ಹೀಗೂ ಪ್ರತಿಕ್ರಿಯಿಸಬಹುದು
ಒತ್ತಡ ಹಾಗೂ ಸಮಸ್ಯೆಗಳ ಬಗ್ಗೆ ಒಂದು ನಿಮಿಷ ಯೋಚಿಸಿ ಸುಮ್ಮನಾಗಿ...
ಒತ್ತಡ ಹಾಗೂ ಸಮಸ್ಯೆಗಳ ಬಗ್ಗೆ ಒಂದು ನಿಮಿಷ ಯೋಚಿಸಿ ಸುಮ್ಮನಾಗಿ ಬಿಟ್ಟರೆ ಯಾವುದೇ ತೊಂದರೆಯಿಲ್ಲ. ಅಯ್ಯೋ, ಇಂಥ ಸಮಸ್ಯೆಗಳು ಜೊತೆಯಾದವಲ್ಲ ಎಂದು ಮೇಲಿಂದ ಮೇಲೆ ಯೋಚಿಸುತ್ತಾ ಕೂತರೆ, ಮನಸ್ಸು ಕೆಟ್ಟು ಹೋಗುತ್ತದೆ.
ಆ ದಂಪತಿಗಳಿಗೆ ಮದುವೆಯಾಗಿ ಹನ್ನೊಂದು ವರ್ಷಗಳ ನಂತರ ಗಂಡು ಮಗು ಜನಿಸಿತು. ಆ ಆದರ್ಶ ದಂಪತಿಗಳ ಬದುಕಿನಲ್ಲಿ ಹೊಸ ನಕ್ಷತ್ರ ಉದಯವಾಯಿತೆಂದು ಎಲ್ಲರೂ ಮಾತಾಡಿಕೊಳ್ಳುವಷ್ಟು ಅನ್ಯೋನ್ಯವಾಗಿ ಅವರ ದಾಂಪತ್ಯ ಬದುಕು ಬದಲಾಯಿತು. ಮಗುವನ್ನು ಅವರು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದರು.
ಒಂದು ದಿನ ಗಂಡ ಅವಸರವಾಗಿ ಆಫೀಸಿಗೆ ಹೊರಟಿದ್ದ. ಹೋಗುವಾಗ ಕೋಣೆಯಲ್ಲಿ ಮೆಡಿಸಿನ್ ಬಾಟಲಿಯ ಮುಚ್ಚಳ ತೆರೆದಿರುವುದನ್ನು ಗಮನಿಸಿದ. ಆ ಬಾಟಲಿಯ ಮುಚ್ಚಳ ಹಾಕಿ ಮಗುವಿನ ಕೈಗೆ ಸಿಗದಂತೆ ಅದನ್ನು ಕಪಾಟಿನಲ್ಲಿಡುವಂತೆ ಹೇಳಿ ಆಫೀಸಿಗೆ ಹೋದ. ಇತ್ತ ಹೆಂಡತಿ ಅಡುಗೆ ಮನೆಯಲ್ಲಿ ತನ್ನ ಕೆಲಸದಲ್ಲಿ ನಿರತಳಾದಳು.
ಅತ್ತ ಕೋಣೆಯಲ್ಲಿ ಮಗು ಆಕರ್ಷಕ ಬಣ್ಣದ ಮೆಡಿಸಿನ್ ಬಾಟಲಿಯನ್ನು ಕಂಡು ಅದರೊಳಗಿದ್ದ ಔಷಧವನ್ನು ಗಟಗಟನೆ ಕುಡಿದು ಬಿಟ್ಟಿತು. ಅದೇನಾಯಿತೋ ಏನೋ. ಅರ್ಧ ಗಂಟೆಯೊಳಗೆ ಮಗು ಅಸ್ವಸ್ಥವಾಯಿತು. ಆಸ್ಪತ್ರೆಯಿಂದ ವೈದ್ಯರು ಬಂದರೂ ಪ್ರಯೋಜನವಾಗಲಿಲ್ಲ. ಮಗು ಅಸು ನೀಗಿತು.
