ಅಂಕಣಗಳು

ಆಡಳಿತ ವಿರೋಧಿ ಅಲೆ ನಂಬಿದವರ ಎದುರು ಬಂಡಾಯದ ಸುಳಿ!

ರಾಜ್ಯದ ಚುನಾವಣಾ ರಾಜಕೀಯದ ಇತಿಹಾಸದಲ್ಲಿ ಹಿಂದೆಂದೂ...

Published On :

ರಾಜ್ಯದ ಚುನಾವಣಾ ರಾಜಕೀಯದ ಇತಿಹಾಸದಲ್ಲಿ ಹಿಂದೆಂದೂ ಕಾಣದಂಥ ಮೌಲ್ಯಾಧಾರಿತ ವಾತಾವರಣ ಸೃಷ್ಟಿಯಾಗಿದೆ. ಎಲ್ಲ ಕ್ಷೇತ್ರಗಳಂತೆ ರಾಜಕೀಯವೂ ಉದ್ಯಮವಾಗಿ ಪರಿವರ್ತನೆಯಾಗಿದ್ದು, ಚುನಾವಣೆಗೆ ದಿನಗಣನೆ ಎಣಿಸುತ್ತಿರುವ ರಾಜ್ಯದಲ್ಲಿ ಎಲ್ಲ ಪಕ್ಷಗಳಲ್ಲೂ ಟಿಕೆಟ್ ಮಾರಾಟದ ಗಂಭೀರ ಆರೋಪ ವ್ಯಕ್ತವಾಗುತ್ತಿದೆ.
ಒಂದೆಡೆ ಚುನಾವಣಾ ಆಯೋಗ ಅಭ್ಯರ್ಥಿಗಳ ಚುನಾವಣಾ ವೆಚ್ಚವನ್ನು 16 ಲಕ್ಷ ರು.ಗೆ ನಿಗದಿಗೊಳಿಸಿದೆ. ಅಷ್ಟು ಮಾತ್ರವಲ್ಲ ವೆಚ್ಚ ಕಡಿತಕ್ಕೆ ತನ್ನದೇ ಆದ ರೀತಿಯಲ್ಲಿ ಅಂಕೆ ಹಾಕಲು ಈ ಸಂವಿಧಾನಾತ್ಮಕ ಸಂಸ್ಥೆ ಶ್ರಮಿಸುತ್ತಿದೆ. ಉಳಿದ ಸಂದರ್ಭದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿ, ಆಡಳಿತಾರೂಢ ಪಕ್ಷಗಳಿಗೆ ಸಲ್ಲದ ವ್ಯಕ್ತಿಗಳಾಗಿ ಅಜ್ಞಾತರಾಗಿಯೇ ಉಳಿಯುತ್ತಿದ್ದ, ನಿಜಾರ್ಥದಲ್ಲಿ ದಕ್ಷ ಮತ್ತು ಪ್ರಾಮಾಣಿಕ ಎನಿಸಿದ ವ್ಯಕ್ತಿಗಳನ್ನೇ ಆಯೋಗ ತನ್ನ ಬತ್ತಳಿಕೆಯ ಅಸ್ತ್ರವಾಗಿ ಬಳಸಿಕೊಂಡು ಪ್ರಜಾತಂತ್ರ ವ್ಯವಸ್ಥೆಯ ಪೂಜಾ ಕಾರ್ಯಕ್ಕೆ ಸಿದ್ಧತೆ ನಡೆಸುತ್ತಿದೆ. ರಾಜ್ಯದ ಮುಖ್ಯ ಚುನಾವಣಾಧಿಕಾರಿಯಾಗಿ ನಿಯುಕ್ತಿಗೊಂಡಿರುವ ನಿಷ್ಠಾವಂತ ಐಎಎಸ್ ಅಧಿಕಾರಿ ಅನಿಲ್ ಕುಮಾರ್ ಝಾ, ಚುನಾವಣೆಯನ್ನು ಆಯೋಗ ನಿಗದಿಪಡಿಸಿದ ವೆಚ್ಚದ ಪರಿಮಿತಿಯಲ್ಲೇ ನಡೆಸುವುದಕ್ಕೆ ಹರಸಾಹಸ ಪಡುತ್ತಿದ್ದಾರೆ.
