ಪ್ರಣಾಳಿಕೆ ಎನ್ನುವ ಬಂಡಲ್ ಸಾಹಿತ್ಯ ಕುರಿತು
ವಿಧಾನ ಸಭೆ ಚುನಾವಣೆಯ ಹೇಮಾ ಹೇಮಿ ಜಗಳಕ್ಕೆ ಭೂಮಿಕೆ ಸಿದ್ಧವಾಗುತ್ತಿದೆ. ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಮುಗಿದಿದೆ. ಅಲ್ಲಿಗೆ ಜನಪ್ರತಿನಿಧಿಗಳ ಆಯ್ಕೆಯ ಪ್ರಕ್ರಿಯೆಯಲ್ಲಿ ಒಂದು ನಿರ್ಣಾಯಕ ಹಂತವನ್ನು ಮುಟ್ಟಿದ್ದೂ ಆಯಿತು. ಉಳಿದಿದ್ದೆಲ್ಲಾ ತಾನೇ ತಾನಾಗಿ ಆಗುವಂತಹದ್ದು.
ಅಭ್ಯರ್ಥಿಗಳ ಆಯ್ಕೆಯ ಸಂದರ್ಭದಲ್ಲಿ ಪ್ರತಿಷ್ಠಿತ ರಾಜಕೀಯ ಪಕ್ಷಗಳಾದರೂ ತಮ್ಮ ಪಕ್ಷದ ನೀತಿ- ನಿಯಮ ಸಿದ್ಧಾಂತಕ್ಕೆ ಹೊಂದಿಕೊಳ್ಳುವ ಅಭ್ಯರ್ಥಿಗಳನ್ನೇ ಆರಿಸಬೇಕೆನ್ನುವ ಮಾತನ್ನೇ ಮರೆತು, ಚುನಾವಣೆಯಲ್ಲಿ ಗೆಲ್ಲುವ ಅವಕಾಶವಿರುವವರನ್ನೇ ಆರಿಸಿರುವುದರಿಂದ ಗೆಲವನ್ನು ಬಿಟ್ಟು ಉಳಿದೆಲ್ಲ ವಿಷಯಗಳೂ ಗೌಣವಾಗಿಬಿಟ್ಟಿವೆ.
ಈ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳಿಗೆ ಚುನಾವಣೆ ಸಮಯದಲ್ಲಿ ಒಂದು ನೀತಿ ನಿರೂಪಕ, ಉದ್ದೇಶಗಳನ್ನು ಪ್ರಕಟಿಸುವ ಪ್ರಣಾಳಿಕೆಯೂ ಇರಬೇಕೆನ್ನುವುದನ್ನು ಸದ್ಯ ಇನ್ನೂ ಪಕ್ಷಗಳು ಮರೆತಿಲ್ಲ. ಕೆಲವು ಪಕ್ಷಗಳ ಪ್ರಣಾಳಿಕೆಗಳೇನೋ ಪ್ರಕಟವಾಗಿವೆ. ಆದರೆ ಎಲ್ಲ ಪಕ್ಷಗಳೂ ಒಂದೇ ರೀತಿಯ ಆಶ್ವಾಸನೆಗಳನ್ನು ನೀಡುತ್ತಿವೆ. ಒಂದು ರೀತಿಯಲ್ಲಿ ಇಡೀ ಚುನಾವಣೆಯ ಪ್ರಕ್ರಿಯೆಯನ್ನು ಜನರಿಗೆ ಸರ್ಕಾರದಿಂದ ಪಕ್ಷಗಳು ಕೊಡಿಸುವ ಉಡುಗೊರೆ, ದಾನಗಳ ಪಟ್ಟಿಯ ಉದ್ದದ ಸ್ಪರ್ಧೆಯಾಗಿದೆ ಎನ್ನಬಹುದು.