ತಾಯಿಯ ಜಂಘಾಬಲವೇ ಉಡುಗಿ ಹೋಯಿತು. ಗಂಡನನ್ನು ಎದುರಿಸುವುದು ಹೇಗೆ, ಉಸಿರಿನಂತಿದ್ದ ಒಬ್ಬ ಮಗನನ್ನು ನೋಡಿಕೊಳ್ಳದಷ್ಟು ಬೇಜವಾಬ್ದಾರಿ ಹೆಂಗಸು ಎಂದು ಗಂಡ ಕೇಳಿದರೆ ಏನು ಹೇಳುವುದು, ಪ್ರಾಣಪಕ್ಷಿಯಂತಿದ್ದ ಮಗನನ್‌ನು ಕಳೆದುಕೊಂಡು ಇನ್ನು ಬದುಕುವುದಾದರೂ ಹೇಗೆ ಎಂದು ಗಂಡ ಪ್ರಶ್ನಿಸಿದರೆ ಏನಂತ ಹೇಳಲಿ ಎಂದು ಹೆಂಡತಿ ಕಂಗೆಟ್ಟು ತಲೆ ಮೇಲೆ ಕೈ ಹೊತ್ತು ಕುಳಿತು ಬಿಟ್ಟಳು.
ವಿಷಯ ತಿಳಿದ ಗಂಡ ಏದುಸಿರು ಬಿಡುತ್ತಾ ಆಫೀಸಿನಿಂದ ಧಾವಿಸಿದ.
ಹೆಂಡತಿಗೆ ಗಂಡ ಏನೆನ್ನುತ್ತಾನೋ ಎಂಬ ಡುಕುಡುಕಿ!
ಹಾಗಾದರೆ ಗಂಡ ಏನು ಹೇಳಿರಬಹುದು?
ಮಗನ ಮೃತ ದೇಹವನ್ನು ಜಗುಲಿಯಲ್ಲಿ ಮಲಗಿಸಿದ ಹೆಂಡತಿ, ಬೆಲ್ ಆಗುತ್ತಲೇ ಧಾವಿಸಿ ಬಂದು ಬಾಗಿಲನ್ನು ತೆರೆದಳು. ಗಂಡನ ಮುಖದಲ್ಲಿ ದುಗುಡವಿತ್ತು. ಹೆಂಡತಿಯನ್ನು ಕಂಡ ಕೂಡಲೇ ಬಿಗಿದಪ್ಪಿ "ಡೋಂಟ್ ವರಿ, Iam with you darling' ಎಂದ.
ಗಂಡನಿಂದ ಇಂಥ ಪ್ರತಿಕ್ರಿಯೆ ಬರಬಹುದೆಂದು ಆಕೆ ನಿರೀಕ್ಷಿಸಿರಲಿಲ್ಲ.
ಒಂದೆಡೆ ಇದ್ದ ಒಂದೇ ಮಗ ಸತ್ತು ಮಲಗಿದ್ದಾನೆ.
ಆತ ಪುನಃ ಬದುಕಿ ಬರಲಾರ. ತನ್ನದಲ್ಲದ ತಪ್ಪಿಗೆ ಸತ್ತು ಹೋಗಿದ್ದಾನೆ. ಹಾಗಂತ ಅವನ ಸಾವಿಗೆ ಯಾರೂ ಕಾರಣ ಅಲ್ಲ. ಆಫೀಸಿಗೆ ಹೋಗುವಾಗ ಬಾಟಲಿಯ ಮುಚ್ಚಳ ತೆರೆದಿರುವುದನ್ನು ಗಂಡ ಕಂಡೂ ಅದನ್ನು ಎತ್ತಿ ಕಪಾಟಿನಲ್ಲಿ
ಇಡುವಷ್ಟು ವ್ಯವಧಾನ ಗಂಡನಿಗೆ ಇರದಿದ್ದರಿಂದಲೇ ಈ ದುರ್ಘಟನೆ ನಡೆದು ಹೋಯಿತು. ಯಾರನ್ನು ದೂರುವುದು? ದೂಷಿಸುವುದು? ಗಂಡ-ಹೆಂಡತಿಯರಿಬ್ಬರೂ ತಮ್ಮ ಒಬ್ಬನೇ ಮಗನ್ನು ಕಳೆದುಕೊಂಡಿದ್ದಾರೆ.
ಇಂಥ ಸಂದರ್ಭದಲ್ಲಿ ಹೆಂಡತಿಗೆ ಬೇಕಾಗಿದ್ದುದು ಸಾಂತ್ವನ.
ಒಂದು ದುರ್ಘಟನೆಯನ್ನು ಹೀಗೂ ಸ್ವೀಕರಿಸಬಹುದು.
