ಪ್ರಸ್ತುತವಾಗಿರುವ ವಿಷಯಗಳ ಕುರಿತೂ ಪ್ರಶ್ನಿಸಬೇಕು. ಕೇವಲ ಗೆಲುವಷ್ಟೇ ಗಮ್ಯವಲ್ಲ ಬದಲಿಗೆ ಮತದಾರರಿಗೆ ಬದ್ಧತೆಯನ್ನು ಹೊಂದಿರಬೇಕು ಎಂದು ಅಭ್ಯರ್ಥಿಗಳೆಲ್ಲ ತಿಳಿದುಕೊಳ್ಳುವಂತಾಗುತ್ತದೆ.
ಫೌಂಡೇಷನ್ ರೂಪಿಸಿರುವ ಪ್ರಶ್ನೆಗಳ ಪಟ್ಟಿ ಹೀಗಿದೆ-
- ಶಾಸಕರ ಸ್ಥಳೀಯ ಕ್ಷೇಮಾಭಿವೃದ್ಧಿ ನಿಧಿಯ ಬಳಕೆ ಬಗ್ಗೆ ನಿಯಮಿತ (ವಾರ್ಷಿಕ ಅಥವಾ ಅರ್ಧವಾರ್ಷಿಕ) ಪ್ರಗತಿ ವರದಿಯನ್ನು ಸ್ವಇಚ್ಛೆಯಿಂದ ಕೊಡುವುದು ಸಾಧ್ಯವೇ?
- ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿರುವ 'ಬೆಂಗಳೂರು ಮೆಟ್ರೊಪಾಲಿಟಿನ್ ಗವರ್ನನ್ಸ್ ಬಿಲ್' ಅನುಮೋದಿಸುತ್ತೀರಾ? ಇದು ಆಡಳಿತದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಬೆಂಗಳೂರಿನ ಒಟ್ಟಾರೆ ಅಭಿವೃದ್ಧಿ ಕಾರ್ಯಗಳ ಪರಾಮರ್ಶೆ ನಡೆಸುವ 'ಮೆಟ್ರೊಪಾಲಿಟನ್ ಪ್ಲಾನಿಂಗ್ ಕಮಿಷನ್' ಸ್ಥಾಪನೆಗೆ ಸಹಾಯಕ.
- ಚುನಾವಣೆಗೆ ನಿಮ್ಮ ವೆಚ್ಚವೇನು ಹಾಗೂ ಅದಕ್ಕೆ ಯಾರು ಹಣ ಒದಗಿಸುತ್ತಾರೆ ಎಂಬ ವಿವರಗಳನ್ನು ತೆರೆದಿರಿಸುವಿರಾ?
- ಸರ್ಕಾರದ ನೀತಿ ನಿರೂಪಣೆ, ಸರ್ಕಾರಿ ಕಾರ್ಯಕ್ರಮಗಳು ಹಾಗೂ ಶಾಸನಗಳ ವಿಷಯದಲ್ಲಿ ಪಕ್ಷಾತೀತವಾಗಿ ನಿಮ್ಮ ಮತಕ್ಷೇತ್ರದ ಪ್ರಮುಖರನ್ನು ಸಂಪರ್ಕಿಸಿ ನಾಗರಿಕರ ಅಭಿಪ್ರಾಯಗಳನ್ನು ಕಲೆ ಹಾಕುವುದಕ್ಕೆ ಸಿದ್ಧರಿದ್ದೀರಾ? ಈ ನಿಟ್ಟಿನಲ್ಲಿ ನಿಮ್ಮ ಕಾರ್ಯಯೋಜನೆ ಏನು?
- ನಗರದ ವಾಯು, ಜಲ ಹಾಗೂ ಶಬ್ದ ಮಾಲಿನ್ಯಗಳನ್ನು ಬಗೆಹರಿಸುವುದಕ್ಕೆ ಸಮರೋಪಾದಿ ಕ್ರಮಗಳ ಅಗತ್ಯವಿದೆ ಎಂಬುದನ್ನು ನೀವು ಒಪ್ಪುತ್ತೀರಾ? ಮಾಲಿನ್ಯದ ಮಟ್ಟವನ್ನು ತಗ್ಗಿಸುವ ವಿಷಯದಲ್ಲಿ ದೃಢ ನಿರ್ಧಾರಗಳನ್ನು, ನಿರ್ದಿಷ್ಟ ಅಭಿಪ್ರಾಯ ವ್ಯಕ್ತಪಡಿಸುವಿಕೆಯನ್ನೂ ಅಗತ್ಯ ಸಂದರ್ಭಗಳಲ್ಲಿ ಮಾಡಲು ನೀವು ತಯಾರಿದ್ದೀರಾ? ಈ ನಿಟ್ಟಿನಲ್ಲಿ ನಿಮ್ಮ ಕ್ರಿಯಾ ಯೋಜನೆ ಯಾವ ಬಗೆಯದ್ದಿದೆ?
