ನದಿಯ ಹರಿವಿನ ಬಜೆಟ್ ಮಂಡಿಸಿದ ಜುಂ'ಜಲ'ವಾಲಾ!
ಅವರು ಕಾನೂನು ತಜ್ಞರೇನಲ್ಲ. ಆದರೆ ಸಂವಿಧಾನದ ಎಲ್ಲ ವಿಧಿಗಳನ್ನೂ...
ಅವರು ಕಾನೂನು ತಜ್ಞರೇನಲ್ಲ. ಆದರೆ ಸಂವಿಧಾನದ ಎಲ್ಲ ವಿಧಿಗಳನ್ನೂ ತಡಕಾಡಿದ್ದಾರೆ. ಒಂದಷ್ಟನ್ನು ಗೊತ್ತು ಪಡಿಸಿಕೊಂಡಿದ್ದಾರೆ. ವಿವಿಧ ನ್ಯಾಯಾಲಯಗಳಲ್ಲಿ ಒಂದಲ್ಲ, ಎರಡಲ್ಲ, ಪ್ರಭುತ್ವದ ವಿರುದ್ಧ ಹತ್ತಾರು ಕೇಸುಗಳನ್ನು ದಾಖಲಿಸಿದ್ದಾರೆ! ಬಡಪಟ್ಟಿಗೆ ಸೋಲೊಪ್ಪಿಕೊಳ್ಳುವ ಆಸಾಮಿಯೂ ಅಲ್ಲ. ಮಾಡಲೇನೂ ಕೆಲಸವಿಲ್ಲ ಎಂದು ಕೋರ್ಟ್ ಕಟ್ಟೆ ಹತ್ತಿದ್ದಲ್ಲ. ಅದು ಅವರ ಬದ್ಧತೆ, ಅವರ ನಿಷ್ಠೆ. ಅಣೆಕಟ್ಟುಗಳ 'ಪ್ರವಾಹ'ಕ್ಕೆ ಸಿಲುಕಿರುವ ಗಂಗೆಯನ್ನು ಹೇಗಾದರೂ ಕಾಪಾಡಬೇಕು ಎನ್ನುವುದು ಅವರ ಛಲ, ಹಠ. ಭರತ್ ಜುಂಜನ್‌ವಾಲಾ ಎನ್ನುವ 63ರ ಹರೆಯದ ವ್ಯಕ್ತಿಯ ಹೆಸರು ಕೇಳಿದರೆ ಉತ್ತರಾಂಚಲ, ಉತ್ತರಾಖಂಡ್‌ನ ಅಧಿಕಾರಿಗಳು ಮಾತ್ರವಲ್ಲ, ಕೇಂದ್ರ ಸರ್ಕಾರವೂ ಸಣ್ಣಗೆ ನಡುಗುತ್ತದೆ.
ಶೈಕ್ಷಣಿಕ ವಲಯದಲ್ಲಿ ಹೆಸರು ಗಳಿಸಿರುವ ಭರತ್ ಜುಂಜನ್‌ವಾಲಾ ಜಲಾರ್ಥಶಾಸ್ತ್ರ ಪರಿಣಿತರಾಗಿ ಅದಕ್ಕಿಂತಲೂ ಹೆಚ್ಚು ಖ್ಯಾತಿ ಗಳಿಸಿದವರು. ಗಂಗಾ ನದಿ ಅಂತಲೇ ಅಲ್ಲ, ಅಣೆಕಟ್ಟೆಗಳ ವಿಚಾರದಲ್ಲಿ ಅವರದು ಖಡಕ್ ನಿಲುವು. ಅವರು ಮುಂದಿಡುವ ಅಂಕಿ-ಅಂಶಗಳು ಅಷ್ಟು ಕರಾರುವಾಕ್ಕಾಗಿರುತ್ತವೆ. ಬೆಂಗಳೂರು ಐಐಎಂನಲ್ಲಿ ಪ್ರಾಧ್ಯಾಪಕರಾಗಿ, ನಿವೃತ್ತರಾದ ಬಳಿಕ ನೆಲೆಸಿದ್ದು ಸ್ವಂತ ರಾಜ್ಯ ಉತ್ತರಾಖಂಡದ ಶ್ರೀನಗರದಲ್ಲಿ. ಹೆಣ್ಣು ಮಕ್ಕಳಿಬ್ಬರೂ ವಿದೇಶ ಸೇರಿದ್ದರು. ಸಮಾಜಮುಖಿ ಚಿಂತನೆ ಅವರಿಗೆ ಸುಮ್ಮನಂತೂ ಕುಳಿತುಕೊಳ್ಳಲಾಗಲಿಲ್ಲ. ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದಿದ್ದ, ಬೋಧಕರಾಗಿದ್ದ ಅವರು ಜಲಾರ್ಥಶಾಸ್ತ್ರಜ್ಞರಾಗಿ ರೂಪುಗೊಂಡಿದ್ದು ಆಗಲೇ.