ಅಗ್ಗದ ದರದಲ್ಲಿ ಅಕ್ಕಿ, ಗೋಧಿ, ರಾಗಿ, ಜೋಳದ ಪೂರೈಕೆ, ಉಚಿತ ಸೀರೆ- ಪಂಚೆ ಮಕ್ಕಳಿಗೆ ಸಮವಸ್ತ್ರ, ಪುಸ್ತಕಗಳ ಹಂಚಿಕೆ, ವೃದ್ಧಾಪ್ಯ ವೇತನ, ಅನಾಥರಿಗೆ ಆಶ್ರಮ, ಉಚಿತ ವೈದ್ಯ ಸೌಲಭ್ಯಗಳನ್ನು ಒದಗಿಸುವ ಆಶ್ವಾಸನೆಗಳು ಎಲ್ಲ ಪ್ರಣಾಳಿಕೆಗಳಲ್ಲೂ ಇವೆ. ಕೆಲವು ಜಾರಿಗೆ ಬಂದರೂ ಬರಬಹುದು. ಹಲವು ಅಸಾಧ್ಯ. ಆ ಪ್ರಶ್ನೆ ಬೇರೆ.
ಟಿಕೆಟ್ ಹರಾಜು: ಕೆಲವು ಜನವರ್ಗಗಳ ಪಾಲಿಗೆ ಭ್ರಷ್ಟಾಚಾರ ಹಾಗೂ ಅದರ ನಿರ್ಮೂಲನದ ಸೂಕ್ತ ಕ್ರಮಗಳೇ ಈ ಚುನಾವಣೆಯಲ್ಲಿ ತೀವ್ರ ಸ್ವರೂಪದ ಚರ್ಚೆಗೆ ಆಸ್ಪದ ಮಾಡಿಕೊಡುವ ರೀತಿಯ ಪ್ರಸ್ತಾಪ ಪ್ರಣಾಳಿಕೆಗಳಲ್ಲಿರಬಹುದೆನ್ನು ನಿರೀಕ್ಷೆ ಇತ್ತು. ಆ ನಿರೀಕ್ಷೆಯನ್ನು ಇಟ್ಟುಕೊಂಡಿದ್ದೇ ತಪ್ಪು ಎನ್ನುವ ರೀತಿಯಲ್ಲಿ, ಹಗಲು ದರೋಡೆಯ ಮಾದರಿಯಲ್ಲಿ ಪಕ್ಷಗಳ ಟಿಕೆಟ್ ಹರಾಜಾದ ದೂರುಗಳು ತಿಳಿಸಿವೆ. ಕರ್ನಾಟಕ ರಾಜ್ಯದಲ್ಲಿನ ಒಬ್ಬ ಮುಖ್ಯಮಂತ್ರಿ ಜೈಲಿಗೆ ಹೋಗಬೇಕಾಗಿ ಬಂದಿತ್ತು. ಅಕ್ರಮ ಗಣಿಗಾರಿಕೆಯಲ್ಲಿ ಹಲವು ಸಹಸ್ರ ಕೋಟಿ ರುಪಾಯಿಗಳ ಭ್ರಷ್ಟಾಚಾರದ ಚರ್ಚೆ ರಾಷ್ಟ್ರೀಯ ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು. ಸುಪ್ರೀಮ್ ಕೋರ್ಟಿನ ಆದೇಶದ ಮೇರೆಗೆ ರಚನೆಯಾದ ತನಿಖಾ ತಂಡಗಳ ಕೆಲಸವೂ ದೊಡ್ಡ ಸುದ್ದಿಯೇ ಆಗಿತ್ತು.
