ಚುನಾವಣೆ ನಿಯಂತ್ರಿಸುತ್ತಿರುವ 'ವಸೂಲಿ ರಾಜಕೀಯ'
ಕೋಟಿ-ಕೋಟಿ ಕೊಟ್ಟು ಟಿಕೆಟ್ ಪಡೆಯಲು ಯಾರಿಗೆ ಸಾಮರ್ಥ್ಯ ಇರುತ್ತದೆ? ...
ಕೋಟಿ-ಕೋಟಿ ಕೊಟ್ಟು ಟಿಕೆಟ್ ಪಡೆಯಲು ಯಾರಿಗೆ ಸಾಮರ್ಥ್ಯ ಇರುತ್ತದೆ? ಉದ್ಯಮಿಗಳು, ಜಮೀನುದಾರರು, ಡೆವಲಪರ್ಸ್, ಮುಂತಾದವರಿಗೆ...
ಪ್ರತಿ ಚುನಾವಣೆ ಬಂದಾಗಲೂ ಇದು ಹಿಂದಿನದಕ್ಕಿಂತಲೂ ಭಿನ್ನ ಎಂಬ ಭಾವನೆ ಸಹಜ. ವಿವಿಧ ಪಕ್ಷಗಳ ಪ್ರಣಾಳಿಕೆ, ಭರವಸೆ, ಅಭ್ಯರ್ಥಿಗಳ ಆಯ್ಕೆ, ಅದಕ್ಕೆ ಅನುಸರಿಸುವ ಮಾನದಂಡ, ಪ್ರಚಾರದ ಸ್ವರೂಪ, ಶೈಲಿ - ಈ ಎಲ್ಲವೂ ಕೂಡ ಗಮನ ಸೆಳೆಯುತ್ತವೆ. ಆದರೆ ಕರ್ನಾಟಕದಲ್ಲಿ ಈ ಬಾರಿ ನಡೆಯುತ್ತಿರುವ ವಿಧಾನಸಭೆ ಚುನಾವಣೆ ಬೇರೆಯದೇ ಕಾರಣಕ್ಕೆ ವಿಭಿನ್ನವಾಗಿದೆ, ವಿಶಿಷ್ಟವಾಗಿದೆ. ಅದುವೇ ವಸೂಲಿ ರಾಜಕೀಯ.
ಅಂದರೆ ಈ ವಸೂಲಿ ರಾಜಕೀಯ ಹಿಂದೆಂದೂ ಇರಲಿಲ್ಲ ಎಂದೇನೂ ಅಲ್ಲ. ಅದು ಚುನಾವಣೆ ಪ್ರಕ್ರಿಯೆಯ ಒಂದಂಶವಾಗಿತ್ತು. ಆದರೆ ಈಗ ಅದೇ ಪ್ರಧಾನ ಪಾತ್ರ ವಹಿಸಿದೆ. ಪ್ರಜಾತಂತ್ರ ವ್ಯವಸ್ಥೆಯ ಎಲ್ಲ ಅಂಶಗಳನ್ನು ಬದಿಗೊತ್ತಿ ದುಡ್ಡಿದ್ದವರಿಗೆ ರಾಜಕೀಯ, ದುಡ್ಡಿದ್ದವರಿಗೆ ಚುನಾವಣೆ ಎಂಬಲ್ಲಿಗೆ ಬಂದು ನಿಂತಿದೆ. ಇದಕ್ಕೆ ಯಾವುದೇ ಪ್ರಮುಖ ಪಕ್ಷಗಳು ಹೊರತಲ್ಲ. ಇದಕ್ಕೆ ಯಾವುದಾದರೂ ಪಕ್ಷ ಹೊರತಾಗಿದೆ ಎಂದರೆ ಅದು ಹೇಳಿಕೊಳ್ಳುವಂಥ ಪಕ್ಷವೇ ಅಲ್ಲ ಎಂಬಂತಾಗಿದೆ. ಒಂದು ರಾಜಕೀಯ ಪಕ್ಷದ ಸ್ಥಾನಮಾನವನ್ನು ಅದಕ್ಕಿರುವ ಜನಪರ ಕಾಳಜಿಯ ಬದ್ಧತೆಯ ಬದಲಿಗೆ ಹಣವೇ ಅಳೆಯುವಂತಾಗಿರುವುದು ದೌರ್ಭಾಗ್ಯ.