ಸಮಸ್ಯೆ ಎಂಬ ಲೋಟ ಎತ್ತಿ ಪಕ್ಕಕ್ಕಿಡಿ...
ಆ ಸಭೆಗೆ ಬಂದಿದ್ದವರೆಲ್ಲ ವಿಐಪಿಗಳೇ. ಒಬ್ಬೊಬ್ಬರಿಗೆ ಒಂದೊಂದು ರೀತಿಯ ಒತ್ತಡವಿತ್ತು. ಮನಶ್ಶಾಂತಿ ಎಂಬುದೇ ಆ ವಿಐಪಿಗಳಿಗೆ ಸಿಕ್ಕಿರಲಿಲ್ಲ. ಇಂಥ ಸಂದರ್ಭದಲ್ಲಿ, ಅವರಿಗೆ ಆತ್ಮವಿಶ್ವಾಸ ತುಂಬುವ ಆಶಯದಿಂದ, ಒತ್ತಡದ ಸಂದರ್ಭದಲ್ಲಿ ಶಾಂತಿಯಿಂದ ಉಳಿಯುವುದು ಹೇಗೆ ಎಂಬುದನ್ನು ವಿವರಿಸಲು ಒಂದು ಗೋಷ್ಠಿಯೇ ಏರ್ಪಾಡಾಗಿತ್ತು. ಮುಖ್ಯ ಭಾಷಣಕಾರರಾಗಿದ್ದ ಮನಶ್ಯಾಸ್ತಜ್ಞೆ ಮೊದಲಿಗೆ ಪ್ರಾಸಂಗಿಕವಾಗಿ ನಾಲ್ಕು ಮಾತು ಹೇಳಿದ ಬಳಿಕ, ಟೇಬಲ್‌ನ ಮೇಲಿದ್ದ ನೀರಿನ ಗ್ಲಾಸ್ ಎತ್ತಿ ಅದನ್ನು ಎದುರಿಗಿದ್ದವರಿಗೆ ತೋರಿಸಿದರು. 'ಈ ಲೋಟದಲ್ಲಿ ನೀರಿನ ಪ್ರಮಾಣ ಎಷ್ಟಿದೆ ಎಂದು ಹೇಳಬಲ್ಲಿರಾ? ಇದು ಅರ್ಧ ತುಂಬಿರುವ ಲೋಟವೋ ಅಥವಾ ಪೂರ್ತಿ ತುಂಬಿದೆಯೋ ಎಂದು ಈಕೆ ಕೇಳಬಹುದು ಎಂದೇ ಎಲ್ಲರೂ ಅಂದಾಜು ಮಾಡಿಕೊಂಡರು. ಪ್ರೇಕ್ಷಕರ ಕಣ್ಣು ಮತ್ತು ಮುಖಭಾವದ ಕದಲಿಕೆಯಿಂದಲೇ ಅವರ ಮನದಲ್ಲಿ ಇರಬಹುದಾದ ಪ್ರಶ್ನೆಯನ್ನು ಗ್ರಹಿಸಿದ ಮನಶ್ಯಾಸ್ತಜ್ಞೆ ಒಮ್ಮೆ ಮೆಲುವಾಗಿ ನಕ್ಕು ಕೇಳಿದರು: ಈ ಲೋಟದ ತೂಕ ಎಷ್ಟಿರಬಹುದು?
100 ಗ್ರಾಂ, 200 ಗ್ರಾಂ, 250 ಗ್ರಾಂ, 285 ಗ್ರಾಂ...ಹೀಗೆ, ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಉತ್ತರ ಹೇಳಿದರು.
