ಚುನಾವಣೆ ನಿರ್ಧರಿಸುವ ವಿಷಯ ಯಾವುದು?
ಇನ್ನೇನು, ರಾಜ್ಯ ವಿಧಾನಸಭೆ ಚುನಾವಣೆಗೆ ತಿಂಗಳೊಪ್ಪತ್ತೂ ಉಳಿದಿಲ್ಲ. ಇನ್ನೂ ಪ್ರಮುಖ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ಆಯ್ಕೆಯ ವಿಚಾರ ಕುರಿತ ಗೊಂದಲಗಳು, ಜಗಳಗಳನ್ನು ಬಗೆಹರಿಸುವುದರಲ್ಲೇ ಇದ್ದಾರೆ. ಆ ಜಗಳವನ್ನು ನಾಯಕರು ಬಗೆಹರಿಸದೇ ಹೋದರೆ, ಪರಿಸ್ಥಿತಿಯೇ ತನ್ನ ತೀರ್ಮಾನವನ್ನು ಕೈಗೊಳ್ಳುತ್ತದೆ.
ಅದು ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದ "ವೈಯಕ್ತಿಕವಾದ" ವಿಚಾರ. ಆದರೆ ರಾಜಕೀಯ ಪಕ್ಷಗಳು ನಿರ್ಧರಿಸಬೇಕಾದ ಮುಖ್ಯ ವಿಷಯ ಎಂದರೆ ಈ ಚುನಾವಣೆಯಲ್ಲಿ ಯಾವ ಪ್ರಶ್ನೆಗಳನ್ನು ಜನರ ಮುಂದಿಡಬೇಕು ಎನ್ನುವುದೇ. ನಿಜ. ಎಲ್ಲ ಪಕ್ಷಗಳೂ ಚುನಾವಣೆಯ ಪ್ರಣಾಳಿಕೆಗಳಲ್ಲಿ ಪ್ರಕಟಿಸುವ ವಿಷಯಗಳನ್ನೇ ಪ್ರಚಾರ ಸಮರದ ಕಾಲದಲ್ಲಿ ಮುಂದಿಡುವುದಾಗಿಯೂ ಅದರ ಆಧಾರದ ಮೇಲೇ ಜನರಿಂದ ಮತ ಕೇಳುವುದಾಗಿಯೂ ತಿಳಿಸುತ್ತವೆ.
ಆದರೆ ವಾಸ್ತವದಲ್ಲಿ ಚುನಾವಣೆ ಪ್ರಚಾರ ಸಮರಕ್ಕೂ (ಅಂತರಂಗ-ಬಹಿರಂಗ) ಬೇರೆ ಬೇರೆ ಕ್ಷೇತ್ರಗಳಲ್ಲಿನ ನಿಜವಾದ ಸ್ಥಿತಿಗೂ ಬೇಕಾದಷ್ಟು ಅಂತರವಿರುವುದು ಎಲ್ಲರಿಗೂ ಗೊತ್ತು. ಕಳೆದ ಚುನಾವಣೆಯಲ್ಲಿ ಒಂದು ಪ್ರಮುಖ ರಾಜಕೀಯ ಪಕ್ಷದ ಪ್ರಣಾಳಿಕೆಯನ್ನು ನೋಡಿದಾಗ, ಅದರಲ್ಲಿ ಸಣ್ಣ ಅಕ್ಷರದಲ್ಲಿ ಮುದ್ರಿತವಾಗಿದ್ದ ಒಂದು ಚಿಕ್ಕ ವಿಚಾರ; ಇದರ ಒಂದು ಸಾವಿರದ ಪ್ರತಿಗಳನ್ನು ಮುದ್ರಿಸಲಾಗಿದೆ.