ಈ ಪೀಠಿಕೆಗೆ ಕಾರಣ ಇಷ್ಟೇ. ಈ ಬಾರಿ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಎಲ್ಲ ಪ್ರಮುಖ ರಾಜಕೀಯ ಪಕ್ಷಗಳು ಒಂದೇ ತತ್ವ ಅನುಸರಿಸಿವೆ. ವಿದ್ಯಾರ್ಹತೆ, ಸಂಸ್ಕಾರ, ಅನುಭವ, ಜನಪರ ಕಾಳಜಿ, ಸೇವಾ ಮನೋಭಾವ, ತುಡಿತ, ಪಕ್ಷನಿಷ್ಠೆ - ಇವು ಆಯ್ಕೆಯ ಪ್ರೇರಕ ಅಂಶಗಳು ಎಂದು ಭಾವಿಸಿದರೆ ಅದು ನಮ್ಮ ಮೂರ್ಖತನ. ಬದಲಿಗೆ ಅಭ್ಯರ್ಥಿಯ ಆರ್ಥಿಕ ಸ್ಥಿತಿಗತಿ, ನಾಯಕರ ಹಣದಾಸೆ ಪೂರೈಸುವ ಸಾಮರ್ಥ್ಯ, ಖರ್ಚು ಮಾಡುವಲ್ಲಿ ದಾರಾಳತನ - ಇವೇ ಪ್ರಧಾನ ಅಂಶಗಳಾಗಿವೆ. ಹೀಗಾಗಿ ಈಗಿನ ಚುನಾವಣೆಯನ್ನು ಮಿಕ್ಕೆಲ್ಲ ಅಂಶಗಳಿಗಿಂತ ಹಣವೇ ಆಳುತ್ತಿದೆ. 'ಗಾಳಿ ಬಂದಾಗ ತೂರಿಕೋ' ಎಂಬಂತೆ 'ಚುನಾವಣೆ ಬಂದಾಗ ಆದಷ್ಟು ಮಾಡಿಕೋ' ಎಂಬ ಘೋಷವಾಕ್ಯ ಹಿಡಿದುಕೊಂಡು ನಾನಾ ರಾಜಕೀಯ ಪಕ್ಷಗಳ ಮುಖಂಡರು ಕುಣಿದಾಡುತ್ತಿದ್ದಾರೆ.
ಉಳಿದೆಲ್ಲ ಪಕ್ಷಗಳಿಗೆ ಹೋಲಿಸಿದರೆ 'ವಸೂಲಿ ರಾಜಕೀಯ'ದಲ್ಲಿ ಕಾಂಗ್ರೆಸ್ ಮುಂದು. ಅಭ್ಯರ್ಥಿಗಳಿಗೆ ಟಿಕೆಟ್ ಹಂಚಿಕೆಗೆ ಅರ್ಜಿ ವಿತರಿಸುವಲ್ಲಿಯೇ ಕೋಟ್ಯಂತರ ರುಪಾಯಿ ಎತ್ತಿದೆ. ಪ್ರತಿ ಅರ್ಜಿಗೆ ಹತ್ತು ಸಾವಿರ ರುಪಾಯಿ. ಸಾವಿರಾರು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಇರುವ ಟಿಕೆಟ್ ಮಾತ್ರ 224. ಅರ್ಜಿ ಕೊಡುವಲ್ಲಿಂದಲೇ ವಸೂಲಿ ಶುರು. ಅರ್ಜಿ ಕೊಟ್ಟವರಿಗೂ ಗೊತ್ತು. ತೆಗೆದುಕೊಂಡವರಿಗೂ ಗೊತ್ತು. ಇರುವ ಟಿಕೆಟ್ 224 ಮಾತ್ರ. ಆದರೆ ಪಾರ್ಟಿ ಫಂಡ್ ಹಿಗ್ಗಿಸಲು ಸಾವಿರಾರೂ ಅರ್ಜಿ ಕೊಟ್ಟು ಹುಂಡಿ ತುಂಬಿಸಿಕೊಂಡರು.