ಅದಕ್ಕೆ ಪ್ರತಿಯಾಗಿ ಆ ಮನಶಾಸ್ತ್ರಜ್ಞೆ ಹೇಳಿದಳು: ಒಂದು ವಿಷಯ ತಿಳಿದುಕೊಳ್ಳಿ. ಈ ಲೋಟದ ತೂಕ ಎಷ್ಟಿದೆ ಎಂಬುದು, ನಾನು ಎಷ್ಟು ಹೊತ್ತಿನವರೆಗೂ ಅದನ್ನೂ ಹಿಡಿದುಕೊಂಡಿರ್ತೇನೆ ಎಂಬುದರ ಮೇಲೆ ನಿರ್ಧಾರವಾಗುತ್ತೆ. ಕೇವಲ ಒಂದು ನಿಮಿಷದ ಅವಧಿಯವರೆಗೆ ಮಾತ್ರ ನಾನು ಇದನ್ನು ಹಿಡಿದುಕೊಂಡರೆ ಅದರಿಂದ ನನಗೆ ಏನೂ ಸಮಸ್ಯೆ ಆಗುವುದಿಲ್ಲ. ಆದರೆ ಒಂದು ಗಂಟೆಯ ಸುದೀರ್ಘ ಅವಧಿಯವರೆಗೂ ನಾನು ಲೋಟವನ್ನು ಹಿಡಿದುಕೊಂಡು ನಿಂತರೆ, ನನ್ನ ಕೈಮರಗಟ್ಟಿ ಹೋಗಬಹುದು. ಅಥವಾ ಜೋಮು ಹಿಡಿಯಬಹುದು. ನಾನು ಹಿಡಿದುಕೊಳ್ಳುವ ಅವಧಿ ಒಂದು ನಿಮಿಷ ಆಗಿರಬಹುದು; ಅಥವಾ ಒಂದು ಗಂಟೆ ಆಗಿರಬಹುದು; ಅಥವಾ ಒಂದು ಗಂಟೆ ಆಗಿರಬಹುದು- ಈ ಎರಡೂ ಸಂದರ್ಭದಲ್ಲಿ ಲೋಟದ ತೂಕದಲ್ಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ ನಿಜ. ಆದರೆ, ಲೋಟವನ್ನು ಜಾಸ್ತಿಹೊತ್ತು ಹಿಡಿದುಕೊಂಡಿದ್ದರೆ ಅದು ವಿಪರೀತ ಭಾರವಿದೆ ಎಂಬಂತೆ ಭಾಸವಾಗುತ್ತದೆ.
ಪ್ರೇಕ್ಷಕರ ಸಾಲಿನಲ್ಲಿದ್ದವರೆಲ್ಲ ಆಕೆಯ ಮಾತುಗಳಿಗೆ ಹೌದು ಹೌದು ಎಂದರು. ಆಕೆ ಮತ್ತೊಮ್ಮೆ ಮೆಲುವಾಗಿ ನಕ್ಕು ಹೀಗೆಂದಳು: ಪ್ರತಿಯೊಬ್ಬರ ಜೀವನದಲ್ಲಿಯೂ ಮೇಲಿಂದ ಮೇಲೆ ಬರುವ ಒತ್ತಡಗಳು ಹಾಗೂ ಸಮಸ್ಯೆಗಳು ಒಂದರ್ಥದಲ್ಲಿ ಈ ನೀರಿನ ಗ್ಲಾಸ್ ಇದ್ದಂತೆ. ಒತ್ತಡ ಹಾಗೂ ಸಮಸ್ಯೆಗಳ ಬಗ್ಗೆ ಒಂದು ನಿಮಿಷ ಯೋಚಿಸಿ ಸುಮ್ಮನಾಗಿ ಬಿಟ್ಟರೆ ಯಾವುದೇ ರೀತಿಯಲ್ಲೂ ತೊಂದರೆಯಿಲ್ಲ. ಅದರ ಬದಲು- ಅಯ್ಯೋ, ಇಂಥ ಸಮಸ್ಯೆಗಳು ಜೊತೆಯಾದವಲ್ಲ ಎಂದು ಮೇಲಿಂದ ಮೇಲೆ ಯೋಚಿಸುತ್ತಾ ಕೂತರೆ, ಮನಸ್ಸು ಕೆಟ್ಟು ಹೋಗುತ್ತದೆ. ಒಂದೊಮ್ಮೆ, ಈ ಸಮಸ್ಯೆಗಳ ಬಗ್ಗೆ ಯೋಚಿಸುತ್ತಲೇ ಇಡೀ ದಿನವನ್ನು ಕಳೆದು ಬಿಟ್ಟರೆ, ಮನಸ್ಸಿನ ನೆಮ್ಮದಿಯೇ ಹಾಳಾಗಿ ಎಲ್ಲ ಕೆಲಸದಲ್ಲೂ ನಿರುತ್ಸಾಹ ಜೊತೆಯಾಗುತ್ತದೆ. ಅಭದ್ರತಾ ಭಾವ ಬಿಟ್ಟೂ ಬಿಡದೆ ಕಾಡುತ್ತದೆ.
