ದುಡ್ಡಿನ ದರ್ಪ ದಮನಿಸುವ ಧೈರ್ಯ ತೋರಿಯಾನೇ ಮತದಾರ?
ಆಂಗ್ಲ ಪತ್ರಿಕೆಯೊಂದು ರಾಜ್ಯದ ಚುನಾವಣೆಯ ಸುದ್ದಿಗಳಿಗೆ ಪ್ರಜಾಪ್ರಭುತ್ವದ ನರ್ತನ...
ಆಂಗ್ಲ ಪತ್ರಿಕೆಯೊಂದು ರಾಜ್ಯದ ಚುನಾವಣೆಯ ಸುದ್ದಿಗಳಿಗೆ ಪ್ರಜಾಪ್ರಭುತ್ವದ ನರ್ತನ (dance of democracy) ಎಂಬ ಹೆಸರು ನೀಡಿದೆ. ನಾವೀಗ ನೋಡುತ್ತಿರುವ ಚುನಾವಣೆಯನ್ನು ಕೇವಲ ಪ್ರಜಾಪ್ರಭುತ್ವದ ನರ್ತನ ಎಂದು ಕರೆಯಲು ಮನಸ್ಸು ಒಪ್ಪುತ್ತಿಲ್ಲ. ಯಾಕೆಂದರೆ ನಾವು ನೋಡುತ್ತಿರುವುದು ಪ್ರಜಾಪ್ರಭುತ್ವದ ರುದ್ರನರ್ತನ.
ಚುನಾವಣೆ ಘೋಷಣೆಯಾದಾಗಿನಿಂದ ಗಮನಿಸುತ್ತಿದ್ದೇನೆ. ರಾಜ್ಯದಲ್ಲಿ ಒಂದಲ್ಲ ಒಂದು ಕಡೆ ಅಕ್ರಮ ಹಣ ಪತ್ತೆಯಾಗದ ದಿನವೇ ಇಲ್ಲ. ಈ ಪ್ರಮಾಣದ ಹಣ ಅದೆಲ್ಲಿಂದ ಬರುತ್ತಿದೆ? ಅದನ್ನೆಲ್ಲಿ ಅಡಗಿಸಿಡಲಾಗಿತ್ತು? ಅದನ್ನು ಹೇಗೆ ಸಂಪಾದಿಸಲಾಗಿತ್ತು? ಸಂಪಾದಿಸಿಟ್ಟವರು ಯಾರು? ಒಂದೊಮ್ಮೆ ಇವನ್ನೆಲ್ಲ ಪೊಲೀಸರು ಮತ್ತು ಅಧಿಕಾರಿಗಳು ವಶಪಡಿಸಿಕೊಳ್ಳದೇ ಇದ್ದಲ್ಲಿ ಮತದಾರರ ಮಡಿಲು ಸೇರುತ್ತಿದ್ದವಾ? ಮತದಾರರೂ ಈ ಪರಿ ಭ್ರಷ್ಟರಾಗಿದ್ದಾರಾ? ರಾಜಕಾರಣಿಗಳು ಮತದಾರರನ್ನೂ ಭ್ರಷ್ಟರಾಗಿಸುತ್ತಿದ್ದಾರಾ? ಎಂಬೆಲ್ಲ ಉತ್ತರವಿಲ್ಲದ ಪ್ರಶ್ನೆಗಳು ಮನಸ್ಸಿನಲ್ಲಿ ಗಿರಕಿಹೊಡೆಯುತ್ತವೆ.
ಕಣ್ಣು ಕತ್ತಲುಗಟ್ಟಿದಂತಾಗುತ್ತದೆ!
ದ.ರಾ. ಬೇಂದ್ರೆಯವರು 'ಕುರುಡು ಕಾಂಚಾಣ ಕುಣಿಯುತಲಿತ್ತು, ಕಾಲಿಗೆ ಸಿಕ್ಕವರ ತುಳಿಯುತಲಿತ್ತು' ಎಂದು ಆ ಕಾಲದಲ್ಲೇ ಬರೆದಿದ್ದರು. ಅದರ ದೃಶ್ಯರೂಪಕವನ್ನು ಚುನಾವಣೆ ಮೂಲಕ ಪ್ರಸ್ತುತಪಡಿಸಲಾಗುತ್ತಿದೆಯೇನೋ ಎಂಬಂತೆ ಭಾಸವಾಗುತ್ತಿದೆ.
