ಪಟ್ಟಿ ಸಿದ್ಧವಾಗಿದೆ; ಪ್ರಕಟಣೆ ತಡವಾಗಿದೆ
ಹೆಚ್ಚು ಕಡಿಮೆ ಎಲ್ಲ ರಾಜಕೀಯ ಪಕ್ಷಗಳಲ್ಲೂ ರಾಜ್ಯ ವಿಧಾನ ಸಭೆಯ ಚುನಾವಣೆಯ ಅಭ್ಯರ್ಥಿಗಳ ಆಯ್ಕೆಯ ಪ್ರಕ್ರಿಯೆ ಮುಗಿದಂತಿದೆ. ಆದರೆ ಅಧಿಕೃತವಾಗಿ ಪಟ್ಟಿಯನ್ನು ಪ್ರಕಟಿಸುವ ಧೈರ್ಯ ಸಾಲದೇ ಅದನ್ನು ಮುಂದಕ್ಕೆ ಹಾಕಲಾಗಿದೆ.
ಪಾಪ. ಕಾಂಗ್ರೆಸ್ಸಿನ ಅತ್ಯುನ್ನತ ಮಟ್ಟದ ನಾಯಕಿ, ಕೇಂದ್ರದಲ್ಲಿ ಸರ್ಕಾರ ನಡೆಸುತ್ತಿರುವ ಕೂಟದ ಮುಖ್ಯಸ್ಥೆ, ಅರವತ್ತೇಳು ವರ್ಷಗಳನ್ನು ದಾಟಿರುವ ಸೋನಿಯಾ ಗಾಂಧಿ, ವೈದ್ಯ ಪರೀಕ್ಷೆಗೆಂದು ಅಮೆರಿಕಕ್ಕೆ ತೆರಳುವ ಮುನ್ನ ಅಧಿಕೃತ ಪಟ್ಟಿಯನ್ನು ನೋಡುವುದಕ್ಕೇ ಆಗಲಿಲ್ಲ. ನಿಜಕ್ಕೂ ನಮ್ಮ ರಾಜಕಾರಣಿಗಳು, ರಾಜಕೀಯಕ್ಕೆ ತಂದಿಟ್ಟಿರುವ ದುಸ್ಥಿತಿಯನ್ನು ತಿಳಿಯಲಿಕ್ಕೆ ಇದಕ್ಕಿಂತ ಬೇರೆ ಸಾಕ್ಷ್ಯ - ಆಧಾರ ಬೇಕಾಗಿಲ್ಲ. ಯಾಕೆ? ಕೆಲವು ಕ್ಷೇತ್ರಗಳು, ಹೆಸರುಗಳನ್ನು ಕುರಿತಂತೆ ಇನ್ನಷ್ಟು ಪರಿಶೀಲನೆಗೆ ಅಗತ್ಯವೆನಿಸಿದರೆ, ಅಷ್ಟನ್ನು ಮಾತ್ರ ಉಳಿಸಿಕೊಂಡು ಇತರ ಹೆಸರುಗಳನ್ನು ಪ್ರಕಟಿಸಬಾರದಾಗಿತ್ತಾ? ಅದೂ ಅಸಾಧ್ಯವಾಗಿತ್ತು.
ಎಲ್ಲ ಪಕ್ಷಗಳಲ್ಲೂ ಈಗ ಆಂತರಿಕವಾಗಿ ಅನಿಶ್ಚಿತತೆ ಕಾಡಿದೆ. ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದ ಕೂಡಲೇ ಬಂಡಾಯದ ಬಾವುಟ ಹಾರಾಡುವ ಹೆದರಿಕೆ ಎಲ್ಲ ಪಕ್ಷಗಳಲ್ಲೂ ಇದೆ.
