ಅಂಕಣಗಳು

ಫೇಸ್‌ಬುಕ್ನಾಗೆ ಕೈ ಪಕ್ಸದ ಗ್ಯಾಂಗು, ಕಂಪ್ಯೂಟರ್ ಹ್ಯಾಂಗು

ಕೈ ಪಕ್ಸದ ಶೀನಿಯರ್ ಲೀಡ್ರುಸು ಪಾರ್ಟಿ ಆಪೀಸ್ನಾಗೆ ಕಂಪ್ಯೂಟರ್ ಮುಂದೆ...

Published On :

ಕೈ ಪಕ್ಸದ ಶೀನಿಯರ್ ಲೀಡ್ರುಸು ಪಾರ್ಟಿ ಆಪೀಸ್ನಾಗೆ ಕಂಪ್ಯೂಟರ್ ಮುಂದೆ ಕೂತ್ಕಂಡು ಹಂಗೇ ಪರಪರಾಂತ ತಲೆ ಕೆರ್ಕತಾಯಿದ್ರು.
'ಲೇ ಬಾರ್ಲಾ ಇಲ್ಲಿ, ಅಂದೆಂಥಲೇ ಪೇಸ್‌ಬುಕ್ಕು, ಎಲ್ಲಿ ಸಿಕ್ತದೆ ಅದು, ವೋಗಿ ತಕ್ಕಂಡು ಬಾರ್ಲಾ' ಅಂದ್ರು ಅಪೋಜಿಸನ್ ಲೀಡ್ರು ಸಿದ್ರಾಮಣ್ಣ ಅಪೀಸು ವುಡ್ಗುಂಗೆ 'ಅಲ್ಲಣ್ಣ ನೋಟ್‌ಬುಕ್ಕು ಗೊತ್ತು. ಅದು ಇಸ್ಕೂಲ್ನಾಗೆ ಕೊಡೋರು. ಇದ್ಯಾವ್ದು ಪೇಸ್‌ಬುಕ್ಕು. ನಂಗೂ ತಿಳೀತಾಯಿಲ್ಲ' ಅಂದ್ರು ಈರಣ್ಣ ಮತ್ತಿಕಟ್ಟಿ.  'ನಾವೆಲ್ಲ ವೋದ್ಕಂಡಿದ್ದು ಸರ್ಕಾರಿ ಇಸ್ಕೂಲ್ನಾಗೆ ಕಣಣ್ಣ. ಅಲ್ಲಿ ಅದೆಲ್ಲ ಎಲ್ಲಿ ಕೊಡೋರು. ಕಾನ್ವೆಂಟ್ನಾಗೆ ವೋದೋರ್ಗೆ ಕೊಡೋರೋ ಏನೋ?' ಅಂದ್ರು ವಿಧಾನಪರಿಸತ್ ಆಪೋಜಿಸನ್ ಲೀಡ್ರು ಪಾಟೀಲ್ರು.
'ನಮ್ ಪ್ರೆಸ್ಡೆಂಟು ಪರಮೇಸ್ವರ್ರು ಮೊನ್ನೆ ಪೈವ್‌ಸ್ಟಾರ್ ವೋಟೆಲ್ನಾಗೆ ಪಂಕ್ಸನ್ ಮಾಡ್ಬುಟ್ಟು ಇನ್ಮೇಕೆ ನಾವು ಪೇಸ್‌ಬುಕ್ನಾಗೂ ಪ್ರಚಾರ ಮಾಡ್ತೀವಿ ಅಂತಂದ್ರು. ಹಂಗೆ ಯಾರೋ ಜತ್ಯಾಗೆ ಠಸ್ಸುಪುಸ್ಸು ಅಂತ ಮಾತಾಡುದ್ರು. ನನ್ ತಲೆವೊಳಿಕ್ಕೆ ಏನೂ ವೋಗಿಲ್ಲ ಅಂತೀನಿ. ನಾನಂತೂ ಕೈನಾಗೆ ನೋಟ್‌ಬುಕ್ ಮಡಿಕ್ಕಂಡು ಇದ್ದೋಬುಟ್ಟೆ' ಅಂತಂದ್ರು ಮತ್ತಿಕಟ್ಟಿಯೋರು.