ಊರಿಗೆ ಹೋಗಿ ನೆಲೆಸಿದಾಗ ಗಂಗೆಯ ಉಪನದಿ ಅಲಕಾನಂದಾಕ್ಕೆ ಅಣೆಕಟ್ಟು ಕಟ್ಟುವುದರ ವಿರುದ್ಧ ಚಳವಳಿ ಶುರುವಾಗಿತ್ತು. ಸರಿ, ಜುಂಜನ್‌ವಾಲಾ ಕೂಡ ಅಖಾಡಕ್ಕೆ ಧುಮುಕಿದರು. ಆದರೆ ಇವರ ಹೋರಾಟ ತುಸು ಭಿನ್ನವಾದದ್ದು. ಭಾರಿ ಅಣೆಕಟ್ಟುಗಳ ನಿರ್ಮಾಣಕ್ಕೆ ಕಾನೂನು ಪ್ರಕ್ರಿಯೆ ಮೂಲಕ ಮಾತ್ರವೇ ತಡೆ ಒಡ್ಡಲು ಸಾಧ್ಯ ಎನ್ನುವುದು ಅನುಭವದ ಪಾಠವಾಗಿತ್ತು. ಗಂಗೆಯ ಉಳಿವಿಗಾಗಿ ಅದನ್ನೇ ಪ್ರಯೋಗಿಸಿದರು. ಸಂವಿಧಾನದ ಅಧ್ಯಯನಕ್ಕೆ ತೊಡಗಿದರು. ಯಾವ್ಯಾವ ವಿಧಿ (ಆರ್ಟಿಕಲ್)ಗಳ ಅಡಿಯಲ್ಲಿ ಕೇಸು ಜಡಿಯಲು ಸಾಧ್ಯವೋ ಅಷ್ಟೂ ಅಸ್ತ್ರಗಳನ್ನು ಪ್ರಯೋಗಿಸಿದ್ದಾರೆ. ಕಾನೂನು ಹೋರಾಟದ ಜತೆಜತೆಯಲ್ಲೇ ನದಿ ಮತ್ತು ಅದಕ್ಕೆ ಸಂಬಂಧಿಸಿದ ಯೋಜನೆಗಳನ್ನು ಅರ್ಥಶಾಸ್ತ್ರದ ದೃಷ್ಟಿಕೋನದಲ್ಲಿ ಅಭ್ಯಸಿಸತೊಡಗಿದರು. 'ಎಕಾನಮಿಕ್ಸ್ ಆಫ್ ಹೈಡ್ರೊಪವರ್', 'ಎಕಾನಮಿಕ್ಸ್ ಆಫ್ ರಿವರ್ ಫ್ಲೋಸ್: ಲೆಸನ್ಸ್ ಫ್ರಂ ಡ್ಯಾಂ ರಿಮೂವಲ್ಸ್ ಫ್ರಂ ಅಮೆರಿಕ' ಸೇರಿದಂತೆ ನದಿ ಅರ್ಥಶಾಸ್ತ್ರಕ್ಕೆ ಸಂಬಂಧಿಸಿಯೇ 20ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.
ಗಂಗೆಗಾಗಿ ಏಕಾಂಗಿಯಾಗಿ ಕಾನೂನು ಹೋರಾಟ ನಡೆಸುತ್ತಿರುವ 'ಯೋಧ' ಜುಂಜನ್‌ವಾಲಾ ಜತೆ ಒಂದುದಿನ ಕಳೆಯುವ, ಅವರ ಅನುಭವ ಕಥನವನ್ನು ಹಂಚಿಕೊಳ್ಳುವ ಅವಕಾಶ ಅನಾಯಾಸವಾಗಿ ನನಗೆ ಬೆಂಗಳೂರಿನಲ್ಲೇ ದಕ್ಕಿತ್ತು. ಅಣೆಕಟ್ಟುಗಳ ಬಗ್ಗೆ ಸಿಡಿದು ಬೀಳುವ ಅವರೊಂದಿಗಿನ ಮಾತುಕತೆಯ ಸಾರಾಂಶ ಇಲ್ಲಿದೆ...