ಆದರೆ ಪ್ರಮುಖ ಪಕ್ಷಗಳ ಅಭ್ಯರ್ಥಿಗಳ ಅನಧಿಕೃತ ಪಟ್ಟಿಗಳು ಅನೇಕರ ಜೇಬಿನಲ್ಲಿರುವುದು ನಿಜ. ಅದರ ಆಧಾರದ ಮೇಲೇ ಹೇಳಿಕೆಗಳೂ ಪ್ರಕಟವಾಗುತ್ತಿವೆ. ಬಂಡಾಯಕ್ಕೆ ಸಿದ್ಧತೆಯೂ ನಡೆದಿದೆ. ಪಕ್ಷದಲ್ಲಿನ ಎದುರಾಳಿಯನ್ನು ಸೋಲಿಸಲು ಕೆಲವರು ತಂತ್ರಗಳನ್ನು ಹೆಣೆಯಲು ಆರಂಭಿಸಿದ್ದಾರೆ. ರಾಜಕೀಯ ಪಕ್ಷಗಳು, ಅಂದರೆ ಆ ಪಕ್ಷಗಳ ಪ್ರಮುಖರು, ತಾವೇ ರೂಪಿಸಿದ ಟಿಕೆಟ್ ಹಂಚಿಕೆಯ ಮಾನದಂಡವನ್ನು ಸರಿಯಾಗಿ ಅನುಸರಿಸಿದ್ದರೆ, ಬಂಡಾಯದ ಲಕ್ಷಣ ಕಂಡು ಬಂದರೂ ಹೆದರಬೇಕಾಗಿರಲಿಲ್ಲ. ಆದರೆ ಎಲ್ಲ ಪಕ್ಷಗಳಲ್ಲೂ ಸೂತ್ರಗಳನ್ನು ರಚಿಸುವವರ, ಪ್ರಣಾಳಿಕೆಗಳನ್ನು ಬರೆಯುವವರ ವರ್ಗವೇ ಬೇರೆ, ನಿಜ ರಾಜಕೀಯದ ಮೈದಾನದಲ್ಲಿಳಿದು, ಮೈಮುಖಗಳಿಗೆ ಧೂಳಿನ ಸ್ನಾನ ಮಾಡಿಸಿಕೊಂಡು ಚುನಾವಣೆಯಲ್ಲಿ ಗೆಲ್ಲುವವರು, ಸೋಲುವವರೇ ಬೇರೆ.
ಇಂತಹ ಸೂತ್ರಗಳ ಮಾತು ಬಂದಾಗ, ರಾಹುಲ ಗಾಂಧಿ, ಕಾಂಗ್ರೆಸ್ಸಿನ ಉಪಾಧ್ಯಕ್ಷರಾಗಿ ಸೂತ್ರಗಳನ್ನು ಸೂಚಿಸಿದ್ದು, ನೆನಪಾಗುತ್ತದೆ. ಆ ಸೂತ್ರಗಳೆಲ್ಲ ಈಗ ಕೇವಲ ನೆನಪಷ್ಟೇ. ಸಂಭಾವ್ಯ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯಲ್ಲಿ ಸಿಕ್ಕ ತುಣುಕುಗಳನ್ನು ಗಮನಿಸಿದರೆ, ಕಾಂಗ್ರೆಸ್ ಎಲ್ಲ ಸೂತ್ರಗಳನ್ನೂ ಗಾಳಿಗೆ ತೂರಿರುವುದು ಸ್ಪಷ್ಟವಾಗಿ ಗೋಚರವಾಗಿದೆ.