ಅಧಿಕಾರದ ಪಡಸಾಲೆ ಯಾವತ್ತೂ ಲಾಬಿಯಿಂದ ಹೊರತಾಗಿರಲಿಲ್ಲ. ರಾಜ್ಯದಲ್ಲಿ ಆರಂಭದಿಂದಲೂ ಸಾರಾಯಿಯ ಘಮಲು ಅಧಿಕಾರದ ಪಡಸಾಲೆಯಲ್ಲಿ ಪಸರಿಸಿತ್ತು. ಆನಂತರದ್ದು ಸಹಕಾರಿ ಲಾಬಿ. ಅದರ ನಂತರ ಧೂಳಿನಿಂದ ಎದ್ದುನಿಂತಿದ್ದು ಗಣಿ ಲಾಬಿ. ಸಾರಾಯಿ ಲಾಬಿಗೂ ಗಣಿ ಲಾಬಿಗೂ ತುಂಬಾ ವ್ಯತ್ಯಾಸವಿತ್ತು. ಸಾರಾಯಿ ಲಾಬಿ ನಡೆಸುತ್ತಿದ್ದ ವ್ಯಕ್ತಿಗಳು ರಾಜಕಾರಣಿಗಳಾಗಿರಲಿಲ್ಲ. ವಿಧಾನಸೌಧದ ಒಳಗೆಲ್ಲೂ ಅವರು ಕಾಣಿಸಿಕೊಳ್ಳುತ್ತಿರಲಿಲ್ಲ. ಅವರು ಕೇವಲ ಕಿಂಗ್ ಮೇಕರ್‌ಗಳಾಗಿದ್ದರು. ಚುನಾವಣೆಯಲ್ಲಿ ರಾಜಕಾರಣಿಗಳಿಗೆ ಸಹಾಯ ಮಾಡಿ, ಗೆದ್ದ ನಂತರ ರಾಜಕಾರಣಿಯಿಂದ ಸಹಾಯ ಪಡೆಯುತ್ತಿದ್ದರು. ಇದು ತೆರೆಮರೆಗೆ ಸೀಮಿತವಾಗಿತ್ತು.
ಸಹಕಾರಿ ಲಾಬಿಯಿಂದ ರಾಜಕೀಯಕ್ಕೆ ಬಂದವರು ದುರ್ಜನರ ಪಟ್ಟಿಯಲ್ಲಿ ಸೇರಿಸಲಾಗದ ಸುಭಗರೇ ಆಗಿದ್ದರು. ಆದರೆ ಗಣಿ ಲಾಬಿಯ ಮುಖ್ಯ ಅಂಶವೆಂದರೆ ಗಣಿ ಮಾಲಿಕರು ಮತ್ತು ಗಣಿ ಉದ್ಯಮದ ದೊಡ್ಡ ಕುಳಗಳು ನೇರವಾಗಿ ಚುನಾವಣೆ ಕಣಕ್ಕಿಳಿದು, ಶಾಸಕರು, ಸಚಿವರಾದರು.