ಶ್ರೀವಿಶೇಷ ಗಮನಿಸಿ, ನಮ್ಮಲ್ಲಿ ದೇಶದಲ್ಲಿರುವ ಎಲ್ಲ ಭಾರಿ ಅಣೆಕಟ್ಟುಗಳ ಹಿಂದೆ ಹಿಡಿದಿಟ್ಟ ನೀರಿನಷ್ಟೇ ಪ್ರಮಾಣದ ಅಂತರ್ಜಲ ನೀರಾವರಿಗೆ ಉಪಯೋಗವಾಗುತ್ತಿದೆ. ದೇಶದ ಜನಸಂಖ್ಯೆಯ ಮುಕ್ಕಾಲಕ್ಕೂ ಹೆಚ್ಚು ಪಾಲು ಜೀವನ ನೆಲದಡಿಯ ನೀರನ್ನೇ ಅವಲಂಬಿಸಿದೆ. ಸ್ವಾತಂತ್ರ್ಯಾನಂತರದ ದಿನಗಳಲ್ಲಿ ನೀರಾವರಿ ಯೋಜನೆಗಳ ಹೆಸರನ್ನು ಹೇಳುತ್ತಲೇ ಬಂದಿದ್ದೇವೆ. ಅಂಥ ಯೋಜನೆಯ ಸಂಖ್ಯೆಯೂ ಸಾಕಷ್ಟು ಹೆಚ್ಚಿದೆ. ಇಷ್ಟಾದರೂ, ಕೃಷಿ, ಕೈಗಾರಿಕೆಗಳಿಗೂ ನೆಲದಡಿಯ ನೀರಿನ ಬಳಕೆ ನಿಂತಿಲ್ಲ. ಏನಿದರ ಅರ್ಥ?
ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದೇವೆ. ಭಾರಿ ಅಣೆಕಟ್ಟುಗಳ ಬಳಿಕ ಇತ್ತೀಚೆಗೆ ಬಲಗೊಂಡಿರುವುದು ನದಿಗಳ ಜಾಲದ್ದು. ಇದಕ್ಕಾಗಿ ಸರಕಾರಗಳು ಕೋಟಿಗಟ್ಟಲೆ ಹಣ ಸುರಿಯಲು ಆಸಕ್ತಿ ತೋರಿಸುತ್ತಿವೆ. ಅವರು ಹೇಳುತ್ತಿರುವುದನ್ನು ಕೇಳಿದರೆ ನದಿಗಳನ್ನು ಬೆಸೆದ ಮೇಲೆ ನೆಲದ ಮೇಲೆ ನೀರಿನ ಸಮಸ್ಯೆಯೇ ಇರುವುದಿಲ್ಲ ಎಂದುಕೊಳ್ಳಬೇಕು. ಆದರಿದು ಕಾರ್ಯ ಸಾಧುವೇ?
ದೇಶದಲ್ಲಿ ಇಂದಿಗೂ ಶೇ.50 ಭೂಭಾಗಕ್ಕೆ ಅಂತರ್ಜಲ ಬಿಟ್ಟು ಅನ್ಯ ಆಸರೆಯಿಲ್ಲ. ಇದರ ನಡುವೆಯೇ 'ನೀರು ಸರಬರಾಜು ಯೋಜನೆ' ಎಂಬ ಸರಕಾರಿ ಪ್ರಾಯೋಜಿತ ಕಾರ್ಯಕ್ರಮ ಎಗ್ಗಿಲ್ಲದೇ ಸಾಗಿದೆ. ಹಳ್ಳಿ ಹಳ್ಳಿಗಳಿಗೆ (ಕಾಗದದ ಮೇಲೆ) ಇವು ತಲುಪಿವೆ. ದುರಂತವೆಂದರೆ ಇಂಥ ಕಾರ್ಯಕ್ರಮಗಳು ಅನುಷ್ಠಾನಗೊಂಡಿರುವ ಸ್ಥಳಗಳಲ್ಲಿ ನೀರಿಗಾಗಿನ ಹಾಹಾಕಾರ ಉಲ್ಬಣಿಸಿದೆ.
ಗಮನಾರ್ಹ ಸಂಗತಿಯೆಂದರೆ, ಹೀಗೆ 'ನೀರು ಸರಬರಾಜು' ಇಲ್ಲದ ಹಳ್ಳಿಯ ಮೂಲೆಗಳಲ್ಲಿ, ಗುಡ್ಡಗಾಡುಗಳಲ್ಲಿ ಇಂದಿಗೂ ಜಲ ಸ್ವಾವಲಂಬನೆ ಅಸ್ತಿತ್ವದಲ್ಲಿದೆ. ಅದು ಕಾನೂನಾಗಲೀ, ಕಾರ್ಯಕ್ರಮವಾಗಿಯಾಗಲೀ ಹೇರಿಕೆಯಾಗಿಲ್ಲ. ಸಹಜ ಜೀವನವಾಗಿಯೇ ಸಾಗಿದೆ. ಆದ್ದರಿಂದ ನೀರಿನ ವಿಚಾರದಲ್ಲಿ ಸಂಕಷ್ಟವೆಂಬುದನ್ನು ಆ ಮಂದಿ ಅರಿತಿಲ್ಲ.