ಈ ಹಂತದಲ್ಲಿ ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳ ಚುನಾವಣಾ ಟಿಕೆಟ್ ಮಾರಾಟವಾಗಿದೆ ಎಂಬ ಆರೋಪ ದುತ್ತೆಂದು ಪ್ರತ್ಯಕ್ಷವಾಗಿದೆ. ಅದೂ ಕೋಟಿ ಮೊತ್ತಕ್ಕೆ! ಆಯೋಗದ ಲಕ್ಷ್ಯದ ಲೆಕ್ಕವೆಲ್ಲಿ?  ಅಭ್ಯರ್ಥಿಗಳ ಕೋಟಿಯ ಗಂಟೆಲ್ಲಿ? ಹಾಗೆ ನೋಡಿದರೆ ಟಿಕೆಟ್ ಖರೀದಿಸಿದ ಹಾಗೂ ಮಾರಾಟ ಮಾಡಲು ಸಹಕರಿಸಿದ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಅಭ್ಯರ್ಥಿಗಳನ್ನು ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹಗೊಳಿಸುವುದೇ ಆಯೋಗದ ಮುಂದೆ ಇರುವ ಏಕೈಕ ಆಯ್ಕೆ. ಆದರೆ ಸಂವಿಧಾನಾತ್ಮಕ ಸಂಸ್ಥೆಗೆ ಇಂಥ ಕ್ರಮ ತೆಗೆದುಕೊಳ್ಳುವುದಕ್ಕೆ ಹಲ್ಲು- ಬಾಯಿ ಎರಡೂ ಇಲ್ಲ. ನಿಗದಿಪಡಿಸಿದ ಪ್ರಮಾಣ ಮೀರಿ ಚುನಾವಣಾ ವೆಚ್ಚ ಮಾಡಿರುವುದು ಸಾಬೀತಾದರೇ ಅಂಥ ಅಭ್ಯರ್ಥಿಯ ಆಯ್ಕೆಯನ್ನು ಅನರ್ಹಗೊಳಿಸುವ ಗುಟುರು ಹಾಕಿರುವ ಆಯೋಗ, ಕೋಟ್ಯಂತರ ರು.ಗೆ ಟಿಕೆಟ್ ಮಾರಾಟವಾಗುವ ಸಂಗತಿಯನ್ನು ನೋಡಿ, ಕೇಳಿ ಕೈ ಚೆಲ್ಲುವುದನ್ನು ಬಿಟ್ಟು ಬೇರೆ ಯಾವ ಮಾರ್ಗವೂ ಕಾಣದೆ ಕಂಗಾಲಾಗಿದೆ.
ಹೌದು. ಟಿಕೆಟ್ ಮಾರಾಟದ ವಿಚಾರ ರಾಜ್ಯದ ಜನತೆಗೆ ಹೊಸ ಸುದ್ದಿಯಲ್ಲ. ಆದರೆ ಸಂದರ್ಭ ಮಾತ್ರ. ಏಕೆಂದರೆ ಈ ಬಾರಿ ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ಚುನಾವಣಾ ವೇಳಾಪಟ್ಟಿ ಪ್ರಕಟವಾಗುವುದಕ್ಕೆ ವರ್ಷಕ್ಕಿಂತ ಮುನ್ನ ಮೊಳಗಿಸಿದ್ದು, ಈ ಬಾರಿ ಭ್ರಷ್ಟಾಚಾರದ ವಿರುದ್ಧ ಮಹಾಸಂಗ್ರಾಮ ಎಂಬ ಘೋಷಣೆಯನ್ನು. ಆ ಎರಡು ಪಕ್ಷದ ಎಲ್ಲ ನಾಯಕರೂ ಆಡಳಿತಾರೂಢ ಬಿಜೆಪಿಯ ಭ್ರಷ್ಟಾಚಾರವನ್ನು ಸವರುವ ಯೋಧರಾಗಿಯೇ ಕಂಡಿದ್ದರು. ಆದರೆ ಚುನಾವಣಾ ಕಾವು ಆರಂಭವಾಗುತ್ತಿದ್ದಂತೆ ಪರಿಸ್ಥಿತಿ ಬೇರೆಯದೇ ಸ್ವರೂಪ ಪಡೆದು ನಿಂತಿದೆ. ಕಾಂಗ್ರೆಸ್‌ನ ಯಾವ ಅಭ್ಯರ್ಥಿ ಹಣಕ್ಕಾಗಿ ಟಿಕೆಟ್ ಪಡೆದಿದ್ದಾನೆ, ಆತನಿಂದ ಮುಂದೇನು ನಿರೀಕ್ಷೆ ಮಾಡಬಹುದು ಎಂಬ ಚಿತ್ರಣ ಮತದಾರನ ಮುಂದೆ ಸ್ಪಷ್ಟವಾಗತೊಡಗಿದೆ. ಹಾಗೆ ನೋಡಿದರೆ ಮೂರು ಪಕ್ಷಗಳಲ್ಲಿ ಟಿಕೆಟ್ ಹಂಚಿಕೆ ವಿಚಾರ ತೀರಾ ಗೋಜಲಾಗಿತ್ತು. ಆದರೆ ಪ್ರತಿಪಕ್ಷ ಕಾಂಗ್ರೆಸ್‌ನಲ್ಲಿ ಮಾತ್ರ ಆ ಪ್ರಮಾಣ ಸ್ವಲ್ಪ ಅತಿ ಎಂಬ ಹಂತ ತಲುಪಿತು. ನೀರಿಗೆ ಪಾಚಿ ಶತ್ರು ಕಾಂಗ್ರೆಸ್‌ಗೆ ಕಾಂಗ್ರೆಸ್ಸೇ ಶತ್ರು ಎಂಬ ಮಾತಿನಂತೆ, ಆ ಪಕ್ಷದ ಪ್ರತಿಯೊಬ್ಬ ನಾಯಕರೂ ಪರಸ್ಪರ ಶತ್ರುಗಳಂತೆ ಕಾಳಗಕ್ಕೆ ನಿಂತರು. ಒಬ್ಬನ ಕೊರಳಿಗೆ ಹೇಗೆ ಉರುಳು ಹಾಕಬಹುದು ಎಂದು ಇನ್ನೊಬ್ಬ ಲೆಕ್ಕ ಹಾಕಿದರೆ, ಒಬ್ಬನ ಒಂದು ಕಣ್ಣು ಹೋದರೂ ಇನ್ನೊಬ್ಬನ ಎರಡೂ ದೃಷ್ಟಿಯನ್ನು ಸುಟ್ಟು ಹಾಕಬೇಕೆಂಬ ಎಣಿಕೆಗಳು ಕಾಂಗ್ರೆಸ್ ಪಡಸಾಲೆಯಲ್ಲಿ ನಡೆದವು. ಹೀಗಾಗಿ ಕಾಂಗ್ರೆಸ್ ಪರವಾಗಿದ್ದ ಆಡಳಿತ ವಿರೋಧಿ ಜಾಗದಲ್ಲಿ ಬಂಡಾಯ ಪ್ರತಿಷ್ಠಾಪನೆಗೊಂಡಿದೆ. ಆತ್ಮವಿಶ್ವಾಸದ ಜಾಗದಲ್ಲಿ ಆತಂಕ ಮಡುಗಟ್ಟಿ ಕುಳಿತಿದೆ. ಅಳೆದು ತೂಗಿ ತಯಾರಿಸಿರುವ 177 ಮಂದಿಯ ಮೊದಲ ಪಟ್ಟಿಯಲ್ಲಿನ ಅಭ್ಯರ್ಥಿಗಳ ಪೈಕಿ 17 ಮಂದಿ ಬಂಡಾಯಕ್ಕೆ ಬಲಿಯಾಗಬಹುದು ಎಂಬ ನೀಲನಕ್ಷೆ ಕೆಪಿಸಿಸಿಯ ತಂತ್ರಜ್ಞರು ಸಿದ್ದಪಡಿಸಿದ್ದಾರೆ. ಇದನ್ನು ನೋಡಿದರೆ ಕಾಂಗ್ರೆಸ್ ಯಾವ ಹಂತ ತಲುಪಿದೆ ಎಂಬುದು ಅರ್ಥವಾಗಬಹುದು. ಹಿರಿಯ ನಾಯಕರೇ ಪರಸ್ಪರ ಬಹಿರಂಗ ಆರೋಪದಲ್ಲಿ ಮುಳುಗಿದರೆ ಇನ್ನು ಉಪನಾಯಕರು, ಕಾರ್ಯಕರ್ತರು ಸುಮ್ಮನಿರುತ್ತಾರೆಯೇ? ಇದರ ಫಲವಾಗಿಯೇ ಕೆಪಿಸಿಸಿ ಕಚೇರಿ ಎದುರು ಸಾಲು ಸಾಲು ಪ್ರತಿಭಟನೆಗಳು  ನಡೆಯುತ್ತಿವೆ. ಮಾತ್ರವಲ್ಲ ಕೆಪಿಸಿಸಿ ಕಚೇರಿ ಎದುರು ಕಾಯಕರ್ತನೊಬ್ಬನ ಜೀವಬಲಿಯಾಗಿದೆ.