ಆದರೆ ಪ್ರಕಟವಾಗಿರುವ ಪ್ರಣಾಳಿಕೆಗಳ ವರದಿಗಳನ್ನು ಜರಡಿ ಹಿಡಿದರೂ ಭ್ರಷ್ಟಾಚಾರದ ಪ್ರಸ್ತಾಪವೇ ಸಿಗುತ್ತಿಲ್ಲ. ಸ್ವಚ್ಛ ಆಡಳಿತದ ಭರವಸೆ ಧಾರಾಳವಾಗಿದೆ. ಆದರೆ ನೆಲಗಳ್ಳತನದ ಪ್ರಸ್ತಾಪವೇ ಇಲ್ಲ. ಸಾವಿರಾರು ಕೋಟಿ ರುಪಾಯಿಗಳ ಭೂ ಸ್ವಾಧೀನ, ನೋಟಿಫಿಕೇಷನ್ -ಡಿ- ನೋಟಿಫಿಕೇಷನ್‌ಗಳ ಮಾತೇ ಇಲ್ಲ. ಲೋಕಾಯುಕ್ತ ವ್ಯವಸ್ಥೆಯ ಅಸಹಾಯಕ ತಬ್ಬಲಿತನದ ಚಿತ್ರವೂ ಇಲ್ಲ. ಗಣಿಗಾರಿಕೆಯ ಪಾತಕಿಗಳೇ ಈಗ ಹೀರೋಗಳಾಗಿದ್ದಾರೆ. ಇದು ನಿಜಕ್ಕೂ ಗಂಭೀರವಾದ ಪ್ರಶ್ನೆ. ರಾಜಕೀಯ ಪಕ್ಷಗಳಲ್ಲಿ, ನಿಜವಾದ ಅರ್ಥದಲ್ಲಿ ಬೇರು ಮಟ್ಟದಲ್ಲಿ ಚುನಾವಣೆ ನಡೆಸುವವರೇ ಬೇರೆ, ಚುನಾವಣೆಯ ಪ್ರಣಾಳಿಕೆಗಳನ್ನು ಬರೆಯುವವರೇ ಬೇರೆ ಎನ್ನುವಂತಾಗಿದೆ, ಈಗಿನ ಪರಿಸ್ಥಿತಿ. ಟಿಕೆಟ್ ಹಂಚಿಕೆಯ ವಿಚಾರದಲ್ಲಿ ದಿನಗಟ್ಟಲೆ ಜಗಳವಾಗಿದೆ. ಆದರೆ ಪ್ರಣಾಳಿಕೆಗಳು ಒಕ್ಕಣಿಯ ವಿಚಾರದಲ್ಲಿ ಯಾವ ಭಿನ್ನಾಭಿಪ್ರಾಯವೂ ಇಲ್ಲ. ಹಾಗೆಂದರೇನರ್ಥ? ಚುನಾವಣೆ ಪ್ರಣಾಳಿಕೆಯ ಬಂಡಲ್ ಸಾಹಿತ್ಯ ಯಾರಿಗೆ ಬೇಕು? ಎಂದೇ ಅಲ್ಲವೇ?
ಬಂಡಾಯದ ಬಾವುಟ: ಚುನಾವಣೆಯ ಸಮಯದಲ್ಲಿ ರಾಜಕೀಯ ಪಕ್ಷಗಳಲ್ಲಿ ಬಂಡಾಯದ ಬಾವುಟ ಹಾರುವುದು ಒಂದು ಸಹಜ ಪ್ರಕ್ರಿಯೆ. ಎಲ್ಲ ಪಕ್ಷಗಳಲ್ಲೂ ಈಗ ಅಭ್ಯರ್ಥಿಗಳ ಆಯ್ಕೆ ನಾಯಕರ ಸ್ವೇಚ್ಚಾಚಾರದ ಪ್ರವೃತ್ತಿಗೆ ಸಾಕ್ಷಿಯಾಗಿದೆ. ಈಗಿನ ವಿಧಿ- ವಿಧಾನ ತೀರ ಅಸಮರ್ಪಕವಾದದ್ದು.
ಕಾಂಗ್ರೆಸ್ಸಿನಲ್ಲಿ ಸಿದ್ದರಾಮಯ್ಯ ಅವರಂತಹ ಅಹಿಂದ ಆಧರಿತ ನಿರಂತರ ಸಂಘರ್ಷ ನಡೆಸುವ ಪ್ರತಿಜ್ಞೆ ಮಾಡಿರುವ ವ್ಯಕ್ತಿಗಳೇ ಬಂಡಾಯ ಕ್ಷಣಿಕ, ಎರಡು ದಿನಗಳಲ್ಲೇ ತಣ್ಣಗಾಗುತ್ತದೆ ಎಂದರೆ, ಭುಗಿಲೆದ್ದ ಬಂಡಾಯವನ್ನು ಸುಳಿವೇ ಇಲ್ಲದಂತೆ ಆರಿಸುವುದೂ ಒಂದು ರಾಜಕೀಯ ತಂತ್ರವೇ, ಅದು ಯಶಸ್ವಿಯಾಗಿದೆ ಎಂದಾಯಿತು.