- ಚರಂಡಿ ಮಾರ್ಗಗಳಲ್ಲಿ ಅಕ್ರಮವಾಗಿ ನಿರ್ಮಾಣವಾಗಿರುವ ನಿರ್ಮಿತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಕ್ಕೆ ನೀವು ತಯಾರಿದ್ದೀರಾ? ಪ್ರಾಥಮಿಕ ಹಾಗೂ ದ್ವಿತೀಯಕ ಚರಂಡಿಗಳು ಸೇರಿ 840 ಕಿ.ಮೀ.ಗಳಷ್ಟು ಚರಂಡಿಗಳನ್ನು ಬೆಂಗಳೂರು ಹೊಂದಿದೆ. ಈ ಪೈಕಿ 150 ಕಿ.ಮೀ. ಅಷ್ಟು ಜಾಗವನ್ನು ಅತಿಕ್ರಮಿಸಲಾಗಿದೆ. ಇದರ ಬಗ್ಗೆ ತಮ್ಮ ಕ್ರಿಯಾಯೋಜನೆ ಏನು?
- ನಿಮ್ಮ ಮತಕ್ಷೇತ್ರದ ವಾಸ್ತವ್ಯ ಹಾಗೂ ವಾಣಿಜ್ಯ ಪ್ರದೇಶಗಳು ತ್ಯಾಜ್ಯ ವಿಂಗಡನೆಯನ್ನು ಮಾಡುವಂತೆ ನೋಡಿಕೊಳ್ಳುವಿರಾ? ತ್ಯಾಜ್ಯ ನಿರ್ವಹಣೆ ನಿಟ್ಟಿನಲ್ಲಿ ನೀವು ಕೈಗೊಳ್ಳಲಿರುವ ಕ್ರಮಗಳೇನು?
- ನೀರಿನ ಕೊರತೆಯ ಸಮಸ್ಯೆಯಲ್ಲಿ ಬೆಂಗಳೂರು ನರಳುತ್ತಿದೆ. ಮಳೆಕೊಯ್ಲು, ಕೆರೆಗಳ ಪುನರುಜ್ಜೀವನ, ಅಂತರ್ಜಲ ಬಳಕೆಯ ಬಗ್ಗೆ ನಿಗಾ ಇವಕ್ಕೆಲ್ಲ ಬದ್ಧರಿದ್ದೀರಾ? ಸರ್ಕಾರಿ ಕಟ್ಟಡಗಳು ಹಾಗೂ ಜಾಗಗಳು ಮಳೆಕೊಯ್ಲನ್ನು ಅಳವಡಿಸಿಕೊಂಡು ಇತರರಿಗೆ ಮಾದರಿಯಾಗುವುದಕ್ಕೆ ತಮ್ಮ ಯೋಗದಾನ ನೀಡಲು ಸಿದ್ಧರಿದ್ದೀರಾ?
- ನಗರದ ಸಮಗ್ರ ಅಭಿವೃದ್ಧಿ ಯೋಜನೆ ಬಗ್ಗೆ ಆಸಕ್ತರು ವ್ಯಕ್ತಪಡಿಸಿರುವ ಕಳಕಳಿಯನ್ನು ಗಣನೆಗೆ ತೆಗೆದುಕೊಳ್ಳುತ್ತೀರಾ? ಯೋಜನೆಯಲ್ಲಿ ಸ್ಪಷ್ಟತೆ ತರುವ ನಿಟ್ಟಿನಲ್ಲಿ ಇವರ ಸಲಹೆಗಳನ್ನು ಪರಿಷ್ಕೃತ ಯೋಜನೆಯಲ್ಲಿ ಸೇರಿಸಿಕೊಳ್ಳುವಿರಾ?
- ಸಾರ್ವಜನಿಕ ಜಾಗಗಳು, ಆಟದ ಮೈದಾನಗಳು ಹಾಗೂ ಕೆರೆಗಳು ಅಕ್ರಮವಾಗಿ ಡಿನೋಟಿಫಿಕೇಷನ್‌ಗೆ ಒಳಗಾಗುವುದರ ವಿರುದ್ಧ ಧ್ವನಿ ಎತ್ತುವ ಬದ್ಧತೆ ತಮ್ಮಲ್ಲಿದೆಯೇ? ನಿಮ್ಮ ಮತಕ್ಷೇತ್ರದಲ್ಲಿ ಇವಕ್ಕೆಲ್ಲ ನಿರ್ಭಂದ ಹೇರಿ ಕಾನೂನು ಗಟ್ಟಿಯಾಗಿರುವುದಕ್ಕೆ ಅನುವು ಮಾಡಿಕೊಡುವಿರಾ?
