ಪ್ರಜೆಗಳು ಎಂದರೆ ಪುರುಷರು ಮಾತ್ರವೇ?
ಈಗಂತೂ ಕೇವಲ ಚುನಾವಣೆ ಎಂಬ ಬೃಹನ್ನಾಟಕವೊಂದೇ ಕರ್ನಾಟಕದಲ್ಲಿ ಕ್ಷಣ ಕ್ಷಣದ ಸುದ್ದಿಯಾಗಿ ಚಲಾವಣೆಯಲ್ಲಿದೆ. ರಾಜ್ಯಾದ್ಯಂತ ಈಗ ಇದರದ್ದೇ ಹವಾ. ಚುನಾವಣೆ ತಂದುಕೊಡುವ ಅಧಿಕಾರ ರಾಜಕೀಯದ ಮಂದಿಗೆ ಮೋಹಕವಾದ ಮಾಯಾ ಜಿಂಕೆಯಂತೆ ಕಂಡು ಅದನ್ನು 'ಹೇಗಾದರೂ' ಹೊಂದುವ ಪುಳಕ ಹುಟ್ಟಿಸಿದೆ.
ಮೀಡಿಯಾ ಹಾಗೂ ರಾಜಕೀಯ ಪಕ್ಷಗಳಲ್ಲಿ ಕಾಣುತ್ತಿರುವ ಸಂಭ್ರಮ, ಚುನಾವಣೆ ಬಗೆಗಿನ ತೀವ್ರ ಆಸಕ್ತಿ ಮತದಾರನಿಗೇನೂ ಇದ್ದಂತಿಲ್ಲ. ಮನೆ ಬಾಗಿಲಿಗೆ ಬಂದಿರುವ ಅತಿಥಿಯಾದ ಚುನಾವಣೆಯನ್ನು ಬಂದವರನ್ನು ಒಳಗೆ ಕರೆಯಲೇಬೇಕಾದ ಅನಿವಾರ್ಯತೆಗೆ ಮತದಾರ ಒಳಗಾಗಿದ್ದಾನೆ. ಕರ್ನಾಟಕದಲ್ಲಿ ಕಳೆದ ಒಂಭತ್ತು ವರ್ಷಗಳಲ್ಲಿ ಚುನಾವಣೆಗಳು ವಿವಿಧ ವೇಷ ತೊಟ್ಟು ರಂಗ ಪ್ರವೇಶ ಮಾಡಿ ಸಾಕಷ್ಟು ಭಯಾನಕ ಹೆಜ್ಜೆ ಗುರುತುಗಳನ್ನು ಉಳಿಸಿ ಕುಣಿದಾಡಿವೆ. ದುಡ್ಡು ಪ್ರಮುಖ ಪಾತ್ರಧಾರಿಯಾಗಿ ಕಾಣಿಸಿಕೊಂಡರೆ, ಜಾತಿ ಸೂತ್ರಧಾರನಾಗಿ ತನ್ನ ಕಾರ್ಯನಿರ್ವಹಿಸಿದೆ. ಅಭ್ಯರ್ಥಿ ಮತ್ತವನ ಶ್ರೇಷ್ಠತೆ, ಬದ್ಧತೆ, ಪ್ರಾಮಾಣಿಕತೆ ಹಾಗೂ ಜೀವನದ ಪಾರದರ್ಶಕತೆ ನೇಪಥ್ಯಕ್ಕೆ ಸರಿದಿದೆ. 'ಗೆಲ್ಲುವ ಕುದುರೆ' ಮುಖ್ಯ ಭೂಮಿಕೆಯಲ್ಲಿ ಮೆರೆದು ಮುಂದೋಡಿದೆ. 'ಉತ್ತಮಿಕೆ'ಯತ್ತ ರಾಜಕೀಯ ಪಕ್ಷಗಳು ತಿರುಗಿಯೂ ನೋಡುತ್ತಿಲ್ಲ. 'ಯಶಸ್ಸು' ಮಾತ್ರ ಇಂದಿನ ರಾಜಕೀಯ ಮಂತ್ರವಾಗಿದೆ. ಹಾಗಾಗಿಯೇ ಗೆಲ್ಲುವ ಕುದುರೆ ಎಂತಹುದ್ದೇ ಆಗಿರಬಹುದು, ಕಳಂಕಿತ, ಭ್ರಷ್ಟ, ಅಪರಾಧಿ, ಆರೋಪಿ, ಪಕ್ಷಾಂತರಿ -ಹೀಗೆ ಅದೇನೂ ಪರವಾಗಿಲ್ಲ. ಒಟ್ಟಾರೆ ಗೆದ್ದು ಪಕ್ಷದ ಶಾಸಕರ ಸಂಖ್ಯೆಗೆ ಸೇರ್ಪಡೆಯಾದರೆ ಸರಿ. ಮಿಕ್ಕಿದ್ದೆಲ್ಲ ಮುಖ್ಯವಲ್ಲ ಎಂಬುದು ಎಲ್ಲ ಪಕ್ಷಗಳ ಧೋರಣೆಯಾಗಿರುವುದು ಸ್ಪಷ್ಟವಾಗಿದೆ. ಅಲ್ಲಲ್ಲಿ ಗೆಲ್ಲುವ ಕುದುರೆ ಅಂತ ಕತ್ತೆಗಳೂ ಆಯ್ಕೆ ಆಗಿವೆ.
