ಅಂಕಣಗಳು

ಮತದಾರರನ್ನು ಕಾಡುತ್ತಿರುವ ಮೂರು ಪ್ರಶ್ನೆಗಳು

Published On :

ಮುಂದಿನ ತಿಂಗಳು ಈ ಹೊತ್ತಿಗಾಗಲೇ ಮತದಾರರು ತಮ್ಮ ಇಂಗಿತವನ್ನು ಸ್ಪಷ್ಟಪಡಿಸಿರುತ್ತಾರೆ. ರಾಜಕೀಯ ಪಕ್ಷಗಳ ಮತ್ತು ಅದರ ಅಭ್ಯರ್ಥಿಗಳ ಹಣೆಬರಹ ಮತಯಂತ್ರಗಳಲ್ಲಿ ಸ್ವಚ್ಛವಾಗಿ ಅಚ್ಚಾಗಿರುತ್ತದೆ. ಮೇ 7ರ ಸಂಜೆಯ ವೇಳೆಗೆ ಫಲಿತಾಂಶ ಹೊರಬೀಳುತ್ತದೆ. ಎಲ್ಲವೂ ಸರಿಯಾಗಿ ನಡೆದರೆ ಕೆಲವೇ ದಿನಗಳಲ್ಲಿ ಹೊಸ ಸರ್ಕಾರವೊಂದು ಅಸ್ತಿತ್ವದಲ್ಲಿರುತ್ತದೆ. ಅದು ಸ್ವಾಗತಾರ್ಹ ಬದಲಾವಣೆಯಾಗಿರಲಿದೆಯೇ? ಒಟ್ಟಿನಲ್ಲಿ ಚೆಂಡು ಮತದಾರರ ಅಂಗಳದಲ್ಲಿ ಬಂದು ಬಿದ್ದಿದೆ.
ಮುಂದಿನ ತಿಂಗಳೊಳಗೆ ಬಹಳಷ್ಟು ಪ್ರಶ್ನೆಗಳು ಮತದಾರರನ್ನು ಕಾಡಲಿವೆ:
ಯಾವ ಪಕ್ಷಕ್ಕೆ ಮತ ನೀಡಬೇಕು? ಆಡಳಿತಾರೂಢ ಬಿಜೆಪಿಗೆ ಇನ್ನೊಂದು ಚಾನ್ಸ್ ನೀಡಬೇಕೇ ಅಥವಾ ಅದಕ್ಕೆ ಬಾಗಿಲು ತೋರಿಸುವುದಕ್ಕೆ ಇದು ಸುಸಮಯವೇ? ಈ ಪ್ರಶ್ನೆಯಂತೂ ನಿಜಕ್ಕೂ ಮತದಾರರ ಮನಸ್ಸಿನ ಮೇಲೆ ಹೆಚ್ಚು ಒತ್ತಡ ಹಾಕಲಿದೆ. ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಗಳ ಫಲಿತಾಂಶವನ್ನು ನೋಡಿದರೆ, ಮತದಾರರು ಹೊಸತನಕ್ಕಾಗಿ ಹಪಾಹಪಿಸುತ್ತಿದ್ದಾರೆ ಎನ್ನುವುದಂತೂ ಸ್ಪಷ್ಟವಾಗುತ್ತದೆ. ಕಾಂಗ್ರೆಸ್ ಅತ್ಯುತ್ತಮ ಆಯ್ಕೆಯಾಗಲಿದೆಯೇ? ಅದು ಸ್ಪಷ್ಟ ಬಹುಮತ ಗಳಿಸಲಿದೆಯೇ?ಇದಕ್ಕೆಲ್ಲ ಉತ್ತರ ಮೇ 7ರಂದೇ ದೊರಕಲಿದೆ. ಅದಾಗ್ಯೂ ಕರ್ನಾಟಕದಲ್ಲಿ ಕೆಲವು ವರ್ಗಗಳು ನಿರ್ದಿಷ್ಟ ಪಕ್ಷಗಳನ್ನೇ ನೆಚ್ಚಿಕೊಂಡಿವೆ. ಅದು ಕಾಂಗ್ರೆಸ್ ಆಗಿರಲಿ, ಬಿಜೆಪಿ ಆಗಿರಲಿ ಅಥವಾ ಇನ್ಯಾವುದೇ ಪಕ್ಷವಾಗಿರಲಿ- ಅವುಗಳ ಸಿದ್ಧಾಂತವೇ ಈ ಗುಂಪಿಗೆ ಮೆಚ್ಚುಗೆಯ ವಿಷಯ. ಈ ವರ್ಗವೇ ಬಹುತೇಕ ಬಾರಿ ಸಮತೋಲನವನ್ನು ಹಾಳುಮಾಡುವುದು.