- ವಾಸ್ತವ್ಯದ ಜಾಗಗಳಲ್ಲಿ ವಾಣಿಜ್ಯ ಚಟುವಟಿಕೆಗಳು ತಲೆ ಎತ್ತುವುದು ಅಲ್ಲಿ ವಾಸಿಸುತ್ತಿರುವವರ ನೆಮ್ಮದಿಯನ್ನೇ ಹಾಳು ಮಾಡುತ್ತದೆ. ನಿಮ್ಮ ಮತಕ್ಷೇತ್ರದ ನಾಗರಿಕರ ಸಹಭಾಗಿತ್ವದಲ್ಲಿ ಈ ಬಗ್ಗೆ ಕ್ರಿಯಾ ಯೋಜನೆ ರೂಪಿಸುತ್ತೀರಾ?
- ನಗರದ ಮೂಲಸೌಕರ್ಯ ನೆಪಕ್ಕೆ ಹೆಚ್ಚಿನ ಕೆರೆಗಳು ಆಹುತಿಯಾಗಿವೆ. ಈ ಹಿಂದೆ ಇದ್ದ 51 ಕೆರೆಗಳ ಜಾಗದಲ್ಲಿ ಈಗ ಉಳಿದಿರುವವು 17 ಮಾತ್ರ. ಇಂಥ ಒತ್ತುವರಿಗಳನ್ನೆಲ್ಲ ತೆರವುಗೊಳಿಸುವುದಕ್ಕೆ ಹಾಗೂ ಕೆರೆಗಳಿಗೆ ಶುದ್ಧನೀರು ಮಾತ್ರ ಪ್ರವೇಶಿಸುವಂತೆ ಕಾಮಗಾರಿಗಳನ್ನು ಕೈಗೊಳ್ಳುವ ಬದ್ಧತೆ ತಮ್ಮಲ್ಲಿದೆಯೇ? ಇದರಲ್ಲಿ ಉತ್ಸಾಹಿತ ನಾಗರಿಕರನ್ನು ಒಳಗೊಂಡು ಕೆರೆ ಅಭಿವೃದ್ಧಿ ಟ್ರಸ್ಟ್ ರೂಪಿಸುವುದಕ್ಕೆ ನೀವು ಮುಂದಾಗುತ್ತೀರಾ?
- ಪರಿಣಾಮಕಾರಿ ಆಡಳಿತದ ಅವಶ್ಯಕತೆ ಎದುರಾಗಿರುವ ಸಂದರ್ಭದಲ್ಲಿ ನಾಗರಿಕ ಸಂಸ್ಥೆಗಳ ವ್ಯಾಪ್ತಿಯನ್ನು ಮರುವ್ಯಾಖ್ಯಾನ ಮಾಡುವುದಕ್ಕೆ ತಾವು ಮುಂದಾಗುತ್ತೀರಾ?
- ವಾಸ್ತವ್ಯ ಪ್ರದೇಶ ಹಾಗೂ ಲೇಔಟ್‌ಗಳಲ್ಲಿ ಶೇ. 20ರಷ್ಟನ್ನು ನಗರದ ಬಡವರಿಗೆ ಎತ್ತಿಡುವ ಮೂಲಕ ಅವರಿಗೆ ನೆಲೆ ಕಲ್ಪಿಸುವಿರಾ?
- ಸೂಕ್ತ ಶಾಸನಗಳನ್ನು ಬೆಂಬಲಿಸುವುದರ ಮೂಲಕ ಹಾಗೂ ಗುರುತಿಸುವಿಕೆ ಮತ್ತು ದಾಖಲೀಕರಣದಲ್ಲಿ ತೊಡಗಿಸಿಕೊಳ್ಳುವ ಕಾನೂನುಬದ್ಧ ಅಂಗವೊದನ್ನು ಸ್ಥಾಪಿಸುವ ಮೂಲಕ ನಗರದ ಪಾರಂಪರಿಕ ನಿರ್ಮಿತಿಗಳನ್ನು ಸಂರಕ್ಷಿಸುವಿರಾ? ಈ ಬಗ್ಗೆ ನೀವು ಮಾಡಬಹುದಾಗಿದ್ದೇನು?
hsbalram@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