'ನಾನು ಯೋಳಿಲ್ವಾ ಕಾನ್ವೆಂಟ್‌ನಾಗೆ ವೋದೋರ್ಗೆ ಪೇಸ್‌ಬುಕ್ ಕೊಡ್ತಾಯಿದ್ರೋ ಏನೋ ಅಂತ. ಪರಮೇಸ್ವರ್ರು ವೋದಿದ್ದು ಕಾನ್ವೆಂಟು, ಪಾರಿನ್ ಇಸ್ಕೂಲ್ನಾಗೆ ಅಲ್ವಾ ? ಅದುಕ್ಕೆ ಪೇಸ್‌ಬುಕ್ಕು ಗೊತ್ತಿರ್ತದೆ ಬುಡು ಸಿದ್ರಾಮಣ್ಣ' ಅಂದ್ರು ಪಾಟೀಲ್ರು.  'ಅದೇನರ ಆಗ್ಲಿ ನಾವು ವೊಂದೊಂದು ಪೇಸ್‌ಬುಕ್ಕು ತಕ್ಕಂಬುಡಾವ. ಸಿಎಂ ಕ್ಯಾಂಡೇಟು ಅಂದ್ಮೇಕೆ ಎಲ್ಲಾ ಇದ್ದು ಅದೊಂದು ಇಲ್ದೇಯಿದ್ರೆ ಹೆಂಗೆ ?' ಅಂದ್ರು ಸಿದ್ರಾಮಣ್ಣ.
'ಆಟೋತ್ಗೆ ಕೈನಾಗೆ ಚಿಕ್ದಾಗಿರೋ ಕಂಪ್ಯೂಟರ್ ಮಡಿಕ್ಕಂಡು ಪ್ರೊಫೆಸರ್ ಚಂದ್ರಣ್ಣ ಬಂದ್ರು. 'ಏನಣ್ಣೋರೆ ಇದು, ಸಿದ್ದಣ್ಣ, ಈರಣ್ಣ, ಪಾಟೀಲಣ್ಣ ಎಲ್ಲಾರೂವೆ ವೊಟ್ಟೊಟ್ಗೆ ಸೇರ್ಕಂಬುಟ್ಟಿದ್ದೀರಿ. ಕಂಪ್ಯೂಟರ್ನಾಗೆ ಏನೋ ಮಾಡ್ತಾ ಇರಂಗದೆ, ಗೇಮು ಆಡ್ತಾಯಿದ್ದೀರ ?' ಅಂತ ಕೇಳುದ್ರು.  'ವೋಗೋಗ್ರೀ, ನಮ್ ತಲೆ ಕೆಟ್ಟು ಗೊಬ್ರ ಆಗದೆ. ಗೇಮಂತೆ ಗೇಮು' ಅಂದ್ರು ಸಿದ್ರಾಮಣ್ಣ. 'ಏನಾಗದೆ ಅಂತ ವಸಿ ಯೋಳಿ, ನನ್ ಕೈನಾಗೆ ಕಂಪ್ಯೂಟರ್ ಅದೆ. ಎಲ್ಲಾ ಪ್ರಾಬ್ಲಮ್ಮು ತೀರಿಸ್ಬುಡ್ತದೆ' ಅಂದ್ರು ಪ್ರೊಫೆಸರ್ರು.  'ಪೇಸ್‌ಬುಕ್ಕು ಎಲ್ಲಿ ಸಿಗ್ತದೆ ಅಂತ ವಸಿ ನಿಮ್ ಕಂಪ್ಯೂಟರ್ನ ಕೇಳ್ಬುಟ್ಟು ಯೋಳಿ. ಆವಾಗಿಂದ ವುಡುಕ್ತಾಯಿದ್ದೀವಿ. ಬಡ್ಡೆತ್ತದು ಎಲ್ಲೂ ಸಿಗ್ತಾನೇ ಇಲ್ಲ' ಅಂದ್ರು ಈರಣ್ಣ.   'ಅಲ್ಲಣ್ಣೋ ಅಂಗೈನಾಗೆ ಬೆಣ್ಣೆ ಮಡಿಕ್ಕಂಡು ತುಪ್ಪುಕ್ಕೆ ವೂರೆಲ್ಲಾ ವುಡುಕ್ದಂಗೆ ಆಯ್ತಲ್ಲ. ಮುಂದ್ಗಡೆ ಕಂಪ್ಯೂಟರ್ ಐತೆ ತಾನೆ. ಅದ್ರಾಗೆ ಇರ್ತದೆ ಪೇಸ್‌ಬುಕ್ಕು' ಅಂದ್ರು ಪೊಫೆಸರ್ರು. 'ಕಂಪ್ಯೂಟರ್ನಾಗೆ ಐತಾ ? ಅದ್ರೊಳಿಕ್ಕೆ ಯಾರು ಹಾಕ್ದೋರು. ಕೈ ಪಕ್ಸದ ಆಪೀಸ್ನಾಗೆ ಸಿಸ್ಟಂ ಸರಿಯಿಲ್ಲ ಬುಡು ಸಿದ್ರಾಮಣ್ಣ. ಬುಕ್ಕು ಅಂತೆ ಬುಕ್ಕು ಎಲ್ಲಿ ತುಕ್ಕು ಹಿಡ್ಕಂಡು ಐತೋ ಏನೋ' ಅಂದ್ರು ಈರಣ್ಣ.  