ಯಾವ ಅಭ್ಯರ್ಥಿಗೆ ಮತ ನೀಡಬೇಕು? ಹಾಲಿ ಎಮ್‌ಎಲ್‌ಎಗೆ ಮತ್ತೊಂದು ಅವಧಿಗೆ ಮುಂದುವರಿಯಲು ಅವಕಾಶ ಕೊಡಬೇಕೇ? ಇಲ್ಲ ಅನ್ನುವುದಾದರೆ, ಆಯಾ ಕ್ಷೇತ್ರವನ್ನು ಪ್ರತಿನಿಧಿಸಲು ಯಾವ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ಒಳಿತು? ಅಭ್ಯರ್ಥಿಗೆ ಕ್ರಿಮಿನಲ್ ಹಿನ್ನೆಲೆಯೇನಾದರೂ ಇದೆಯೇ, ಅತ ತನ್ನ ಆಸ್ತಿ ಸರಿಯಾದ ದಾರಿಯಲ್ಲೇ ಸಂಪಾದಿಸಿದ್ದಾನೆಯೇ, ಆ ಕ್ಷೇತ್ರದ ಸಮಸ್ಯೆಗಳ ಅರಿವು ಆತನಿಗಿದೆಯೇ, ಅಲ್ಲಿನ ನಿವಾಸಿಗಳನ್ನು ಆಗಾಗ ಭೇಟಿಯಾಗುತ್ತಿರುತ್ತಾನೆಯೇ?
ವಿಪರ್ಯಾಸವೆಂದರೆ ಆತನ ಪೂರ್ವಾಪರದ ಬಗ್ಗೆ, ಆತನ ದೂರದೃಷ್ಟಿಯ ಬಗ್ಗೆ, ಸಾಧನೆಗಳ ಬಗ್ಗೆ ಅರಿತುಕೊಳ್ಳುವ ಮಾತು ಒತ್ತಟ್ಟಿಗಿರಲಿ, ಮತದಾರರಿಗೆ ಅಭ್ಯರ್ಥಿಯ ಹೆಸರೇ ಸರಿಯಾಗಿ ಗೊತ್ತಿರುವುದಿಲ್ಲ. ಒಂದು ವೇಳೆ ಆತ ಪ್ರಸಿದ್ಧ ವ್ಯಕ್ತಿಯಾಗಿದ್ದರೆ ಬೇರೆ ಮಾತು. ಹಾಗಾಗೇ ಬಹುತೇಕರು ಪಕ್ಷಕ್ಕೇ ಮನ್ನಣೆ ನೀಡುತ್ತಾರೆ. ಆದರೆ ಸಮಯ ಬದಲಾಗಿದೆ. ಎನ್‌ಜಿಒಗಳು, ನಾಗರಿಕ ಹೊರಾಟಗಾರರು ಮತ್ತು ನಿವಾಸಿಗಳ ಕಲ್ಯಾಣ ಸಂಘಗಳ ಪ್ರಯತ್ನದಿಂದಾಗಿ ಮತದಾರರು ಅಭ್ಯರ್ಥಿಗಳ ಬಗ್ಗೆ ಮಾಹಿತಿ ಕಲೆಹಾಕುವಲ್ಲಿ ಮುತುವರ್ಜಿ ತೋರಿಸುತ್ತಿದ್ದಾರೆ. ಅಷ್ಟೇ ಅಲ್ಲ, ತಮ್ಮ ಕ್ಷೇತ್ರದಲ್ಲಿ ಉದ್ಭವವಾಗಿರುವ ಸಮಸ್ಯೆಯನ್ನು ಎತ್ತಿಕೊಂಡು ಅಭ್ಯರ್ಥಿಗಳನ್ನು ಜಾಡಿಸತೊಡಗಿದ್ದಾರೆ. ಇದು ಬೆಂಗಳೂರಿನ ಕತೆಯಾಯಿತು. ಅವರು ತಮ್ಮ ಮನಃಸಾಕ್ಷಿಯ ಮಾತು ಕೇಳಿ ಮತ ನೀಡಲಿದ್ದಾರೆ ಎಂದು ಆಶಿಸೋಣ. ಹಾಗೇನಾದರೂ ಆದರೆ ಬಹುದೊಡ್ಡ ಬದಲಾವಣೆಯನ್ನು ನಾವು ಕಾಣಲಿದ್ದೇವೆ.