ಇದಕ್ಕಿಂತ ಮುಖ್ಯವಾದ ಸಂಗತಿ ಅಂದರೆ ಚುನಾವಣೆಯಲ್ಲಿ ಮಹಿಳೆಯರ ಪಾತ್ರವನ್ನು ಕುರಿತದ್ದು. ಪ್ರಜಾಪ್ರಭುತ್ವದಲ್ಲಿ ಪ್ರಜೆ ಎಂದರೆ ಕೇವಲ ಪುರುಷರೇ? ಪುರುಷ ಪ್ರಧಾನವಾದ ಸಾಮಾಜಿಕ ವ್ಯವಸ್ಥೆ ಇನ್ನೂ ಬಲಿಷ್ಟವಾಗಿಯೇ ಇರುವ ಭಾರತದಂತಹ ರಾಷ್ಟ್ರಗಳಲ್ಲಿ ಪ್ರಜಾಪ್ರಭುತ್ವ ತನ್ನ ಸರಿಯಾದ ಅರ್ಥದಲ್ಲಿ ಜಾರಿಯಲ್ಲಿದೆಯೇ ಎನ್ನುವ ಗಂಭೀರ ವಿಚಾರವನ್ನು ಚುನಾವಣೆಯ ಹೊಸ್ತಿಲಲ್ಲಿ ನಾವೆಲ್ಲ ನಿಂತಿರುವಾಗಲಾದರೂ ವಿಚಾರ ಮಾಡಬೇಕಾಗಿದೆ. ಪ್ರಜೆಗಳ ಪೂರ್ಣ ಸಹಭಾಗಿತ್ವದಿಂದ ಚುನಾವಣೆಗಳು ನಡೆದಾಗ ಅದಕ್ಕೊಂದು ಅರ್ಥವಿದೆ. 57ರ್
ರಷ್ಟು ಮತದಾರರು ಮಹಿಳೆಯರೇ ಆದರೂ ಕೂಡ ಅವರಿಗೆ ಸ್ಪರ್ಧಿಸಲು ಸಾಕಷ್ಟು ಅವಕಾಶಗಳಿಲ್ಲ. ಇಂದಿಗೂ ಎಷ್ಟೋ ಕುಟುಂಬಗಳಲ್ಲಿ ಪುರುಷ ಯಜಮಾನಿಕೆಯನ್ನು, ತಿಜೋರಿಯನ್ನೂ, ಮನೆಗೆ ಸಂಬಂಧಿಸಿದ ಮುಖ್ಯ ನಿರ್ಧಾರಗಳನ್ನೂ ತನ್ನ ಸುಪರ್ದಿನಲ್ಲಿಟ್ಟುಕೊಂಡು ತನ್ನ ಸ್ತ್ರೀಯರನ್ನು ಅಡುಗೆ ಮಾಡುವ ಹಾಗೂ ಮಕ್ಕಳನ್ನು ಹೆರುವ ಕೆಲಸಗಳಿಗೆ ಮಾತ್ರ ನಿಯೋಜಿಸುತ್ತಾನೆ. ಹಾಗೆಯೇ ರಾಜಕೀಯ ಪಕ್ಷಗಳು ಅಧಿಕಾರವನ್ನು ಪುರುಷರಿಗೆ ಕೊಟ್ಟು ಮಹಿಳೆಯರನ್ನು ಅಧಿಕ್ಕಾರಕ್ಕೆ ಏರುವ ಏಣಿಯನ್ನಾಗಿ ಮಾತ್ರ ಬಳಸಿಕೊಳ್ಳುವುದು ಕಾಣುತ್ತಿದೆ.
