ಅಂಕಣಗಳು

ಗಾಣದಿಂದ ಎಣ್ಣೆ ತೆಗೆದು ಬೆಳಕು ಕೊಟ್ಟ ಗಾಣಿಗರು

ಅಡುಗೆ ತಯಾರಿಕೆಗೆ ಸೇರಿದಂತೆ ದಿನಬಳಕೆಗಾಗಿ ಈಗ ನಾನಾ ರೀತಿಯ...

Published On :

ಅಡುಗೆ ತಯಾರಿಕೆಗೆ ಸೇರಿದಂತೆ ದಿನಬಳಕೆಗಾಗಿ ಈಗ ನಾನಾ ರೀತಿಯ ಎಣ್ಣೆ ಮಾರುಕಟ್ಟೆಯಲ್ಲಿ ಲಭ್ಯ. ಬಹುರಾಷ್ಟ್ರೀಯ ಕಂಪನಿಗಳೂ ಎಣ್ಣೆ ಕ್ಷೇತ್ರಕ್ಕೆ ಕಾಲಿಟ್ಟು ವರ್ಷಗಳೇ ಕಳೆದಿವೆ. ಟಿವಿ ಚಾನೆಲ್‌ಗಳಲ್ಲಂತೂ ಎಣ್ಣೆಗೆ ಸಂಬಂಧಿಸಿದ ಜಾಹಿರಾತುಗಳನ್ನು ನಿತ್ಯ ನೋಡಬಹುದು.
ಅದರಲ್ಲೂ ಕೊಬ್ಬಿನಂಶ ಇರುವ, ಇಲ್ಲದಿರುವ ಎಣ್ಣೆ ಎಂದೆಲ್ಲಾ ಹೇಳಿ ಗ್ರಾಹಕರನ್ನು ಮೋಡಿ ಮಾಡುವ ಕಂಪನಿಗಳಿಗೇನೂ ಕಡಿಮೆ ಇಲ್ಲ. ಹೀಗೆ ಕೊಬ್ಬರಿ ಎಣ್ಣೆ, ಕಡಲೆಕಾಯಿ ಎಣ್ಣೆಗೆ ಸಂಬಂಧಿಸಿದ ನಾನಾ ಕಂಪನಿಗಳು ದೇಶವ್ಯಾಪಿ ತಲೆ ಎತ್ತಿವೆ.
ತೈಲ ಉತ್ಪಾದನೆಯೇ ಕಸುಬು
ಆದರೆ, ಹಿಂದೆಲ್ಲಾ ಈ ರೀತಿ ಇರಲಿಲ್ಲ. ಎಣ್ಣೆ ಎಂದರೆ ಅದನ್ನು ಗಾಣದವರೇ ತಯಾರಿಸಬೇಕಿತ್ತು. ಗಾಣದವರು ಎಂದರೆ ಯಾರು? ಅವರೇ ಗಾಣಿಗರು. ಗಾಣಕ್ಕೆ ಎತ್ತುಗಳನ್ನು ಕಟ್ಟಿ ಎಣ್ಣೆ ತೆಗೆಯುವುದೇ ಅವರ ಕುಲ ಕಸುಬು. ಇದು ಪುರಾತನ ಕಾಲದಿಂದ ನಡೆದುಕೊಂಡು ಬಂದಿದ್ದ ವೃತ್ತಿಯೂ ಆಗಿತ್ತು. ಆದರೀಗ ಬಹುತೇಕ ಕಣ್ಮರೆ ಆಗಿದೆ. ಗ್ರಾಮೀಣ ಪ್ರದೇಶದಲ್ಲಿ ಕೆಲವೆಡೆ ಮಾತ್ರ ಗಾಣಿಗರು ಇನ್ನೂ ಈ ವೃತ್ತಿಯ ಸೊಗಡು ಉಳಿಸಿಕೊಂಡಿದ್ದಾರೆ.
ಸಮಾಜದಲ್ಲಿ ಗಾಣಿಗರು ಪ್ರಮುಖ ಸ್ಥಾನ ಪಡೆದಿದ್ದಾರೆ ಎಂಬುದಕ್ಕೆ ಅವರಿಗೆ ಸಂಬಂಧಿಸಿದಂತೆ ಸೃಷ್ಟಿಯಾಗಿರುವ ಗಾದೆ ಅಥವಾ ನಾಣ್ಣುಡಿಗಳೇ ಸಾಕ್ಷಿ.