'ಅದು ಹಂಗಲ್ಲ ಈರಣ್ಣೋರೆ, ಪೇಸ್‌ಬುಕ್ಕು ಅಂತ ನಾವೇ ರೆಡಿ ಮಾಡ್ಕಬೇಕು. ನಿಮ್ ಹೆಸ್ರಾಗೆ ಮಾಡ್ಕಂಡ್ರೆ ಪ್ರೆಂಡ್ಸು ಸಿಕ್ತರೆ. ಅವ್ರು ಜತ್ಯಾಗೆ ಚಾಟಿಂಗು ಮಾಡ್ಕಂಡು ಇರ್ಬೋದು. ಎಲ್ಲಾ ಪಕ್ಸುದೋರು ಅದ್ರಾಗೆ ಇರ್ತರೆ' ಅಂದ್ರು ಪ್ರೊಫೆಸರ್ರು.  'ಚಾಟಿಂಗು ಬ್ಯಾಡ, ಬ್ಯಾಟಿಂಗೂ ಬ್ಯಾಡ. ಮೊದ್ಲು ಪೇಸ್‌ಬುಕ್ಕು ವುಡಿಕ್ಕೊಡಪ್ಪ. ಅದು ಹೆಂಗದೆ ಅಂತ ನೋಡ್ಕತೀವಿ. ಆಮ್ಯಾಲೆ ಹೈಕಮಾಂಡೋರು ಕೇಳ್ಬುಟ್ರೆ, ಪರಮೇಸ್ವರ್ರು ಪಟಪಟಾಂತ ಯೋಳಾಕ್ತರೆ. ನಾವು ಬಾಯಿ ಬುಟ್ಕಂಡು ನೋಡ್ತಾಯಿರ್ಬೇಕಾಯ್ತದೆ' ಅಂದ್ರು ಸಿದ್ರಾಮಣ್ಣ.
'ರಾಹುಲ್‌ಗಾಂಧಿಯೋರು ಆವಾಗಾವಾಗ ಪೇಸ್‌ಬುಕ್ನಾಗೆ ಬತ್ತಾಯಿರ್ತರೆ. ಅವ್ರು ಜತ್ಯಾಗೂ ಚಾಟಿಂಗ್ ಮಾಡ್ಕಂಡು ಇರ್ಬೋದು' ಅಂದ್ರು ಪ್ರೊಫೆಸರ್ರು.
'ಅಯ್ಯೋ ನಿಮ್ ಬಾಯ್ಗೆ ಸಕ್ರೆ ಹಾಕ. ಮೊದ್ಲು ವೋಪನ್ ಮಾಡ್ಕೊಡಪ್ಪ. ದಮ್ಮಯ್ಯ ಅಂತೀನಿ. ದಿಲ್ಲಿಗೊಗಿ ಅವ್ರು ಮನೆ ಬಾಗ್ಲಾಗೆ ಕಾಯೋಬದ್ಲು ಕಂಪ್ಯೂಟರ್ನಾಗೇ ಮಾತಾಡ್ಕಂಬುಡ್ತೀನಿ. ಇಮಾನ್ದಾಗೆ ದಿಲ್ಲಿಗಂಟ ವೋಗೋ ಖರ್ಚು ವುಳ್ದೋಯ್ತದೆ' ಅಂದ್ರು ಪಾಟೀಲ್ರು.  ಪ್ರೊಫೆಸರ್ರು ಪೇಸ್‌ಬುಕ್ಕು ವೊಪನ್ ಮಾಡಿಕೊಟ್ರು. ಸಿದ್ರಾಮಣ್ಣ ಪಸ್ಟು ಪ್ರೆಂಡ್ಸು ರಿಕ್ವೆಸ್ಟು ದ್ಯಾವೇಗೌಡ್ರುಗೆ ಕಳ್ಸುದ್ರು. ಕಂಪ್ಯೂಟರ್ ಗಾಬ್ರಿ ಆಗೋಗಿ ಹ್ಯಾಂಗ್ ಮಾಡ್ಕಂಬುಡ್ತು.


- ಕೆ.ವಿ.ಪ್ರಭಾಕರ್
prabhukolar@yahoo.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.