ಭಾರಿ ನೀರಾವರಿ ಯೋಜನೆಗಳೆಂದರೆ ಅದು ಮತ್ತೊಂದು ರೀತಿಯ ನೀರಿನ ದುರುಪಯೋಗ ಎಂಬಂತಾಗಿದೆ. ಲಕ್ಷಾಂತರ ಎಕರೆ ಜಮೀನು ಜೌಗು ಪ್ರದೇಶವಾಗಿ ಪ್ರಯೋಜನಕ್ಕೆ ಬಾರದೆ ಹೋಗುತ್ತಿದೆ. ನೆಲದಲ್ಲಿ ಕ್ಷಾರಾಂಶ ಹೆಚ್ಚುತ್ತಿದೆ. ಉತ್ತಮ ಜಮೀನು ಜವಳು ಭೂಮಿಯಾಗಿ ಕೃಷಿ ಯೋಗ್ಯತೆಯನ್ನೇ ಕಳೆದುಕೊಳ್ಳುತ್ತಿದೆ.
ನಮಗೆ ಇದು ತಿಳಿದಿಲ್ಲವೆಂದಲ್ಲ. ಆದರೂ ಕಾಲುವೆ, ಪೈಪುಗಳಲ್ಲಿ ನೀರು ಬಂದು ಜಮೀನಿಗೆ ತಲುಪಿ ಬಿಡಬೇಕು ಎಂದು ಬಯಸುತ್ತಿದ್ದೇವೆ. ಹೇರಳ ನೀರು ದೊರಕಿಸಿಕೊಂಡು ಬಿಡುತ್ತೇವೆಂಬ ಭ್ರಮೆಯಲ್ಲಿ ಕೊಳವೆ ಬಾವಿಗಳನ್ನು ಕೊರೆಯುತ್ತಲೇ ಬರುತ್ತಿದ್ದೇವೆ. ನೀರೆತ್ತುವ ಪಂಪುಗಳನ್ನು ಜೋಡಿಸಿ, ಜಲ ಸಂಪತ್ತನ್ನು ಬರಿದು ಮಾಡಿಕೊಂಡು ಕಂಗಾಲಾಗುತ್ತಿದ್ದೇವೆ. ನಮ್ಮ ಯೋಜನೆಗಳು, ಅದಾವುದೇ ಆಗಿರಲಿ, ಬಾಳಿಕೆ ಬರಬೇಕು. ಸುಸ್ಥಿರವಾಗಬೇಕು. ನೈಜ ಸಾರ್ಥಕತೆ ಪಡೆಯುವುದಾದರೆ ಮುಂದಿನ ಪೀಳಿಗೆಗೂ ದಕ್ಕಬೇಕು.
ಆಧುನಿಕ ತಂತ್ರಜ್ಞಾನ ಇರಲಿ, ತಪ್ಪಿಲ್ಲ. ಅದು ಇರುವ ಸೌಲಭ್ಯಕ್ಕೆ ಪೂರಕವಾಗುವುದಾದರೆ ಸರಿ. ಇರುವುದನ್ನು ನಾಶ ಮಾಡುವುದೇ ಆದಲ್ಲಿ, ಸಮಸ್ಯೆಗಳಿಗೆ ಉತ್ತರವನ್ನಾದರೂ ದೊರಕಿಸಿಕೊಡುವಂತಿರಬೇಕು. ಅದರೊಂದಿಗೆ ಹೊಸ ಸಮಸ್ಯೆಗಳನ್ನೂ ಸೃಷ್ಟಿಸುವುದಾದರೆ ಅದು ಅಭಿವೃದ್ಧಿ ಹೇಗಾದೀತು?