ಇದು ಅರ್ಜಿ ಕತೆಯಾಯಿತು. ಇನ್ನು ಟಿಕೆಟ್ ಮೌಲ್ಯ! ಸಾರ್ವಜನಿಕವಾಗಿ ಹರಾಜು ಹಾಕಲಿಲ್ಲ ಅಷ್ಟೇ. ಜಾತಿ, ಸ್ನೇಹ, ಬೆಂಬಲ ಇವುಗಳ ಜತೆಗೆ ದುಡ್ಡೇ ಪ್ರಧಾನ. ಎರಡು ಕೋಟಿಯಿಂದ ಹತ್ತು ಕೋಟಿ ರುಪಾಯಿಯವರೆಗೂ ಟಿಕೆಟ್‌ಗಳನ್ನು ಮಾರಾಟ ಮಾಡಲಾಗಿದೆ. ಇದರಲ್ಲಿ ಕರ್ನಾಟಕದ ಮುಖಂಡರು, ದಿಲ್ಲಿ ಮುಖಂಡರು ಎಂಬ ಬೇಧವಿಲ್ಲ. ಕೆಲವರು ಕರ್ನಾಟಕದ ಮುಖಂಡರ ಜತೆಗೆ ದಿಲ್ಲಿಯವರನ್ನೂ ಮೇನೇಜ್ ಮಾಡಿದ್ದಾರೆ. ಡಬಲ್ ಖರ್ಚು. ದಿಲ್ಲಿಗೆ ನೇರ ಸಂಪರ್ಕ ಇದ್ದವರು ಅಲ್ಲೇ ವ್ಯವಹರಿಸಿ, 'ಕರ್ನಾಟಕದ ಕೋಟಾ' ಉಳಿಸಿಕೊಂಡಿದ್ದಾರೆ.
ಕೋಟಿ-ಕೋಟಿ ಕೊಟ್ಟು ಟಿಕೆಟ್ ಪಡೆಯಲು ಯಾರಿಗೆ ಸಾಮರ್ಥ್ಯ ಇರುತ್ತದೆ ಹೇಳಿ. ಮತ್ತದೇ ಉದ್ಯಮಿಗಳು, ಜಮೀನುದಾರರು, ಡೆವಲಪರ್ಸ್ ಹಾಗೂ ಶಿಕ್ಷಣ ವ್ಯಾಪಾರಿಗಳು. ಹಿರಿಯ ತಲೆಗಳು, ಪಕ್ಷದೊಳಗೇ ಸ್ವಂತ ಸಾಮರ್ಥ್ಯ ಹೊಂದಿರುವವರನ್ನು ಹೊರತುಪಡಿಸಿದವರು ತೆತ್ತೇ ಟಿಕೆಟ್ ಪಡೆದಿದ್ದಾರೆ. ಈ ತೆರುವ ಸಾಮರ್ಥ್ಯ ಇರುವವರ ಮುಂದೆ ಪಕ್ಷಕ್ಕಾಗಿ ಹಗಲಿರುಳು ದುಡಿದ ನಿಷ್ಠಾವಂತರು ತೆರೆಮರೆಗೆ ಸರಿದಿದ್ದಾರೆ. ತಮ್ಮ ಅದೃಷ್ಟವನ್ನು ತಾವೇ ಶಪಿಸಿಕೊಳ್ಳುತ್ತಾ. ತಮ್ಮ ಹಣೆಬರಹ ಇಷ್ಟೇ ಎಂದು ಕೆಲವರು ಸುಮ್ಮನಾಗಿದ್ದರೆ, ಇನ್ನೂ ಕೆಲವರು ಪ್ರದೇಶ ಕಾಂಗ್ರೆಸ್ ಕಚೇರಿ ಮುಂದೆ ಪ್ರತಿಭಟನೆ ಮಾಡಿ 'ಎನರ್ಜಿ' ಕಳೆದುಕೊಂಡಿದ್ದಾರೆ. ಇನ್ನೂ ಕೆಲವರು ಟಿಕೆಟ್ ಸಿಕ್ಕ ಪಕ್ಷಕ್ಕೆ ಹಾರಿ ಹೋಗಿದ್ದಾರೆ.
ಇಲ್ಲಿ ಇನ್ನೂ ಒಂದು ವಿಚಾರ. ಹಿಂದೆ ಚುನಾವಣೆಗೆ ಮೊದಲೇ ಇಂತಹುದೇ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಉದ್ಯಮಿಗಳು, ವ್ಯಾಪಾರಸ್ಧರಿಗೆ ನಿಖರ ಮಾಹಿತಿ ಸಿಗುತ್ತಿತ್ತು. ಅಂತಹ ಪಕ್ಷಕ್ಕೆ ಚುನಾವಣೆ ಸಂದರ್ಭದಲ್ಲಿ ದೇಣಿಗೆ ಕೊಟ್ಟು, ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಕೊಟ್ಟ ಕಾಣಿಕೆಗೆ ಮಿಗಿಲಾದ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದರು. ಹಾಗಂತ ಎದುರಾಳಿ ಪಕ್ಷಗಳ ವಿಶ್ವಾಸ ಕಳೆದುಕೊಳ್ಳುತ್ತಿರಲಿಲ್ಲ. ಅವರಿಗೂ ಒಂದಷ್ಟು ಸಲ್ಲುತ್ತಿತ್ತು. ಅಪ್ಪಿತಪ್ಪಿ ಅಧಿಕಾರಕ್ಕೆ ಬಂದರೆ ಇರಲಿ ಎಂಬ ಮುನ್ನೆಚ್ಚರಿಕೆ ಕ್ರಮವಾಗಿ. ಈಗ ಚುನಾವಣೆ ರಾಜಕೀಯದಲ್ಲಿ ಕಾಂಗ್ರೆಸ್ ಕೊಂಚ ಮುಂದೆ ಇದೆ ಎನಿಸಿದರೂ ಏನು ಬೇಕಾದರೂ ಆಗಬಹುದು ಎನ್ನುವ ಊಹೆಗೂ ಅವಕಾಶವಿದೆ. ಹೀಗಾಗಿ ಎಲ್ಲಿರಿಗೂ ಹಂಚಬೇಕು ಎಂಬ ಅನಿವಾರ್ಯ ಕರ್ಮ. ಹೀಗೆ ಯಾರನ್ನೋ ನಂಬಿಕೊಂಡು ಹಂಚುವ ಬದಲು ತಾವೇ ಚುನಾವಣೆ ಕಣಕ್ಕೆ ಇಳಿದರೆ ಹೇಗೆ ಎಂಬ ತರ್ಕಕ್ಕೆ ಬಿದ್ದ ಪರಿಣಾಮವಾಗಿ ವಹಿವಾಟು ಕೂಡ ನೇರ ಮತ್ತು ಖಡಾಖಡಿ. ಮುಖಂಡರಿಗೆ ಟಿಕೆಟ್ ಮೌಲ್ಯ ತುಂಬಿ ಕೊಡುವುದರ ಜತೆಗೆ ಚುನಾವಣೆಯನ್ನು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಎದುರಿಸುವುದು. ಗೆದ್ದು ಬಂದರೆ ಇದ್ದೇ ಇದೆ ಹೂಡಿದ 'ಬಂಡವಾಳ'ವನ್ನು ಬಡ್ಡಿಸಮೇತ ದುಡಿಯುವ ಕಲೆ.