'ಗಾಣಿಗ ಆಯ್ಯೋ ಎಂದರೆ ನೆತ್ತಿ ತಂಪಾಗುವುದೇ ?' ಎಂಬ ಮಾತಿತ್ತು. ತಲೆಗೆ ಬಿಸಿ ಆದಾಗ ಎಣ್ಣೆ ಹಚ್ಚುವುದು. ವಾಡಿಕೆ ಅದಕ್ಕಾಗಿ ಗಾಣಿಗನ ಬಳಿ ಹೋಗಿ ಎಣ್ಣೆ ತರಬೇಕು. ಆದರೆ, ಎಣ್ಣೆ ಕೊಡದೆ ಗಾಣಿಗ ಅಯ್ಯೋ ಎಂದ ಮಾತ್ರಕ್ಕೆ ನೆತ್ತಿ ತಂಪಾಗುವುದೇ ಎಂಬುದು ಈ ಮಾತಿನ ಅರ್ಥ. 'ಎಳ್ಣು ಗಾಣಿಗ ಬಲ್ಲ, ಗಾಣಿಗನ ಬೇಹಾರ ಕೋಣನ ಬೇಸಾಯ, ಗಾಣಿಗನು ಈಶ್ವರನ ಕಾಣನೆಂಬದು ಸಹಜ' ಮೊದಲಾದ ತ್ರಿಪದಿಗಳಲ್ಲೂ ಗಾಣಿಗರ ಬಗ್ಗೆ ವರ್ಣನೆ ಇದೆ.
ಇಷ್ಟಕ್ಕೂ ಈ ಗಾಣಿಗರು ಎಲ್ಲಿಯವರು, ಅವರ ಮೂಲ ಏನು ಎಂಬ ಬಗ್ಗೆ ಸಾಕಷ್ಟು ಆಧ್ಯಯನಗಳು ನಡೆದಿವೆ. ಆವರ ಕುರಿತಂತೆ ಪುಸ್ತಕಗಳೂ ಪ್ರಕಟವಾಗಿವೆ. ಪ್ರೊ. ಮೃತ್ಯುಂಜಯ ಯಲ್ಲಪ್ಪ ರಾಮದುರ್ಗ, ಎ.ಎಂ.ಗೌಡರ, ಎ.ಎಸ್.ಅಳ್ತೇಕರ್, ಡಾ.ವ್ಹಿ.ಡಿ.ಐಹೊಳ್ಳಿ ಅವರು ಗಾಣಿಗ ಸಮಾಜದ ಬಗ್ಗೆ ಪುಸ್ತಕಗಳನ್ನು ಬರೆದಿದ್ದಾರೆ. ಇನ್ನು ಬಿಜಾಪುರ ಜಿಲ್ಲೆ ಸಿಂಧಗಿಯ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಎಸ್.ಬಿ.ಚೌಧರಿ ಅವರೂ ಮಾಹಿತಿ ಕಲೆ ಹಾಕಿದ್ದಾರೆ. ಈ ಎಲ್ಲರ ಪ್ರಕಾರ ಗಾಣಿಗರ ಹಿನ್ನೆಲೆ ಹೀಗಿದೆ.
ಉಪ ಪಂಗಡಗಳು ಹಲವಾರು
ರಾಜ್ಯದಲ್ಲಿರುವ ಗಾಣಿಗ ಸಮುದಾಯದವರಲ್ಲಿ ಹಲವಾರು ಉಪ ಪಂಗಡಗಳಿವೆ. ಕರೇಗಾಣಿಗ, ಸಜ್ಜನ, ಕಲಶೆಟ್ಟಿ, ಜ್ಯೋತಿ, ದೀಪ, ಗಾಣಿಗ, ಜ್ಯೋತಿ ನಗರ ವೈಶ್ಯರು, ಜ್ಯೋತಿಫಣ ಗಾಣಿಗ, ದೇವ ಗಾಣಿಕ, ಶೆಟ್ಟಿ ಗಾಣಿಗ, ವಾಣಿಯ ಗಾಣಿಗ, ಚೆಟ್ಟಿಯಾರ ಗಾಣಿಗ, ಗಂಡ್ಲರು, ಸಾಹೂಣಿಗರು, ತೇಲಿ ಗಾಣಿಗರು ಎಂಬುದು ಪ್ರಮುಖ ಉಪ ಪಂಗಡಗಳಾಗಿವೆ.