ಅದು ಹನಿ ನೀರಾವರಿ ಪದ್ಧತಿ ಇರಬಹುದು, ಚಿಮ್ಮು ನೀರಾವರಿ ಪದ್ಧತಿಯಿರಬಹುದು... ಈ ಆಧುನಿಕ ಕ್ರಮಗಳು ವ್ಯತಿರಿಕ್ತ ಪರಿಣಾಮಗಳಿಂದ ಮುಕ್ತ. ಅದು ಬಿಟ್ಟು ಏತದ ಮೂಲಕ ನದಿಯ ದಿಕ್ಕನ್ನೇ ಬದಲಿಸಿಬಿಡುತ್ತೇವೆಂಬ ಭ್ರಮೆಯಲ್ಲಿ ಯಾವ ಪುರುಷಾರ್ಥವಿದೆ?
ನೀರು ಸ್ವಲ್ಪವೂ ಪೋಲಾಗದಂತೆ ಎಲ್ಲರಿಗೂ ಸಮಾನ ಹಂಚಿಕೆ ಮಾಡುವ ಹಲವಾರು ಉಪಕ್ರಮಗಳು ದೇಶೀಯವಾಗಿಯೇ ಅನುಸರಣೆಯಲ್ಲಿವೆ. ಅವುಗಳನ್ನು ಅಭಿವೃದ್ಧಿಪಡಿಸಲು, ಸಮಕಾಲೀನ ಸ್ಥಿತಿಗತಿಗಳಿಗನುಗುಣವಾಗಿ ಹೊಂದಿಸಿಕೊಳ್ಳಲು ಹೆಚ್ಚೇನೂ ಶ್ರಮವೂ ಬೇಕಿಲ್ಲ, ಆರ್ಥಿಕ ಹೊರೆಯೂ ಇಲ್ಲ. ಆ ಬಗ್ಗೆ ನಾವು ಈವರೆಗೆ ಯೋಚಿಸಿಯೇ ಇಲ್ಲ. ನಮ್ಮದೇನಿದ್ದರೂ ಕೋಟಿಗಳ ಗಾತ್ರದ ಯೋಜನೆಗಳು. ಹರಿವ ನೀರಿನ ಬಳಕೆಗೆ ಹತ್ತಾರು ಸುಲಭ ಮಾರ್ಗಗಳಿವೆ. ಅದಕ್ಕೆ ಬೃಹತ್ ಅಣೆಕಟ್ಟೆಗಳೇ ಆಗಬೇಕೆಂದಿಲ್ಲ.
ನೀವು ನಂಬಬೇಕು. ಇಸ್ರೇಲ್ ಈ ವಿಚಾರದಲ್ಲಿ ಮಾದರಿ. ಅಂಥ ಮರುಭೂಮಿಯಲ್ಲೂ ಅತ್ಯಂತ ಸಮೃದ್ಧ ಬೆಳೆ ಬೆಳೆಯುತ್ತಿದ್ದಾರೆ. ದೇಶದ ಬಳಕೆ ಪೂರೈಸಿಕೊಂಡು ಒಂದಿಡೀ ಯುರೋಪಿಗೆ ಹಣ್ಣು ಹಂಪಲು, ತರಕಾರಿಗಳನ್ನು ರಫ್ತು ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಅಂತರ್ಜಲ ಬಳಕೆಯ ಹತೋಟಿಯಿಂದ ಅಲ್ಲಿನ ನೀರಾವರಿ ಪ್ರದೇಶ ಒಂದಕ್ಕೆ ಎರಡರಷ್ಟು ಹೆಚ್ಚಿದೆ.
ಚಿಕ್ಕಪುಟ್ಟ ಮಣ್ಣಿನ ದಂಡೆಗಳೂ ಹರಿಯುವ ನೀರಿನ ಪ್ರಯೋಜನವನ್ನು ಪಡೆಯಲು ಅರ್ಥಿಕ ದೃಷ್ಟಿಯಿಂದ ಲಾಭಕರವಾದವು. ಪರಿಸರ ದೃಷ್ಟಿಯಿಂದ ಅದು ವಿವೇಕಯುತ ಮಾರ್ಗ. ಚಂಡೀಗಢ ಸಮೀಪದಲ್ಲಿ ಹೀಗೆ ರಚಿಸಿರುವ ಮೂರು ಚಿಕ್ಕ ಜಲಾಶಯಗಳು ಒಂದು ಗ್ರಾಮದ ಸಂಪತ್ತನ್ನು ಬೇಕಾದಷ್ಟು ಹೆಚ್ಚಿಸಿದೆ. ಅಲ್ಲಿ ಯಾವ ಭೂಮಿಯೂ ಕೊರೆದು ಹೋಗಿಲ್ಲ. ಅರಣ್ಯವೂ ನಾಶವಾಗಿಲ್ಲ. ಪ್ರತಿಯಾಗಿ ಮರುಭೂಮಿಯೂ ಸೃಷ್ಟಿಗೊಂಡಿಲ್ಲ. ಯಾವೊಬ್ಬನನ್ನೂ ಅವನಿದ್ದ ಸ್ಥಳದಿಂದ ಓಡಿಸಿಲ್ಲ. ಇದರಿಂದ ನಾವು ಕಲಿಯಲೇಬೇಕಾದ ಪಾಠವೆಂದರೆ ನೀವು ಜಲಸಂಪತ್ತನ್ನು ರಕ್ಷಿಸುತ್ತೀರಾದರೆ ಅವಶ್ಯವಾಗಿ ರಕ್ಷಿಸಿ. ಅದರ ಬದಲು ಮಹಾ ಮಹಾ ಒಡ್ಡುಗಳನ್ನು ಕಟ್ಟುತ್ತೀರಾದರೆ ಅವು ಖಂಡಿತವಾಗಿಯೂ ಬೇಡ.