ಇನ್ನು ನಾಯಕರಿಗೆ ಇದೇ ಸುಸಂದರ್ಭ. ಏಕೆಂದರೆ ಹೈಕಮಾಂಡ್ ಚುನಾವಣೆ ನಡೆಸುವ 'ತಾಕತ್ತ'ನ್ನು ಇವರ ತಲೆಗೆ ಕಟ್ಟಿರುತ್ತದೆ. ಚುನಾವಣೆ ಆಯೋಗದ ಲೆಕ್ಕಕ್ಕೆ ಅನುಗುಣವಾಗಿ ಯಾರೊಬ್ಬರು ಚುನಾವಣೆಗೆ ಖರ್ಚು ಮಾಡುವುದಿಲ್ಲ ಎಂಬುದು ಬಹಿರಂಗ ಸತ್ಯ. ಅದು ಆಯೋಗಕ್ಕೂ ಚೆನ್ನಾಗಿ ಗೊತ್ತು. 'ರಾಮನ ಲೆಕ್ಕ, ಕೃಷ್ಣನ ಲೆಕ್ಕ' ಇದ್ದೆ ಇರುತ್ತದೆ. ಈಗಿನ 'ಬೆಲೆ ಏರಿಕೆ' ಸಂದರ್ಭದಲ್ಲಿ ಯಾವುದೇ ಒಂದು ಪ್ರಮುಖ ರಾಜಕೀಯ ಪಕ್ಷ ಸಾಧಾರಣವಾಗಿ ಚುನಾವಣೆ ಎದುರಿಸಬೇಕಾದರೆ ಕನಿಷ್ಠ 500 ರಿಂದ 700 ಕೋಟಿ ರುಪಾಯಿವರೆಗೂ ಬೇಕೇ ಬೇಕು. ಹಾಗಂತ ಇದನ್ನು ಪಕ್ಷದ ನಾಯಕರು ಭರಿಸಲು ಸಾಧ್ಯವೇ? ಅವರ ಬಳಿ ದುಡ್ಡು ಇರಬಹುದು. ಇದನ್ನೂ ಮೀರಿಸಿದ ಖರ್ಚು ಭರಿಸುವ ಸಾಮರ್ಥ್ಯ ಅವರಿಗೆ ಇದೆಯಾದರೂ, ಕೈಯಿಂದ ದುಡ್ಡು ಹಾಕಿಕೊಂಡು ಚುನಾವಣೆ ಮಾಡಲು ಅದ್ಯಾವ ಹಣೆಬರಹ. ಹೀಗಾಗಿ ಚುನಾವಾಣೆ ಹೊಣೆ ಹೊತ್ತುಕೊಂಡ ನಾಯಕರು ಪಕ್ಷದ ಖರ್ಚನ್ನೂ ಇಂತಹ ವಸೂಲಿಗಳಿಂದಲೇ ತುಂಬಿಸಿಕೊಳ್ಳುತ್ತಾರೆ. ಮುಂದೆ ಒಂದೊಮ್ಮೆ ಪಕ್ಷ ಅಧಿಕಾರಕ್ಕೆ ಬರುವ ಸಂದರ್ಭದಲ್ಲಿ ಮುಖ್ಯಮಂತ್ರಿ, ಉಳಿದ ಗಾದಿಗಳಿಗೆ ಲಾಬಿ ಮಾಡಲು ಮತ್ತದೇ ದುಡ್ಡು ಬೇಕಲ್ಲ. ಹೈಕಮಾಂಡ್ ಪ್ರತಿನಿಧಿಗಳಿಗೂ ಕೊಡಬೇಕು. ತಮ್ಮನ್ನು ಬೆಂಬಲಿಸಲು ಶಾಸಕರನ್ನು ಓಲೈಸಿಕೊಳ್ಳಬೇಕು. ಹೀಗಾಗಿ ಆ ಹಣವನ್ನೂ ಇದೇ ಸಂದರ್ಭದಲ್ಲೇ ಸಂಗ್ರಹಿಸಿಟ್ಟುಕೊಳ್ಳುತ್ತಾರೆ. ಏಕೆಂದರೆ ಎಲ್ಲ ಸಂದರ್ಭದಲ್ಲೂ ಇಂತಹ ಅವಕಾಶ ಬರುವುದಿಲ್ಲ. ಯುಗಾದಿ ವರ್ಷಕ್ಕೊಮ್ಮೆ ಮಾತ್ರ ಬರುತ್ತದೆ.
ಈ ವಸೂಲಿ ರಾಜಕೀಯ ಕಾಂಗ್ರೆಸ್‌ಗೆ ಮಾತ್ರ ಸೀಮಿತ ಎಂದೇನೂ ಅರ್ಥವಲ್ಲ. ಅರವತ್ತು ವರ್ಷ ಈ ದೇಶವನ್ನು ಆಳಿದ ಕಾಂಗ್ರೆಸ್‌ಗೇ 'ಅರ್ಥಶಾಸ್ತ್ರ' ಅರ್ಥ ಮಾಡಿಸುವ ಮಟ್ಟಿಗೆ ಬಿಜೆಪಿ ಕಲಿತು, ಪ್ರಬುದ್ಧವಾಗಿದೆ. ಹಾಗೆ ನೋಡಿದರೆ ಕರ್ನಾಟಕದಲ್ಲಿ ಹಿಂದೆಲ್ಲ ಆಳ್ವಿಕೆ ಮಾಡಿದ ಎಲ್ಲ ರಾಜಕೀಯ ಪಕ್ಷಗಳಿಗೆ ಪಾಠ ಹೇಳುವ ಮಟ್ಟಿಗೆ ಈ 'ಅರ್ಥಶಾಸ್ತ್ರ'ವನ್ನು ಹೇಗೆ ಕರಗತ ಮಾಡಿಕೊಂಡಿದೆ ಎಂಬುದನ್ನು ಬಿಜೆಪಿಯ ಕಳೆದ ಐದು ವರ್ಷದ ಆಳ್ವಿಕೆ ರುಜುವಾತುಪಡಿಸಿದೆ. ಭ್ರಷ್ಟಾಚಾರದಲ್ಲಿ ಅದು ಚಿಮ್ಮಿಸಿದ ನಾಣ್ಯ ಇನ್ನೂ ಕೆಳಗೇ ಬಿದ್ದಿಲ್ಲ. ಅಧಿಕಾರದಲ್ಲಿದ್ದ ಬಹುತೇಕ ಮಂದಿ ಸೊಂಪಾಗಿದ್ದಾರೆ. ಇನ್ನೂ ಆ ಆಲೆಯಲ್ಲೇ ತೇಲುತ್ತಿದ್ದಾರೆ. ಹೀಗಾಗಿ ಟಿಕೆಟ್ ವಿಚಾರದಲ್ಲಿ ಕಿತ್ತುಕೊಂಡು ತಿನ್ನುವುದಕ್ಕಿಂತ ಪಕ್ಷದ ಚುನಾವಣೆ ಖರ್ಚಿಗೆ ಬೇಕಾದಷ್ಟನ್ನು ಒಂದಷ್ಟು ಅಭ್ಯರ್ಥಿಗಳಿಂದ ತೂಗಿಸಿದ್ದಾರೆ. ಇಲ್ಲಿ ಪಕ್ಷ ಬಿಟ್ಟು ಹೋದವರ ಸಂಖ್ಯೆ ಹೆಚ್ಚಿರುವುದರಿಂದ ಆ ಸ್ಥಾನಗಳ ಪೈಪೋಟಿ ಒಂದಷ್ಟು ಕಿಮ್ಮತ್ತು ನಿಗದಿ ಮಾಡಿರುವುದು ಸುಳ್ಳಲ್ಲ.
ಜಾತ್ಯತೀತ ಜನತಾದಳದಲ್ಲೂ ಟಿಕೆಟ್ ಬಿಕರಿ ನಡೆದಿದೆ. ಆದರೆ ಕಾಂಗ್ರೆಸ್ ಮತ್ತು ಬಿಜೆಪಿಗೆ ಹೋಲಿಸಿದರೆ ಹೇಳಿಕೊಳ್ಳುವಂಥದ್ದೇನೂ ಇಲ್ಲ. ಆದರೂ ಅದರ ಛಾಯೆಯಿಂದ ಹೊರಬರಲು ಸಾಧ್ಯವಾಗಿಲ್ಲ. ಪ್ರಾದೇಶಿಕ ಪಕ್ಷ ಎಂಬ ಲೇಬಲ್ ಪೈಪೋಟಿ ಪ್ರಮಾಣಕ್ಕೆ ಬ್ರೇಕ್ ಹಾಕಿದೆಯಾದರೂ ಚುನಾವಣೆ ಖರ್ಚು ಸರಿದೂಗಿಸಲು ಯಾವುದೇ ಆಡ್ಡಿ ಮಾಡಿಲ್ಲ. ಬಿಜೆಪಿಯ ಆಡಳಿತ ವಿರೋಧಿ ಅಲೆ ಸಹಜವಾಗಿಯೇ ಕಾಂಗ್ರೆಸ್‌ನಂತೆ ಜೆಡಿಎಸ್‌ಗೂ ಒಂದಷ್ಟು 'ಮೌಲ್ಯ' ತಂದಿದೆ. ಈ ಮೌಲ್ಯ ಹಳೇ ಮೈಸೂರು ಭಾಗದಲ್ಲಿ ಹೆಚ್ಚಾಗಿದೆ. ಇನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಕರ್ನಾಟಕ ಜನತಾ ಪಕ್ಷ ಹಾಗೂ ಶ್ರೀರಾಮುಲು ನಾಯಕತ್ವದ ಬಿಎಸ್‌ಆರ್ ಪಕ್ಷ ಈ ವ್ಯಾಪ್ತಿಗೆ ಬರುವುದಿಲ್ಲ. ಏಕೆಂದರೆ ಇವು ನಾಯಕ ಆಧಾರಿತ ಪಕ್ಷಗಳು. ಈ ಪಕ್ಷಗಳಿಗೆ ಬಂದಿರುವವರು ಸಹಜನಾಗಿಯೇ ನಾಯಕರ ಕೈ ನೋಡುತ್ತಾರೆ, ನೋಡುತ್ತಿದ್ದಾರೆ. ಹೀಗಾಗಿ ಇಲ್ಲಿ ನಾಯಕರು ಪಡೆದುಕೊಳ್ಳುವುದಕ್ಕಿಂಥ ಕಳೆದುಕೊಳ್ಳುವುದೇ ಹೆಚ್ಚು. ಈ ಪಕ್ಷಗಳಲ್ಲಿ 'ಅರ್ಥಶಾಸ್ತ್ರ' ಉಲ್ಟಾಪಲ್ಟಾ. ಬಂದವರಿಗೆ ಕರೆದುಕೊಂಡವರೇ ಕೊಡಬೇಕು.
