ಉದ್ದಕ್ಕೆ ಕೊಯ್ದರೆ ಶಂಖ ಅಡ್ಡಡ್ಡ ಕೊಯ್ದರೆ ಚಕ್ರ!
ಎಲ್ಲ ಮಕ್ಕಳಿಗೂ ಬೇಸಿಗೆ ರಜೆ ಶುರುವಾಗಿದೆ. ಹತ್ತು ವರ್ಷಗಳ ಹಿಂದೆಯೂ ಈಗಿನಂತೆಯೇ ಸಮ್ಮರ್ ಕ್ಯಾಂಪ್‌ಗಳು ನಡೆಯುತ್ತಿದ್ದವು. ಅವತ್ತಿನ ಸಂದರ್ಭದಲ್ಲಿ ಸಮ್ಮರ್ ಕ್ಯಾಂಪ್‌ಗೆ ಹೋಗುವುದು ಪ್ರತಿಷ್ಠೆಯ ವಿಷಯವಾಗಿರಲಿಲ್ಲ. ಫ್ಯಾಷನ್ ಕೂಡಾ ಆಗಿರಲಿಲ್ಲ. ಬದಲಿಗೆ, ಶಿಕ್ಷೆಯಂತೆ ಭಾಸವಾಗುತ್ತಿತ್ತು. ಪರೀಕ್ಷೆ ಮುಗಿದದ್ದೇ ತಡ; ಎಲ್ಲರೂ ಅಜ್ಜಿ ಊರಿಗೆ ಹೊರಟು ನಿಲ್ಲುತ್ತಿದ್ದರು.
ಅಜ್ಜಿ ಊರಿಗೆ ಹೋದ ಮೇಲೆ ಯಾವುದಕ್ಕೂ ಅಡ್ಡಿ ಇರುತ್ತಿರಲಿಲ್ಲ. ಬೆಳಗಿಂದ ಸಂಜೆಯವರೆಗೂ ಆಟ, ಆಟ, ಆಟ. ಆಗೊಮ್ಮೆ ಈಗೊಮ್ಮೆ ಅಜ್ಜಿ-'ಬೆಳಗಿನಿಂದ ಕುಣೀತಾನೆ ಇದ್ದೀರಾ? ಹೋಗಿ ರೆಸ್ಟ್ ತಗೊಳ್ಳಿ ಎಂದು ರೇಗಿದರೆ, ಅಜ್ಜ ತಕ್ಷಣವೇ ಮಕ್ಕಳ ಬೆಂಬಲಕ್ಕೆ ಬರುತ್ತಿದ್ದ. ಆಗೆಲ್ಲ ಮಕ್ಕಳಿಗೆ ಖುಷಿಯಾಗುತ್ತಿತ್ತು. ಇನ್ನು, ರಾತ್ರಿಯ ಹೊತ್ತಿನ ಮಜವೇ ಬೇರೆ. ಆಗ ಅಜ್ಜಿ ದಿನಕ್ಕೆ ಒಂದು ಕಥೆ ಹೇಳುತ್ತಿದ್ದಳು. ಹಾಗೆ ಕೇಳಿಸಿಕೊಂಡ ಒಂದು ಕಥೆ ಇದು:
ಒಂದ್ಸಲ ಏನಾಯ್ತಪ್ಪ ಅಂದ್ರೆ ರೈತರು ಗಾಡಿಗಳ ತುಂಬಾ ತರಕಾರಿ ತಗೊಂಡು ಸಂತೆಗೆ ಹೋಗ್ತಾ ಇದ್ರಂತೆ. ಅದೇ ಸಮಯಕ್ಕೆ ಒಬ್ಬ ರೈತ ಬುಟ್ಟಿಯ ತುಂಬಾ ಹಣ್ಣು ತುಂಬಿಕೊಂಡು ಹೊರಟಿದ್ದನಂತೆ. ಆಗ ಸಹಜವಾಗಿಯೇ ಎಂಥಾ ಹಣ್ಣು ಸ್ವಾಮೀ ಬುಟ್ಟೀಲಿರೋದು ಎಂದು ಕೇಳಿದ್ದಾರೆ. ಆತ- 'ಹಣ್ಣುಗಳ ರಾಜ ಮಾವು' ಎಂದು ಉತ್ತರಿಸಿದ್ದಾನೆ. ಈ ಮಾತು ಗಾಡಿಯ ಒಳಗಿದ್ದ ಎಲ್ಲ ತರಕಾರಿಗಳಿಗೂ ಕೇಳಿಸಿದೆ. ಸಂತೆಯಲ್ಲಿ ಈ ಮನುಷ್ಯರು ಮೈದಾನದಲ್ಲಿ ಮೈಮರೆತಾಗ ಈ ತರಕಾರಿಗಳು