ಅಂಕಣಗಳು

ರಾಹುಲ್ ಗಾಂಧಿ ಮಾದರಿ ಅಂದರೆ ಇದೇನಾ?

Published On :

ಸದ್ಯದ ಸ್ಫೋಟಕ ಸುದ್ದಿಯೆಂದರೆ ರಾಜ್ಯದ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ರಾಹುಲ್ ಗಾಂಧಿ ಸಕ್ರಿಯ ಪಾತ್ರವನ್ನೇ ವಹಿಸಿಲ್ಲ!
ಕಾಂಗ್ರೆಸ್‌ಗೆ ರಾಹುಲು ಗಾಂಧಿ ಬೇಕು. ಅವರನ್ನು ನಾಯಕ ಎಂದು ಬಿಂಬಿಸಿ ಬೇಳೆ ಬೇಯಿಸಿಕೊಳ್ಳುವವರಿಗೆ ಅವರೊಬ್ಬ ನಾಯಕ ಎಂದು ಬಿಂಬಿಸಿಕೊಳ್ಳುವ ಅನಿವಾರ್ಯತೆ ಇದೆ. ಆದರೆ ಖುದ್ದು ರಾಹುಲ್ ಗಾಂಧಿಗೆ ಇದ್ಯಾವುದರಲ್ಲೂ ಆಸಕ್ತಿಯಿಲ್ಲ!
ರಾಜ್ಯದ ವಿಧಾನಸಭೆ ಚುನಾವಣೆಗೆ ರಾಹುಲ್ ಗಾಂಧಿಯನ್ನೇ ಪ್ರಮುಖವಾಗಿ ಬಿಂಬಿಸಲು ಕಾಂಗ್ರೆಸ್ ನಿರ್ಧರಿಸಿದೆ. ಅದಕ್ಕಾಗಿ ರಾಹುಲ್ ಗಾಂಧಿಯ 12 ಕಾರ್ಯಕ್ರಮಗಳನ್ನು ಚುನಾವಣೆ ಪ್ರಚಾರ ಸಂದರ್ಭದಲ್ಲಿ ಆಯೋಜಿಸಲು ನಿರ್ಧರಿಸಿದೆ. ಬೇರೆ ಯಾವ ನಾಯಕರದ್ದೂ ಇಷ್ಟು ಕಾರ್ಯಕ್ರಮ ಇರುವುದಿಲ್ಲ. ಅಲ್ಲಿಗೆ ಅವರೇ ಸ್ಟಾರ್ ಕ್ಯಾಂಪೇನರ್.
ಈ ಹಿಂದೆ ಉತ್ತರಪ್ರದೇಶದಲ್ಲಿ ರಾಹುಲ್ ಗಾಂಧಿಯನ್ನು ಬಿಂಬಿಸಲಾಗಿತ್ತು. ಅವರೇ ಚುನಾವಣೆಯ ನೇತೃತ್ವವನ್ನೂ ಹೊಂದಿದ್ದರು. ಅಲ್ಲಿ ಸೋತಿತು. ರಾಹುಲ್ ಗಾಂಧಿ ನೇತೃತ್ವ ವಹಿಸಿ ಗೆದ್ದ ಚುನಾವಣೆಗಳಿಲ್ಲ. ಆದರೆ ಈ ಕಳಂಕ ನಿವಾರಿಸಲು ರಾಜ್ಯದ ಚುನಾವಣೆ ಅವರಿಗೆ ಉತ್ತಮ ಅವಕಾಶವಾಗಿ ಲಭಿಸಿದೆ. ಇಲ್ಲಿ ಬಿಜೆಪಿ ವಿರೋಧಿ ಅಲೆಯಿದೆ. ಅದರ ಪರಿಣಾಮವಾಗಿ ಕಾಂಗ್ರೆಸ್ ಪರ ಅಲೆ ಸೃಷ್ಟಿಯಾಗಿದೆ. ಆದ್ದರಿಂದ ಅವರನ್ನು ಸ್ಟಾರ್ ಕ್ಯಾಂಪೇನರ್ ಎಂದು ತೋರಿಸಿ, ಅವರಿಂದಲೇ ಗೆಲುವು ದೊರೆಯಿತು ಎಂದು ಬಿಂಬಿಸಲು ಕಾಂಗ್ರೆಸ್ ಪಾಳಯ ಸಿದ್ಧವಾಗಿದೆ.