ಈ 'ವಸೂಲಿ ರಾಜಕೀಯ' ಮೊದಲಿಂದಲೂ ಇದ್ದದ್ದೇ. ಆದರೆ ಆಗಲೇ ದಾಖಲಿಸಿದಂತೆ ಸ್ವರೂಪ ಮಾತ್ರ ಬೇರೆಯಾಗಿತ್ತು. ಹಿಂದೆಲ್ಲ ಚುನಾವಣೆ ಹಿಂದೆ ಹೆಂಡ-ಸಾರಾಯಿ ಲಾಬಿ ಕೆಲಸ ಮಾಡುತ್ತಿತ್ತು. ಅಬಕಾರಿ ಕುಳಗಳು ರಾಜಕೀಯ ಪಕ್ಷಗಳ ಚುನಾವಣೆ ಖರ್ಚನ್ನು ಭರಿಸುತ್ತಿದ್ದವು. ಎಲ್ಲ ಪಕ್ಷಗಳಿಗೂ ಕೊಟ್ಟು ಅಧಿಕಾರಕ್ಕೆ ಬಂದವರಿಂದ ನೂರ್ಮಡಿ ತುಂಬಿಸಿಕೊಳ್ಳುತ್ತಿದ್ದವು. ನಂತರ ಕೈಗಾರಿಕೋದ್ಯಮಿಗಳು ಈ ಸ್ಥಾನವನ್ನು ಭರ್ತಿ ಮಾಡಿದರು. ನಂತರ ಶಿಕ್ಷಣ ಸಂಸ್ಥೆಗಳ ಲಾಬಿ ಕೆಲಸ ಮಾಡಿತು. ಅದಕ್ಕೆ ಪ್ರತಿಯಾಗಿ ಶಿಕ್ಷಣ ಸಂಸ್ಥೆಗಳ ಸ್ಥಾಪನೆ ಮತ್ತು ವಿಸ್ತರಣೆಗೆ ನೂರಾರು ಎಕರೆ ಜಮೀನು, ಅನುದಾನ ದಕ್ಕಿಸಿಕೊಂಡವು. ತದನಂತರ ಮಾಹಿತಿ ತಂತ್ರಜ್ಞಾನ (ಐಟಿಬಿಟಿ) ಕ್ಷೇತ್ರ ಸೀಮಿತ ಚೌಕಟ್ಟಿನಲ್ಲಿ ಲಾಬಿ ಮಾಡಿತು. ಅವು ಕೂಡ ನೂರಾರು ಎಕರೆ ಭೂಮಿ ನುಂಗಿ ಕೃತಾರ್ಥರಾದವು. ಇದಾದ ನಂತರ ಬಂದ ಗಣಿ ಮಾಫಿಯಾ ಸತತ ಮೂರು ಸರಕಾರಗಳನ್ನು ನಿಯಂತ್ರಿಸಿತು. ಜತೆಗೆ ಎರಡು ಸರಕಾರಗಳ ಸ್ಥಾಪನೆ ಮತ್ತು ಅಧಃಪತನದಲ್ಲೂ ಪ್ರಮುಖ ಪಾತ್ರ ವಹಿಸಿತು. ಗಣಿ ಕ್ಷೇತ್ರ ಹಾಗೂ ಸರಕಾರ ನಿಯಂತ್ರಿಸಿದವರು, ಆ ಮಾಫಿಯಾದಲ್ಲಿ ಷಾಮೀಲಾದ ರಾಜಕಾರಣಿಗಳು, ಅಧಿಕಾರಿಗಳು ಜೈಲು ಪಾಲಾಗಿದ್ದಾರೆ. ಈ ಗಣಿಮಾಫಿಯಾ ಮಾಡಿರುವ ಗಂಡಾಂತರ ನಿವಾರಣೆಗೆ ಇನ್ನೂ ಸಾಕಷ್ಟು ವರ್ಷಗಳೇ ಬೇಕಿವೆ.
ಗಣಿ ನಂತರ ಈಗ ಹೊಸದಾಗಿ ರಾಜಕೀಯ ಕ್ಷೇತ್ರವನ್ನು ನಿಯಂತ್ರಿಸುತ್ತಿರುವುದು ರಿಯಲ್ ಎಸ್ಟೇಟ್ ಉದ್ಯಮ. ಕಳೆದ ಸರಕಾರದಲ್ಲೂ ಒಂದಷ್ಟು ಹಿಡಿತ ಸಾಧಿಸಿ ಮಂತ್ರಿಗಳು ಸೇರಿದಂತೆ ಸಾಕಷ್ಟು ಮಂದಿಯನ್ನು ಜೈಲಿಗೆ ತಳ್ಳಿದ್ದು ಇದೇ ಉದ್ಯಮ. ಅಕ್ರಮವಾಗಿ ಡಿನೋಟಿಫಿಕೇಷನ್ ಮಾಡಿ ಯಾರ್ಯಾರು ಏನೇನು ಆದರು ಎಂಬುದು ಈಗ ಇತಿಹಾಸ. ಇಷ್ಟೆಲ್ಲ ಆದರೂ ಈಗಿನ ಚುನಾವಣೆ ಸಂದರ್ಭದಲ್ಲೂ ಎಲ್ಲ ಪಕ್ಷಗಳ ಮೇಲೆ ಡೆವಲಪರ್ಸ್ ಹಿಡಿತ ಸಾಧಿಸಿದ್ದಾರೆ. ಅದು ಟಿಕೆಟ್ ಪಡೆಯುವುದಿರಲಿ, ಪಕ್ಷಗಳ ಮೇಲೆ ಬಂಡವಾಳ ಹೂಡುವುದಿರಲಿ ಎಲ್ಲೆಡೆ ಅವರದೇ ಪ್ರಭಾವ ಕೆಲಸ ಮಾಡಿದೆ, ಮಾಡುತ್ತಿದೆ. ಎಲ್ಲ ಪಕ್ಷಗಳ ಮುಖಂಡರಿಗೂ ಈಗ ಇವರೇ ಸಂಪನ್ಮೂಲದ ರೂವಾರಿಗಳು. ಈಗಿನ ಚುನಾವಣೆಯಲ್ಲಿ ಹರಿಯುತ್ತಿರುವ, ಹರಿಯುವ ಹಣದ ವಾರಸುದಾರರು ಇವರೇ. ಹೀಗಾಗಿ ಮುಂದಿನ ಸರ್ಕಾರವನ್ನು ಕೂಡ ನಿಸ್ಸಂಶಯವಾಗಿ ರಿಯಲ್ ಎಸ್ಟೇಟ್ ಉದ್ಯಮವೇ ನಿಯಂತ್ರಿಸಲಿದ್ದು, ಇದರಿಂದಾಗುವ ಪರಿಣಾಮಗಳಿಗೆ ಬರಲಿರುವ ದಿನಗಳು ಸಾಕ್ಷಿಯಾಗಲಿವೆ.
ಲಗೋರಿ: ದೇಣಿಗೆ ಕೊಟ್ಟವ ಹಂಗು ಬಯಸುವುದು 'ವ್ಯಾಪಾರ ಧರ್ಮ.'
-ಪಿ. ತ್ಯಾಗರಾಜ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