ಕಾಂಗ್ರೆಸ್ ವರಿಷ್ಠ ವರ್ಗ ಮಂಡ್ಯ- ಶ್ರೀರಂಗ ಪಟ್ಟಣ, ಭದ್ರಾವತಿ, ದಾವಣಗೆರೆಯಲ್ಲಿ ಅಂಬರೀಶ್, ಸಿ.ಎಂ. ಇಬ್ರಾಹಿಂ, ಸಿದ್ದರಾಮಯ್ಯ, ಶ್ಯಾಮನೂರು ಶಿವಶಂಕರಪ್ಪ- ಮಲ್ಲಿಕಾರ್ಜುನ ಅವರಿಗೆ ಶರಣಾಗಿದೆ. ಪಕ್ಷ ನಿಷ್ಠೆಯೂ ಇಲ್ಲದ ತತ್ವನಿಷ್ಠೆಯ ವಿಚಾರವೇ ಗೊತ್ತಿಲ್ಲದವರ ಮುಂದೆ ವರಿಷ್ಠರೇ ಕೈ ಮುಗಿದು ನಿಲ್ಲಬೇಕಾದ ಸ್ಥಿತಿಗೆ, ಶತಮಾನಕ್ಕೂ ಹೆಚ್ಚಿನ ಅವಧಿಯ ಭವ್ಯೇತಿಹಾಸದ ಕಾಂಗ್ರೆಸ್ ಕರ್ನಾಟಕದಲ್ಲಿ ಇಳಿದಿದೆ.
ಇತರ ಪಕ್ಷಗಳಲ್ಲೂ ಇಂತಹ ಪ್ರವೃತ್ತಿ ಕಂಡು ಬಂದಿರಬಹುದು. ಆದರೆ ಈಗಲೂ ರಾಜ್ಯದಲ್ಲಿ ಕಾಂಗ್ರೆಸ್ಸೇ ಅತಿ ದೊಡ್ಡ ಪಕ್ಷ ಹಾಗೂ ಅತಿ ಹಳೆಯ ಪಕ್ಷ. ಈಗ ಬಳ್ಳಾರಿ ಸೀಮೆಯಲ್ಲಿ ನಡೆದಿರುವುದು ಹಿಂದಿನ ಗಣಿಧಣಿಗಳ ಸಾಮ್ರಾಜ್ಯದ ಉತ್ತರಾಧಿಕಾರದ ಹೋರಾಟ. ಹಣದ ಥೈಲಿಗಳ ಜತೆ ಕಾಂಗ್ರೆಸ್ಸಿಗೆ ಬಂದವರೇ, ನಾಳೆ ಪಕ್ಷ ಅಧಿಕಾರಕ್ಕೆ ಬಂದರೆ ಆಡಳಿತ ನಡೆಸುವುದು.
ಭದ್ರಾವತಿಯಲ್ಲಿ ಸಿ.ಎಂ. ಇಬ್ರಾಹಿಂ (ಅವರ ಪರಿಚಯ ಈಗ ಅನಗತ್ಯ) ಅವರಿಗೆ ಟಿಕೆಟ್ ಕೊಟ್ಟು, ಸಂಗಮೇಶ್ವರ ಬಂಡಾಯ ಹೂಡುವಂತೆ ಮಾಡಿದ್ದು ಪಕ್ಷದ ದೃಷ್ಟಿಯಲ್ಲಿ ಒಂದು ವಿಕ್ರಮವೇ.