(ಅಂತಹ ವಿವರವನ್ನು ಕಾಯಿದೆಯಂತೆ ಪಕ್ಷಗಳು ಪ್ರಕಟಿಸಲೇ ಬೇಕು). ಮುಂದಿನ ದಿನಗಳಲ್ಲಿ ಎಲ್ಲ ಪಕ್ಷಗಳಲ್ಲಿನ ಪ್ರಬುದ್ಧ ಹಾಗೂ ಬುದ್ಧಿವಂತರು ಸೇರಿಕೊಂಡು ಪ್ರಣಾಳಿಕೆಗಳನ್ನು ಪ್ರಕಟಿಸುವುದು ಖಚಿತ. ಅದಕ್ಕೆ ದೆಹಲಿ ಮೂಲದ ಪ್ರತಿಭಾವಂತರೂ, ಅನುಭವಿಗಳೂ ತಮ್ಮ ಕಾಣಿಕೆಯನ್ನು ನೀಡಬಹುದು. ಆದರೆ ವಾಸ್ತವದಲ್ಲಿ ಎಲ್ಲ ಪ್ರಣಾಳಿಕೆಗಳೂ ಒಂದೇ ರೀತಿಯಲ್ಲೇ ಇರುತ್ತವೆ. ಈಗಾಗಲೇ ಬಳಸಿ - ಬಳಸಿ ಸವಕಲಾದ ಸಾಮಾಜಿಕ ನ್ಯಾಯದ ಹಂಚಿಕೆ, ಮಹಿಳೆಯರಿಗೆ ಸಮಾನತೆ, ಅಲ್ಪಸಂಖ್ಯಾತರಿಗೆ ರಕ್ಷಣೆ, ಅಭಿವೃದ್ಧಿ ಮಂತ್ರ, ಭ್ರಷ್ಟಾಚಾರದ ವಿಚಾರದಲ್ಲಿ ಶೂನ್ಯ ಸಹನೆ (ಅಂದರೆ ಅದನ್ನು ಸಹಿಸುವುದಿಲ್ಲ ಎನ್ನುವ ಅರ್ಥದಲ್ಲಿ) ಇಂತಹ ಘೋಷಣೆಗಳಿಗೇನೂ ಬರವಿಲ್ಲ. ಇನ್ನಷ್ಟು ಹೊಸ ಘೋಷಣೆಗಳೂ ಬರಬಹುದು.
ಒಂದು ಕಾಲದಲ್ಲಿ ಸ್ವಲ್ಪ ಮಟ್ಟಿಗೆ ಸಮಾಜವಾದ - ಮುಕ್ತ ಆರ್ಥಿಕ ಉದಾರ ನೀತಿಗಳ ನಡುವಣ ಸಂಘರ್ಷದ ವಿಚಾರದ ಪ್ರಸ್ತಾಪವಿರುತ್ತಿತ್ತು. ಈಗ ಅದೂ ಕಾಣದಂತೆ ಆಗಿದೆ. ನಿಜ ಹೇಳಬೇಕೆಂದರೆ, ಒಂದು ಪಕ್ಷದ ನಿಜವಾದ ಉದ್ದೇಶಕ್ಕೂ, ಅದರ ಪ್ರಣಾಳಿಕೆಗೂ ಚಿಕ್ಕಾಸಿನ ಸಂಬಂಧವೂ ಇರುವುದಿಲ್ಲ. ಚುನಾವಣೆ ಎಂದ ಮೇಲೆ ಒಂದು ಪ್ರಣಾಳಿಕೆ ಇರಬೇಕು ಎನ್ನುವ ಶಾಸ್ತ್ರದ ಪಾಲನೆಯಾಗುತ್ತದೆ ಅಷ್ಟೇ.
ಜನರ ಆಯ್ಕೆ ಹೇಗೆ?: ಈ ಸನ್ನಿವೇಶದಲ್ಲಿ ರಾಜಕೀಯ ಪಕ್ಷಗಳ ನಡುವೆ ಯಾವುದನ್ನು ಜನ ಆರಿಸಿಕೊಳ್ಳಬೇಕು. ಅದಕ್ಕೆ ನೆರವಾಗುವಂತಹ ವಿಚಾರಗಳು ಯಾವುವು? ಸ್ಥೂಲವಾಗಿ ಹಿಂದಿನ ಸಾಧನೆಯ ಪರಿಶೀಲನೆ ಮಾಡುವ ಶಕ್ತಿ ಇರುವ ಜನವರ್ಗಗಳು ಅದನ್ನೇ ಅನುಸರಿಸಬೇಕು. ಉಳಿದವರ ಪಾಲಿಗೆ ಚುನಾವಣೆ ಒಂದು ಅರ್ಥಹೀನ ಪ್ರಕ್ರಿಯೆ.