ಆದರೆ ಅಭ್ಯರ್ಥಿಗಳ ಆಯ್ಕೆಯಲ್ಲಿ ರಾಹುಲ್ ಗಾಂಧಿ ಸಕ್ರಿಯರಾಗಿ ಪಾಲ್ಗೊಂಡೇ ಇಲ್ಲ. ಅಭ್ಯರ್ಥಿಗಳ ಆಯ್ಕೆಗಾಗಿ ನಡೆದ ಒಂದು ಸಭೆಯಲ್ಲೂ ರಾಹುಲ್ ಗಾಂಧಿ ಭಾಗವಹಿಸಿಲ್ಲ. ರಾಹುಲ್ ಗಾಂಧಿಯ ಪ್ರತಿನಿಧಿಯಾಗಿ ಒಬ್ಬರು ಸಮಿತಿಯಲ್ಲಿದ್ದರೇ ಹೊರತು ಒಂದೇ ಒಂದು ಸಭೆಗೂ ರಾಹುಲ್ ಗಾಂಧಿ ಹಾಜರಾಗಿಲ್ಲ. ಅಲ್ಲಿಗೆ ಅವರಿಗಿರುವ ಆಸಕ್ತಿ ಎಷ್ಟು ಎಂಬುದು ಸಾಬೀತಾದಂತಾಯಿತು. ಗುರುವಾರ ದಿಲ್ಲಿಯಲ್ಲಿ ಸಿಐಐ ಕಾರ್ಯಕ್ರಮದಲ್ಲಿ ಉದ್ಯಮಿಗಳನ್ನು ಉದ್ದೇಶಿಸಿ ಭಾಷಣ ಮಾಡಿದ ಅವರು 'ನಾನು ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದೆ' ಎಂದು ಹೇಳಿದ್ದಾರೆ. ಅಂದರೆ ಅವರೇ ನನಗೆ ರಾಜಕೀಯದಲ್ಲಿ ಆಸಕ್ತಿಯಿಲ್ಲ ಎಂದು ಹೇಳಿದಂತಾಗಿದೆ. ಅಭ್ಯರ್ಥಿಗಳ ಬಗ್ಗೆ, ಅವರ ಗುಣಮಟ್ಟದ ಬಗ್ಗೆ, ಯುವಕರಿಗೆ ಅವಕಾಶ ನೀಡುವ ಬಗ್ಗೆ ಮಾತನಾಡುವವರು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸದೇ ಇದ್ದರೆ ಅಂತಹ ಜನರಿಗೆ ಟಿಕೆಟ್ ಸಿಗುವುದಾದರೂ ಹೇಗೆ?
ರಾಹುಲ್ ಗಾಂಧಿ ಸಾಕಷ್ಟು ಸಂದರ್ಭದಲ್ಲಿ ನಾಯಕರ ಮಕ್ಕಳಿಗೆ, ಸಂಬಂಧಿಕರಿಗೆ ಟಿಕೆಟ್ ನೀಡುವ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರಜಾಪ್ರಭುತ್ವ ಇರಬೇಕು ಎಂಬ ಕಾರಣಕ್ಕೆ ಯುವ ಕಾಂಗ್ರೆಸ್‌ನಲ್ಲಿ ಚುನಾವಣೆಯನ್ನೂ ನಡೆಸಿದರು. ಈವರೆಗೆ ರಾಹುಲ್ ಗಾಂಧಿ ಇದರಲ್ಲಿ ಯಶಸ್ವಿಯಾಗಿಲ್ಲ.
ರಾಜ್ಯದ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಯನ್ನೇ ನೋಡಿ. ಆರಂಭದಲ್ಲಿ ಕೇಂದ್ರ ಸಚಿವರ ಮಕ್ಕಳಿಗೆ ಟಿಕೆಟ್ ನೀಡಬಾರದು ಎಂದು ತೀರ್ಮಾನಿಸಲಾಗಿತ್ತು. ಆದರೆ ಈಗ ಅಂತಿಮ ಹಂತದಲ್ಲಿ ಇದನ್ನು ಮರುಪರಿಶೀಲಿಸಲು ತೀರ್ಮಾನಿಸಲಾಗಿದೆ. ಇದಕ್ಕೆ ಹೊಸದೊಂದು ವಾದವನ್ನು ಮುಂದಿಡಲಾಗಿದೆ. ಧರ್ಮಸಿಂಗ್ ಅವರು ಕೇಂದ್ರದಲ್ಲಿ ಸಚಿವರಲ್ಲ. ಹೀಗಾಗಿ ಅವರ ಪುತ್ರನಿಗೆ ಟಿಕೆಟ್ ನೀಡಬಹುದು. ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರದಲ್ಲಿ ಸಚಿವರು. ಆದರೆ ಅವರ ಪುತ್ರ ಪ್ರಿಯಾಂಕ ಖರ್ಗೆ ಈಗಾಗಲೇ ಒಮ್ಮೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಆದ್ದರಿಂದ ಅದು ಹೊಸದೇನಲ್ಲ.