ಇದರಿಂದಾದ ಏರುಪೇರುಗಳು ಅಷ್ಟಿಷ್ಟಲ್ಲ. ನೀವೇನೇ ಹೇಳಿ, ಒಬ್ಬ ಪಕ್ಕಾ ರಾಜಕಾರಣಿ ಅವನೆಷ್ಟೇ ಭ್ರಷ್ಟನಾದರೂ ಆತನಿಗೊಂದು ಮುಲಾಜಿರುತ್ತದೆ. ತಾನು ಹಣ ಮಾಡಿರುವುದನ್ನು ಸಿಕ್ಕಾಪಟ್ಟೆ ಪ್ರದರ್ಶನಕ್ಕೆ ಇಡಲು ಹೋದರೆ ಅದರಿಂದ ವ್ಯತಿರಿಕ್ತ ಪರಿಣಾಮಗಳು ಆಗಬಹುದು ಎಂದು ಆತ ಒಳಗೊಳಗೇ ಹೆದರುತ್ತಾನೆ. ಐದು ವರ್ಷಕ್ಕೊಮ್ಮೆ ಜನರ ಮುಂದೆ ಹೋಗುವ ಭಯ ಅವರನ್ನು ಕಾಡುತ್ತಿರುತ್ತದೆ. ಆದರೆ ಹಣದ ಥೈಲಿ ಹೊಂದಿರುವವರ ಜಾಯಮಾನ ಇದಕ್ಕೆ ತದ್ವಿರುದ್ಧ. 'ನಾನು ದುಡಿದ ಹಣ, ನಾನು ಐಷಾರಾಮಕ್ಕೆ ಬಿಂದಾಸ್ ಆಗಿ ಖರ್ಚು ಮಾಡ್ತೀನಿ, ಏನೀಗ' ಎಂಬುದೊಂದು ಕೆಟ್ಟ ಧಿಮಾಕು ಹೆಚ್ಚಿನವರಲ್ಲಿ ಇರುತ್ತದೆ. ಹಣ ಎಂಬುದು ಅವರಿಗೆ ಆತಂಕದಲ್ಲಿ ಅಡಗಿಸಿಟ್ಟುಕೊಳ್ಳುವ ಪದಾರ್ಥವಲ್ಲ. ಹಣ ಚೆಲ್ಲಬೇಕು, ಹಂಗೇ ಮೊಗೆಯಬೇಕು ಎಂಬುದವರ ತತ್ವ. ಲಾಬಿದಾರರೆಲ್ಲ ರಾಜಕಾರಣಕ್ಕೆ ಬರುತ್ತಲೇ ಅವರ ಮುಂದಕ್ಕೆ ಚಾಚಿಕೊಂಡಿರುವ ನೆರಳಿನ ರೀತಿಯಲ್ಲಿ ದರ್ಪವು ರಾಜಾಂಗಣವನ್ನು ಪ್ರವೇಶಿಸಿಬಿಟ್ಟಿತು. ಆಕಾಶ ಮಾರ್ಗದಲ್ಲೇ ಸಂಚರಿಸುವ, ಭೂಮಿಗೆ ಕಾಲಿಟ್ಟೊಡನೆ ನೂರು ಕಾರುಗಳು ಸುತ್ತುವರೆಯುವ ಮಹಾವೈಭೋಗವೊಂದು ತನ್ನ ಅಟ್ಟಹಾಸ ಶುರು ಮಾಡಿಕೊಂಡಿತು. ಹಣಬಲದ ಒಂದೇ ಅರ್ಹತೆ ಇಟ್ಟುಕೊಂಡು ಮೊನ್ನೆಯಷ್ಟೇ ವಿಧಾನಸೌಧದ ಮೆಟ್ಟಿಲು ಹತ್ತಿದ ಚಿಳ್ಳೆಪಿಳ್ಳೆಯೂ ದಶಕಗಳಿಂದ ರಾಜಕಾರಣ ಮಾಡಿಕೊಂಡು ಬಂದವನಿಗೆ ನಿನ್ನ ಮುಗಿಸಿಬಿಡ್ತೇನೆ ನೋಡು ಎಂಬಂತೆ ತುಚ್ಛವಾಗಿ ನಡೆದುಕೊಳ್ಳತೊಡಗಿದ. ಪರಿಣಾಮ, ಒಬ್ಬ ಸಂಪ್ರದಾಯಸ್ಥ ರಾಜಕಾರಣಿಯ ಎದೆಯಲ್ಲೂ ಆತಂಕದ ವಿಚಾರ ಲಹರಿಯೊಂದು ಟಿಸಿಲೊಡೆಯಿತು. ನಿನ್ನೆ-ಮೊನ್ನೆ ಬಂದವರು ದುಡ್ಡಿನ ಬಲದಿಂದ ನಮಗೇ ರಾಜಕೀಯ ಹೇಳಿಕೊಡುತ್ತಾರೆ ಎಂದಾದರೆ ನಮಗೂ ಇನ್ನು ದುಡ್ಡು ಮಾಡಿಕೊಂಡರಷ್ಟೇ ಉಳಿಗಾಲ ಅಂತ. ಅಲ್ಲಿಗೆ ಅಲ್ಪಸ್ವಲ್ಪ ಎಂಬಂತೆ ಉಳಿದುಕೊಂಡಿದ್ದ ಅಂಜಿಕೆ- ಮುಲಾಜುಗಳೆಲ್ಲ ಜಾಗ ಖಾಲಿ ಮಾಡಿಬಿಟ್ಟವು. ನಂತರ ಕೇಳಿಬಂದಿದ್ದೆಲ್ಲ ಕಿಕ್‌ಬ್ಯಾಕ್, ಡೀಲಿಂಗ್, ರೆಸಾರ್ಟ್ ಎಂಬ ಅಪದ್ಧಗಳೇ. ವಾಸ್ತವದಲ್ಲಿ ರಾಜಕಾರಣವೇ ಮಾಯವಾಗಿ ಎಲ್ಲರೂ ಒಬ್ಬರನ್ನೊಬ್ಬರು ಮೀರಿಸುವ ಅಪ್ಪಟ ವ್ಯಾಪಾರಿಗಳಾಗಿಬಿಟ್ಟರು!
ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಶಾಸಕರೊಬ್ಬರಿಗೆ ಹೇಳಿದ ಮಾತೊಂದನ್ನು ಇಲ್ಲಿ ನೆನಪಿಸಿಕೊಳ್ಳಲೇಬೇಕು. ಈಗ ಕೇಂದ್ರ ಸಚಿವರಾಗಿರುವ ಮಲ್ಲಿಕಾರ್ಜುನ ಖರ್ಗೆಯವರು ಆಗ ಪ್ರಾಥಮಿಕ ಶಿಕ್ಷಣ ರಾಜ್ಯ ಸಚಿವರಾಗಿದ್ದರು. ಅವರು ಕಾರ್ಯನಿಮಿತ್ತ ಒಬ್ಬ ಶ್ರೀಮಂತರನ್ನು ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಅವರ ಬಳಿಗೆ ಕರೆದುಕೊಂಡು ಹೋಗಿದ್ದರು. ಆ ವ್ಯಕ್ತಿಯನ್ನು ಮಾತನಾಡಿಸಿ ಆಚೆ ಕಳುಹಿಸಿದ ನಂತರ ದೇವರಾಜ ಅರಸು ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ತರಾಟೆಗೆ ತೆಗೆದುಕೊಂಡು, 'ಶ್ರೀಮಂತರನ್ನು ವಿಧಾನಸೌಧದ ಹೊರಗೆ ಇಟ್ಟಿರಬೇಕು. ಅವರನ್ನು ನೀನು ವಿಧಾನಸೌಧದ ಒಳಗೆ ಕರೆದುಕೊಂಡು ಬಂದರೆ, ಮುಂದೆ ಅವರಿಗೆ ನಿನ್ನ ಅಗತ್ಯವೇ ಇರುವುದಿಲ್ಲ' ಎಂದು ಕಿವಿಮಾತು ಹೇಳಿದ್ದರು.
ದೇವರಾಜ ಅರಸು ಅವರ ಮಾತು ನಿಜವಾಗಿದೆ. ಹಣದ ಥೈಲಿಯ ಸರದಾರರು ಆಡಳಿತದ ಪಡಸಾಲೆಗೆ ಬಂದು ಕುಳಿತಿದ್ದಾರೆ. ಮೊದಲು ರಾಜಕಾರಣಿಗಳು ಈ ಪ್ರಮಾಣದಲ್ಲಿ ಹಣಕ್ಕಾಗಿ ಹಪಹಪಿಸುತ್ತಿರಲಿಲ್ಲ. ಅಧಿಕಾರದಲ್ಲಿದ್ದಾಗ ಚುನಾವಣೆಗೆ ಸಹಾಯಮಾಡಿದ ಸಾಹುಕಾರರಿಗೆ ಕೊಂಚ ಮಟ್ಟಿನ ಸಹಾಯ ಮಾಡುತ್ತಿದ್ದರು. ಚುನಾವಣೆ ಸಂದರ್ಭದಲ್ಲಿ ಅವರಿಂದ ಸಹಾಯ ಪಡೆಯುತ್ತಿದ್ದರು. ಕಾಲ ಸರಿದಂತೆ ಹಣದ ಥೈಲಿ ಇರುವವರಿಗೆ ನಾನು ದುಡ್ಡುಕೊಟ್ಟು ಈ ರಾಜಕಾರಣಿಗಳಿಗೆ ಸಹಾಯ ಮಾಡಿ, ಗೆಲ್ಲಿಸುವ ಬದಲು ನಾವೇ ಏಕೆ ಚುನಾವಣೆಗೆ ನಿಲ್ಲಬಾರದು ಎಂಬ ಆಸೆ ಕುದುರಿತು.
ರಾಜಕಾರಣಿಗಳನ್ನು ಪಕ್ಕಕ್ಕೆ ಸರಿಸಿ ಅವರೇ ನೇರವಾಗಿ ಚುನಾವಣೆ ಅಖಾಡಕ್ಕೆ ಇಳಿದರು. ಇಂದು ಚುನಾವಣೆ ಕಣದಲ್ಲಿರುವ ಬಹುತೇಕ ಆಭ್ಯರ್ಥಿಗಳು ರಿಯಲ್ ಎಸ್ಟೇಟ್ ದಂಧೆಯಲ್ಲಿರುವವರು ಮತ್ತು ಒಂದಲ್ಲ ಒಂದು ರೀತಿಯಲ್ಲಿ ಹಣ ಮಾಡಿದವರು. ಅವರ ಆಸ್ತಿಯನ್ನು ಕ್ಯಾಲ್ಕುಲೇಟರ್ ಇಲ್ಲದೇ ಲೆಕ್ಕಹಾಕಲು ಸಾಧ್ಯವಿಲ್ಲ. ಪ್ರತಿಯೊಬ್ಬರದ್ದೂ ಕನಿಷ್ಠ 25-50 ಕೋಟಿಗಳ ಲೆಕ್ಕದಲ್ಲಿ.
ಹಣದ ಥೈಲಿ ಇರುವವರ ಪಾಲಿಗೆ ಚುನಾವಣೆ ಕೂಡ ಒಂದು ಉದ್ಯಮ. ಅವರು ಒಂದು ಕೋಟಿ ಹೂಡಿಕೆ ಮಾಡಿದರೆ ಅದರಿಂದ ಒಂದುವರೆ ಕೋಟಿ ಅಥವಾ ಎರಡು ಕೋಟಿ ಗಿಟ್ಟಬೇಕು. ಇನ್ನೊಂದು ದೃಷ್ಟಿಯಿಂದ ಹೇಳುವುದಾದರೆ ನೂರು ಕೋಟಿ ಸಿಗುತ್ತದೆಂದಾರೆ ಅವರು 50-70 ಕೋಟಿ ಹೂಡಿಕೆ ಮಾಡಲು ಹಿಂಜರಿಯುವುದಿಲ್ಲ. ಅವರ ಪಾಲಿಗೆ ಚುನಾವಣೆಯೆಂದರೆ ಪಕ್ಕಾ ಲೆಕ್ಕಾಚಾರ. ಕೇವಲ ಗೆಲ್ಲುವುದಷ್ಟೇ ಅಲ್ಲ, ಚುನಾವಣೆಗೆ ಸ್ಪರ್ಧಿಸುವುದು ಕೂಡ ಒಂದು ಉದ್ಯಮ.