ಹಿಂದೊಂದು ಕಾಲದಲ್ಲಿ ಭಾರತದ ಅಭಿವೃದ್ಧಿಯ ಸಂಕೇತವೇ ಮಹಾ ಒಡ್ಡುಗಳು ಎಂಬ ಭಾವನೆಯಿತ್ತು. ಇಂದು ಅಂಥ ಭ್ರಮೆ ಕಳಚಿ ಹೋಗಿದೆ. ಅವುಗಳ ದುಷ್ಪರಿಣಾಮವನ್ನು ಕುರಿತು ಜನರು ಚಿಂತೆಗೀಡಾಗಿದ್ದಾರೆ. ಹಾಗಿದ್ದರೂ ಇನ್ನೂ ಆ ಬಗ್ಗೆ ಧನವ್ಯಯ ಮಾಡುವುದನ್ನು ಕಾಣುತ್ತಿದ್ದೇವೆ. ಇವತ್ತು ಭಾರತದ ಯಾವತ್ತೂ ಪ್ರಮುಖ ನದಿಗಳಿಗೆ ಒಡ್ಡನ್ನು ಈಗಾಗಲೇ ಕಟ್ಟಿದ್ದಾರೆ. ಅಥವಾ ಕಟ್ಟುತ್ತಿದ್ದಾರೆ. ಆದರೆ ಈ ಮೂಲಕ ಜಲ ಮೂಲ ವಿದ್ಯುತ್ ಉತ್ಪಾದನೆಯ ಲಾಭ ದೊರೆತದ್ದು ತೀರಾ ಸ್ವಲ್ಪ. ಹೀಗಾಗಿ ಒಡ್ಡುಗಳ ನಿರ್ಮಾಣವೇ ನಮಗೆ ಅಭಿವೃದ್ಧಿಯ ಪ್ರಧಾನ ಚಟುವಟಿಕೆಯಾಗಿ ಕಾಣಿಸುವಂತಿದೆ.
ಆದರೆ ಪರಿಸರ ದೃಷ್ಟಿಯಿಂದ ಈಚೆಗೆ ಉಂಟಾದ ಅನುಭವಗಳೆಂದರೆ ಈ ಒಡ್ಡುಗಳು ಎಷ್ಟೆಷ್ಟು ದೊಡ್ಡದಾ ಗುತ್ತವೋ, ಪರಿಸರ ವಿನಾಶ ಅಷ್ಟಷ್ಟು ಹೆಚ್ಚಿಗೆ ಆಗುತ್ತದೆ ಎಂದು. ಹೀಗಿರುತ್ತಾ ಪರಿಸರಕ್ಕೆ ಧಕ್ಕೆ ತಾರದಂತೆ ಬೇರೇನೂ ಕೆಲಸ ಮಾಡಲು ಬರಲಾರದೇ- ಎಂಬ ಪ್ರಶ್ನೆ ನಮ್ಮ ಮುಂದಿದೆ. ಬೆಳೆಯುತ್ತಿರುವ ದೇಶದ ಜನಸಂಖ್ಯೆಗೆ ಆಹಾರವನ್ನು ಒದಗಿಸಬೇಕು ಮತ್ತು ಉದ್ಯಮಗಳಿಗೆ ಚೈತನ್ಯವನ್ನು ಒಗಿಸಬೇಕು ಎಂಬ ಸಂಗತಿ ನಿಜವಾದರೂ ಅವುಗಳಿಂದುಂಟಾಗುವ ಹಾನಿಯನ್ನು ತಡೆಯಲು ಪ್ರಯತ್ನಿಸಬೇಡವೇನು?