ಇನ್ನು ಮುನಿಯಪ್ಪ ಅವರ ಪುತ್ರಿ. ಈಕೆಯದ್ದು ಆರಂಭ. ಆದರೆ ಆಕೆ ಯುವತಿ. ಮಹಿಳಾ ನಾಯಕಿಯರು ಹೇಗಿದ್ದರೂ ಬೇಕು. ಅವರಿಗೆ ಮಹಿಳಾ ಕೋಟಾದಲ್ಲಿ ಟಿಕೆಟ್ ನೀಡಿದರಾಯಿತು. ಅಲ್ಲಿಗೆ ಬಹುತೇಕ ಸಮಸ್ಯೆಗಳು ನಿವಾರಣೆಯಾದಂತೆ. ಅತ್ತ ಮಕ್ಕಳಿಗೆ ಟಿಕೆಟ್ ನೀಡಿದಂತೆಯೂ ಆಯಿತು. ಇತ್ತ ಅದಕ್ಕೆ ಸೂಕ್ತ ಕಾರಣವೂ ಇದ್ದಂತಾಯಿತು!
ಅಲ್ಲಿಗೆ ಯುವಕರಿಗೆ ಟಿಕೆಟ್ ಅಂದರೆ ಹಾಲಿ ಶಾಸಕರ, ಸಚಿವರ, ನಾಯಕರ ಮಕ್ಕಳಿಗೆ ಎಂದರ್ಥ. ಮಹಿಳೆಯರಿಗೆ ಅಂದರೆ ಪತ್ನಿ ಮತ್ತು ಮಗಳು ಅಥವಾ ಸೊಸೆ ಎಂದರ್ಥ ಎಂಬಂತಾಗಿದೆ. ಆದರೆ ಮಕ್ಕಳು, ಮೊಮ್ಮಕ್ಕಳು, ಸಂಬಂಧಿಕರಿಗೆ ಟಿಕೆಟ್ ನೀಡುವ ಬಗ್ಗೆ ಲಾಬಿ ಎಷ್ಟು ಪ್ರಬಲವಾಗಿದೆ ಎಂಬುದು ಅರ್ಥವಾಗಲು ಹೆಬ್ಬಾಳ ಕ್ಷೇತ್ರದ ಸಮಸ್ಯೆಯೊಂದೇ ಸಾಕು. ಎಚ್.ಎಂ. ರೇವಣ್ಣ ಇಲ್ಲಿ ಟಿಕೆಟ್ ಆಕಾಂಕ್ಷಿ. ಆದರೆ ಸಿದ್ದರಾಮಯ್ಯ ಅವರೊಂದಿಗಿನ ಮನಸ್ತಾಪದ ಕಾರಣಕ್ಕೆ ಕೇಂದ್ರದ ಮಾಜಿ ಸಚಿವ ಸಿ.ಕೆ. ಜಾಫರ್ ಶರೀಫ್ ಅವರು ತಮ್ಮ ಮೊಮ್ಮಗನಿಗೆ ಹೆಬ್ಬಾಳ ಕ್ಷೇತ್ರದ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಚ್.ಎಂ. ರೇವಣ್ಣ ಅವರ ಸ್ಥಿತಿ ಡೋಲಾಯಮಾನವಾಗಿದೆ. ಕುಟುಂಬ ಹೇಗೆ ಕೆಲಸ ಮಾಡುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆ ಸಾಕು ಅನ್ನಿಸುತ್ತದೆ.
ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಬೇರೆ ಪಕ್ಷಗಳು ಬೇಡ. ಆ ಪಕ್ಷದ ನಾಯಕರೇ ಸಾಕು!
ಇದು ಕಾಂಗ್ರೆಸ್‌ನ ದಿಲ್ಲಿ ನಾಯಕರೊಬ್ಬರು ಹೇಳಿದ ಮಾತು. ಬಹುತೇಕ ಕಾಂಗ್ರೆಸ್ ನಾಯಕರು ಒಪ್ಪುವ ಮಾತು ಕೂಡ. ಪ್ರತಿ ಕ್ಷೇತ್ರದಲ್ಲೂ ಕಾಂಗ್ರೆಸ್ ಪಕ್ಷದಿಂದ ಒಬ್ಬರು ಅಭ್ಯರ್ಥಿಯಾದರೆ, ಮತ್ತೆ 2-3 ಜನ ವಿರೋಧಿಗಳು ಹುಟ್ಟಿಕೊಂಡಿರುತ್ತಾರೆ. ಕಳೆದ ಕೆಲವು ದಿನದಿಂದ ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಟಿಕೆಟ್ ಧಮಾಕಾಗಳನ್ನು, ದಿಲ್ಲಿ ಯಾತ್ರೆಗಳನ್ನು ನೋಡಿದರೆ ಈ ಚುನಾವಣೆಯಲ್ಲೂ ಈ ಮಾತು ನಿಜವಾಗುವ ಲಕ್ಷಣಗಳು ಗೋಚರಿಸುತ್ತಿವೆ.