ಕೆಲವು ಕಡೆಗಳಲ್ಲಿ ಬಂಡಾಯಕ್ಕೆ ವ್ಯಕ್ತಿ ಪ್ರತಿಷ್ಠೆಗೆ ಕಾರಣ. ಇನ್ನು ಕೆಲವು ಕಡೆಗಳಲ್ಲಿ ಜಾತಿ ಕಾರಣ. ಈಗ ಕರ್ನಾಟಕದಲ್ಲಿ ಕಾಂಗ್ರೆಸ್ಸಿನ ರಥವನ್ನು ಎಳೆಯಲಿಕ್ಕೆ ಹೊರಟವರು, ರಾಹುಲ ಗಾಂಧಿ ರೂಪಿಸಿದ ಎಲ್ಲ ಸೂತ್ರಗಳನ್ನು ಗಾಳಿಗೆ ತೂರಿದ್ದಾರೆ. ಅದರಲ್ಲಿ ಅನುಮಾನವೇ ಇಲ್ಲ.
ಬಿಜೆಪಿಯ ಸ್ಥಿತಿ: ಭಾರತೀಯ ಜನತಾ ಪಾರ್ಟಿಗೆ ದಿಕ್ಕೇ ತೋಚುತ್ತಿಲ್ಲ. ಹಿಂದಿನ ನಾಯಕ ಯಡಿಯೂರಪ್ಪ ಅವರೇ ಮುದೆ ನಿಂತು ಬಿಜೆಪಿಯನ್ನು ಸೋಲಿಸಲು ಏನು ಮಾಡಬೇಕೋ ಅದನ್ನು ಮಾಡುತ್ತಿದ್ದಾರೆ. ಬಿಜೆಪಿಯನ್ನು ಬಹಿರಂಗವಾಗಿ ತೆಗಳುವ ಅವಕಾಶವೇ ಕಾಂಗ್ರೆಸ್ಸಿಗೆ ಇಲ್ಲ. ಯಡಿಯೂರಪ್ಪ ಅವರಷ್ಟು ಕಠೋರವಾಗಿ ಬಿಜೆಪಿಯನ್ನು ಟೀಕಿಸುವುದು ಕಷ್ಟ.
ಚುನಾವಣೆಯಲ್ಲಿ ಜಾತಿಯ ಲೆಕ್ಕಕ್ಕೆ ಪ್ರಾಮುಖ್ಯ ಇದ್ದೇ ಇದೆ. ಒಮ್ಮೆ ವಿಧಾನ ಸಭೆಯಲ್ಲೇ ಭ್ರಷ್ಟಾಚಾರದ ಸಹಸ್ರ ಮುಖಗಳ ದರ್ಶನ ಮಾಡಿಸಿದ್ದ ದಿವಂಗತ ದೇವರಾಜ ಅರಸು, ಎಲ್ಲ ಮುಖಗಳಲ್ಲೂ ಜಾತೀಯತೆಯ ಛಾಯೆ ಇದ್ದೇ ಇರುತ್ತದೆ ಎಂದಿದ್ದರು. ಅದು ಅವರ ಅನುಭವಾಮೃತ.
ಈಗ ಕಾಂಗ್ರೆಸ್ಸಿಗೆ ಒಕ್ಕಲಿಗ ಜನಾಂಗೀಯ ಬೆಂಬಲ ರಾಜ್ಯದಲ್ಲಿ ಹೇಳಿಕೊಳ್ಳುವ ಪ್ರಮಾಣದಲ್ಲಿ ಇಲ್ಲ. ಕೆಲವು ಒಕ್ಕಲಿಗ ಕಾಂಗ್ರೆಸ್ ನಾಯಕರಿಗೆ ಇರಬಹುದಷ್ಟೇ. ರಾಜ್ಯದಲ್ಲಿ ಒಂದು ಪ್ರಬಲ ರಾಜಕೀಯ ಶಕ್ತಿ ಎನಿಸಿದ ವೀರಶೈವ ಮಠಗಳು, ಯಡಿಯೂರಪ್ಪ ಅವರ ಕಾಲದಲ್ಲಿ (ಮೊದಲು ವಿತ್ತಮಂತ್ರಿಯಾಗಿ, ಅನಂತರ ಮುಖ್ಯಮಂತ್ರಿಯಾಗಿ) ಸರ್ಕಾರದ ಉದಾರ ಕೊಡುಗೆಯ ಸಿಂಹಪಾಲನ್ನು ಪಡೆದಿದ್ದು ನಿಜ.