ಕೊಡುಗೆಗಳ ವಾಗ್ದಾನವನ್ನು ನಂಬುವವರು ಕೆಲವರು, ಜಾತಿಯನ್ನು ನೋಡುವವರು ಹಲವರು, ಆ ಕ್ಷಣಕ್ಕೆ ಯಾರನ್ನು ತಮ್ಮವರೆಂದು ಗುರ್ತಿಸುವುದು ಸಾಧ್ಯವೋ ಅವರನ್ನು ನೋಡಿ, ಅನೇಕರು ತತ್‌ಕ್ಷಣಕ್ಕೆ ಸಿಗುವ ಹಣಕ್ಕೆ ಮರಳಾಗಿ ಮತ ನೀಡಬಹುದು. ಅಲ್ಲಿಗೆ ಪ್ರಣಾಳಿಕೆ, ಪಕ್ಷದ ಹಿನ್ನೆಲೆ ನೆಗೆದು ಬಿದ್ದಂತೆಯೇ. ಪಕ್ಷಗಳೇ ಅದನ್ನು ಗಂಭೀರವಾಗಿ ಪರಿಗಣಿಸದೇ ಇದ್ದರೆ ಜನರೇಕೆ ಆ ಕೆಲಸ ಮಾಡಬೇಕು.
ಹಿನ್ನೆಲೆಯ ಪ್ರಸ್ತಾಪ: 2004ನೇ ವರ್ಷದ ಚುನಾವಣೆಗೆ ಮುಂಚೆ, ಕರ್ನಾಟಕದಲ್ಲಿ ಭಾರತೀಯ ಜನತಾ ಪಾರ್ಟಿ ಅಧಿಕಾರಕ್ಕೆ ಬರುವುದು ಸಾಧ್ಯವೇ ಇಲ್ಲ ಎನ್ನುವುದು ಒಂದು ನುಡಿಗಟ್ಟಾಗಿತ್ತು. ರಾಜ್ಯದ ಜನಸಂಖ್ಯೆಯ ಸ್ವರೂಪ ಹಾಗೂ ಪರಂಪರೆಯಿಂದ ಬಂದಿರುವ ಸಂಸ್ಕಾರ ಬಿಜೆಪಿಗೆ ಅನುಕೂಲವಾದ ವಾತಾವರಣವನ್ನು ನಿರ್ಮಿಸಿಲ್ಲ ಎನ್ನುವ ನಂಬಿಕೆ ಇತ್ತು.
ಆದರೆ 2004ರ ಚುನಾವಣೆಯಲ್ಲಿ ಪರಿಸ್ಥಿತಿಯ ಪಿತೂರಿಯಿಂದ, ಯಡಿಯೂರಪ್ಪ ನೇತೃತ್ವದ ಬಿಜೆಪಿ ಒಂದು ದೊಡ್ಡ ಸಂಖ್ಯೆಯ ಜನಪ್ರತಿನಿಧಿಗಳನ್ನು ಆರಿಸಿತ್ತು. ಕಾಂಗ್ರೆಸ್ - ಜಾತ್ಯತೀತ ಜನತಾ ದಳದ ಪಾಲಿಗೆ ಬಹಿರಂಗವಾಗಿ ಆಗಿನ ಸನ್ನಿವೇಶ ಕೋಮುವಾದಿ ಶಕ್ತಿಗಳ ಕೈಗೆ ರಾಜ್ಯಾಧಿಕಾರವನ್ನು ಕೊಡಬಾರದು ಎನ್ನುವುದೇ ಒಂದು ಸಿದ್ಧಾಂತವಾಯಿತು. ಉಳಿದಿದ್ದು ಹಳೆಯ ಕತೆ. ದೇವೇಗೌಡರು ಸೋನಿಯಾ ಗಾಂಧಿಯವರನ್ನು ಆರು ಬಾರಿ ಭೇಟಿ ಮಾಡಿ ಕಾಂಗ್ರೆಸ್ - ಜೆಡಿಎಸ್ ಸಮ್ಮಿಶ್ರ ಸರ್ಕಾರದ ರಚನೆಗೆ ಒಪ್ಪಿ ಯಡಿಯೂರಪ್ಪ ಅವರನ್ನು ವಿರೋಧ ಪಕ್ಷದ ನಾಯಕರ ಸ್ಥಾನಕ್ಕೆ ತಳ್ಳಿದ್ದರು.