ಸುದರ್ಶನ ಪತ್ರದ ಕಳಕಳಿ: ಈ ಸಮಯದಲ್ಲಿ ಕಾಂಗ್ರೆಸ್ಸಿಗೆ ಸಂಬಂಧಿಸಿದಂತೆ, ಕೆಲವು ಸಂಗತಿಗಳನ್ನು ಗಮನಿಸುವುದು ಸೂಕ್ತ. 2012 ರಲ್ಲಿ ವಿಧಾನ ಸಭೆಯಿಂದ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ನಾಲ್ವರು ಕಾಂಗ್ರೆಸ್ ಶಾಸಕರು ಅಡ್ಡ ಮತ ಹಾಕಿದ್ದರಿಂದ ಪಕ್ಷದಿಂದ ಗೆಲ್ಲಲೇಬೇಕಾಗಿದ್ದ ಇಕ್ಬಾಲ್ ಖಾದರ್ ಸರಡಗಿ ಸೋತರು. ಇಲ್ಲಿ ಅಡ್ಡ ಮತವನ್ನು ಹಾಕುವುದು ಸಿದ್ಧಾಂತ ಬದ್ಧತೆಯ ಪ್ರಶ್ನೆಯೂ ಅಲ್ಲ, ತತ್ವನಿಷ್ಠೆಯೂ ಅಲ್ಲ ಎಂದಿಟ್ಟುಕೊಂಡರೂ, ಅದು ಶಿಸ್ತಿನ ಪ್ರಶ್ನೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಈ ಪ್ರಕರಣದ ತನಿಖೆ ನಡೆಸಿ ವರದಿ ನೀಡುವ ಹೊಣೆಯನ್ನು ಸಜ್ಜನ ಕಾಂಗ್ರೆಸ್ಸಿನ, ಪ್ರಾಮಾಣಿಕ ಹಾಗೂ ಹಿಂದುಳಿದ ಜಾತಿಯ 'ಸಂಯಮದ' ನಾಯಕ, ಮಾಜಿ ವಿಧಾನ ಪರಿಷತ್ ಸಭಾಪತಿ ವಿ.ಆರ್. ಸುದರ್ಶನ ಅವರಿಗೆ ವಹಿಸಲಾಯಿತು.
ಅವರು ಕಷ್ಟಪಟ್ಟು ನಾಲ್ವರು ಕಾಂಗ್ರೆಸ್ "ಅಡ್ಡಮತೀಯ ಶಾಸಕರನ್ನು" ಪತ್ತೆ ಹಚ್ಚಿ ವರದಿ ನೀಡಿದ್ದಾರೆ. ವರದಿಯಲ್ಲಿ ಹೆಸರುಗಳಿಲ್ಲ ಎನ್ನುವುದು ನಿಜ. ಆದರೆ ಹೆಸರುಗಳನ್ನು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಪರಮೇಶ್ವರ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ತಿಳಿಸಿದ್ದಾರೆ.
ಆ ನಾಲ್ವರು ಶಿಸ್ತುಗೇಡಿ ಶಾಸಕರಲ್ಲಿ ಇಬ್ಬರಿಗೆ ಈಗ ಟಿಕೆಟ್ ಸಿಗುವ ಸಂಭವವಿದೆಯಂತೆ. ಈ ವದಂತಿ - ವರದಿಯನ್ನು ಕಾಂಗ್ರೆಸ್ ನಾಯಕರು ಇನ್ನೂ ಅಲ್ಲಗೆಳೆದಿಲ್ಲ. ಕಾಂಗ್ರೆಸ್ ಸೈದ್ಧಾಂತಿಕ, ಬೌದ್ಧಿಕ ಭ್ರಷ್ಟತೆಯಲ್ಲಿ ಯಾವ ರಸಾತಳ, ಪಾತಾಳಕ್ಕೂ ಬೀಳಬಹುದೆನ್ನುವುದಕ್ಕೆ ಇದೇ ಸಾಕ್ಷಿ. ಇನ್ನೊಂದು ದೂರು ಗಮನಿಸಿ. ಪರಿಶಿಷ್ಟ ಜಾತಿ-ಪಂಗಡಗಳಿಗೆ ಮೀಸಲು ಸ್ಥಾನಗಳ ಅವಶ್ಯಕತೆಯ ವಿಚಾರ ಸಂವಿಧಾನ ರಚನಾ ಸಮಿತಿಯಲ್ಲಿ ಚರ್ಚೆಗೆ ಬಂದಾಗಲೇ, ಹಲವು ಮಾಜಿ ಅಸ್ಪೃಶ್ಯ ನಾಯಕರು ನೀಡಿದ್ದ ಎಚ್ಚರಿಕೆ; ಈ ಪಟ್ಟಿಯಲ್ಲಿ ಯಾವುದೇ ಕಾರಣಕ್ಕಾದರೂ ಸ್ಪೃಶ್ಯ ಆದರೆ ತೀರ ಹಿಂದುಳಿದ ಜಾತಿಗಳನ್ನು ಸೇರಿಸಿದರೆ, ನಿಜವಾದ ಅರ್ಹರಿಗೆ ಮಹದನ್ಯಾಯ ಮಾಡಿದಂತೆ ಆದೀತು. ಆ ಎಚ್ಚರಿಕೆಯನ್ನು ಅಂದಿನ ಕಾನೂನು ಮಂತ್ರಿ ಡಾ॥ ಅಂಬೇಡ್ಕರ್ ನಿಜವೆಂದು ಒಪ್ಪಿಕೊಂಡರೂ ಆಗಿನ ಪಟ್ಟಿಯನ್ನು ಬದಲಾಯಿಸುವುದು ಅವರಿಂದ ಸಾಧ್ಯವಾಗಲಿಲ್ಲ. ಆ ಕಾಲದ ಪಿತೂರಿಯ ಚರ್ಚೆ ಈಗ ನಿರರ್ಥಕ.