ಇದೇನು ಕಾಂಗ್ರೆಸ್ ಪಕ್ಷಕ್ಕೆ ಹೊಸದಲ್ಲ. ಯುವರಾಜ ಮತ್ತು ಭಾವೀ ಪ್ರಧಾನಿ ಎಂದೇ ಬಿಂಬಿತವಾಗಿರುವ ರಾಹುಲ್ ಗಾಂಧಿಯಿಂದ ಕೂಡ ಈ ಹಳೆಯ ಸಂಸ್ಕೃತಿಯನ್ನು ಬದಲಾಯಿಸಲು ಸಾಧ್ಯವಾಗಿಲ್ಲ ಎಂಬುದು ಹೊಸ ಸಂಗತಿ. ಅವರ ಭಾಷಣಕ್ಕೂ ಟಿಕೆಟ್ ಹಂಚಿಕೆಗೂ ಅಜಗಜಾಂತರ ಕಾಣುತ್ತಿದೆ. ರಾಹುಲ್ ಗಾಂಧಿ ಭಾಷಣದಲ್ಲಿ ಯುವಕರ ಬಗ್ಗೆ ಮಾತನಾಡುತ್ತಾರೆ. ಪ್ರಮಾಣಿಕತನದ ಬಗ್ಗೆ ಮಾತನಾಡುತ್ತಾರೆ. ಹೊಸಬರಿಗೆ, ಉತ್ತಮರಿಗೆ ಟಿಕೆಟ್ ನೀಡುವ ಬಗ್ಗೆ ಮಾತನಾಡುತ್ತಾರೆ. ಆದರೆ ರಾಜ್ಯದಲ್ಲಿ ಅಂತಹ ಎಷ್ಟು ಜನರಿಗೆ ಟಿಕೆಟ್ ನೀಡಲು ಕಾಂಗ್ರೆಸ್‌ಗೆ ಸಾಧ್ಯವಾಗಿದೆ ಎಂಬ ಪ್ರಶ್ನೆ ಉಳಿದುಬಿಡುತ್ತದೆ. ಟಿಕೆಟ್ ಹಂಚಿಕೆಯಲ್ಲಿ ಭರ್ಜರಿ ಎನ್ನಬಹುದಾದ ಅಥವಾ ಗಮನಾರ್ಹವಾದ ಬದಲಾವಣೆಯೇನೂ ಕಾಣುತ್ತಿಲ್ಲ.
ರಾಹುಲ್ ಗಾಂಧಿಗೆ ಈ ಬಾರಿ ರಾಜ್ಯದಲ್ಲಿ ಅವರು ಬಯಸಿದ ಬದಲಾವಣೆ ತರುವ ಎಲ್ಲ ಅವಕಾಶಗಳೂ ಇದ್ದವು. ಅತ್ಯಂತ ಮುಖ್ಯವಾಗಿ ರಾಜ್ಯದಲ್ಲಿ ಬಿಜೆಪಿ ವಿರೋಧಿ ಮತ್ತು ಕಾಂಗ್ರೆಸ್ ಪರ ಅಲೆಯಿದೆ. ಇದನ್ನೇ ಬಳಸಿಕೊಂಡು ಬದಲಾವಣೆಯ ಪ್ರಯೋಗ ಮಾಡುವ ಸದವಕಾಶ ಇತ್ತು. ಆದರೆ ಬದಲಾವಣೆ ಕುರಿತು ಭಾಷಣದಲ್ಲಿರುವಷ್ಟು ಕಾಳಜಿ ಟಿಕೆಟ್ ಹಂಚಿಕೆ ಮಾಡುವಾಗ ಇಲ್ಲ. ಗುರುವಾರ ದಿಲ್ಲಿಯಲ್ಲಿ ಸಿಐಐ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು 'ಶತಕೋಟಿ ಜನರಿಗೆ ಅಧಿಕಾರ ನೀಡುವುದು ನನ್ನ ಉದ್ದೇಶ. ಅಧಿಕಾರ ವಿಕೇಂದ್ರೀಕರಣದಲ್ಲಿ ನನಗೆ ಒಲವು' ಎಂದಿದ್ದಾರೆ. ಕೋಟಿ ಜನರಿಗೆ ಅಧಿಕಾರ ನೀಡಬಯಸುವ ನಾಯಕ ತನ್ನ ನಿಲುವಿಗೆ ತಕ್ಕಂತೆ ಟಿಕೆಟ್ ನೀಡುವ ಅಥವಾ ಅದಕ್ಕೆ ತಕ್ಕಂತೆ ಟಿಕೆಟ್ ಹಂಚಿಕೆ ನಡೆಯುವಂತೆ ಮಾಡುವ ಅಧಿಕಾರವನ್ನೂ ಹೊಂದಿಲ್ಲ ಎಂಬುದು ವಿಪರ್ಯಾಸ.