ಮೂರು ದಿನದ ಹಿಂದೆ ಒಬ್ಬ ವ್ಯಕ್ತಿ ಬಂದಿದ್ದರು. ಅವರು ಈ ಬಾರಿಯ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಕ್ಷೇತ್ರದ ಸ್ಥಿತಿ ಹೇಗಿದೆ? ಗೆಲ್ಲುತ್ತೀರಾ? ಎಂದು ಪ್ರಶ್ನಿಸಿದೆ. ಅದಕ್ಕೆ ಅವರು 'ಗೆಲ್ಲುವುದಕ್ಕಾಗೇ ಚುನಾವಣೆಗೆ ನಿಂತಿರುವುದು. ಅದಕ್ಕಾಗಿ ಕಠಿಣ ಪ್ರಯತ್ನ ಮಾಡುತ್ತಿದ್ದೇನೆ. ಅಕಸ್ಮಾತ್ ಸೋತರೂ ಮುಂದಿನ ಐದು ವರ್ಷ ಪಕ್ಷಕ್ಕೆ ನಾನೇ ಆ ಕ್ಷೇತ್ರದ ನಾಯಕ. ಶಾಸಕರು ಕ್ಷೇತ್ರಕ್ಕೆ ಐನೂರು ಕೋಟಿ ಕೆಲಸ ಮಾಡಿಸುತ್ತಾರೆ. ಅದರಲ್ಲಿ ಎರಡು ಮೂರು ಪ್ರಾಜೆಕ್ಟ್‌ಗಳ ಗುತ್ತಿಗೆ ಪಡೆದರೂ ಸಾಕು, ಚುನಾವಣೆಗೆ ಹಾಕಿದ ದುಡ್ಡಿಗೆ ಮೋಸವಿಲ್ಲ' ಎಂದರು.
ನಾನು ಮೌನಕ್ಕೆ ಶರಣಾದೆ!
ಇಂತಹ ಮನಸ್ಥಿತಿಗಳ ಪರಿಣಾಮವಾಗಿಯೇ ಈ ಬಾರಿಯ ಚುನಾವಣೆಯಲ್ಲಿ ನಾವು ಚುನಾವಣಾ ಪೂರ್ವ ಭ್ರಷ್ಟಾಚಾರವನ್ನು ಕಾಣುತ್ತಿದ್ದೇವೆ. ಹಣ ಪಡೆದು ಟಿಕೆಟ್ ನೀಡುವ ಪದ್ಧತಿಗಳು ಆರಂಭವಾಗಿವೆ. ಇದಕ್ಕೆ ಯಾವ ಪಕ್ಷವೂ ಹೊರತಾಗಿಲ್ಲ. ಪ್ರಾಮಾಣಿಕ ಮತ್ತು ಸಾಮಾನ್ಯ ವ್ಯಕ್ತಿಗಳು ರಾಜಕೀಯಕ್ಕೆ ಬರಬೇಕು ಎಂಬುದು ಭಾಷಣಕ್ಕೆ ಮಾತ್ರ ಚೆಂದ. ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಚುನಾವಣೆಗೆ ಹಣ ಖರ್ಚು ಮಾಡಬಲ್ಲ, ಟಿಕೆಟ್‌ಗಾಗಿಯೂ 'ಫಂಡ್' ನೀಡಬಲ್ಲವರಿಗೆ ಮೊದಲ ಆದ್ಯತೆ.
ಕಾಂಗ್ರೆಸ್ ಪಕ್ಷದ ಟಿಕೆಟ್ ಹಂಚಿಕೆ ಸಂದರ್ಭ ಹಣ ಪಡೆದಿರುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ತನಿಖೆಗೆ ಸಮಿತಿಯೊಂದನ್ನು ರಚಿಸಲಾಗಿದೆ. ಜೆಡಿಎಸ್ ಟಿಕೆಟ್ ಆಕಾಂಕ್ಷಿಯೊಬ್ಬರು ಹಣ ಪಡೆದು ಟಿಕೆಟ್ ನೀಡಿಲ್ಲ ಎಂದು ಬಹಿರಂಗವಾಗಿಯೇ ಹೇಳಿಕೆ ಕೊಟ್ಟರು. ಸಾಕ್ಷಿ ಒದಗಿಸುವುದಾಗಿಯೂ ಹೇಳಿದ್ದರು. ನಂತರ ಅವರ ಸುಳಿವಿಲ್ಲ. ಬಿಜೆಪಿಯಲ್ಲಿ ಇಂತಹ ಅಂಶಗಳು ಬಹಿರಂಗಗೊಂಡಿಲ್ಲವಾದರೂ, ಹಣ ಕೆಲಸ ಮಾಡಿಲ್ಲ ಎಂಬುದನ್ನು ನಂಬುವುದು ಕಷ್ಟ.