ಈ ಬಾರಿಯ ವಿಧಾನಸಭೆ ಚುನಾವಣೆಗಳೂ ಇದಕ್ಕೆ ಹೊರತಾಗಿಲ್ಲ. ಚುನಾವಣೆಯಲ್ಲಿ ಮತ ಚಲಾಯಿಸುವ ಪಾತ್ರವನ್ನು ಮಹಿಳೆ ನಿಭಾಯಿಸಿದರೆ ಸಾಕು, ಅದಕ್ಕಿಂತ ಹೆಚ್ಚಿನ ಪ್ರಾಮುಖ್ಯ ಅವಳಿಗೆ ಬೇಡ ಎಂಬ ಧೋರಣೆ ಕಂಡಿದೆ. ಈ ವಿಷಯದಲ್ಲಿ ಹೆಚ್ಚು ಕಡಿಮೆ ಎಲ್ಲ ಪಕ್ಷಗಳದ್ದೂ ಒಂದೇ ರೀತಿಯ ಆಡಿಡ್ಝ್ಡಿಜಜ. ಟಿಕೆಟ್ ಕೊಡುವಾಗಲೇ ಎಲ್ಲ ಪಕ್ಷಗಳ ವರಿಷ್ಠರೂ 'ಗೆಲ್ಲುವ ಕುದುರೆ'ಯ ಮೇಲೆ ಕಣ್ಣಿಟ್ಟಿದ್ದಾರೆ. ಇತ್ತೀಚೆಗೆ ಕಾಂಗ್ರೆಸ್ನ ಹಿರಿಯ ನಾಯಕರೊಬ್ಬರು "ಟಿಕೆಟ್ ಕೊಡಬಹುದು. ಆದರೆ ಮಹಿಳೆಯರಿಗೆ ಗೆಲ್ಲುವ ಸಾಮರ್ಥ್ಯ ಬೇಕಲ್ಲ" ಎಂದಿದ್ದಾರೆ. ಗೆಲ್ಲುವ ಸಾಮಥ್ಯ ್ಟಟ್ಛಿಜ ಛ್ಜಛ್ಝಟಿ ತುಂಬಾ ಜಟಿಲವಾದ ಪದ. ಮಹಿಳೆಯರ ಪರ ಪ್ರಚಾರ ಮಾಡಿ ಅವರಿಗಾಗಿ ಶ್ರಮ, ಬಲ, ಸಮಯ ವ್ಯಯಿಸುವ ಮನೋಭಾವ ಕಾಂಗ್ರೆಸ್ ನಂತಹ ದೇಶದ ಅತಿ ದೊಡ್ಡ ರಾಷ್ಟ್ರೀಯ ಪಕ್ಷಕ್ಕೆ ಇಲ್ಲವೆಂಬ ವಿಚಾರವೇ ಗಾಬರಿ ಹುಟ್ಟಿಸುವಂತಹದ್ದು. ಸಾಮಾಜಿಕ ನ್ಯಾಯದ ತಳಹದಿಯ ಮೇಲೆ ಬೆಳೆದು ನಿಂತಿರುವ ಕಾಂಗ್ರೆಸ್ನಂತಹ ಪಕ್ಷದ ಸಾಮಾಜಿಕ ನ್ಯಾಯದ ಪರಿಕಲ್ಪನೆ ಕದಡಿದೆ. ಸಾಮಾಜಿಕ ನ್ಯಾಯವೆಂದರೆ ಪ್ರತಿ ಜಾತಿಗೂ ಪ್ರಾತಿನಿಧ್ಯ ನೀಡುವುದು ಅಂತ ಕಾಂಗ್ರೆಸ್ ತಿಳಿದಂತಿದೆ. ಪುರುಷರಿಗಿಂತ ಸ್ವಲ್ಪ ಹೆಚ್ಚಿನ ಸಂಖ್ಯೆಯಲ್ಲೇ ಈ ದೇಶದಲ್ಲಿ ಉಸಿರಾಡುತ್ತಿರುವ ಮಹಿಳೆಯರು ಇವರ ಸಾಮಾಜಿಕ ನ್ಯಾಯದ ಪರಿಧಿಯೊಳಗೇಕೆ ಬರುತ್ತಿಲ್ಲ? ಸಮಾನ ಅವಕಾಶಗಳು ಮಹಿಳೆಯರಿಗೇಕಿಲ್ಲ? ಗೆಲುವೊಂದೇ ಮಾನದಂಡವಾದರೆ ಕಾಂಗ್ರೆಸ್ನ ಎಲ್ಲ ಪುರುಷ ಅಭ್ಯರ್ಥಿಗಳೂ ಗೆಲ್ಲಬೇಕಲ್ಲವೆ? ಒಮ್ಮೆಯೂ ಇವರ್ಯಾರು ಸೋತಿಲ್ಲವೇ? ಸಾಮಾಜಿಕ ನ್ಯಾಯವೆಂದರೆ, ಪ್ರಜಾಪ್ರಭುತ್ವವೆಂದರೆ ಸ್ತ್ರೀ-ಪುರುಷರಿಬ್ಬರ ಪೂರ್ಣ ಪ್ರಾತಿನಿಧ್ಯವಲ್ಲವೇ? ಇತ್ತೀಚೆಗೆ ನಮಗೂ ಟಿಕೆಟ್ ಬೇಕು ಅಂತ ಮಹಿಳಾ ಕಾಂಗ್ರೆಸ್ನ ಮಹಿಳಾ ಆಕಾಂಕ್ಷಿಗಳು ಧರಣಿ ನಡೆಸಬೇಕಾಗಿ ಬಂದದ್ದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಕಡೆಯ ಪಕ್ಷ ಶೇ. 10 ಕ್ಷೇತ್ರಗಳನ್ನಾದರೂ ಮಹಿಳೆಯರಿಗಾಗಿ ಮೀಸಲಿಡಲು ಕಾಂಗ್ರೆಸ್ನಿಂದ ಸಾಧ್ಯವಾಗಿಲ್ಲ. ಹಾಗೆ ನೋಡಿದರೆ ಜನತಾ ದಳ ಸೋಲುವ ರಿಸ್ಕ್ ತೆಗೆದುಕೊಂಡೇ 20 ಮಹಿಳೆಯರಿಗೆ ಟಿಕೆಟ್ ಕೊಡುವುದಾಗಿ ಘೋಷಿಸಿದೆ. ಎಲ್ಲ ಪಕ್ಷಗಳೂ ಹೆಸರಿಗೆ ಅಲ್ಲಲ್ಲಿ ಮಹಿಳೆಗೆ ಟಿಕೆಟ್ ಕೊಟ್ಟಿದ್ದರೂ ಅವೇನಿದ್ದರೂ ಹೆಚ್ಚಿನಂಶ ಖಡಿಛ್ಠ ಗಳ ಪಾಲಾಗಿದೆ. ಉಮಾಶ್ರೀ, ಮಾಲವಿಕ, ರಕ್ಷಿತಾ, ಪೂಜಾಗಾಂಧಿ -ಹೀಗೆ, ನಟಿಯಲ್ಲದವರು ಅಭ್ಯರ್ಥಿಗಳಾಗಲು ನಾಲಾಯಕ್ ಅಂತ ರಾಜಕೀಯ ಪಕ್ಷಗಳು ನಿರ್ಧರಿಸಿರಬೇಕು. ಮಹಿಳೆ ಗೆಲ್ಲಲಾರಳೋ ಅಥವಾ ಅವಳನ್ನು ಬೆಂಬಲಿಸಿ, ಗೆಲ್ಲಿಸಿ, ಪ್ರೋತ್ಸಾಹಿಸಿ ಅಧಿಕಾರದ ಆಯಕಟ್ಟಿನಲ್ಲಿ ಸ್ಥಾಪಿಸಲು ಪುರುಷರ ಮನಸ್ಸು ಒಪ್ಪುತ್ತಿಲ್ಲವೋ ಎಂಬುದೇ ಬಗೆಹರಿಯುತ್ತಿಲ್ಲ. ಸ್ತ್ರೀಯ ಸ್ನೇಹ, ಕನಿಕರ, ದಯೆ, ಅನುಕಂಪ, ವಿಶ್ವಾಸ, ಪ್ರೀತಿ ಎಲ್ಲವನ್ನೂ ಬಯಸುವ ಪುರುಷ ಅವಳನ್ನು ಜಟಠ್ಟಢಿಜ್ಠ ಮಾಡುವ ಅವಕಾಶ ಬಂದಾಗೆಲ್ಲ ಜಾಣದಡ್ಡತನವನ್ನು