ಮೊದಲ ಹಂತದಲ್ಲಿ ಪ್ರಕಟವಾಗಿರುವ ಕಾಂಗ್ರೆಸ್ ಪಟ್ಟಿ ಸರ್ವಸಮ್ಮತ ಎನ್ನಲು ಸಾಧ್ಯವಿಲ್ಲವಾದರೂ ಇದ್ದುದರಲ್ಲಿ ವಿರೋಧವಿಲ್ಲದೇ ಸಿದ್ದವಾದದ್ದು ಎನ್ನಬಹುದು. ಮುಖ್ಯಮಂತ್ರಿ ಗಾದಿಯ ಮೇಲೆ ಕಣ್ಣಿಟ್ಟಿರುವ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ಮುಂದಿನ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು, ಅಲ್ಲಲ್ಲಿ ಪರಸ್ಪರ ಕೊಡುಕೊಳ್ಳುವಿಕೆ ತಂತ್ರ ಅನುಸರಿಸಿದ್ದಾರೆ. ಬಹುಪಾಲು ಇವರಿಬ್ಬರ ಮೂಗಿನ ನೇರಕ್ಕೆ ನಡಿದಿದೆ. 40ಕ್ಕೂ ಹೆಚ್ಚು ಹೊಸ ಮುಖಗಳಿಗೆ ಅವಕಾಶ ಕಲ್ಪಿಸಿದ್ದಾರೆ ಎಂಬುದನ್ನು ಬಿಟ್ಟರೆ ತೀರಾ ಹೊಸತನವೇನೂ ಇಲ್ಲ. ಹಾಲಿ ಶಾಸಕರು, ಕಳೆದ ಬಾರಿ ಚುನಾವಣೆಯಲ್ಲಿ 5 ಸಾವಿರ ಮತಗಳ ಅಂತರದಿಂದ ಸೋತವರು ಹಾಗೂ ಪ್ರಭಾವಿ ಮಾಜಿ ಸಚಿವರು ಹಾಗೂ ಅವರ ಪುತ್ರರನ್ನು ಪರಿಗಣಿಸಲಾಗಿದೆ.
ಆದರೆ ಬಾಕಿ ಇರುವ 47 ಕ್ಷೇತ್ರಗಳೇ ಕಾಂಗ್ರೆಸ್ ಅನ್ನು ಲಿಟ್ಮಸ್ ಪರೀಕ್ಷೆಗೆ ಒಳಪಡಿಸಲಿದೆ. ಇವೆಲ್ಲವೂ ತೀರಾ ವಿವಾದಾತ್ಮಕ ಮತ್ತು ಪರಮೇಶ್ವರ್ ಹಾಗೂ ಸಿದ್ದರಾಮಯ್ಯನವರ ಶಕ್ತಿಗೆ ಮೀರಿದ್ದು. ಜತೆಗೆ ಬಂಡಾಯಕ್ಕೆ ಸಾಂಸ್ಥಿಕ ಸ್ವರೂಪ ಕೊಡುವ ಶಕ್ತಿ ಇರುವುದು ಈ ಪಟ್ಟಿಯಲ್ಲಿ ಇರುವ ವ್ಯಕ್ತಿಗಳಿಗೆ. ಕೇಂದ್ರದ ಇಬ್ಬರು ಸಚಿವರು ಹಾಗೂ ಮಾಜಿ ಮುಖ್ಯಮಂತ್ರಿ ಎನ್.ಧರ್ಮಸಿಂಗ್ ಅವರ ಪುತ್ರ, ಬೆಂಗಳೂರು ನಗರದ 10 ಮಹತ್ವದ ಕ್ಷೇತ್ರಗಳ ಭವಿಷ್ಯ ಈ ಪಟ್ಟಿಯಲ್ಲಿ ಇದೆ. ಹೀಗಾಗಿ ರಾಜ್ಯ ಮುಖಂಡರು ನೇರವಾಗಿ ಈ ಪಟ್ಟಿಯಲ್ಲಿ ಹಸ್ತಕ್ಷೇಪ ನಡೆಸದೇ ಇದ್ದರೂ, ಪರೋಕ್ಷವಾಗಿ ಕೈ ಆಡಿಸುತ್ತಲೇ ಇದ್ದಾರೆ. ಈ ಪಟ್ಟಿಯಲ್ಲಿರುವ ಯಾವುದೇ ಅಭ್ಯರ್ಥಿ ವಿಚಾರದಲ್ಲಿ ಕೊಂಚ ಎಡವಟ್ಟಾದರೂ ಕಾಂಗ್ರೆಸ್‌ಗೆ ಕಂಟಕ ಗ್ಯಾರಂಟಿ. ಉದಾಹರಣೆಗೆ ಕಾಂಗ್ರೆಸ್‌ನ ಹಿರಿಯ ನಾಯಕ ಶ್ಯಾಮನೂರು ಶಿವಶಂಕರಪ್ಪ ಅವರಿಗೆ ಮೊದಲ ಪಟ್ಟಿಯಲ್ಲಿ ಅವಕಾಶ ಕಲ್ಪಿಸಿಲ್ಲ. ಪರಮೇಶ್ವರ್ ಅವರ ನಾಯಕತ್ವವನ್ನು ಪ್ರಶ್ನಿಸಿದ ಕಾರಣಕ್ಕೆ ಈ ಮೂಲಕ ಸೇಡು ತೀರಿಸಿಕೊಳ್ಳಲಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಅದು ನಿಜವಾಗಲಿ, ಸುಳ್ಳಾಗಲಿ ಎರಡನೇ ಪಟ್ಟಿಯಲ್ಲಿ ಶ್ಯಾಮನೂರು ಇಚ್ಚಿಸಿದ ಕ್ಷೇತ್ರದಲ್ಲಿ ಅವಕಾಶ ಲಭ್ಯವಾಗದಿದ್ದರೆ ಕಾಂಗ್ರೆಸ್ ಉತ್ತರ ಕರ್ನಾಟಕ ಹಾಗೂ ಮಧ್ಯ ಕರ್ನಾಟಕದಲ್ಲಿ ರಾಜ್ಯದ ಎರಡನೇ ಪ್ರಬಲ ಸಮುದಾಯವಾದ ಲಿಂಗಾಯಿತರ ವಿರೋಧವನ್ನು ಎದುರಿಸಲೇಬೇಕಾಗುತ್ತದೆ. ಅಖಿಲ ಭಾರತ ವೀರಶೈವ ಸಭಾದ ಅಧ್ಯಕ್ಷರೂ ಶ್ಯಾಮನೂರು ಶಿವಶಂಕರಪ್ಪ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳದಿದ್ದರೆ ಕಾಂಗ್ರೆಸ್‌ಗೆ ಮತ್ತೆ ಪಾಠ ಕಲಿಸಬೇಕಾಗುತ್ತದೆ ಎಂಬ ಸಂದೇಶ ಈಗಾಗಲೇ ದೆಹಲಿಗೆ ರವಾನೆಯಾಗಿದೆ.
ಇನ್ನು ಹೆಬ್ಬಾಳ ವಿಧಾನಸಭೆ ಕ್ಷೇತ್ರದಿಂದ ತಮ್ಮ ಮೊಮ್ಮಗ ರೆಹಮಾನ್ ಷರೀಫ್ ಅವರಿಗೆ ಟಿಕೆಟ್ ಕೊಡಿಸಲು ಶ್ರಮಿಸುತ್ತಿರುವ ಹಿರಿಯ ಕಾಂಗ್ರೆಸ್ ಮುಖಂಡ ಜಾಫರ್ ಷರೀಫ್ ಅವರನ್ನು ಎದುರು ಹಾಕಿಕೊಳ್ಳುವುದೂ ಅಷ್ಟು ಸುಲಭದ ಮಾತಲ್ಲ. ಇಂದಿಗೂ ಅಲ್ಪಸಂಖ್ಯಾತ ಸಮುದಾಯದ ಪ್ರಶ್ನಾತೀತ ನಾಯಕರಲ್ಲಿ ಒಬ್ಬರು ಎಂದು ಪರಿಗಣಿಸಲ್ಪಟ್ಟಿರುವ ಷರೀಫ್ ಬಹಿರಂಗವಾಗಿ ಅಸಮಾಧಾನ ಹೊರಹಾಕಿದರೆ, ಮುಸ್ಲಿಮರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಮೊದಲ ಪಟ್ಟಿಯಲ್ಲಿ ಹದಿಮೂರು ಮುಸ್ಲಿಂ ಮುಖಂಡರಿಗೆ ಅವಕಾಶ ಮಾಡಿಕೊಟ್ಟಿದ್ದೇವೆ ಎಂಬ ಸಮರ್ಥನೆ, ಜಾಫರ್ ಷರೀಫ್‌ರ ನಿಟ್ಟುಸಿರಿನ ಮುಂದೆ ಸುಟ್ಟು ಹೋಗಬಹುದು. ಒಂದು ವೇಳೆ ರೆಹಮಾನ್ ಷರೀಫ್‌ಗೆ ಟಿಕೆಟ್ ನೀಡಿದರೆ, ರಾಜ್ಯದ ಮೂರನೇ ಪ್ರಬಲ ಸಮುದಾಯವಾದ ಕುರುಬರ ವಿರೋಧವನ್ನು ಕಾಂಗ್ರೆಸ್ ಎದುರಿಸಬೇಕಾಗಬಹುದು. ಈ ಕ್ಷೇತ್ರದಿಂದ ಕಣಕ್ಕೆ ಇಳಿಯಲು ಮಾಜಿ ಸಚಿವ ಎಚ್.ಎಂ.ರೇವಣ್ಣ ಇಚ್ಛೆ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರ ಬೆಂಬಲವೂ ಇದೆ. ರೇವಣ್ಣ ಅವರಿಗೆ ಟಿಕೆಟ್ ನಿರಾಕರಿಸಿದರೆ ಸಿದ್ದರಾಮಯ್ಯ ಬಹಿರಂಗ ಆಕ್ರೋಶ ಹೊರ ಹಾಕಿದರೂ ಆಶ್ಚರ್ಯವಿಲ್ಲ. ಇದು ಚುನಾವಣೆ ಸಂದರ್ಭದಲ್ಲಿ ಬೇರೆಯದೇ ಆದ ಸಂದೇಶ ರವಾನಿಸಬಹುದು.
ಇದೆಲ್ಲಕ್ಕಿಂತ ಮುಖ್ಯವಾದ ಸಂಗತಿ ಎಂದರೆ ಕೇಂದ್ರ ಕಾರ್ಮಿಕ ಖಾತೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ ಖರ್ಗೆ ಅವರಿಗೆ ಟಿಕೆಟ್ ನೀಡುವ ವಿಚಾರ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರು ದೇಶಕ್ಕೆ ವಾಪಾಸ್ ಆಗುವವರೆಗೆ ಇದು ಇತ್ಯರ್ಥವಾಗುವುದಿಲ್ಲವಾದರೂ, ಕೆಲ ಮುಖಂಡರ ಭವಿಷ್ಯ ಇತ್ಯರ್ಥ ಪಡೆಸುವುದಕ್ಕೆ ಖರ್ಗೆ ಈ ಹಂತದಲ್ಲೇ ನಿರ್ಧರಿಸಲೂಬಹುದು. ಏಕೆಂದರೆ ಯುವ ಕಾಂಗ್ರೆಸ್ ಉಪಾಧ್ಯಕ್ಷರೂ ಆಗಿರುವ ಪ್ರಿಯಾಂಕ ಖರ್ಗೆ ಅವರಿಗೆ ಟಿಕೆಟ್ ನೀಡುವುದಕ್ಕೆ ಮೂಲ ವಿರೋಧ ಇರುವುದು ಕೆಪಿಸಿಸಿಯಲ್ಲೇ ಹೊರತು ಐಸಿಸಿಯಲ್ಲಿ ಅಲ್ಲ. ಈ ವಿರೋಧ ಎಲ್ಲಿ ಆರಂಭವಾಗಿ, ಯಾರ ಮೂಲಕ ದೆಹಲಿ ತಲುಪಿದೆ ಎಂಬುದರ ಸ್ಪಷ್ಟ ಅರಿವು ಖರ್ಗೆ ಅವರಿಗೆ ಇದೆ. ಮೇಲಾಗಿ ಅವರೂ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳಲ್ಲಿ ಒಬ್ಬರು. ಹೀಗಾಗಿ ಬಿಡುಗಡೆಗೆ ಬಾಕಿ ಉಳಿದಿರುವ 47 ಅಭ್ಯರ್ಥಿಗಳ ಪಟ್ಟಿ ಕಾಂಗ್ರೆಸ್‌ಗೆ ಸವಾಲೇ. ಅದರ ಜತೆಗೆ ಬಿಜೆಪಿಯೂ 84 ಕ್ಷೇತ್ರಗಳಿಗೆ ಅಭ್ಯರ್ಥಿ ಆಯ್ಕೆಯನ್ನು ಹಾಗೆ ಉಳಿಸಿಕೊಂಡಿದೆ. ಮ್ಯಾಜಿಕ್ ಸಂಖ್ಯೆ ಎಂದು 122 ಕ್ಷೇತ್ರಗಳಿಗೆ ಜೆಡಿಎಸ್ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದರೂ, ಉಳಿದ ಕಡೆಗಳಿಗೆ ಯಾರು ಹುರಿಯಾಳು  ಎಂದು ಹುಡುಕುವುದೇ ಕಷ್ಟಕರವಾಗಿದೆ. ಏಕೆಂದರೆ ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಇನ್ನೂ ಸಾಕಷ್ಟು ಶ್ರಮಿಸಬೇಕಿದೆ ಎಂಬುದು ಖುದ್ದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರಿಗೂ ಗೊತ್ತು.