ದುಡ್ಡು ಪಡೆದು ಟಿಕೆಟ್ ಹಂಚಿದ ಪಕ್ಷಗಳಿಂದ ಎಂತಹ ಸರ್ಕಾರ ನಿರೀಕ್ಷಿಸಬಹುದು? ದುಡ್ಡು ಕೊಟ್ಟು ಟಿಕೆಟ್ ಗಿಟ್ಟಿಸಿ, ದುಡ್ಡು ಹಂಚಿ ಮತ ಪಡೆದು ಅಧಿಕಾರಕ್ಕೆ ಬಂದವರು ಹೊಟ್ಟೆಬಿರಿ ಉಣ್ಣದೇ ಇರುತ್ತಾರೆಯೇ? ಹಣ ಪಡೆದು ಮತಹಾಕಿದ ನಾವಾದರೂ ಅವರ ಬಳಿ ಭ್ರಷ್ಟಾಚಾರಕ್ಕೆ ಇಳಿಯಬೇಡಿ ಎಂದು ಯಾವ ನೈತಿಕ ಸ್ಥೈರ್ಯದಿಂದ ಪ್ರಶ್ನಿಸಬೇಕು?
ಚುನಾವಣೆ ಅಂದರೆ ಸ್ಪರ್ಧೆ. ಪಕ್ಷಗಳ, ಅಭ್ಯರ್ಥಿಗಳ ನಡುವಿನ ಪೈಪೋಟಿ. ಅಭ್ಯರ್ಥಿಗಳ ತುಲನೆ. ಮತದಾರರನ್ನು ಸೆಳೆಯುವ ತಂತ್ರಗಳು. ಜನರನ್ನು ಆಕರ್ಷಿಸುವ, ಉತ್ತೇಜಿಸುವ ಭಾಷಣಗಳು. ರಾಜ್ಯದ ಅಭಿವೃದ್ಧಿಗೆ ದೂರದೃಷ್ಟಿಯ ಯೋಜನೆಗಳು. ಇಂತಹ ಯಾವುದೇ ಚಟುವಟಿಕೆಯ ಸುಳಿವು ಈ ಬಾರಿಯ ಚುನಾವಣೆಯಲ್ಲಿ ಕಾಣುತ್ತಿಲ್ಲ. ಕಾಂಚಾಣದ ಅಬ್ಬರದ ನಡುವೆ ಇವುಗಳ ಸದ್ದಡಗಿ ಹೋಗಿದೆ.
ಒಂದು ಕಾಲದಲ್ಲಿ ರಾಜಕೀಯ ನಾಯಕರ ಭಾಷಣ ಕೇಳಲು ಜನ ಮುಗಿಬೀಳುತ್ತಿದ್ದರು. ಅವರ ಭಾಷಣಗಳು, ಉತ್ತರ, ಪ್ರತ್ಯುತ್ತರಗಳು ಮೈನವಿರೇಳಿಸುತ್ತಿದ್ದವು. ಈಗ ಚುನಾವಣೆ ಕಣದಲ್ಲಿರುವ ಸಾಕಷ್ಟು ಅಭ್ಯರ್ಥಿಗಳಿಗೆ ಮಾತನಾಡಲೇ ಬರುವುದಿಲ್ಲ. ರಾಜಕೀಯ ನಾಯಕರು ಭಾಷಣ ಮಾಡುತ್ತಾರಾದರೂ, ಕೇಳಲು ಜನರನ್ನು ದುಡ್ಡುಕೊಟ್ಟು, ಬಸ್ಸು-ಲಾರಿಗಳಲ್ಲಿ ಕರೆತರಬೇಕು.