ಈಗ ಆ ಮಠಗಳ ಪ್ರತಿನಿಧಿಗಳು ಏನು ಮಾಡುತ್ತಾರೋ ಯಾರಿಗೂ ಗೊತ್ತಿಲ್ಲ. ಕಾಂಗ್ರೆಸ್ಸಿನ ನಿಜವಾದ ಸಮಸ್ಯೆ ಅದು. ಭಾರತೀಯ ಜನತಾ ಪಾರ್ಟಿಗೆ ದೊಡ್ಡ ರೀತಿಯ ಆಘಾತವಾಗಿರುವುದು ನಿಜ. ಯಡಿಯೂರಪ್ಪ ನೇತೃತ್ವದ ಕರ್ನಾಟಕ ಜನತಾ ಪಾರ್ಟಿ ಕೀಳುವುದು ಬಿಜೆಪಿಯ ಓಟುಗಳನ್ನೇ. ಯಡಿಯುರಪ್ಪ ಅವರ ಕೂರಂಬುಗಳಿಗೆ ಸಿಗುತ್ತಿರುವಷ್ಟ ಪ್ರಚಾರ ಬೇರೆ ಯಾವ ಪಕ್ಷಕ್ಕೂ ಸಿಗುತ್ತಿಲ್ಲ. ಅದು ಅನಿವಾರ್ಯವೇ ಆಗಿರಬಹುದು. ಬಿಜೆಪಿಯ ಆಡಳಿತದ ಸಾಧನೆ ಕುರಿತಂತೆ ಸರ್ಕಾರ ಏನಾದರೂ ಹೇಳಿಕೊಳ್ಳಲಿ, ಜನರ ಮುಂದೆ ದೊಡ್ಡದಾಗಿ ಕಾಣುವುದು ನೆಲಗಳ್ಳತನ, ಜಿ-ಕ್ಯಾಟಗರಿ ನಿವೇಶನಗಳ ಹಂಚಿಕೆ, ಅಕ್ರಮ ಗಣಿಗಾರಿಕೆಯ ಪಾತಕಗಳು, ಇಂತಹ ವಿಷಯಗಳೇ. ಅದನ್ನು ಯಡಿಯೂರಪ್ಪ ಪ್ರಸ್ತಾಪಿಸುವುದಿಲ್ಲ.
ಯಡಿಯೂರಪ್ಪ ನಿರ್ಗಮನದಿಂದ ಬಿಜೆಪಿಗೆ ತಪ್ಪಬಹುದಾದ ವೀರಶೈವರ ಬೆಂಬಲವನ್ನು ಸಾಕಷ್ಟು ಕಡಿಮೆ ಮಾಡಲು ಜಗದೀಶ್ ಶೆಟ್ಟರ್ ಹರಸಾಹಸದ ಪ್ರಯತ್ನ ನಡೆಸಿದ್ದಾರೆ. ಉತ್ತರ ಕರ್ನಾಟಕದಲ್ಲಿ ಅದು ಸಾಧ್ಯವಾದರೂ ಆಗಬಹುದು.
ಯಡಿಯೂರಪ್ಪ ಅವರಿಗೂ ಈಗ ಈ ಪರಿಸ್ಥಿತಿ ಅರ್ಥವಾಗಿರುವಂತಿದೆ. ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆರಿಸುವಾಗ ಅವರು ಅನುಭವಿಸಿದ ಕಷ್ಟ ಅವರಿಗಷ್ಟೇ ಗೊತ್ತು. ಅದಕ್ಕೇ ಅವರು ಈಗ ಕೆಜೆಪಿ ಅಧಿಕಾರಕ್ಕೆ ಬರುವ ವಿಚಾರ ಪ್ರಸ್ತಾಪಿಸುತ್ತಿಲ್ಲ. ಯಾವುದಾದರೊಂದು ಪಕ್ಷದ ಜತೆ ಸೇರಿ ಕೂಟ ಸರ್ಕಾರದ ರಚನೆಯ ಪ್ರಸ್ತಾಪ ಮಾಡುತ್ತಿರುವುದು. ಯಡಿಯೂರಪ್ಪ ಅವರಿಗೆ ಯಾರ ಜತೆ ಸೇರಬೇಕೆನ್ನುವ ಬಯಕೆ ಇದೆಯೋ ಗೊತ್ತಿಲ್ಲ. ಅದನ್ನು ಅವರು ಚುನಾವಣೆಗೆ ಮುಂಚೆ ಮತದಾರರಿಗೆ ತಿಳಿಸಬೇಕಾದ್ದು ಅವರ ಧರ್ಮ.