ಮಾತಾಡಿಕೊಂಡವಂತೆ: 'ಮರಗಳಿಗೂ ಒಬ್ಬ ರಾಜನುಂಟು. ಪ್ರಾಣಿಗಳೂ ಸಿಂಹವನ್ನು ರಾಜನೆಂದು ಒಪ್ಪಿಕೊಂಡಿವೆ. ಮನುಷ್ಯರ ಮಧ್ಯೆಯೂ ಒಬ್ಬ ರಾಜ ಇದ್ದಾನೆ. ದೇವತೆಗಳಿಗೂ ರಾಜ ಇದ್ದಾನೆ. ಆದರೆ, ತರಕಾರಿಗಳ ರಾಜ ಇಲ್ಲ! ಈ ಸಂಬಂಧವಾಗಿ ದೇವರ ಬಳಿ ಹೋಗಿ ನ್ಯಾಯ ಕೇಳೋಣ...'
ಒಂದು ನಿಗದಿತ ಮುಹೂರ್ತದಲ್ಲಿ ಎಲ್ಲ ತರಕಾರಿಗಳೂ ದೇವರಲ್ಲಿ ನ್ಯಾಯ ಕೇಳುವ ಉದ್ದೇಶದಿಂದ ತಿರುಪತಿಗೆ ಕಾಲ್ನಡಿಗೆಯಲ್ಲಿ ಹೊರಟವಂತೆ. ದಾರಿಯಲ್ಲಿ ದಿಢೀರನೆ ಎದುರಾದ ನಾರದ ಮುನಿಗಳು, ಹೋಗಿ ಹೋಗಿ. ದೇವರನ್ನು ಕಾಣುವ ಮೊದಲು ನಿಮ್ಮ ವೈಶಿಷ್ಟ್ಯಗಳು ಏನು ಎಂಬುದನ್ನು ವಿವರಿಸುತ್ತಲೇ ಬೆಟ್ಟ ಹತ್ತಿ. ನಿಮ್ಮ ಎಲ್ಲ ಮಾತುಗಳನ್ನೂ ಭಗವಂತ ಕೇಳಿಸಿಕೊಳ್ತಾನೆ. ನೀವು ಹೇಳಿಕೊಳ್ಳುವ ಪರಿಚಯದ ಕಾರಣದಿಂದಲೇ ನಿಮಗೆ ರಾಜನ ಪಟ್ಟ ಸಿಗಬಹುದು ಎಂದರಂತೆ.
ಮೊದಲ ಮೆಟ್ಟಿಲು ಹತ್ತುತ್ತಿದ್ದಂತೆಯೇ ಪಡುವಲಕಾಯಿ ಶುರು ಮಾಡಿತು: ನಾನು ಉದ್ದಕ್ಕಿದ್ದೀನಿ. ಹಸಿರು ಬಣ್ಣದಿಂದ ಕಂಗೊಳಿಸ್ತೀನಿ. ಹಾಗಾಗಿ ರಾಜನಾಗಲು ನಾನೇ ಅರ್ಹ. ಮುಂದಿನ ಎರಡು ಮೆಟ್ಟಿಲು ಹತ್ತುತ್ತಿದ್ದಂತೆಯೇ ಅದು ಆಯಾಸದಿಂದ ಕುಸಿದು ಬಿತ್ತು. ನಂತರದ ಸರದಿ ಮೂಲಂಗಿಯದು: ನಾನು ಬೆಳ್ಳಗಿದೀನಿ. ಹಸಿರಿನ ಎಲೆ ಹೊಂದಿದೀನಿ. ಎಂಥ ಭೂಮಿಯಲ್ಲಾದ್ರೂ ಬೆಳೆಯಬಲ್ಲೆ. ತರಕಾರಿಗಳ ರಾಜನಾಗಲು ಇಷ್ಟೇ ಅರ್ಹತೆ ಸಾಕು...' ನಂತರದ ಮೂರು ಮೆಟ್ಟಿಲು ಹತ್ತುತ್ತಿದ್ದಂತೆಯೇ, ತಲೆ ಸುತ್ತಿ ಬಂದಂತಾಗಿ ಅದೂ ಕುಸಿದು ಬಿತ್ತು. ಮುಂದಿನ ಸರದಿಯಲ್ಲಿ ಕುಂಬಳಕಾಯಿ, ನುಗ್ಗೇಕಾಯಿ, ಕ್ಯಾರೆಟ್‌ಗಳು ತಮ್ಮ ಪ್ರತಾಪ ಕೊಚ್ಚಿಕೊಂಡವು. ನನ್ನ ಬಣ್ಣ ಕೆಂಪು, ನನ್ನಲ್ಲಿ ಪುಷ್ಟಿದಾಯಕ ವಿಟಮಿನ್‌ಗಳಿವೆ ಎಂದು ಹೇಳಿಕೊಂಡವು. ಹೀಗೆ ಬೊಂಬಡಾ ಬಜಾಯಿಸಿದ ಸ್ವಲ್ಪ ಹೊತ್ತಿಗೆ ಯಾಕೋ ಸುಸ್ತಾಗುತ್ತಿದೆ ಎನ್ನುತ್ತಾ ಒಂದೊಂದು ಮೆಟ್ಟಿಲ ಮೇಲೆ ಮಲಗಿ ಬಿಟ್ಟವು.
ಗುಂಪಲ್ಲಿದ್ದ ಸದಸ್ಯರ ಸಂಖ್ಯೆ ಕಡಿಮೆಯಾದಂತೆಲ್ಲ ರಾಜನಾಗುವ ಅವಕಾಶ ನನ್ನದೇ ಎಂಬ ಆಸೆ ಎಲ್ಲ ತರಕಾರಿಗಳ ಮನಸ್ಸನ್ನೂ ಹೊಕ್ಕುತ್ತಿತ್ತು. ಹೀಗೆ ಸರದಿ ಮುಂದುವರಿದಾಗ, ಬೀಟ್‌ರೂಟ್, ಬೆಂಡೇಕಾಯಿ, ಟೊಮೋಟೋ, ಈರೇಕಾಯಿ ಹಾಗೂ ಹಾಗಲಕಾಯಿಗಳು ತಮ್ಮ ಸ್ಪೆಷಾಲಿಟಿ ಕುರಿತು ಹೇಳಿಕೊಂಡವು. ಟೊಮ್ಯಾಟೋ ಅಂತೂ ಒಂದು ಹೆಜ್ಜೆ ಮುಂದೆ ಹೋಗಿ, ನಾನು ಯಾವ ಸುಂದರನಿಗೂ ಕಮ್ಮಿಯಿಲ್ಲ ಎನ್ನುವಷ್ಟು ಚೆನ್ನಾಗಿದೀನಿ. ತರಕಾರಿಗಳ ರಾಜನಾಗುವ ಯೋಗ್ಯತೆ ಖಂಡಿತ ನನಗಿದೆ ಎಂದಿತು. ಉಳಿದ ತರಕಾರಿಗಳೂ ಹೀಗೆಯೇ ಕೊಚ್ಚಿಕೊಂಡು ಕುಸಿದು ಬಿದ್ದವು.
ಈ ಯಾತ್ರೆಯುದ್ದಕ್ಕೂ ತುಟಿಪಿಟಿಕ್ ಎನ್ನದೆ ನಡೆಯುತ್ತಿದ್ದವೆಂದರೆ ಈರುಳ್ಳಿ ಮತ್ತು ಬೆಳ್ಳುಳ್ಳಿ. ದೇವರ ಸನ್ನಿಧಿ ತಲುಪಲು ಹತ್ತು ಮೆಟ್ಟಿಲು ಬಾಕಿಯಿದೆ ಎನ್ನುವಾಗ-ಅಯ್ಯೋ ಬಿಡಪ್ಪ, ನನ್ನ ಮುಂದೆ ನೀನ್ಯಾವ ಲೆಕ್ಕ? ತರಕಾರಿಯ ರಾಜನಾಗುವ ಯೋಗ್ಯತೆ ಇರೋದು ನನಗೆ ಮಾತ್ರ ಎಂದಿತಂತೆ ಬೆಳ್ಳುಳ್ಳಿ. ನಂತರ ಅವಸರದಿಂದಲೇ ಐದು ಮೆಟ್ಟಿಲು ಹತ್ತಿ, ಅಯ್ಯೋ ಎದೆ ನೋವು ಎನ್ನುತ್ತಾ ಕುಸಿದು ಬಿತ್ತು. ಮುಂದಿನ ಐದೇ ನಿಮಿಷದಲ್ಲಿ ನಡುಗುತ್ತಾ ನಿಂತಿದ್ದ ಈರುಳ್ಳಿಯ ಮುಂದೆ ಭಗವಂತನಿದ್ದ. ಆತ, ಈರುಳ್ಳಿಯ ತಲೆ ನೇವರಿಸಿ ಕೇಳಿದ: ಇಷ್ಟು ದೂರ ಬಂದಿದ್ದೇಕೆ? ನಿನಗೆ ಯಾವ ವರ ಬೇಕು?
