ಅಂಕಣಗಳು

ಬೇಸಿಗೆಗೆ ಬತ್ತಿರುವವು ಬಾವಿಗಳಷ್ಟೇ ಅಲ್ಲ, ಭಾವಗಳೂ...

ವರ್ಷದಿಂದ ವರ್ಷಕ್ಕೆ ಹಳ್ಳಿಗಳಲ್ಲಿ ಬೇಸಿಗೆ ಅಸಹನೀಯವಾಗುತ್ತಿದೆ. ನೀರಿನ ಕೊರತೆ...

Published On :

ವರ್ಷದಿಂದ ವರ್ಷಕ್ಕೆ ಹಳ್ಳಿಗಳಲ್ಲಿ ಬೇಸಿಗೆ ಅಸಹನೀಯವಾಗುತ್ತಿದೆ. ನೀರಿನ ಕೊರತೆ, ಮೇವಿಗೆ ಬರ ಎಂಬೆಲ್ಲ ಸಮಸ್ಯೆಗಳು ಊರುಗಳ ಭೌತಿಕ ಅಸ್ತಿತ್ವದ ಮೇಲೆ ಹಲ್ಲೆ ನಡೆಸುವುದು ಹಳೆಯ ಸುದ್ದಿ. ಇವೆಲ್ಲದರ ಜತೆಯಲ್ಲೇ ಹಳ್ಳಿಗಳನ್ನು ಒಣಗಿಸುತ್ತಿದೆ ಹೊಸದೊಂದು ಭಾವದ ಬರ. ಪ್ರತಿ ಬೇಸಿಗೆಯಲ್ಲಿ ಆ ಭಾವದ ಬರದ ಇರುವಿಕೆ ಗಾಢವಾಗಿ ಕಾಡುತ್ತ ಕರುಳು ಚುರುಗುಡಿಸುತ್ತಿದೆ.
ನಗರ-ಹಳ್ಳಿ ಎಂಬ ತಾರತಮ್ಯಗಳೇನೂ ಇಲ್ಲದೇ ಎಲ್ಲರನ್ನೂ ಬೆವರಿಸತೊಡಗುತ್ತದೆ ಏಪ್ರಿಲ್-ಮೇನ ಕಡು ಬಿಸಿಲು. ಇಂಥ ಬಿರು ಬಿಸಿಲಿನ ಬಾಯಾರಿಕೆಯ ನಡುವೆಯೇ ದಶಕಗಳ ಹಿಂದೆ ಊರುಗಳ ಎದೆಯಲ್ಲೊಂದು ಸಂಭ್ರಮದ ಜುಳುಜುಳು ಶುರುವಾಗುತ್ತಿತ್ತು. ಕಲರವ, ಕೇಕೆ, ಗುಡುಗು, ಸಿಡಿಲು, ಹರ್ಷದ ಹೊನಲು ಎಲ್ಲವೂ ಒಂದೆಡೆ ಕಳೆಗಟ್ಟುತ್ತಿದ್ದ  ಆ ಒಂದೂವರೆ- ಎರಡು ತಿಂಗಳುಗಳ ವ್ಯಾಲಿಡಿಟಿಯನ್ನು ಪದಗಳಲ್ಲಿ ಹಿಡಿದಿಡುವುದಾದರೆ ಅದರ ಹೆಸರು 'ಬೇಸಿಗೆ ರಜೆ'. ಊರಿನ ಬೇರುಗಳಿದ್ದವರು ಬೆಂಗಳೂರಿನಂಥ ಪಟ್ಟಣಗಳಿಂದ ಮಕ್ಕಳು- ಮರಿ ಕಟ್ಟಿಕೊಂಡು ಊರಿಗೆ, ಊರಿನಲ್ಲೇ ಇರುವ ಪೋರರೂ ಬೇಸಿಗೆ ರಜೆ ಎಂದೊಡನೆ ಅಜ್ಜನ ಮನೆ, ನೆಂಟರ ಮನೆಗಳಿಗೆ ದಾಂಗುಡಿ ಇಡುವ ದೃಶ್ಯ. ಬೇಸಿಗೆ ಎಂದರೆ ಚಲನಶೀಲತೆ! ಬೇಸಿಗೆ ಎಂದರೆ ಸಮಾಗಮ, ಭಾವಗಳ ರೀಚಾರ್ಜ್, ಭಿನ್ನ ಸಂಸ್ಕೃತಿಗಳ ಕೊಡು-ಕೊಳ್ಳುವಿಕೆ, ಕಲಿಯುವಿಕೆ, ಕುಣಿಯುವಿಕೆ, ಬೆರೆತು ಅರಳುವಿಕೆ, ಹರಟಿ ಹಗುರಾಗುವಿಕೆ.
ಇಗೋ... ಈಗ ಮತ್ತೆ ಬಂದಿದೆ ಬೇಸಿಗೆ. ಆದರೆ ರಜೆ ಮಾತ್ರ ಇಲ್ಲ! ಶಾಲೆಯ ಪರೀಕ್ಷೆ ಮುಗಿದಿರಬಹುದಾಗಲೀ ಈ ಎರಡು ತಿಂಗಳಲ್ಲಿ ಸಿದ್ಧಗೊಳ್ಳಬೇಕಾದ ಎಂಟ್ರೆನ್ಸ್ ಎಕ್ಸಾಮುಗಳ ಲೆಕ್ಕವೆಷ್ಟು, ಏನು ಕತೆ? ಊರಿಗೋಡುವ ಸಂಭ್ರಮ...? ಹಂಗಂದ್ರೆ ಏನು? ನಮಗೆ ಉಜ್ವಲ ಭವಿಷ್ಯದೆಡೆಗಿನ ಓಟ ಮಾತ್ರ ಗೊತ್ತು. ಓಡಲು ಬಿಡಿ ನಮ್ಮನ್ನು; ಓದಲು ಬಿಡಿ ನಮ್ಮನ್ನು... ಆಧುನಿಕ ಕಂದಮ್ಮಗಳು ಹಾಗೂ ಅವರ ಅಪ್ಪ-ಅಮ್ಮಂದಿರ ಈ ವಾದದಲ್ಲೂ ಗಟ್ಟಿ ತರ್ಕವಿರುವುದು ಹೌದಲ್ಲವೇ? ಹೀಗೆನ್ನುತ್ತ ತರ್ಕವು ಪಕ್ಕಾ ಪ್ರಾಕ್ಟಿಕಲ್ ತಳಹದಿಯ ಮೇಲೆ ದೃಢವಾಗಿ ಕಾಲೂರಿ ಎದೆ ಉಬ್ಬಿಸುತ್ತಿರಲಾಗಿ...
ತರ್ಕದ ಕಿವಿಗಳಿಗೆ ತಂಗಾಳಿಯೊಂದು ಬಂದು ತಾಗಿತು! ಮಲೆನಾಡಿನ ಯಾವುದೋ ಹಳ್ಳಿಮನೆಯ ತೋಟರಾಶಿಗಳ ನಡುವಿನಿಂದ ಎದ್ದು ಬಂದಂತಿದ್ದ ಈ ತಂಗಾಳಿಯು ಅದೇ ಮನೆಯ ಹಿತ್ತಲಿನ ಮಾವಿನ ಟೊಂಗೆಗಳ ಮೇಲೆಯೂ ಹಾಯ್ದು ಬಂದಿತು. ಹಾಗೆ ಬಂದ ತಂಗಾಳಿಯ ಜೊತೆಗೆ ಆ ಮಾವಿನ ಮರವು ತನ್ನ ಅಳಲು-ತಳಮಳಗಳ ಸಂದೇಶವನ್ನಿಟ್ಟು ಕಳುಹಿಸಿತ್ತು. ಮಾವಿನ ಮರ ಕಳುಹಿಸಿದ್ದ ಭಾವುಕತೆಗೆ ತರ್ಕವು ಕಿವಿಗೊಟ್ಟಿತ್ತು.