ಸಿದ್ಧವಾದ ಜೆಡಿಎಸ್: ದೇವೇಗೌಡರ ಕುಟುಂಬದ ನೇತೃತ್ವದ ಜಾತ್ಯತೀತ ಜನತಾದಳ ಚುನಾವಣೆಯ ಸಂಬಂಧದಲ್ಲಿ ಎಚ್ಚರಿಕೆಯಿಂದಲೇ ಹೆಜ್ಜೆಗಳನ್ನಿಡುತ್ತಿರುವುದು ನಿಜ. ಆ ಪಕ್ಷಕ್ಕೂ ಸ್ವಂತ ಶಕ್ತಿಯ ಆಧಾರದ ಮೇಲೇ ಅಧಿಕಾರಕ್ಕೆ ಬರುವ ವಿಶ್ವಾಸವಿಲ್ಲ. ಆದರೂ ಅದನ್ನು ಬಹಿರಂಗವಾಗಿ ಹೇಳುತ್ತಿಲ್ಲ. ಪಕ್ಷದ ಶಕ್ತಿಯ ನೆಲೆಗಳಲ್ಲಿ ಕೆಲವು ಕಡೆಗಳಲ್ಲಿ ಕೆಳಹಂತದ ನಾಯಕರಲ್ಲಿ ಅತೃಪ್ತಿ ಕಂಡು ಬಂದಿರುವುದೂ ನಿಜ. ಅದನ್ನು ನಿಭಾಯಿಸುವುದು ಗೌಡರ ಕುಟುಂಬಕ್ಕೆ ಸಾಧ್ಯ. ಪಕ್ಷಕ್ಕೆ ರಾಜ್ಯದ ಒಂದು ದೊಡ್ಡ ಸಮಾಜದ ಅಖಂಡ ಬೆಂಬಲವಿದೆ. ದೇವೇಗೌಡರ ಕೀರ್ತಿ- ಪ್ರತಿಷ್ಠೆ ಹಾಗೂ ವ್ಯಕ್ತಿತ್ವದ ಶಕ್ತಿಯೂ ಇದೆ. ಚುನಾವಣೆಯಲ್ಲಿ ಗೆಲ್ಲಲಿಕ್ಕೆ ಇನ್ನೇನು ಬೇಕು. ಇವೆಲ್ಲದರ ಜತೆಗೆ, ಹಿಂದೆ ಕೂಟ ಸರ್ಕಾರದಲ್ಲಿ ಕೇಂದ್ರದಲ್ಲಿ ರಾಜ್ಯದಲ್ಲಿ ಆಡಳಿತ ನಡೆಸಿದ ಅನುಭವವೂ ಇದೆ.
ಶ್ರೀರಾಮುಲು ಪರಿಸ್ಥಿತಿ: ರಾಜ್ಯದ ರಾಜಕೀಯದಲ್ಲಿ ಈಗ ಮಾನ್ಯತೆ ಗಳಿಸಲು ಪ್ರಯತ್ನಿಸುತ್ತಿರುವ ಮಾಜಿ ಸಚಿವ ಶ್ರೀರಾಮುಲು ನೇತೃತ್ವದ ಬಿಎಸ್ಸಾರ್ ಕಾಂಗ್ರೆಸ್‌ಗೆ ಪೇಟೆ- ಪಟ್ಟಣಗಳ ಪೌರ ಸಂಸ್ಥೆಗಳ ಚುನಾವಣೆಯಲ್ಲಿ ಆಗಿರುವ ಅನುಭವ ಹಾಗೂ ಈಗ ಅವರ ಜತೆ ಚುನಾವಣೆ ಪೂರ್ವ ಹೊಂದಾಣಿಕೆಗೆ ಯಾವ ಪಕ್ಷವೂ ಉತ್ಸಾಹವನ್ನು ತೋರಿಸದೇ ಇರುವ ಪರಿಸ್ಥಿತಿಯಲ್ಲಿ ಮುಂದಿನ ದಾರಿ ಕುರಿತಂತೆ ಗೊಂದಲವಿರುವುದು ನಿಜ.