ಆ ವ್ಯವಸ್ಥೆ ಕೆಲವು ತಿಂಗಳ ಅನಂತರ ಯಾಕೋ ಸರಿಹೋಗಲಿಲ್ಲ. ದೇವೇಗೌಡರ ಪುತ್ರ ಕುಮಾರಸ್ವಾಮಿ ತಮ್ಮ ಪಕ್ಷದ ಶಾಸಕ ಮಿತ್ರರ ಜತೆ ಸೇರಿಕೊಂಡು ತಮ್ಮ ನೇತೃತ್ವದಲ್ಲಿ ಜೆಡಿಎಸ್ - ಬಿಜೆಪಿ ಸರ್ಕಾರ ರಚಿಸಿದ್ದಾಯಿತು. ಅಲ್ಲಿ ಇಪ್ಪತ್ತು ತಿಂಗಳ ಅನಂತರ ನಾಯಕತ್ವವನ್ನು ಬದಲಾಯಿಸುವ ಒಪ್ಪಂದ ಇತ್ತಂತೆ. ಅದನ್ನು ಮೊದಲು ಬಹಿರಂಗಪಡಿಸಿರಲಿಲ್ಲವಂತೆ.
ಆ ಒಪ್ಪಂದ ಈಡೇರಲಿಲ್ಲ. ಕುಮಾರಸ್ವಾಮಿ ಯಡಿಯೂರಪ್ಪ ಅವರಿಗೆ ಮೋಸ ಮಾಡಿದರು. ಅದು ವಚನ ಭ್ರಷ್ಟತೆ ಎನ್ನುವ ಕೂಗಿನ ಹಿನ್ನೆಲೆಯಲ್ಲಿ (2008) ನಡೆದ ಚುನಾವಣೆಯಲ್ಲಿ ಬಿಜೆಪಿ ವಿಧಾನಸಭೆಯಲ್ಲಿ ಬಹುಮತ ಗಳಿಸುವ ಹತ್ತಿರಕ್ಕೆ (ಒಂದೆರಡು ಸ್ಥಾನಗಳು ಕಡಿಮೆ) ಬಂದಿತ್ತು. ಯಡಿಯೂರಪ್ಪ ಸರ್ಕಾರ ರಚಿಸಿದರು. ಜನತಂತ್ರಕ್ಕೆ ಆಪರೇಷನ್ ಕಮಲ ಹೊಸ ತಂತ್ರವನ್ನು ಸಮರ್ಪಿಸಿದರು. ಆಗ ರಚನೆಯಾಗಿದ್ದು ಬಿಜೆಪಿಯ ಏಕಪಕ್ಷೀಯ ಸರ್ಕಾರ.
ಆರಂಭದಲ್ಲಿ ಸರ್ಕಾರ ಚೆನ್ನಾಗಿಯೇ ಕೆಲಸ ಮಾಡಿದ್ದು ನಿಜ. ಅನಂತರ ಅವ್ಯವಹಾರದ ಆರಂಭ. ಅಕ್ರಮ ಗಣಿಗಾರಿಕೆ, ಭೂ ಆಕ್ರಮಣ, ಸರ್ಕಾರ ವಶಪಡಿಸಿಕೊಂಡಿದ್ದ ಭೂಮಿಯನ್ನು ಮೂಲ ಪ್ರಕಟಣೆಯಿಂದ ಪ್ರತ್ಯೇಕಿಸಿ ಬೇಕು ಬೇಕಾದವರಿಗೆ ದಾನ, ಅಪಾತ್ರರಿಗೆ ಮನ್ನಣೆ ಎಲ್ಲವೂ ಸಾಮಾನ್ಯ ಎನ್ನುವಂತಾಯಿತು. ಇಲ್ಲಿ ಬಿಜೆಪಿ ಸರ್ಕಾರದ ಹಿಂದುತ್ವದ ಕಾರ್ಯಕ್ರಮಗಳು ಗೌಣವಾದವು. ಸಂಘಪರಿವಾರಕ್ಕೆ ಸರಿಕಂಡುಬರದೇ ಇರುವ ವರ್ತನೆಯ ಮೇಲೆ ಅನಧಿಕೃತವಾಗಿ ನೈತಿಕ ಪೊಲೀಸ್ ದಾಳಿ ನಡೆದಿದ್ದು, ಹಲವು ಶಾಸಕರ ಗುಂಪುಗಳು ಸರ್ಕಾರವನ್ನು ಮನಸ್ಸಿಗೆ ಬಂದಂತೆ ಆಡಿಸಿದರು. ಬೆಂಗಳೂರು - ಗೋವಾಗಳ ರೆಸಾರ್ಟ್ ರಾಜಕೀಯ, ಕೊನೆಗೆ ಬಿಜೆಪಿ ಸರ್ಕಾರ ಅಂದರೆ ಇದೇ ಎನ್ನುವ ಅನಿಸಿಕೆ ಜನರಲ್ಲಿ ಮೂಡಿತ್ತು.