ನಾವೇಕೆ ಮತದಾನ ಮಾಡಬೇಕು? ನನ್ನದೊಂದು ಓಟು ಬದಲಾವಣೆ ತರುತ್ತದೆಯೇ? ಆಯ್ಕೆಯಾದವರು ನಮ್ಮ ಕೈಗೇ ಸಿಗುವುದಿಲ್ಲ ಎಂದು ಮೇಲೆ ಮತದಾನ ಮಾಡಿ ಏನು ಉಪಯೋಗ? ಬಹುತೇಕ ಮತದಾರರು, ಅದರಲ್ಲೂ ನಗರವಾಸಿಗಳ ಯೋಚನಾ ಲಹರಿಯೇ ಹೀಗೆ. ಆಶ್ಚರ್ಯಕರ ವಿಷಯವೆಂದರೆ ಈ ವರ್ಗದಲ್ಲಿನ ಬಹುತೇಕರು ವಿದ್ಯಾವಂತರು. ತಮ್ಮ ಪ್ರದೇಶದ ಸಮಸ್ಯೆಗಳ ಬಗ್ಗೆ ಅವರಿಗೆ ಅರಿವಿರುತ್ತದೆ ಮತ್ತು ಪರಿಹಾರಮಾರ್ಗಗಳ ಬಗ್ಗೆಯೂ ತಿಳವಳಿಕೆಯಿರುತ್ತದೆ. ಯಾವಾಗಲೂ ಲೊಚಗುಟ್ಟುತ್ತಲೇ ಇರುವ ಇವರು, ಮತದಾನದ ಸಮಯ ಎದುರಾದಾಗ ಮಾತ್ರ ಬಾಗಿಲು ಮುಚ್ಚಿಕೊಂಡು ಕುಳಿತುಬಿಡುತ್ತಾರೆ ಅಥವಾ ಹಾಲಿಡೇ ಆಚರಿಸಲು ಎಲ್ಲಾದರೂ ಹೊರಗೆ ಹೊರಟುಬಿಡುತ್ತಾರೆ. ಈ ಸಿನಿಕತನದಿಂದಾಗಿಯೇ ಮತದಾನದ ಪ್ರಮಾಣ ಪ್ರತಿಬಾರಿಯೂ ಗಣನೀಯವಾಗಿ ಕೆಳಮಟ್ಟಕ್ಕೆ ಕುಸಿದಿರುತ್ತದೆ ಮತ್ತು ಅನರ್ಹ ಅಭ್ಯರ್ಥಿಯೊಬ್ಬ ಆಯ್ಕೆಯಾಗಿರುತ್ತಾನೆ. ಇನ್ನು ಮತದಾರರ ಪಟ್ಟಿಯಲ್ಲಿ ಕಳೆದುಹೋಗುವ ಹೆಸರುಗಳು ಈ ಸಿನಿಕತೆಗೆ ತುಪ್ಪ ಸುರಿಯುತ್ತದೆ. ಮತ್ತೊಮ್ಮೆ ಈ ಸಂದರ್ಭದಲ್ಲಿ ಎನ್‌ಜಿಒಗಳಿಗೆ ಧನ್ಯವಾದವನ್ನು ಅರ್ಪಿಸಲೇಬೇಕಾಗಿದೆ. ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದನ್ನು ಖಾತ್ರಿಪಡಿಸಿಕೊಳ್ಳಲು ಅವು ಮತದಾರರಿಗೆ ಬಹಳ ಸಹಾಯ ಮಾಡುತ್ತಿವೆ. ಅವರು ಮತ ಕೇಂದ್ರಗಳತ್ತ ತಂಡೋಪತಂಡವಾಗಿ ಸಾಗಿ ಮತ ಹಾಕಲಿದ್ದಾರೆ ಅಥವಾ ಕೆಟ್ಟ ಅಭ್ಯರ್ಥಿಗಳನ್ನು ಕಿತ್ತೆಸೆಯುವುದಕ್ಕಾದರೂ ಪ್ರಯತ್ನಿಸಲಿದ್ದಾರೆ ಎನ್ನುವುದನ್ನು ಆಶಿಸೋಣ.  