ಚುನಾವಣೆ ಎಂಬುದು ಪ್ರಜಾಪ್ರಭುತ್ವದ ಪರೀಕ್ಷೆ ಇದ್ದಂತೆ. ಕೇವಲ ಅಭ್ಯರ್ಥಿ ಮತ್ತು ಪಕ್ಷಗಳಿಗಷ್ಟೇ ಅಲ್ಲ, ಮತದಾರರಿಗೂ ಇದು ಪರೀಕ್ಷೆಯ ಕಾಲ. ಅಭ್ಯರ್ಥಿಗಳ, ಪಕ್ಷಗಳ ಗುಣಾವಗುಣ, ಸಾಮರ್ಥ್ಯ, ರಾಜಕೀಯ ತಂತ್ರಗಾರಿಕೆಗಳು ಮಂಥನಕ್ಕೊಳಗಾಗಬೇಕು. ಇವುಗಳನ್ನೇ ಮಾನದಂಡವಾಗಿರಿಸಿಕೊಂಡು ಜನ ಮತ ಚಲಾಯಿಸಬೇಕು. ಆಗ ಉತ್ತಮ ಅಭ್ಯರ್ಥಿ ಮತ್ತು ಪಕ್ಷ ಆರಿಸಿಬರುತ್ತದೆ. ಹಾಗೆ ಆರಿಸಿಬಂದ ಸರ್ಕಾರ ಮಾತ್ರ ಜನರಿಂದ, ಜನರಿಗಾಗಿ ಮತ್ತು ಜನರಿಗೋಸ್ಕರ ಕೆಲಸ ಮಾಡಬಲ್ಲದು. ಇಂತಹ ವ್ಯಕ್ತಿ ಮತ್ತು ಸರ್ಕಾರವನ್ನು ಆರಿಸುವ ಮೂಲಕ ಮತದಾರ ಪ್ರಜಾಪ್ರಭುತ್ವದ ಪರೀಕ್ಷೆಯಲ್ಲಿ ಗೆಲ್ಲಬೇಕು. ಆದರೆ ಮತದಾರ ಗೆಲ್ಲುತ್ತಾನೆ ಎಂಬ ನಂಬಿಕೆಯೇ ಬರುತ್ತಿಲ್ಲ. ಒಂದು ಮತದಿಂದ ಯಾವ ಬದಲಾವಣೆ ತರಲು ಸಾಧ್ಯ ಎಂಬ ಸಿನಿಕತನ ಮತದಾರರನ್ನು ಆವರಿಸಿದೆ. ಹಣದ ಬಲ ಜವಾಬ್ದಾರಿಯುತ ಮತದಾರರ ಉತ್ಸಾಹವನ್ನೇ ಕುಗ್ಗಿಸಿದೆ. ಹೀಗಾಗಿ ಹಣದಿಂದ, ಹಣಕ್ಕಾಗಿ ಮತ್ತು ಹಣಕ್ಕೋಸ್ಕರ ಕೆಲಸ ಮಾಡುವರೇ ಆಯ್ಕೆಯಾಗುತ್ತಿದ್ದಾರೆ.
ದುಡ್ಡಿನ ದರ್ಪಕ್ಕೆ ಯಾವ ಕಾರಣಕ್ಕೂ ಮಣೆ ಹಾಕುವುದಿಲ್ಲ ಎಂಬ ಸಂಕಲ್ಪವೇ ಮತದಾರರ ಕಡೆಯಿಂದ ಆಗಬಹುದಾದ ಸುಕಾರ್ಯ. ಅದರಿಂದಲೇ ಮತದಾರರ ಗೆಲುವು.
ಗೆಲುವೋ ಸೋಲೋ ಆಯ್ಕೆ ನಿಮ್ಮದು.
-ವಿಶ್ವೇಶ್ವರ ಭಟ್
vbhat@me.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