ಯಡಿಯೂರಪ್ಪ ಅವರೇ ಜೈಲಿಗೆ ಹೋದರು. ಈಗಲೂ ಜಾಮೀನಿನ ಮೇಲೆ ಹೊರಗಡೆ ಇದ್ದಾರೆ? ಮುಖ್ಯಮಂತ್ರಿ ಬದಲಾದರು. ಸದಾನಂದಗೌಡರನ್ನು ನೇಮಿಸಿದ ಯಡಿಯೂರಪ್ಪ ಅವರೇ ಜಗದೀಶ ಶೆಟ್ಟರನ್ನು ತಂದರು. ಜನಮಾನಸದಲ್ಲಿ ಬಿಜೆಪಿ ಸರ್ಕಾರ ಅಂದರೆ ಇದೇ ಅವಸ್ಥೆ ಎನ್ನುವ ಸ್ಥಿತಿ ಬಂದಾಗ ಯಡಿಯೂರಪ್ಪ ಪಕ್ಷ ಬಿಟ್ಟು ಹೊರಗೆ ಬಂದು ಬೇರೆ ಪಕ್ಷ ಕಟ್ಟಿ ಬಿಜೆಪಿಯನ್ನು ಸೋಲಿಸುವ ಪ್ರತಿಜ್ಞೆ ಮಾಡಿದ್ದಾರೆ.
ಅಕ್ರಮ ಗಣಿಗಾರಿಕೆಯ ಆರೋಪದ ವಿಚಾರಣೆ ಎದುರಿಸುತ್ತಾ, ಹೈದರಾಬಾದ್ ಜೈಲಿನಲ್ಲಿರುವ ಜನಾರ್ದನ ರೆಡ್ಡಿ ಅವರ ಬೆಂಬಲಿಗ ಶ್ರೀರಾಮುಲು ತಮ್ಮದೇ ಪಕ್ಷ ರಚಿಸಿಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಚುನಾವಣೆ ಬಂದಿದೆ. ಅಭ್ಯರ್ಥಿಗಳ ಆಯ್ಕೆಯಲ್ಲಿ ಕಟ್ಟುನಿಟ್ಟಿನ ಸೂತ್ರಗಳ ಪಾಲನೆಯ ಮಾತನಾಡಿದ ಕಾಂಗ್ರೆಸ್ ಈಗ ಅದನ್ನು ಮರೆತಿದೆ. ಕೆಲವು ಕ್ಷೇತ್ರಗಳಲ್ಲಿ ಕಳಂಕಿತರಿದ್ದರೆ, ಸೋತರೂ ಪರವಾಗಿಲ್ಲ, ಅವರಿಗೆ ಟಿಕೆಟ್ ಬೇಡ ಎಂದು ಬಿಜೆಪಿ ನಿರ್ಧರಿಸಿದೆ.
ಆದರೂ ಈಗಾಗಲೇ ಪ್ರಕಟವಾಗಿರುವ ಪಟ್ಟಿಗಳನ್ನು ಗಮನಿಸಿದರೆ, ಜಾತಿ, ಚುನಾವಣೆಯಲ್ಲಿ ಗೆಲ್ಲಬಲ್ಲ ಸಾಮರ್ಥ್ಯ, ಹಾಗೂ ನಾಯಕರ ಸ್ವಂತ ಕುಟುಂಬ ಸದಸ್ಯರಿಗೇ ಹೆಚ್ಚು ಸ್ಥಾನಗಳು ಸಿಕ್ಕಿರುವಂತೆ ಮೇಲ್ನೋಟಕ್ಕೇ ಕಂಡು ಬರುತ್ತಿದೆ. ಇಂತಹ ಹಿನ್ನೆಲೆಯಲ್ಲಿ ಜನಸಾಮಾನ್ಯ ವರ್ಗಣಳು ತಮ್ಮ ನಿಜವಾದ ಹಿತೈಷಿಗಳ ಪಕ್ಷ ಯಾವುದು ಎಂದು ಗುರ್ತಿಸುವುದಾದರೂ ಹೇಗೆ? ಸದ್ಯದಲ್ಲಿ ಒಳ್ಳೆಯ, ಸದಾಚಾರವನ್ನು ಗೌರವಿಸುವ, ಪ್ರಾಮಾಣಿಕತೆಯನ್ನು ಮೆಚ್ಚುವ ಪಕ್ಷವನ್ನು ಗುರ್ತಿಸುವುದು ಕಷ್ಟ.