ಪ್ರದರ್ಶಿಸುತ್ತಾನೆ. ಮತದಾರಳಾಗಿ ಆಪ್ತಳಾಗಿ ಆಪದ್ಭಾಂಧವಳಾಗಿ ಕಾಣುವ ಸ್ತ್ರೀ ಸಮಾನಳಾಗಿ ವಿಧಾನಸಭೆ ಪ್ರವೇಶಿಸುವ ವಿಚಾರ ಪುರುಷನಿಗೆ ಆಪ್ತವಾಗುವುದಿಲ್ಲ. ಅವಳು ಮತದಾನದ ದಿನ ಹೊರಬಂದು, ಗಂಡ ಹೇಳಿದವನಿಗೆ ಮತ ಹಾಕಿ ಮತ್ತೆ ಮನೆಯೊಳಗೆ ಹೊಕ್ಕರೆ ಸಾಕು ಎಂಬ ನಿಲುವನ್ನು ಎಲ್ಲ ರಾಜಕೀಯ ಪಕ್ಷಗಳೂ ತಳೆದಿರುವುದು ನಿಜಕ್ಕೂ ಆಯಾಯ ಪಕ್ಷಗಳ ದುರ್ದೈವ.
ಭಾರತದ ನಾನಾ ಜಾಗಗಳಲ್ಲಿ ದೊರೆತ ಶಾಸನಗಳಲ್ಲಿ ಸೃಜನಶೀಲತೆಯ ಕಾನೂನುಗಳನ್ನು ರೂಪಿಸಿ, ಜನಪದರನ್ನು ಆಳಿದ ರಾಣಿಯರ ಉಲ್ಲೇಖವಿದೆ. ಸ್ತ್ರೀಯ ಸಹಜ ಗುಣಗಳಾದ ಕರುಣೆ, ದಯೆ, ಕೋಮಲತೆ, ಮಾರ್ದವತೆ ಇವನ್ನೆಲ್ಲ ಹೊಂದಿಯೂ ಪ್ರಜೆಗಳನ್ನು ಆಳಿದ ರಾಣಿಯರ ಉದಾಹರಣೆಗಳಿವೆ. ಹೀಗಿರುವಾಗ ಅಧಿಕಾರ ಎಂಬುದು ಮಹಿಳೆ ನಿಭಾಯಿಸಲಾರದಷ್ಟು ಕಠಿಣವೇನೂ ಅಲ್ಲ. ಆದರೂ ನಮ್ಮ ಪ್ರಜಾರಾಜ್ಯದಲ್ಲಿ ಮಹಿಳೆಗೇಕೆ ಅವಕಾಶಗಳಿಲ್ಲ? ಹೀಗಿಲ್ಲದಿರುವುದು ಪ್ರಜಾಪ್ರಭುತ್ವದ ಅಸ್ತಿತ್ವವನ್ನೇ ಪ್ರಶ್ನಿಸಬೇಕಾದ ಪರಿಸ್ಥಿತಿಯನ್ನು ನಿರ್ಮಿಸಿದೆ. ಪುರುಷ ಅವಳನ್ನು ಸುಖದ ಸಾಧನವಾಗಿ ಕಂಡು ತನ್ನ ಅಂತಃಪುರಗಳಲ್ಲಿ ಬಂಧಿಸಿಟ್ಟ ಸುರಕ್ಷತೆಯ ನೆಪದಲ್ಲಿ ಅವರ ಜಗತ್ತು ಚಿಕ್ಕದಾಯಿತು. ಕ್ರೌರ್ಯ, ಯುದ್ಧಗಳು, ಹಸಿವು, ಅಪೌಷ್ಠಿಕತೆ, ಋತುಚಕ್ರ, ಶೋಷಣೆ ಇವುಗಳಲ್ಲಿ ಸಿಲುಕಿ ಮಹಿಳೆ ಮಂಕಾದಳು. ರಾಜಕೀಯ ದಾಳವಾಗಿ ಬಳಕೆಯಾದಳು. 