ಅಭಿವೃದ್ಧಿಯ ವ್ಯಾಖ್ಯಾನದ ಸಂದರ್ಭದಲ್ಲಿ ನಾವು ಪ್ರತಿಪಾದಿಸುತ್ತಿರುವ ಆರ್ಥಿಕ ಸಬಲತೆ, ಆಹಾರ ಸ್ವಾವಲಂಬನೆಯ ವಿಚಾರಗಳು ನೀರಿನ ವಿಷಯಕ್ಕೂ ಅನ್ವಯವಾಗಬೇಕು. ಸಾಮುದಾಯಿಕ ಪ್ರಯತ್ನಗಳ ಮೂಲಕ ಪ್ರತಿಯೊಬ್ಬನ ನೀರಿನ ಅಗತ್ಯ ಪೂರೈಕೆಯಾಗಬೇಕು. ನೀರು ಸರಕಾರಿ ಯೋಜನೆಯಾಗದೇ ವ್ಯಕ್ತಿಗತ ಕಾಳಜಿಯಾಗಬೇಕು. ಶುದ್ಧ ಜಲದ ಹಕ್ಕು ಸಂರಕ್ಷಣೆಗೊಳ್ಳಬೇಕು. ನೀರಿನ ವಿಚಾರದಲ್ಲಿ 'ಆಡಳಿತ' ಕೈ ಹಾಕುವುದೇ ಆದರೆ ಸುಸ್ಥಿರ ಪದ್ಧತಿಗಳನ್ನು ಪರಿಚಯಿಸಬೇಕು. ಪಾರಂಪರಿಕ ವಿಧಾನಗಳು ಮಾತ್ರವೇ ನೀರನ್ನು ನೀರಿನ ಸ್ವರೂಪದಲ್ಲಿ ಉಳಿಸಿ ದೇಶವಾಸಿಗಳ ದಾಹ ತಣಿಸಬಹುದೇ ವಿನಾ ಉಳಿದೆಲ್ಲ ಆಧುನಿಕ ತಂತ್ರಜ್ಞಾನಗಳು ಅದನ್ನು ಇನ್ನಷ್ಟು ಕುಲಗೆಡಿಸುತ್ತವೆ.
ಶ್ರೀಶ್ರೀಶ್ರೀ
ಇದನ್ನೇ ಇನ್ನೊಂದು ದೃಷ್ಟಿಕೋನದಿಂದ ನೋಡೋಣ. ಅಣೆಕಟ್ಟೆ ನಿರ್ಮಾಣದ ಅಂತಿಮ ಉದ್ದೇಶವಾದರೂ ಏನು? ಜನಹಿತ ತಾನೆ? ಜನಹಿತ ಎನ್ನುವುದು ಸಮಗ್ರ ದೃಷ್ಟಿಕೋನ ಹೊಂದಿರಬೇಕು. ವಿಷಾದ ಎಂದರೆ ನಮ್ಮಲ್ಲಿ ಯೋಜನೆಗಳನ್ನು ರೂಪಿಸುವಾಗ ಅಂಥ ಸಮಗ್ರತೆಯೇ ಇರುವುದಿಲ್ಲ. ಜನರಿಗೆ ನದಿಗಳ ಮುಕ್ತ ಹರಿವು ನೋಡುವುದು, ಅದರಲ್ಲಿ ಪವಿತ್ರ ಸ್ನಾನ ಮಾಡುವುದು ಎಂದಿಗೂ ಖುಷಿ, ತೃಪ್ತಿಯ ವಿಚಾರವೇ. ಅಣೆಕಟ್ಟುಗಳನ್ನು ನಿರ್ಮಿಸಿ ಮುಕ್ತ ಹರಿವಿಗೆ ತಡೆ ಒಡ್ಡಿದರೆ ಇಂಥ ತೃಪ್ತಿ ಸಿಗುತ್ತದೇನು? ಸರಾಗ ಹರಿವಿಗೆ ತಡೆ ಒಡ್ಡುತ್ತೇವೆ ಎಂದರೆ ಅದರ ಪಾವಿತ್ರತೆಯನ್ನು ಹಾಳು ಮಾಡುತ್ತಿದ್ದೇವೆ ಎಂದೇ ಅರ್ಥ. ಇಂಥ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಭಾವನೆಗಳನ್ನು ಯೋಜನೆ ರೂಪಿಸುವವರು ಪರಿಗಣಿಸುವುದೇ ಇಲ್ಲ. ಅಣೆಕಟ್ಟೆಯಿಂದ ನದಿಗೆ ಒಂದಷ್ಟು ಪ್ರಮಾಣದ ನೀರು ಹರಿಯಬಿಟ್ಟರೆ ಆ ನದಿ ಜೀವಕಳೆಯಿಂದ ಕೂಡಿರುತ್ತದೆ ಎನ್ನುವುದು ಮೂರ್ಖತನವಾದೀತು.