ಕರೇ ಗಾಣಿಗರು ಮುಂಬಯಿ-ಕರ್ನಾಟಕ ಮತ್ತು ಹೈದರಾಬಾದ್-ಕರ್ನಾಟಕ ಪ್ರದೇಶದಲ್ಲಿದ್ದಾರೆ. ಸಜ್ಜನ ಗಾಣಿಗರು ಹೈದರಾಬಾದ್-ಕರ್ನಾಟಕ ಭಾಗದಲ್ಲಿ ನೆಲೆಸಿದ್ದಾರೆ. ಇವರು ಬಸವೇಶ್ವರರಿಂದ ಸಂಘಟಿತರಾದವರು. ಹೀಗಾಗಿ ಲಿಂಗಧಾರಣೆ ಮಾಡುತ್ತಾರೆ.  ಜ್ಯೋತಿ ನಗರ ವೈಶ್ಯರು ಆಂಧ್ರದಿಂದ ವಲಸೆ ಬಂದವರು. ಚೆಟ್ಟಿಯಾರ್ ಗಾಣಿಗರು ಮತ್ತು ವಾಣಿಯ ಗಾಣಿಗರು ಮತ್ತು ತೇಲಿಯ ಗಾಣಿಗರು ತಮಿಳುನಾಡಿನಿಂದ ಬಂದವರು. ಗಂಡ್ಲರು ಆಂಧ್ರದಲ್ಲಿದ್ದಾರೆ. ಅದೇ ರೀತಿ ಸಾಹೂ ಗಾಣಿಗರು ಉತ್ತರ ಭಾರತದಲ್ಲಿ ನೆಲೆಸಿದ್ದಾರೆ.
ಜಗತ್ತಿಗೇ ಬೆಳಕು ಕೊಟ್ಟವರು
ಒಂದು ಗಾಣ, ಅದಕ್ಕೆ ಎರಡು ಎತ್ತುಗಳನ್ನು ಕಟ್ಟಿ ಆ ಮೂಲಕ ಎಣ್ಣೆ ತೆಗೆಯುತ್ತಿದ್ದ ಗಾಣಿಗರು ಜಗತ್ತಿಗೇ ಬೆಳಕು ಕೊಟ್ಟವರು ಎಂಬ ಮಾತಿದೆ. ಅವರು ಎಳ್ಳಿನ ರಾಶಿಯನ್ನು ಗಾಣಕ್ಕೆ ಹಾಕಿ ಒಳ್ಳೆಯ ಎಣ್ಣೆ ತೆಗೆಯುತ್ತಿದ್ದರು. ಶೇಂಗಾ, ಕುಸಬಿ, ಸಾಸಿವೆ ಮತ್ತು ತೆಂಗಿನಕಾಯಿಯಿಂದಲೂ ಎಣ್ಣೆ ತಯಾರು ಮಾಡುತ್ತಿದ್ದರು.
ಗಾಣಿಗರಲ್ಲಿ ಕರಿಯ ಕುಲ ಎಂಬ ಪಂಗಡವಿದೆ. ಶ್ರೀಕೃಷ್ಣದೇವರಾಯನ ಆಳ್ವಿಕೆ ಕಾಲದಲ್ಲಿ ಅಂದರೆ ವಿಜಯನಗರ ಸಾಮ್ರಾಜ್ಯದಲ್ಲಿ ಗಜ ಪಡೆಯ ಉಸ್ತುವಾರಿಯನ್ನು ಇದೇ ಕರಿಯ ಗಾಣಿಗರು ವಹಿಸಿಕೊಂಡಿದ್ದರಂತೆ. ಕರಿ ಎಂದರೆ ಅನೆ. ಹೀಗಾಗಿ ಕರಿಯ ಕುಲ ಎಂಬ ಹೆಸರು ಬಂದಿರಬಹುದು ಎನ್ನುತ್ತಾರೆ ಅಧ್ಯಯನಕಾರರು. ಕರಿಯ ಕುಲದ ಗಾಣಿಗರ ಸಂಖ್ಯೆ ಸೈನ್ಯದಲ್ಲೂ ಹೆಚ್ಚಾಗಿ ಇತ್ತಂತೆ. ಕಾರಣ, ಇವರು ಬಲಾಢ್ಯರಾಗಿದ್ದವರು. ಇದೇ ಕಾರಣಕ್ಕೆ ರಾಜ, ಮಹಾರಾಜರಿಗೂ ಹೆಚ್ಚು ಆಪ್ತರಾಗಿದ್ದುಕೊಂಡು ಸೇನೆಯಲ್ಲಿ ಕೆಲಸ, ಕಾರ್ಯ ಮಾಡಿಕೊಂಡಿದ್ದರಂತೆ.