21ನೇ ಶತಮಾನದಲ್ಲಿ ಎಲ್ಲ ರಂಗಗಳಲ್ಲೂ ತನ್ನ ಛಾಪನ್ನು ಮೂಡಿಸಿದ ಮಹಿಳೆ ಭಾರತ ರಾಜಕಾರಣದ ಚಕ್ರವ್ಯೂಹದ ತಿರುಗಣಿಯಲ್ಲಿ ಸುತ್ತುತ್ತಿದ್ದಾಳೆ. ಅವಳಲ್ಲಿ ಅಡಗಿರುವ ಸಾಮರ್ಥ್ಯವನ್ನು ಆಡಳಿತದಲ್ಲಿ ಬಳಸಿಕೊಂಡು ಈ ದೇಶವನ್ನು ಉತ್ತಮಿಕೆಯತ್ತ ಕೊಂಡೊಯ್ಯಲು ನಮ್ಮ ರಾಜಕೀಯ ಪಕ್ಷಗಳು ವಿಫಲವಾಗಿವೆ. ನೆಪಮಾತ್ರಕ್ಕೆ ಮಹಿಳಾ ಘಟಕಗಳನ್ನು ಹೊಂದಿ ಮಹಿಳಾ ಕಾರ್ಯಕರ್ತೆಯರ ಶ್ರಮದ ಬೆವರಿಂದ ಮತ ಗಳಿಸುವ ಹುನ್ನಾರವು ಅವು ಚಾಣಾಕ್ಷತೆಯಿಂದ ನಡೆಸುತ್ತಿವೆ. ಇಂತಹ ಪಕ್ಷಗಳು ಮಹಿಳೆಯ ಗೌರವ, ಅಸ್ಮಿತೆ, ಅಭಿಮಾನವನ್ನು ಕಾಪಾಡಿಯಾವೇ? ಕೊಡಬಲ್ಲರೆ ಇವರೆಲ್ಲ ಮಹಿಳೆಗೆ ಘನತೆಯ ಸುರಕ್ಷತೆಯ ಬಾಳನ್ನು?
ಸ್ತ್ರೀ ಭ್ರೂಣಹತ್ಯೆ, ಬಾಲ್ಯವಿವಾಹ, ವರದಕ್ಷಿಣೆ ಹಿಂಸೆ ಕೌಟುಂಬಿಕ ದೌರ್ಜನ್ಯ, ಗರ್ಭಧಾರಣೆ, ಗರ್ಭಪಾತಗಳು, ಅಸುರಕ್ಷಿತ ಹೆರಿಗೆಗಳು, ರಕ್ತಹೀನತೆ, ಮಹಿಳೆಯರ ಇಂತಹ ಸೂಕ್ಷ್ಮ ಸಮಸ್ಯೆಗಳನ್ನು ಪರಿಹರಿಸುವಂತಹ ಶಾಸನಗಳನ್ನು ರೂಪಿಸುವ ಜವಾಬ್ದಾರಿ, ಅರಿವು, ಎಚ್ಚರ ಹಾಗೂ ಇಚ್ಛಾಶಕ್ತಿಯಾದರೂ ನಮ್ಮನ್ನು ಪ್ರತಿನಿಧಿಸುವ ಪುರುಷರಿಗಿದೆಯೇ ಎಂಬುದು ನಾನು ನಮ್ಮಿಂದ ಆಯ್ಕೆಯಾಗಿದ್ದ, ಆಗಿರುವ ಹಾಗೂ ಆಗಲಿರುವ ಶಾಸಕರನ್ನು ನೇರವಾಗಿ ಕೇಳುವ ಪ್ರಶ್ನೆ. ನಿಮ್ಮಲ್ಲಿ ಉತ್ತರವಿಲ್ಲ ಬಿಡಿ. ಪಕ್ಷದ ಪ್ರಚಾರ, ಮತದಾರರ ಮನವೊಲಿಕೆ, ಮತದಾನ ಸಿಬ್ಬಂದಿಗಳು-ಹೀಗೆ ವಿವಿಧ ಹಂತಗಳಲ್ಲಿ ಚುನಾವಣೆಗಾಗಿ ಮಹಿಳೆಯರು ದುಡಿಯುತ್ತಿದ್ದಾರೆ. ಮತದಾನದಲ್ಲಂತೂ ಅವರ ಮನಸ್ಸೇ ನಿರ್ಣಾಯಕ. ಪುರುಷರನ್ನು ಗೆಲ್ಲಿಸುವುದು ಖಂಡಿತ ಮಹಿಳೆಯರೇ.