-----
ನನ್ನ ತೋಳುಗಳಲ್ಲಿ ಜೋಕಾಲಿ ಹಗ್ಗ ಸುತ್ತಿದ್ದ ಗುರುತುಗಳು ಮಾಸಿ ಅವೆಷ್ಟು ವರ್ಷಗಳು ಸಂದು ಹೋದವೋ ಲೆಕ್ಕಕ್ಕಿಲ್ಲ. ಎಷ್ಟು ಫಲ ಬಿಟ್ಟರೇನು? 'ಮಕ್ಕಳು ಒದ್ದು, ನನ್ನ ಅಂಗಾಂಗ ಪುಳಕ'ಗೊಂಡ ನೆನಪೇ ಕ್ಷೀಣಿಸಿ ಬಿಟ್ಟಿದೆ. ಈಗೆರಡು ದಶಕಗಳ ಹಿಂದೆ ಹೊಳೆಸಾಲುಗಳಲ್ಲಿ, ತೋಟದ ಪಟ್ಟಿಯಲ್ಲಿ, ಗುಡ್ಡ ಬೆಟ್ಟಗಳಲ್ಲಿ ಅಲೆದಾಡಿಕೊಂಡಿದ್ದ ಮಕ್ಕಳೆಲ್ಲ ಅಕ್ಷರ ಬಗಲಲ್ಲಿಟ್ಟುಕೊಂಡು ಪೇಟೆಗೆ ಹೊರಟು ನಿಂತಾಗ ಈ ಪರಿಸರದ ನಾವ್ಯಾರೂ ಬೇಸರಗೊಳ್ಳಲಿಲ್ಲ. ಏಕೆಂದರೆ ಬದುಕು ಕಟ್ಟಿಕೊಳ್ಳುವ ಅನಿವಾರ್ಯತೆಯ ಅರಿವಿತ್ತು. ಹಾಗೆಂದೇ ಊರಿನ ಹತ್ತು ಸಮಸ್ತರ ಹಾರೈಕೆ ಬೆನ್ನಿಗಿತ್ತು. ಬೆಳೆ ನಷ್ಟ, ಬೆಲೆ ಕಡಿಮೆಗಳ ಸಂಕಷ್ಟದ ಹಳ್ಳಿಜೀವನವು ಶಹರಗಳಿಗೆ ಹೋಗಿ ದುಡಿಯುವವರಿಂದ ತುಸು ಹಗುರಾಗುವ ದಾರಿ ತೆರೆದುಕೊಂಡರೆ ಖುಷಿಯೇ ತಾನೇ. ಅಂಥ ಸಡಗರದ ಆಶೀರ್ವಾದವನ್ನು ಬೆನ್ನಿಗಿಟ್ಟುಕೊಂಡು ಹೋದವರೇ ಪಟ್ಟಣಗಳನ್ನು ಕಟ್ಟಿದರು. ಹೆಚ್ಚಿನವರ ಬೇರುಗಳೆಲ್ಲ ಇದ್ದದ್ದು ಹಳ್ಳಿಗಳಲ್ಲೇ. ರೆಕ್ಕೆ ಬಿಚ್ಚಿ ಹೊಸ ದಿಗಂತಗಳಿಗೆ ಹಾರಿದವರನ್ನು ಊರ ಬೇರುಗಳು ಬೇಸಿಗೆಯ ಬಿಡುವಿನಲ್ಲಿ ಇತ್ತ ಎಳೆದುಕೊಳ್ಳುತ್ತಿದ್ದವು. ಮಕ್ಕಳಿಗೆ ಎರಡು ತಿಂಗಳ ರಜೆ ಇರುತ್ತಿತ್ತಲ್ಲ? ಅಪ್ಪ-ಅಮ್ಮಂದಿರು ಅವರನ್ನು ಕರೆದುಕೊಂಡು ಹಳ್ಳಿಗೆ ಬರುತ್ತಿದ್ದರು. ತೀರ ರಜೆ ಸಿಗದ ಕೆಲಸವಾದರೆ ಕೆಲ ದಿನ ಇದ್ದು ಪಾಲಕರು ಮರಳಿದರೂ ಮಕ್ಕಳ ಸೈನ್ಯ ಮಾತ್ರ ರಜೆ ಮುಗಿಯುವವರೆಗೂ ಊರಲ್ಲೇ ಠಿಕಾಣಿ. ಪೇಟೆ ಹುಡುಗರು ವಿಡಿಯೋ ಗೇಮು ತೆಗೆದು ಇಲ್ಲಿನ ಮಕ್ಕಳಲ್ಲಿ ಬೆರಗು-ಕಲ್ಪನೆಗಳನ್ನು ಜಾಗೃತಗೊಳಿಸಿದರೆ, ಈ ಹಳ್ಳಿ ಹುಡುಗರು ಮರ ಹತ್ತುವ, ನೀರಾಡುವ, ಬೇಸಿಗೆ ಬಿಸಿಲಲ್ಲೇ ಬಿರಿದು ನಿಂತು ಬಾಯಲ್ಲಿ ನೀರೂರಿಸುವ ಕೌಳಿ, ಹಲಗೆ ಹಣ್ಣುಗಳ ಪರಿಚಯವನ್ನು ಪೇಟೆ ಮಕ್ಕಳ ನಾಲಗೆಗೆ ಹತ್ತಿಸಿ ಬೀಗುವುದರಲ್ಲಿ ಸಾರ್ಥಕತೆ ಕಾಣುತ್ತಿದ್ದರು. ಅಜ್ಜ, ಅಜ್ಜಿ, ಅಣ್ಣ, ಅಕ್ಕ, ದೊಡ್ಡಪ್ಪ, ದೊಡ್ಡಮ್ಮ, ಚಿಕ್ಕಪ್ಪ, ಚಿಕ್ಕಮ್ಮ, ಅತ್ತಿಗೆ, ಮಾಮ, ಮಾಮಿ... ಹೀಗೆ ಸಕಲೆಂಟು ಬಾಂಧವ್ಯಗಳ ಅರಿವು, ಊರು-ಊರಿನ ಕೆರೆ- ಊರ ದೇಗುಲ ಎಂಬ ಸಮುದಾಯ ಪ್ರಜ್ಞೆ, ಇಂಥ ಸೂಕ್ಷ್ಮ ಸಂಗತಿಗಳನ್ನೆಲ್ಲ ತಮಗರಿವಿಲ್ಲದಂತೆ ಅನಾಯಾಸವಾಗಿ ಗ್ರಹಿಕೆಯ ಪದರದೊಳಗೆ ಸೇರಿಕೊಳ್ಳುವುದಕ್ಕೆ ಅನುವು ಮಾಡಿಕೊಡುತ್ತಿತ್ತು ಬೇಸಿಗೆ ರಜೆ.