ಮತದಾರರಾದ ನಾವು ಕಿಂಗ್‌ಮೇಕರ್‌ಗಳು. ಅನರ್ಹ ಮತ್ತು ಭ್ರಷ್ಟರ ಬದಲಿಗೆ ಪ್ರತಿಭಾವಂತ ಮತ್ತು ಅರ್ಹ ವ್ಯಕ್ತಿಗಳು ಸರ್ಕಾರ ನಡೆಸುವಂತೆ ಮಾಡುವ ಶಕ್ತಿ ನಮಗಷ್ಟೇ ಇದೆ. ಈ ಶಕ್ತಿ ನಮಗೆ ಐದು ವರ್ಷಕ್ಕೆ ಒಂದು ಬಾರಿ ಪ್ರಾಪ್ತವಾಗುತ್ತದೆ. ಈ ಅವಕಾಶವನ್ನು ನಾವು ಕೈಜಾರಲು ಬಿಡಬಾರದು. ಈ ಹಕ್ಕನ್ನು ನಾವು ಕಡೆಗಣಿಸಿದೆವೆಂದರೆ, ಸಮಸ್ಯೆಗಳನ್ನು ನೋಡಿ ಅಳುವ ಹಕ್ಕನ್ನೂ ನಾವು ಕಳೆದುಕೊಳ್ಳುತ್ತೇವೆ. ಒಂದು ವೇಳೆ ಸ್ವಹಿತಾಸಕ್ತಿಯ ಮತ್ತು ಅಧಿಕಾರದಾಹಿ ರಾಜಕಾರಣಿಗಳು ನಮ್ಮ ಸಿನಿಕತೆಯ ಲಾಭ ಪಡೆದರೆಂದರೆ ನಾವು ನಿಸ್ಸಂಶಯವಾಗಿಯೂ ದುಷ್ಪರಿಣಾಮಗಳನ್ನು ಎದುರಿಸಲಿದ್ದೇವೆ- ಕೆಟ್ಟ ಆಡಳಿತ, ಶೂನ್ಯ ಅಭಿವೃದ್ಧಿ, ಕೈಗೆಟುಕದ ಮಂತ್ರಿ/ಎಮ್‌ಎಲ್‌ಎಗಳು, ಸಂವೇದಿಯಲ್ಲದ ಅಧಿಕಾರ ವರ್ಗ ಮತ್ತು ಭ್ರಷ್ಟ ವ್ಯವಸ್ಥೆಗೆ ಸಾಕ್ಷಿಯಾಗಲಿದ್ದೇವೆ. ಇದೇನಾ ನಮಗೆ ಬೇಕಿರುವುದು?
ಕೊನೆಯ ಗುಟುಕು: ಮತದಾನ ಯಂತ್ರಗಳಲ್ಲಿ None of the aboveಎನ್ನುವ ಆಯ್ಕೆಯನ್ನು ಇಡಬೇಕೋ, ಬೇಡವೋ ಎನ್ನುವ ಬಗ್ಗೆ ಭಾರತೀಯರೆಲ್ಲ ಚರ್ಚೆಯಲ್ಲಿ ತೊಡಗಿದ್ದಾರೆ. ಆದರೆ ನೆರೆಯ ಪಾಕಿಸ್ತಾನ ಅದಾಗಲೇ ಈ ಗೊಂದಲವನ್ನು ಪರಿಹರಿಸಿಕೊಂಡಿದೆ. ಪ್ರತಿ ಅಭ್ಯರ್ಥಿಯ ಚಿಹ್ನೆಯ ಪಕ್ಕದಲ್ಲೂ ಅಲ್ಲಿನ ಮತಯಂತ್ರಗಳಲ್ಲಿ ಖಾಲಿ ಬಟನ್ ಒಂದನ್ನು ಜೋಡಿಸಲಾಗಿದೆ. ಒಂದು ವೇಳೆ ಮತದಾರರಿಗೆ ಅಭ್ಯರ್ಥಿಯ ಬಗ್ಗೆ ಒಲವಿಲ್ಲದಿದ್ದರೆ, ಅವರು ಆ ಬ್ಲ್ಯಾಂಕ್ ಬಟನ್ ಅನ್ನು ಒತ್ತಬಹುದು. ಒಂದು ವೇಳೆ 51 ಪ್ರತಿಶತ ಅಥವಾ ಅದಕ್ಕಿಂತ ಹೆಚ್ಚು ಮತದಾರರು ಈ ಬಟನ್ ಅನ್ನು ಅದುಮಿದರೆ ಮರು ಚುನಾವಣೆ ನಡೆಸಲಾಗುವುದು! ಹಾಗಾದಾಗ ಎಲ್ಲ ಪಕ್ಷಗಳೂ ಉತ್ತಮ ಅಭ್ಯರ್ಥಿಗಳನ್ನೇ ನಿಲ್ಲಿಸುವ ಕೆಲಸಕ್ಕೆ ಮುಂದಾಗುತ್ತವೆ. ಈ ಆಯ್ಕೆಯನ್ನು ಸೇರಿಸಲು ನಾವೇಕೆ ಹಿಂದೇಟು ಹಾಕುತ್ತಿದ್ದೇವೆ? ಅಭ್ಯರ್ಥಿಯನ್ನು ತಿರಸ್ಕರಿಸುವ ಹಕ್ಕು ಮತದಾರನಿಗೆ ಇರಲೇಬೇಕಲ್ಲವೇ?

(ಈ ಲೇಖನದ ಇಂಗ್ಲಿಷ್ ಅವತರಣಿಕೆ www.namma-bengaluru.org ಹಾಗೂ  www.suvarnanews.tv/features ನಲ್ಲಿ ಕನ್ನಡ ಅಂಕಣ ಲಭ್ಯ)

- ಎಚ್.ಎಸ್. ಬಲರಾಮ್
hsbalram@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.