ಜೆಡಿಎಸ್‌ನಲ್ಲೂ ಟಿಕೆಟ್ ಮಾರಾಟದ ಆರೋಪ ವ್ಯಕ್ತವಾಗಿರುವುದು ಸಣ್ಣಸಂಗತಿ ಏನೂ ಅಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ತ್ಯಜಿಸಿದ್ದ ಮಾಜಿ ಸಚಿವ ಚನ್ನಿಗಪ್ಪ ಜೆಡಿಎಸ್ ವಿರುದ್ಧ ಯಾವ ರೀತಿ ವರ್ತಿಸಿದ್ದರು ಎಂಬುದು ಎಲ್ಲರಿಗೂ ಗೊತ್ತು. ಈಗ ಅವರಿಗೆ ಮತ್ತೆ ಮಣೆ ಹಾಕಲು ಮುಂದಾಗಿರುವ ಹಿನ್ನೆಲೆಯಲ್ಲಿ ಟಿಕೆಟ್ ಆಕಾಂಕ್ಷಿ ಮುನೇಗೌಡ ಗಂಭೀರ ಆರೋಪ ಮಾಡಿದ್ದಾರೆ.
ಹಾಗೆ ನೋಡಿದರೆ ಸದ್ಯದ ಪರಿಸ್ಥಿತಿಯಲ್ಲಿ ಬಾಕಿ ಉಳಿದಿರುವ ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ ಮಾಡುವ ವಿಚಾರದಲ್ಲಿ ಆಡಳಿತಾರೂಢ ಬಿಜೆಪಿಯೇ ಕೊಂಚ ನಿರಾಳವಾಗಿದೆ ಎಂದು ಹೇಳಬಹುದು. ಏಕೆಂದರೆ ಕಳೆದ ನಾಲ್ಕೂವರೆ ವರ್ಷಗಳ ಕಾಲ ಅಧಿಕಾರ ಅನುಭವಿಸಿರುವ ಬಿಜೆಪಿ ವಿರುದ್ಧ ಆಡಳಿತ ವಿರೋಧಿ ಅಲೆ ಎದ್ದಿದೆ. ಹೀಗಾಗಿ ಆ ಪಕ್ಷದಲ್ಲಿದ್ದವರ ಪೈಕಿ ಅತಿ ಹೆಚ್ಚು ಶಾಸಕರು ತಮ್ಮ ಭವಿಷ್ಯವನ್ನು ಅರಸಿ ಬೇರೆ ಪಕ್ಷಗಳಿಗೆ ಹೋಗಿದ್ದಾರೆ. ಹೀಗಾಗಿ ಅಷ್ಟರಮಟ್ಟಿಗೆ ಬೇಡಿಕೆ ಪಟ್ಟಿಯಲ್ಲಿನ ಸಂಖ್ಯಾಬಲ ಕ್ಷೀಣಿಸಿದೆ. ಹಾಗಂತ 84 ಅಭ್ಯರ್ಥಿಗಳನ್ನು ಅಖೈರುಗೊಳಿಸುವುದೇನು ಬಿಜೆಪಿಗೆ ನೀರು ಕುಡಿದಷ್ಟು ಸುಲಭವಲ್ಲ. ಉಳಿದ ಪಕ್ಷಗಳಿಂದ ಈ ಕ್ಷೇತ್ರದಲ್ಲಿ ಯಾರು ಕಣಕ್ಕೆ ಇಳಿಯುತ್ತಾರೆ ಎಂಬುದನ್ನು ಸಂದರ್ಭ ಸಹಿತ ಸ್ಪಷ್ಟಪಡಿಸಿಕೊಂಡ ನಂತರವೇ ಬಿಜೆಪಿ ಬಿಟ್ಟ ಸ್ಥಳವನ್ನು ಭರ್ತಿ ಮಾಡಬೇಕಿದೆ. ಇಲ್ಲವಾದರೆ ಎಣಿಕೆಯಲ್ಲಿ ಎಡವಟ್ಟಾಗುತ್ತದೆ ಎಂಬ ಸತ್ಯ ಬಿಜೆಪಿಯ ಹೊಸ ರಾಜ್ಯಾಧ್ಯಕ್ಷರಿಗೂ ಅರ್ಥವಾಗುವಷ್ಟು ಸರಳವಾಗಿದೆ.