ಹಾಗಾಗಿ, ಯಾವತ್ತೂ ಸಮಸ್ಯೆಯೊಂದು ಎದುರಾದಾಗ ಅಯ್ಯೋ, ಇಲ್ಲಿಗೆ ಬದುಕೇ ಮುಗಿದು ಹೋಯ್ತು ಎಂದು ಕಂಗಾಲಾಗಬೇಡಿ. ಸಮಸ್ಯೆ ಎಂಬ ಲೋಟವನ್ನು ಎತ್ತಿ ಪಕ್ಕಕ್ಕಿಡಿ. ಹೊಸ ಸಾಹಸಕ್ಕೆ ಬದುಕನ್ನು ಮುಡಿಪಾಗಿಡಿ...
ಮನಶಾಸ್ತ್ರಜ್ಞೆಯ ಈ ಮಾತುಗಳು ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರಿಗೆ ಮಾತ್ರವಲ್ಲ, ನಮಗೆಲ್ಲರಿಗೂ ಅನ್ವಯವಾಗುತ್ತದೆ.
ಕೃತಜ್ಞತೆ ಇರಲಿ, ಕೃತಘ್ನತೆ ಬೇಡ
ಒಮ್ಮೆ ಸುಡು ಬಿಸಿಲಿನಲ್ಲಿ ಗೆಳೆಯರಿಬ್ಬರು ನಡೆದುಕೊಂಡು ಹೊರಟಿದ್ದರು. ಮಧ್ಯಾಹ್ನವಾಗುತ್ತಿದ್ದಂತೆ ಬಿಸಿಲಿನ ತೀವ್ರತೆ ಇನ್ನೂ ಹೆಚ್ಚಾಯಿತು. ಇನ್ನು ಮುಂದೆ ನಡೆಯುವುದು ಸಾಧ್ಯವಿಲ್ಲ ಎಂದರಿತ ಅವರು ಎದುರಿಗಿದ್ದ ಮರವೊಂದರ ಅಡಿಯಲ್ಲಿ ಕುಳಿತರು.
ಮರವನ್ನೇ ದಿಟ್ಟಿಸುತ್ತಾ ಮೊದಲನೆಯವ ಹೇಳಿದ, 'ಇದೆಂಥಾ ಮರ ಮಾರಾಯ? ತಿನ್ನೋಣವೆಂದರೆ ಒಂದು ಹಣ್ಣಿಲ್ಲ, ಕಣ್ಣಿಗೆ ಮುದ ನೀಡಲು ಒಂದು ಹೂ ಇಲ್ಲ!'
ಅವರ ಮಾತನ್ನು ಕೇಳಿಸಿಕೊಂಡ ಮರ ಉತ್ತರಿಸಿತು-'ಅಷ್ಟೊಂದು ಕೃತಘ್ನರಾಗಬೇಡಿ. ಈ ಸಮಯದಲ್ಲಿ ನಾನು ನಿಮಗೆ ಹೆಚ್ಚು ಉಪಕಾರ ಮಾಡುತ್ತಿದ್ದೇನೆ. ನಾನು ಬಿಸಿಲಲ್ಲಿ ಬೇಯುತ್ತಾ, ನಿಮಗೆ ನೆರಳು ನೀಡುತ್ತಿರುವುದು ತಿಳಿಯುತ್ತಿಲ್ಲವೇ?!'
ನೀತಿ: ಭಗವಂತನ ಪ್ರತಿಯೊಂದು ಸೃಷ್ಟಿಗೂ ಒಂದು ಅರ್ಥವಿರುತ್ತದೆ, ಒಂದು ಉದ್ದೇಶವಿರುತ್ತದೆ. ಆ ಕಾರಣಕ್ಕಾಗಿ ನಾವು ಆತನಿಗೆ ಕೃತಜ್ಞತೆ ಸಲ್ಲಿಸಬೇಕು. ಕೃತಘ್ನರಾಗಬಾರದು.
ಟ್ವಿಭಾಷಿತ
ಬಿಎಸ್‌ಎನ್‌ಎಲ್‌ನ ನೆಟ್‌ವರ್ಕ್, ಏರ್‌ಟೆಲ್‌ನ ಬ್ಯಾಲೆನ್ಸ್, ಫೇಸ್‌ಬುಕ್‌ನಲ್ಲಿ ಸಿಕ್ಕ ಹುಡುಗಿ.... ಗಾಯಬ್ ಆಗುವುದು ಯಾರಿಗೂ ತಿಳಿಯುವುದಿಲ್ಲ! - ಮನೋಜ್
- ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