ಹೀಗಿದ್ದೂ ಅವರ ಬಗ್ಗೆ ಇಂತಹ ಅಸಡ್ಡೆ ಸರಿಯೇ? ಈಗ ಕಣದಲ್ಲಿ ಇರುವ ಕೆಲವೇ ಮಹಿಳಾ ಅಭ್ಯರ್ಥಿಗಳೂ ಅಧಿಕಾರ ಉಂಡವರ ಸೊಸೆ, ಮಂತ್ರಿಗಳ ತಂಗಿ, ಶಾಸಕರ ಪತ್ನಿ, ಇಂತಹ ವಿಶೇಷ ಗುಣವುಳ್ಳವರು. ಸಾಮಾನ್ಯರಲ್ಲಿ ಅರ್ಹರಿಲ್ಲವೇ? ಸಮಾಜಕ್ಕೆ ಉದ್ಯೋಗದ ಕೊಡುಗೆ ಕೊಡುತ್ತಿರುವ ಸುಧಾಮೂರ್ತಿಯವರಂತಹ ಅನೇಕರು ನಮ್ಮ ನಡುವೆ ಇದ್ದಾರೆ. ಅಂತಹವರನ್ನು ಗುರುತಿಸಿ, ಗೌರವಿಸಿ, ಸ್ವಾಗತಿಸಿ ವಿಧಾನಸಭೆಗೆ ಕರೆತಂದು ಗುಣಮಟ್ಟದ ಚರ್ಚೆಗಳನ್ನು ನಡೆಸುವ ಮನಸ್ಸು ಪುರುಷ ಸಮಾಜಕ್ಕೆ ಬೇಕು. ಈ ಚುನಾವಣೆಯ ಮಳೆಯಲ್ಲಿ ಕರ್ನಾಟಕದ ಘನತೆವೆತ್ತ ವಿಧಾನಸಭೆಯಿಂದ ಕೊಳೆಯೆಲ್ಲ ತೊಳೆದು ಹೋಗಿ, ನಳನಳಿಸುವ ಚೈತನ್ಯದ ಹೊಸಮುಖಗಳು, ಅದರಲ್ಲೂ ತಾನಿರುವ ಪರಿಸರವನ್ನು ಪ್ರಭಾವಿಸುವ ಮಹಿಳೆಯರು ಕಾಣಿಸಬಹುದೆಂಬ ನಿರೀಕ್ಷೆ ಹುಸಿಯಾಗಿ, ಅದೇ ಹಳೆಯ ಕೊಳೆಯ ಮುಖಗಳಿಗೆ ಹಾಗೂ ಕಳಂಕಿತರಿಗೆ ಟಿಕೆಟ್ ಕೊಟ್ಟಿರುವುದು ಹೆಚ್ಚಿನವರಲ್ಲಿ, ಅದರಲ್ಲೂ ಮಹಿಳೆಯರಿಗೆ ಅತೀವ ನಿರಾಸೆಯನ್ನುಂಟು ಮಾಡಿದೆ.
ಅಂತೂ ಪ್ರಜಾಪ್ರಭುತ್ವದ, ಚುನಾವಣೆಯ ಹೆಸರಿನಲ್ಲೂ ಮತ್ತೊಮ್ಮೆ ಮಹಿಳೆ ತುಳಿತಕ್ಕೆ ಶೋಷಣೆಗೆ ಒಳಗಾಗಿರುವುದು ನಮ್ಮ ವ್ಯವಸ್ಥೆಯ ಸ್ವಾರ್ಥಕ್ಕೆ ಹಿಡಿದ ಕನ್ನಡಿ. ಹೀಗಾಗಿ ಈ ಚುನಾವಣೆಯಲ್ಲಿ ಸ್ವಾರಸ್ಯವಿಲ್ಲ.
- ಡಾ. ಶುಭದಾ ಹೆಚ್.ಎನ್.
anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