ರಾಜಕೀಯ ಲೆಕ್ಕಾಚಾರಗಳು ಏನೇ ಇರಲಿ, ಸದ್ಯ ಎದುರಾಗಿರುವ ಟಿಕೆಟ್ ಮಾರಾಟದ ಆರೋಪದಿಂದ ಒಂದಂತೂ ಸ್ಪಷ್ಟವಾಗುತ್ತಿದೆ. ಈ ಚುನಾವಣೆಯ ನಂತರವೂ ರಾಜ್ಯಕ್ಕೆ ಸ್ವಚ್ಛ ಸರ್ಕಾರ ಸಿಗುವ ಯಾವ ಲಕ್ಷಣವೂ ಇಲ್ಲ. ಎಲ್ಲ ರಾಜಕೀಯ ಪಕ್ಷಕ್ಕೆ ಅಧಿಕಾರ ಹಿಡಿಯಬೇಕೆಂಬ ಉದ್ದೇಶವಿದೆಯೇ ಹೊರತು ಅದನ್ನು ಹೇಗೆ ಪಡೆಯಬೇಕೆಂಬ ವಿಷಯ ಶುದ್ಧತೆ ಇಲ್ಲ. ಇಂಥ ವಿಷಣ್ಣ ಸನ್ನಿವೇಶದಲ್ಲೇ ಚುನಾವಣಾ ಆಯೋಗದ ವಿಧಿ-ನಿಷೇಧಗಳ ಪ್ರಸ್ತುತತೆ ಮಹತ್ವದ್ದು ಎನಿಸುತ್ತಿದೆ. ವೇಳಾಪಟ್ಟಿ ಪ್ರಕಟವಾಗಿ ಮತದಾನ ಪ್ರಕ್ರಿಯೆ ಮುಕ್ತಾಯಗೊಳ್ಳುವವರೆಗಿನ ಎಲ್ಲ ಖರ್ಚುಗಳ ಮೇಲೂ ಆಯೋಗ ಹಿಡಿತ ಸಾಧಿಸಿದರೆ ಮಾತ್ರ ಕೊಳ್ಳೆ ಹೊಡೆಯುವ ಉದ್ದೇಶದಿಂದ ಚುನಾವಣಾ ಕಣಕ್ಕೆ ಇಳಿಯುವವರ ಪ್ರಮಾಣ ಕಡಿಮೆಯಾಗಬಹುದು. ಆದರೆ ಆಯೋಗಕ್ಕೆ ಈ ಅಧಿಕಾರವೇ ಇಲ್ಲ. ಆಳುವ ಹಪಾಹಪಿಕೆ ಇರುವವರು ಮುಂದೆಯೂ ಇಂಥ ಅಧಿಕಾರ ದಯಪಾಲಿಸುವುದು ಅಸಾಧ್ಯ. ಹೀಗಾಗಿ ಪ್ರತಿ ಚುನಾವಣೆ ಎದುರಾದಾಗಲೂ ಟಿಕೆಟ್ ಮಾರಾಟದ ನಾಟಕವನ್ನು ರಾಜ್ಯದ ಜನತೆ ವಿಧಿ ಇಲ್ಲದೇ ವೀಕ್ಷಿಸಲೇಬೇಕು.
ಲಗೋರಿ- ವಿರೋಧಿಯ ದೌರ್ಬಲ್ಯವನ್ನೇ ಯಾವತ್ತೂ ನೆಚ್ಚಿಕೊಂಡಿರಲಾಗದು. ಸ್ವಂತ ಸಾಮರ್ಥ್ಯವೂ ಮುಖ್ಯ.

- ಪಿ. ತ್ಯಾಗರಾಜ್
thyagarjun@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.