ಹೀಗೆ ಸಾಗುತ್ತಿರುವಾಗ... ಓ ತರ್ಕವೇ ನೀನು ಗಟ್ಟಿಗೊಂಡೆ. ಬದುಕಿಗೆ ತರ್ಕ ಮತ್ತು ಭಾವಗಳ ಸಮತೂಕ ಚೆಂದ. ಆದರೆ ಕೆಲವೊಮ್ಮೆ ಭಾವದ ಪರಿಧಿಯನ್ನು ನೀನೇ ಆಕ್ರಮಿಸಿ ಬಿಡುತ್ತೀಯೇನೋ. ಅದಕ್ಕೆ ಬರಬರುತ್ತ ಮಂದಿ ತುಂಬ ಲೆಕ್ಕಾಚಾರಕ್ಕೆ ಬಿದ್ದರು. ನಗರದಲ್ಲೇ ಬೇರುಬಿಟ್ಟು ಸೂರು ಕಟ್ಟಿಕೊಳ್ಳತೊಡಗಿದಾಗ ಇಲ್ಲಿನ ಬೆಸುಗೆ ಸಡಿಲಾಯಿತು. ಹೆಚ್ಚಿನವರು ಇಲ್ಲಿನ ತಮ್ಮ ಆಸ್ತಿಪಾಲಿನ ಮೌಲ್ಯವನ್ನು ಮುಲಾಜಿಲ್ಲದೇ ವಸೂಲು ಮಾಡಿಕೊಂಡಿದ್ದರಿಂದ ಸಹೋದರರ ನಡುವೆ ಬಾಂಧವ್ಯ ಉಳಿಯದೇ ವ್ಯವಹಾರವಷ್ಟೇ ನೆರವೇರಿತು. ವ್ಯವಹಾರಸ್ಥ ಪ್ರಪಂಚದಲ್ಲಿ ಬೇಸಿಗೆ ರಜೆಗೆ ಮಕ್ಕಳನ್ನು ಊರಿಗೆ ಕಳುಹಿಸುವ ಮಾತೆಲ್ಲಿಯದು? ಅಂಥ  ಸಂಭ್ರಮಕ್ಕೆ ವೇದಿಕೆಯಾಗುವ ಉತ್ಸಾಹವೂ ಊರಿಗಿಲ್ಲವಾಯಿತು.
ಪರಿಣಾಮವಾಗಿ ಈಗ್ಯಾರೂ ನನ್ನ ನೆರಳಿನಲ್ಲಿ ಆಡುವುದಕ್ಕೆ ಬರುವುದಿಲ್ಲ. ಇಲ್ಲಿಂದ ಹೋದ ನನ್ನೂರಿನವರ ಮಕ್ಕಳೆಲ್ಲ ಅಲ್ಲಿ ದಪ್ಪ ದಪ್ಪ ಪುಸ್ತಕಗಳನ್ನು ಹಿಡಿದು ಮುಂದೊಮ್ಮೆ ಅಮೆರಿಕ, ಲಂಡನ್‌ಗಳನ್ನು ಸುತ್ತಿ ಬರುವ ಕನಸು ಕಾಣುತ್ತಿದ್ದಾರೆ. ಅಂಥ ಹಪಾಹಪಿ, ಆರ್ಥಿಕ ಪ್ರಾಬಲ್ಯದ ಹಂಬಲ ತಪ್ಪೇನೂ ಅಲ್ಲ. ಆದರೆ, ಜಗತ್ತಿನ ಝಗಮಗಗಳನ್ನೆಲ್ಲ ಕನಸಿಗೆ ಬಿಟ್ಟುಕೊಂಡಿರುವ ಇವರಿಗೆ ತಮ್ಮದೇ ನಾಡಿನ, ತಮ್ಮದೇ ದೇಶದ ಒಳಅಂಚುಗಳನ್ನು ಸವರಿ ಬರುವ ಬೆರಗು ಅದೇಕೆ ಎದೆ ತುಂಬಿಕೊಂಡಿಲ್ಲವೋ ಯೋಚಿಸಿದರೆ ಅಚ್ಚರಿಯಾಗುತ್ತದೆ. ರಜೆ ಸಿಕ್ಕಿದ್ದೇ ಹೌದಾದರೆ ಸಿಂಗಾಪುರದ ಗಗನಚುಂಬಿ ಇಮಾರತುಗಳನ್ನೂ, ಮುಂದುವರಿದ ದೇಶವೊಂದರ ಧೂಳೇ ಇಲ್ಲದ ರಸ್ತೆಗಳನ್ನೂ ಸುತ್ತಿಬರುವ ಆಸೆಯಷ್ಟೇ ಅದೇಕೆ ಎಲ್ಲರಲ್ಲೂ ಪ್ರಖರವಾಗುತ್ತಿದೆ? ವರ್ಷಕ್ಕೆ ಕೆಲದಿನಗಳ ಮಟ್ಟಿಗಾದರೂ ಮನುಷ್ಯ ನಿಸರ್ಗದ ಮಡಿಲಿಗೆ ಬರದೇಹೋದರೆ ಬದುಕಿನ ಅರ್ಥ ಸಂಪೂರ್ಣವಾದೀತಾದರೂ ಹೇಗೆ? ಬೆಟ್ಟದ ನೆತ್ತಿಯ ಮೇಲೆ ನಿಂತು ಆಕಾಶಕ್ಕೆ ಮುಖವೊಡ್ಡದವನಿಗೆ ಅವನೊಳಗಿನ ಆಗಸ ಅದು ಹೇಗೆ ತಾನೇ ತೆರೆದುಕೊಂಡೀತು? ವಿಜ್ಞಾನಿ, ತಂತ್ರಜ್ಞ, ವ್ಯಾಪಾರಿ ಏನೇ ಆಗುವ ಉದ್ದೇಶವಿದ್ದರೂ ಮಣ್ಣಿನ ಜತೆಗೆ ಸ್ಪರ್ಶ ದೂರವಾಗಿಬಿಟ್ಟರೆ ಅವನಲ್ಲಿ ಸೃಜನಶೀಲತೆ ಎಲ್ಲಿಂದ ಹುಟ್ಟುತ್ತದೆ? ಪ್ರಾಣಿ-ಪಕ್ಷಿ, ಹೂವು-ಹಣ್ಣು, ಬೆವರು-ಬವಣೆ ಹೀಗೆ ಹಲವು ಜೀವಸಂಚಾರಗಳನ್ನು ತನ್ನೊಡಲಲ್ಲಿ ಇರಿಸಿಕೊಂಡಿರುವ ದೇಶದ ನಕಾಶೆಯ ಅಸಂಖ್ಯ ತುಂಡುಗಳಿಗೆ ಎಳೆಜೀವಗಳನ್ನು ಬೆಸೆಯುವುದಕ್ಕೆ ಇದ್ದ ಒಂದು ಅನನ್ಯ ಅವಕಾಶ ಬೇಸಿಗೆ ರಜೆ. ಅದು ಕರಗಿಹೋಗಿದ್ದರಿಂದ ಆಗಿರುವ ನಷ್ಟವನ್ನು ಯಾವ ಗ್ರಾಫ್‌ನಲ್ಲಿ ತೋರಿಸೋದು?
ಊರಿನ ಎಳೆಪೀಳಿಗೆ ಪಾಲಿಗೂ ಬೇಸಿಗೆ ರಜೆಯ ರೋಚಕತೆ ಉಳಿದುಕೊಂಡಿಲ್ಲ. ಟಿವಿ ಪೆಟ್ಟಿಗೆಗಳ ಎದುರು ಅವರೂ ಸ್ಥಾವರವಾಗಿದ್ದಾರೆ. ಬೆಟ್ಟ ಸುತ್ತುವುದಕ್ಕೆ, ಪಕ್ಕದೂರಿನ ಜಾತ್ರೆಗೆ ಹೋಗುವುದಕ್ಕೆ, ಜನರೊಂದಿಗೆ ಬೆರೆಯುವುದಕ್ಕೆ, ಸಗಣಿ ಘಮದ ಅಂಗಳದಲ್ಲಿ ಪಾದಗಳನ್ನೂರಿ ಬೆಳದಿಂಗಳಿಗೆ ಮುಖವೊಡ್ಡುವುದಕ್ಕೆ ಅವರಿಗೂ ಉಮೇದು ಉಳಿದಂತಿಲ್ಲ. ಬೆಂಗಳೂರಿನಲ್ಲಿ ಬರುವ ಚಾನೆಲ್‌ಗಳೇ ಇಲ್ಲೂ ಬರುತ್ತಿವೆ. ಹಿಂದಿ ಚಾನೆಲ್‌ನಲ್ಲಿ ಬರುವ ಧಾರಾವಾಹಿಯ ಹೆಂಗಸರು ಭವ್ಯ ಮಹಲಿನಲ್ಲಿ ಏನೂ ವಿಶೇಷವಿಲ್ಲದ ದಿನಗಳಲ್ಲೂ ಮೈತುಂಬ ಬಂಗಾರ ಹೇರಿಕೊಂಡು ಒಬ್ಬರ ವಿರುದ್ಧ ಇನ್ನೊಬ್ಬರನ್ನು ಎತ್ತಿಕಟ್ಟುವುದನ್ನೇ ಆಸ್ಥೆಯಿಂದ ನೋಡಲಾಗುತ್ತಿದೆ. ಮನೆಯಲ್ಲೂ ಶೂ ಹಾಕಿಕೊಂಡೇ ನಡೆಯುವ ಪುರುಷ ಪಾತ್ರವು ಪೋರ್ಟಿಕೋದಿಂದ ಕಾರು ಹೊರತೆಗೆದು ಎಲ್ಲಿಗೋ ಹೋಗುತ್ತಿದೆ. ಜಗುಲಿಯಲ್ಲಿ ಕುಳಿತು ಟಿವಿಯಲ್ಲಿ ಈ ದೃಶ್ಯಗಳನ್ನು ನೋಡುತ್ತಿರುವ ಹುಡುಗ-ಹುಡುಗಿಯರ ಕಿವಿಗೆ, 'ಅಪ್ಪ ಮನೇಲಿ ಇದಾನಾ' ಎಂಬ ಆಗಂತುಕನ ವಿಚಾರಣಾ ಧ್ವನಿಯೊಂದು ಕಿವಿಗೆ ಬಿದ್ದಿದೆ. 'ಇಲ್ಲ, ಎಲ್ಲೋ ಹೊರಗೆ ಹೋಗಿದ್ದಾನೆ' ಅಂತ ಒಂದುಸಿರಿಗೆ ಉತ್ತರಿಸಿದವರು ಮತ್ತೆ ಟಿವಿ ನೋಡುವುದರಲ್ಲಿ ಮಗ್ನರಾಗಿದ್ದಾರೆ. ಬಂದವರು ಯಾರು, ಅವರಿಗೇನು ಬೇಕು ಎಂಬ ನಗುಮುಖದ ಒಂದು ವಿಚಾರಣೆ, ಬನ್ನಿ ಕುಳಿತುಕೊಳ್ಳಿ ಎಂಬ ಕುಶಲೋಪರಿ ಇವ್ಯಾವ ಧೋರಣೆಗಳನ್ನೂ ಚಿಗುರಿಸದ ಸುಡು ಬೇಸಿಗೆಯೊಂದು ಆ ಬೆಳೆವ ಮನಗಳಲ್ಲಿ ಹೊಕ್ಕಿಬಿಟ್ಟಿತೇ?
ಧಗೆಯ ನಡುವೆಯೂ ಅಂತರಂಗಕ್ಕೆ ಸ್ನಾನ ಮಾಡಿಸುತ್ತಿದ್ದ ಬೇಸಿಗೆ ರಜೆಯ ಆ ದಿನಗಳ ಮೆರಗು ಮತ್ತೆ ಮರುಕಳಿಸಬಾರದೇ....
----
ತಂಗಾಳಿಯಲ್ಲಿ ತೇಲಿಬಂದ ಸಂದೇಶಗಳ ಸಾಲಿಗೆ ಕಿವಿಯಾದ ತರ್ಕ ತನಗೇನೂ ಅರ್ಥವಾಗಿಲ್ಲ ಎಂಬಂತೆ ತಲೆ ಕೊಡವಿತು. ನಿಮಗೂ ಅರ್ಥವಾಗದ ಹಾಳುಹರಟೆ ಇದೆನಿಸಿದರೆ ಕ್ಷಮೆ ಇರಲಿ.

-ಚೈತನ್ಯ ಹೆಗಡೆ
cchegde@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.