ಪಕ್ಷಗಳು ಆರಿಸಿರುವ ಅಭ್ಯರ್ಥಿಗಳಲ್ಲೂ ಆ ಮಾನದಂಡವನ್ನು ಒಪ್ಪುವವರ ಸಂಖ್ಯೆ ಕಡಿಮೆ. ತೀರ ಹೊಸಬರೆಂದರೆ, ಅವರ ಮನೆತನದ ಹಿಂದಿನ ಜಾತಕವನ್ನು ಪರಿಗಣಿಸಬೇಕು. ಇಂತಹ ಸ್ಥಿತಿಯಲ್ಲಿ, ನಿಜವಾಗಲೂ ಜನರಿಗೆ ಅರ್ಹ ಪಕ್ಷ ಹಾಗೂ ಅರ್ಹ ಅಭ್ಯರ್ಥಿಗಳನ್ನೇ ಆರಿಸುವ ಆಯ್ಕೆ ಕಡಿಮೆ ಇರುವಾಗ, ಪ್ರಚಾರ ಸಮರದ ಘೋಷಣೆಗಳನ್ನು ಸಾರಾಸಗಟು ತಿರಸ್ಕರಿಸುವುದೇ ಸೂಕ್ತ. ಪ್ರಚಾರಕರ ಘೋಷಣೆಯನ್ನು ತಿರಸ್ಕರಿಸಬಹುದು. ಆದರೆ ಪರ್ಯಾಯ ವ್ಯವಸ್ಥೆಯನ್ನು ರೂಪಿಸಬೇಕಲ್ಲ. ಪಕ್ಷಗಳು, ಪಕ್ಷಗಳ ಪ್ರಚಾರಕರು ಭ್ರಷ್ಟರಾಗಿ ಮತ್ತೆ ಭ್ರಷ್ಟಾಚಾರದ ತಾಂಡವಕ್ಕೆ ಅವಕಾಶ ಕೊಡುವುದಿಲ್ಲವೆನ್ನುವ ನಂಬಿಕೆಯ ಮೇಲೆ ಜನ ತಮ್ಮ ಮತವನ್ನು ಸಾಧ್ಯವಿರುವಷ್ಟೂ ಪ್ರಾಮಾಣಿಕ ಅನಿಸಿಕೆಯಿಂದ ಚಲಾಯಿಸಬೇಕು. ನಿಜ. ಇದೊಂದು ಪೊಳ್ಳು ಆದರ್ಶದ ಹುಸಿ ಮಾತು ಎಂದು ತಳ್ಳಿಹಾಕುವುದು ಸುಲಭ. ಆದರೆ ಮುಂದೇನು ಎನ್ನುವ ಪ್ರಶ್ನೆಗೆ ಏನಾದರೂ ಉತ್ತರ ಕೊಡಲೇಬೇಕಲ್ಲ.
ಕಾಂಗ್ರೆಸ್ ಅನುಭವ: ಕಾಂಗ್ರೆಸ್ಸಿಗೆ ಈ ಚುನಾವಣೆ ರಾಜ್ಯದಲ್ಲಿ ಒಂದು ಹೊಸ ಅನುಭವ. 2004 ರವರೆಗೂ ಕಾಂಗ್ರೆಸ್ ಹಾಗೂ ಜನತಾ ಪರಿವಾರಗಳು ಬಿಜೆಪಿಯನ್ನು ಲೆಕ್ಕಕ್ಕೇ ಇಡದಂತೆ ವರ್ತಿಸಿದ್ದವು. ಆದರೆ 2008ರ ವಿಧಾನಸಭೆ ಚುನಾವಣೆ, 2009 ರ ಲೋಕಸಭೆ ಚುನಾವಣೆಯ ಅನುಭವದ ಹಿನ್ನೆಲೆಯಲ್ಲಿ, ಎಲ್ಲ ಪಕ್ಷಗಳೂ ಹೊಸ ತಂತ್ರಕ್ಕಾಗಿ ಹುಡುಕಾಡುತ್ತಿರುವುದು ನಿಜ. ರಾಜ್ಯದಲ್ಲಿ ಹಿಂದೆ ಅಲ್ಪ-ಸ್ವಲ್ಪವಾದರೂ ಜನಜಾಗೃತಿ ಮೂಡಿಸಿ ಜನಪರ ಸಂಘಟನೆಗಳನ್ನು ಬಲಪಡಿಸಿದ ಶಕ್ತಿಗಳು, ವ್ಯಕ್ತಿಗಳು ಈಗ ಹತಾಶರಾಗಿದ್ದಾರೆ. ಹಿಂದೆ ಆ ಶಕ್ತಿಗಳನ್ನು ಪ್ರತಿನಿಧಿಸಿದ್ದವರೇ ಈಗ ಸ್ಥಾಪಿತ ಪಕ್ಷಗಳ ಟಿಕೆಟ್‌ಗೆ ಕೈ ಒಡ್ಡಿ, ಆಮಿಷಕ್ಕೆ ಬಲಿಯಾಗಿರುವ ಹಲವು ಪ್ರಕರಣಗಳೂ ಗಮನಕ್ಕೆ ಬಂದಿವೆ.