ಕರಿಯ ಕುಲದ ಗಾಣಿಗ ಸಮಾಜದಲ್ಲಿ ಕೋಲ್ಹಾರ ದೇಸಗತಿ ಮನೆತರ ಹಿರಿಯರ ಮನೆಯಾಗಿತ್ತು. ಈ ಮನೆತನದವರು ಕೊಲ್ಹಾರ ಮತ್ತಿತರ ಕಡೆಗಳಲ್ಲಿ ಗಣಾಚಾರಿಗಳಾಗಿ ಮತ್ತು ಮಠಪತಿಗಳಾಗಿ ಗೌರವಿಸಲ್ಪಟ್ಟಿದ್ದಾರೆ. ಶ್ರೀಶೈಲ ಮತ್ತಿತರ ಪುಣ್ಯಕ್ಷೇತ್ರಗಳಲ್ಲಿ ಇವರಿಗೆ ಗೌರವ ಇದೆ. ಇವರು ಈ ಹಿಂದೆ ನ್ಯಾಯ, ಪಂಚಾಯಿತಿಯಲ್ಲಿ ತೀರ್ಪು ನೀಡುವ, ಶಿಕ್ಷೆ ವಿಧಿಸುವ ಮತ್ತು ದಂಡಿಸುವ ಕೆಲಸ ಮಾಡುತ್ತಿದ್ದರು.
ಶಿವಶರಣರ ಕಾಲದಲ್ಲಿ ಪ್ರಭಾವ
ಶಿವ ಶರಣರ ಕಾಲದಲ್ಲೂ ಈ ಗಾಣಿಗ ಸಮಾಜದ ಪ್ರಭಾವ ಇತ್ತು ಎಂಬುದಕ್ಕೆ ದಾಖಲೆಗಳಿವೆ. ಗಾಣಿಗ ಚನ್ನಪ್ಪ ಎಂಬ ವಚನಕಾರನ ಉಲ್ಲೇಖ ಇದಕ್ಕೆ ಉದಾಹರಣೆ. 12ನೇ ಶತಮಾನದಲ್ಲಿ ಬಸವಣ್ಣನವರೂ ಈ ಸಮಾಜದ ಮೇಲೆ ಭಾರಿ ಪ್ರಭಾವ ಬೀರಿದ್ದರು. 
ಗಾಣಿಗ ಸಮುದಾಯದಲ್ಲಿ ಈ ಹಿಂದೆ ಹೆಂಡತಿ ಸತ್ತರೆ ಗಂಡನಾದವನಿಗೆ ಮರು ಮದುವೆ ಮಾಡಿಕೊಳ್ಳಲು ಅವಕಾಶ ಇತ್ತು. ಆದರೆ ಗಂಡ ಸತ್ತರೆ ಹೆಂಡತಿ ಮಾತ್ರ ಮರು ಮದುವೆ ಆಗುವಂತಿರಲಿಲ್ಲ. ಈ ಕಟ್ಟೆಳೆ ಮೀರಿ ನಡೆದವರನ್ನು ಸಮಾಜದಿಂದಲೇ ಬಹಿಷ್ಕರಿಸಲಾಗುತ್ತಿತ್ತು. ಇನ್ನು ಸಜ್ಜನ ಗಾಣಿಗರು ಬೇರೆ ಬೆಡಗುಗಳ ಜೊತೆ ವೈವಾಹಿಕ ಸಂಬಂಧ ಬೆಳೆಸುತ್ತಿರಲಿಲ್ಲ.
ಗಾಣಿಗ ಸಮಾಜದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ ಅಧಿಕಾರಿಗಳು, ರಾಜಕಾರಣಿಗಳಿಗೇನೂ ಕೊರತೆ ಇಲ್ಲ. ಹಾಗೆಯೇ ಮಹಾತ್ಮರೂ ಇದ್ದಾರೆ. ಪ್ರವಚನ ಪಟು ಶ್ರೀ ಸಿದ್ದೇಶ್ವರ ಸ್ವಾಮಿ, ಪ್ರವಚನಕಾರ್ತಿ ಸಿದ್ದಮ್ಮ ಅಸುಂಡಿ, ಬಿಳ್ಳೂರು ಮಠದ ಗುರು ಬಸವ ಸ್ವಾಮಿ, ಖ್ಯಾತ ಎಂಜಿನಿಯರ್ ಬಾಳೆಕುಂದ್ರಿ, ಐಎಎಸ್ ಅಧಿಕಾರಿ ಸಿ.ವ್ಹಿ.ಕಳಸದ, ಐಪಿಎಸ್ ಅಧಿಕಾರಿಯಾಗಿದ್ದ ಸಿದ್ದಣ್ಣ ಮಸಳಿ ಸೇರಿದಂತೆ ಇನ್ನೂ ಅನೇಕರು ಗಾಣಿಗ ಸಮುದಾಯಕ್ಕೆ ಸೇರಿದವರು.