ಶ್ರೀರಾಮುಲು ಅವರ ಪಕ್ಷಕ್ಕೆ ಮಾರ್ಗದರ್ಶನ ಮಾಡಲು ಮುಂದಾಗಿದ್ದ ಬೌದ್ಧಿಕ ನಾಯಕರು ಈಗ ಸ್ವಲ್ಪ ಹಿಂದಕ್ಕೆ ಸರಿದಿದ್ದಾರೆ. ಈಗಿನ ಚುನಾವಣೆಯಲ್ಲಿನ ನಿಜವಾದ ಕುರುಕ್ಷೇತ್ರ ಕೃಷ್ಣಾ- ತುಂಗಭದ್ರಾ ನದಿಗಳ ಬಯಲು ಹಾಗೂ ಮಲೆನಾಡು- ಕರಾವಳಿ ಸೀಮೆ. ದಕ್ಷಿಣ ಕರ್ನಾಟಕ ಹಾಗೂ ಮಧ್ಯ ಕರ್ನಾಟಕಗಳಲ್ಲಿನ ಚಿತ್ರ ತೀರ ಗೊಂದಲದ ಗೋಜಾಗಿದೆ.
ಕಿಡಿಗೇಡಿತನ- ಕರ್ನಾಟಕ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿಯ ಪರ ಪ್ರಚಾರಕ್ಕೆ ಪಕ್ಷದ ರಾಷ್ಟ್ರೀಯ ನಾಯಕರ ಪಟ್ಟಕ್ಕೇರಿರುವ ನರೇಂದ್ರ ಮೋದಿ ಅವರು ಬರ್ತಾರಾ?
ಆಡ್ವಾಣಿ,. ರಾಜನಾಥ ಸಿಂಗ್, ಸುಷ್ಮಾ ಸ್ವರಾಜ್ ಅವರ ಪ್ರವಾಸದ ಕಾರ್ಯಕ್ರಮವನ್ನು ಪ್ರಕಟಿಸಿರುವ ಬಿಜೆಪಿಯ ದೆಹಲಿಯ ಕಾರ್ಯಾಲಯ ನರೇಂದ್ರ ಮೋದಿ ಅವರ ವಿಚಾರವನ್ನು ಪ್ರಸ್ತಾಪಿಸಿಲ್ಲ.
ನರೇಂದ್ರ ಮೋದಿ ಬಂದು ಪ್ರಚಾರ ಮಾಡಿದರೂ ರಾಜ್ಯದಲ್ಲಿ ಬಿಜೆಪಿ ಸೋತರೆ ಅವರ ಪ್ರತಿಷ್ಠೆ ಕುಗ್ಗಬಹುದೆನ್ನುವ ವಿಚಾರವೂ ಪರಿಶೀಲನೆಯಲ್ಲಿದೆ. ಅಲ್ಲದೇ ನರೇಂದ್ರ ಮೋದಿ ಬೆಂಗಳೂರಿಗೆ ಬಂದರೆ ಅವರಿಗೆ ಅಪಾಯವಿದೆ ಎನ್ನುವ ಸೂಚನೆಯೂ ಗುಪ್ತಚರದಳಕ್ಕೆ ಸಿಕ್ಕಿದೆ ಎಂದೂ ಹೇಳಲಾಗುತ್ತಿದೆ. ನರೇಂದ್ರ ಮೋದಿ ಬರ್ತಾರಾ? ಗೊತ್ತಿಲ್ಲ.
-ಸತ್ಯ
anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