ಅರ್ಥಶಾಸ್ತ್ರದಲ್ಲಿ ಮೌಲ್ಯವನ್ನು ಕಂಡುಹಿಡಿಯಲು 'ಹಣ ನೀಡಲು ಸಮ್ಮತಿ' ಎನ್ನುವ ವಿಧಾನ ಇದೆ. ನದಿಯಲ್ಲಿ ಸ್ನಾನ ಮಾಡುವವರು ಅದರ ಮುಕ್ತ ಹರಿವನ್ನು ಕಾಪಿಟ್ಟುಕೊಳ್ಳುವ ಪ್ರಯತ್ನಕ್ಕೆ ಎಷ್ಟು ಹಣ ಪಾವತಿಸಲು ಇಚ್ಛಿಸುತ್ತಾರೆ ಎಂದು ಲೆಕ್ಕ ಹಾಕುವುದು. ಬೃಹತ್ ಒಡ್ಡುಗಳನ್ನು ನಿರ್ಮಿಸುವಾಗ ಈ ರೀತಿಯ 'ಅಪರೋಕ್ಷ ವೆಚ್ಚ'ಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದೇ ಇಲ್ಲ. ಅಧಿಕಾರಿಯೊಬ್ಬರು ಪದೇಪದೇ ಹೇಳುತ್ತಿದ್ದ ಮಾತು ಎಂದರೆ, 'ಇಂಥ ಅಪರೋಕ್ಷ ವೆಚ್ಚಗಳನ್ನು ಲೆಕ್ಕ ಹಾಕುತ್ತ ಹೋದರೆ ಭಾರತದಲ್ಲಿ ಒಂದೇ ಒಂದು ಅಣೆಕಟ್ಟೆ ಕಟ್ಟಲೂ ಸಾಧ್ಯವಿಲ್ಲ!'. ಅಂದರೆ ನಮ್ಮಲ್ಲಿ ನಿರ್ಮಾಣವಾಗುವ ಅಣೆಕಟ್ಟುಗಳ ವೆಚ್ಚ ವಾಸ್ತವಿಕವಾಗಿರುವುದಿಲ್ಲ ಎನ್ನುವುದನ್ನು ಇದು ಸೂಚಿಸುತ್ತದೆ. ಅಮೆರಿಕದ ವಾಷಿಂಗ್ಟನ್‌ನಲ್ಲಿ ಸರ್ಕಾರ ಜನರ ನಾಡಿಮಿಡಿತ ಅರಿಯುವ ಪ್ರಯತ್ನ ಮಾಡಿತು. ವಿದ್ಯುತ್‌ಗಿಂತ ನದಿಯ ಮುಕ್ತ ಹರಿವು ಮುಖ್ಯ ಎನ್ನುವ ಅಭಿಪ್ರಾಯವನ್ನು ಪ್ರಜೆಗಳು ವ್ಯಕ್ತಪಡಿಸಿದ್ದರಿಂದ ಎಲ್ವಾ ಅಣೆಕಟ್ಟೆಯನ್ನು ತೆರವುಗೊಳಿಸಿದೆ. ವಿದ್ಯುತ್ ಬೇಕು ನಿಜ. ಆದರೆ ಅದಕ್ಕಾಗಿ ನದಿಯೊಂದಿಗಿನ ನಮ್ಮ ಭಾವನಾತ್ಮಕ ಸಂಬಂಧಗಳನ್ನು ಬಲಿಗೊಡಬೇಕೆ?
ಇದೇ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಜುಂಜನ್‌ವಾಲಾ ನಿರಂತರ ಕಾನೂನು ಹೋರಾಟ ನಡೆಸುತ್ತಲೇ ಇದ್ದಾರೆ. ಅಲ್ಲಿಂದ ಇಲ್ಲಿಯವರೆಗೆ ಅದೇಷ್ಟೋ ಕೊಳಚೆ ಬಂದು ಗಂಗೆಯನ್ನು ಸೇರಿದೆ. ಗಂಗೆಯ ಮಾಲಿನ್ಯವೂ ಜುಂಜನ್‌ವಾಲಾರ ಹೋರಾಟದಂತೆ ಅನಿವಾರ್ಯವೇ?
-ರಾಧಾಕೃಷ್ಣ ಎಸ್. ಭಡ್ತಿ
abhyagatha@yahoo.co.in
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