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಗುಜರಾತ್ ಚುನಾವಣೆ ಸಂದರ್ಭದಲ್ಲಿ ಹಾಲಿ ಶಾಸಕರಿಗೆ ಕೂಡ ಟಿಕೆಟ್ ನಿರಾಕರಿಸಿ, 60ಕ್ಕೂ ಹೆಚ್ಚು ಹೊಸಬರಿಗೆ ಟಿಕೆಟ್ ನೀಡಿದ್ದರು. ಇದೇ ಪ್ರಯೋಗವನ್ನು ಚತ್ತೀಸ್‌ಗಡದಲ್ಲೂ ಮಾಡಿ ಬಿಜೆಪಿ ಯಶಸ್ವಿಯಾಗಿದೆ. ಆದರೆ ರಾಹುಲ್ ಗಾಂಧಿ ಅಂತಹ ಬದಲಾವಣೆ ತರಲು ವಿಫಲರಾಗಿದ್ದಾರೆ. ಇದರ ಜತೆಗೆ ಗುರುವಾರ ರಾಹುಲ್ ಗಾಂಧಿ ಸಿಐಐನಲ್ಲಿ ಮಾಡಿದ ಭಾಷಣಕ್ಕೆ ಸಂಬಂಧಿಸಿದಂತೆ ರಾಷ್ಟ್ರಮಟ್ಟದ ಪತ್ರಿಕೆಯೊಂದು ಓದುಗರಿಂದ ಪ್ರತಿಕ್ರಿಯೆ ಆಹ್ವಾನಿಸಿತ್ತು. ಅದರಲ್ಲಿ ಶೇ.63ರಷ್ಟು ಓದುಗರು ರಾಹುಲ್ ಗಾಂಧಿ  ಅವರ ಭಾಷಣ ಎಳಸಾಗಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. ಕೇವಲ ಶೇ.11ರಷ್ಟು ಓದುಗರು ಚೇತೋಹಾರಿಯಾಗಿತ್ತು ಎಂದಿದ್ದರೆ, ಶೇ.10ರಷ್ಟು ಜನ ಉತ್ತಮವಾಗಿತ್ತು ಮತ್ತು ಶೇ.16ರಷ್ಟು ಮಂದಿ ಸಾಧಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ, ಸಿಐಐ ಭಾಷಣ ಇವೆರಡನ್ನು ಗಮನಿಸಿದರೆ ಮತ್ತು ಅವರು ಹಿಂದಿನ ಕೆಲವು ಚುನಾವಣೆಗಳಲ್ಲಿ ವಿಫಲರಾಗಿದ್ದನ್ನು ಗಮನಿಸಿದರೆ ಅವರ ರಾಜಕೀಯದ ಆಸಕ್ತಿ ಮತ್ತು ಸಾಮರ್ಥ್ಯ ಎರಡೂ ಗೊತ್ತಾಗುತ್ತದೆ. ಕಾಂಗ್ರೆಸ್‌ನ ಟಿಕೆಟ್ ಆಯ್ಕೆ ಪ್ರಹಸನ ನೋಡಿದವರು ರಾಹುಲ್ ಗಾಂಧಿ ಮಾದರಿ ಅಂದರೆ ಇದೇನಾ ಎಂದು ಅಚ್ಚರಿಪಡುವಂತಾಗಿದೆ. ಅವರ ರಾಜಕೀಯ ಚಾಕಚಕ್ಯತೆ ಮತ್ತು ದೂರದೃಷ್ಟಿ ಕುರಿತು ಅನುಮಾನ ಪಡುವಂತಾಗಿದೆ.

- ವಿನಾಯಕ ಭಟ್ಟ ಮೂರೂರು
ಕನ್ನಡಪ್ರಭ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.