ಕಾಂಗ್ರೆಸ್ ಗೆದ್ದೇಬಿಟ್ಟಿತು ಎನ್ನುವುದನ್ನು ನಂಬಿರುವ ಕಾಂಗ್ರೆಸ್ಸಿಗರಲ್ಲಿ, ಮುಖ್ಯಮಂತ್ರಿಯ ಸ್ಥಾನದಿಂದ ಹಿಡಿದು ಇತರ ಸ್ಥಾನಗಳಿಗೆ ತೀವ್ರ ಪೈಪೋಟಿ ಒಳಗೊಳಗೇ ನಡೆದಿರುವುದು ನಿಜ. ಅದನ್ನು ಮರೆಮಾಚಿ ಪ್ರಯೋಜನವಿಲ್ಲ. ಭಾರತೀಯ ಜನತಾ ಪಾರ್ಟಿಯಲ್ಲಿ ಕೆಲವು ವರ್ಗಗಳನ್ನು ಬಿಟ್ಟರೆ ಉಳಿದವರಲ್ಲಿ ಉತ್ಸಾಹ ಕಡಿಮೆ. ಆದರೂ ಆ ಪಕ್ಷದ ಅಭಿಮಾನಿಗಳು ಇಷ್ಟವಿಲ್ಲದ ಮನಸ್ಸಿನಿಂದಲೇ ಮತ ನೀಡಿ ಕರ್ತವ್ಯವನ್ನು ಪಾಲಿಸಿದ ತೃಪ್ತಿಯನ್ನು ಪಡೆಯಲೂ ಬಹುದು. ಯಡಿಯೂರಪ್ಪ ಅವರ ಗುರಿ ಬಿಜೆಪಿಯನ್ನು ಸೋಲಿಸುವುದು. ಮುಂದಿನ ಚಿಂತೆ ಅವರಿಗೆ ಸದ್ಯಕ್ಕಿಲ್ಲ. ಶ್ರೀರಾಮುಲು ಅವರಿಗೆ ತಮ್ಮ ಅಸ್ತಿತ್ವದ ಪ್ರದರ್ಶನವಾಗಬೇಕಾಗಿದೆ. ನಿಜವಾಗಲೂ ಈಗ ನಡೆದಿರುವುದು ಒಂದು ವಿಚಿತ್ರ ಸನ್ನಿವೇಶ. ಆದರ್ಶ ರಹಿತ, ಚುನಾವಣೆ, ಕೊನೆಯಲ್ಲಿ ಸಿಕ್ಕಿದವರಿಗೆ ಸೀರುಂಡೆ ಎನ್ನುವಂತೆ ಆಗಬಹುದು.
ಕಿಡಿಗೇಡಿತನ: ಕಾಂಗ್ರೆಸ್ ಟಿಕೆಟ್ ಹಂಚಿಕೆಯಲ್ಲಿ ಹಣದ ಪ್ರಭಾವ ನಡೆದಿದೆಯಂತೆ. ಹಾಗೆಂದು ವರಿಷ್ಠರಿಗೇ ದೂರು ಹೋಗಿದೆ, ಇದೇನು ಮೊದಲ ಬಾರಿ ರವಾನೆಯಾದ ದೂರೇನು?
ಸತ್ಯ
anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