ದೇವರನ್ನು ನೋಡುತ್ತಿದ್ದಂತೆಯೇ ಈರುಳ್ಳಿಗೆ ತಮ್ಮ ಉದ್ದೇಶವೇ ಮರೆತುಹೋಯ್ತು. ಅದು ಆರ್ಧ್ರ ಸ್ವರದಲ್ಲಿ -ನನಗೇನೂ ಬೇಡ. ನನ್ನ ಗೆಳೆಯರನ್ನೆಲ್ಲಾ ಬದುಕಿಸಿಕೊಡು. ನಾನು ಕೇಳುವ ವರ ಅದೊಂದೇ ಎಂದಿತು. ಆಗ ದೇವರು ತಥಾಸ್ತು ಎಂದದ್ದಲ್ಲದೆ, ಮುಂದುವರಿದು ಹೇಳಿದನಂತೆ: 'ಇವತ್ತಿನಿಂದ ನೀನೇ ತರಕಾರಿಗಳ ರಾಜ. ನೀನಿಲ್ಲದೆ ಯಾವ ಅಡುಗೆಯೂ ಪರಿಪೂರ್ಣ ಅನ್ನಿಸದಿರಲಿ. ನಿನ್ನನ್ನು ಅಡ್ಡಡ್ಡ ಕತ್ತರಿಸಿದರೆ ಚಕ್ರವೂ, ಉದ್ದಕ್ಕೆ ಕತ್ತರಿಸಿದರೆ ಶಂಖವೂ ಕಾಣಲಿ. ನಿನ್ನನ್ನು ಕತ್ತರಿಸಿದವರ ಕಣ್ಣಲ್ಲಿ ನೀರು ಬರಲಿ...'
----
ಹತ್ತು ವರ್ಷದ ಹಿಂದೆ ಅಜ್ಜಿ ಹೇಳಿದ್ದ ಕತೆಯನ್ನೇ ಮೊನ್ನೆ ನಾನೂ ನಮ್ಮ ಪಿ.ಜಿ.ಯ ಪಕ್ಕದ ಮನೆಯ ಬಾಲೆಗೆ ಹೇಳಿದ್ದೆ. ಆಕೆ ಸರಸರನೆ ಮನೆಗೆ ಹೋಗಿ ಎರಡು ಈರುಳ್ಳಿಯನ್ನು ಕತ್ತರಿಸಿ ಕೇಕೆ ಹಾಕುತ್ತಾ ಓಡಿ ಬಂದು ಹೇಳಿದಳು: ಅಕ್ಕಾ, ನೀನು ಹೇಳಿದಂತೆಯೇ ಇದೆ. ಈರುಳ್ಳೀನ ಅಡ್ಡಡ್ಡ ಕತ್ತರಿಸಿದರೆ ಚಕ್ರ, ಉದ್ದಕ್ಕೆ ಕತ್ತರಿಸಿದ್ರೆ ಶಂಖ ಕಾಣುತ್ತೆ...ಈರುಳ್ಳೀನ ಕತ್ತರಿಸಿದ ತಕ್ಷಣ ಕಣ್ಣೀರು ಬರುತ್ತೆ! ಬೇಕಾದ್ರೆ ನೀನೂ ಟೆಸ್ಟ್ ಮಾಡಿ ನೋಡು...
ಹತ್ತು ವರ್ಷದ ಹಿಂದೆ ನಾನೂ ಅವಳಂತೆಯೇ ಆಡಿದ್ದೆ...
- ನಾನು ಪ್ರಣತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