ಗಣ್ಯರು ಹಲವರು
ಇನ್ನು ರಾಜಕೀಯದಲ್ಲಿ ಹೆಸರು ಮಾಡಿದವರು ಎಂದರೆ ಆರ್.ಎಂ.ಕಲೂತಿ, ಎಸ್.ಕೆ.ಬೆಳ್ಳುಬ್ಬಿ, ಶರಣಪ್ಪಗೌಡ ಪಾಟೀಲ, ಪುಟ್ಟಸ್ವಾಮಿ ಮೋಹನ ಶೆಟ್ಟಿ, ವಿಧಾನ ಪರಿಷತ್‌ನ ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಬಿ.ಜಿ. ಪಾಟೀಲ, ಕೇಂದ್ರದ ಮಾಜಿ ಮಂತ್ರಿ ಸಿದ್ದು ನ್ಯಾಮಗೌಡ ಇದೇ ಸಮಾಜದವರು. ವಿಶೇಷ ಎಂದರೆ ಪಶ್ಚಿಮ ಬಂಗಾಳದಲ್ಲಿ ಏಳು ಬಾರಿ ಮುಖ್ಯಮಂತ್ರಿಯಾಗಿದ್ದ ಜ್ಯೋತಿಬಸು ಅವರೂ ಗಾಣಿಗರೇ. ಬಿಜಾಪುರದ ವನಶ್ರೀ ಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ಜಯದೇವ ಸ್ವಾಮಿ ಈ ಸಮಾಜದ ಜಗದ್ಗುರುಗಳು.
ಇನ್ನು ಗಾಣಿಗ ಸಮಾಜದ ಸಂಘಟನೆಯೂ ಚುರುಕಾಗಿದೆ. ಅಖಿಲ ಭಾರತ ಗಾಣಿಕ ಸಂಘ ಸ್ಥಾಪಿತವಾಗಿದ್ದು 1926ರಲ್ಲಿ. ಅದೂ ಕರ್ನಾಟಕದ ಗಾಂಧಿ ಎಂದೇ ಹೆಸರಾಗಿದ್ದ ಹರ್ಡೇಕರ ಮಂಜಪ್ಪ ಅವರ ಮಾರ್ಗದರ್ಶನದಲ್ಲಿ.
ಗಾಣಿಗ ಸಮುದಾಯದ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಪರಿಸ್ಥಿತಿ ಸಾಧಾರಣವಾಗಿದೆ. ಆದರೆ, ರಾಜಕೀಯವಾಗಿ ಇನ್ನೂ ಬೆಳೆಯಬೇಕು. ಅದಕ್ಕಾಗಿ ಸೂಕ್ತ ಪ್ರಾತಿನಿಧ್ಯ ಬೇಕು ಎಂಬುದು ಸಮಾಜದ ಮುಖಂಡರ ಅನಿಸಿಕೆ.
ಗಾಣಿಗರು ಆರಂಭದಲ್ಲಿ ಕಲ್ಲು ಮತ್ತು ಕಟ್ಟಿಗೆಗಳಿಂದ ತಯಾರಿಸದ ಗಾಣಗಳನ್ನು ಬಳಕೆ ಮಾಡುತ್ತಿದ್ದರು. ಬಳಿಕ ಯಂತ್ರೋಪಕರಣಗಳ ಮೂಲಕ ತಮ್ಮ ಉದ್ಯೋಗಕ್ಕೆ ಹೊಸ ಆಯಾಮ ಕಂಡುಕೊಂಡರು. ಲಿಂಗಾಯತ ಸಮಾಜದ ಒಳ ಪಂಗಡವಾದ ಗಾಣಿಗ ಸಮುದಾಯದವರು ತೈಲ ಉತ್ಪಾದನೆಯನ್ನು ಶತಶತಮಾನಗಳಿಂದ ವೃತ್ತಿಯಾಗಿ ಮಾಡಿಕೊಂಡವರು. ಜೊತೆಗೆ ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಹಾಗೂ ಆಸ್ಸಾಂನಿಂದ ಸೌರಾಷ್ಟ್ರದವರೆಗೆ ಇದ್ದಾರೆ. ಜನಸಂಖ್ಯೆ 10 ಕೋಟಿ ಎನ್ನುತ್ತಾರೆ ಶಿಕ್ಷಕ ಎಸ್.ಬಿ.ಚೌಧರಿ ಅವರು.

- ಕೆ.ವಿ.ಪ್ರಭಾಕರ  
 prabhukolar@yahoo.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.