ಕರ್ನಾಟಕದಲ್ಲಿ ಬೋವಿಗಳು, ಲಮಾಣಿಗಳು ಹಾಗೂ ಇತರ ಕೆಲವು ಜನಾಂಗಗಳಿಗೆ ಸೇರಿದ ಕೆಲವರು ಪರಿಶಿಷ್ಟ ಜಾತಿಗಳವರ ಸೌಲಭ್ಯವನ್ನು ಪಡೆದಿದ್ದಾರೆ. ಅವರಲ್ಲಿ ಬೋವಿಗಳು ಕಂಟ್ರಾಕ್ಟರ್‌ಗಳಾಗಿದ್ದಾರೆ. ರಿಯಲ್ ಎಸ್ಟೇಟ್ ದಂಧೆ ನಡೆಸುತ್ತಾರೆ ಕೆಲವು ಚಿತ್ರಮಂದಿರಗಳ ಮಾಲೀಕರೂ ಇದ್ದಾರೆ. ಅಂತಹ ಬಲಾಢ್ಯರ ವಿರುದ್ಧ ಶೋಷಿತ ಸಮಾಜದ ವ್ಯಕ್ತಿಗಳು ಸ್ಪರ್ಧಿಸಿ ಗೆಲ್ಲುವುದು ಸಾಮಾಜಿಕವಾಗಿ ಕಡುಕಷ್ಟ. ಅದಕ್ಕೊಂದು ಜ್ವಲಂತ ಉದಾಹರಣೆ ಎಂದರೆ 1960 ರ ದಶಕದಲ್ಲಿ ಬಸವಲಿಂಗಪ್ಪ ಅವರಂತಹ ಪರಿಶಿಷ್ಟ ನಾಯಕರನ್ನು ಬೋವಿ ಜನಾಂಗದ ಮುನಿ ಚಿನ್ನಪ್ಪ ಅವರು ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಸೋಲಿಸಿದ್ದು. ಈ ಪ್ರವೃತ್ತಿ ನಿರಂತರವಾಗಿ ನಡೆದು ಬಂದಿದೆ. ಈಗಿನ ಅನಧಿಕೃತ ಕಾಂಗ್ರೆಸ್ ಪಟ್ಟಿಯಲ್ಲೂ ಮೀಸಲು ಸ್ಥಾನಗಳ ಬೋವಿ-ಲಮಾಣಿ ಶ್ರೀಮಂತರ ಪಾಲಾಗಬಹುದೆನ್ನುವ ಭೀತಿ ಅನೇಕ ಕಾಂಗ್ರೆಸ್ಸಿಗರಲ್ಲಿದೆ. ಇದು ಆ ವಿಶಿಷ್ಟ ಜಾತಿಗೇ ಸಂಬಂಧಿಸಿದ ವಿಚಾರವಾದ್ದರಿಂದ ಇತರರು (ಸವರ್ಣೀಯರು, ಜಾತ್ಯತೀತರು, ಬೌದ್ಧಿಕ ನಾಯಕರು) ಮಾತನಾಡಲು ಹಿಂಜರಿಯುತ್ತಿದ್ದಾರೆ ಅದು ಸಹಜವೇ.
ಕಾಂಗ್ರೆಸ್ಸಿಗೇಕೆ ಅಳುಕು: ಚುನಾವಣೆಯಲ್ಲಿ ಕಾಂಗ್ರೆಸ್ಸೇ ಗೆಲ್ಲುವುದು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಿಜೆಪಿಯನ್ನು ಪಾರ್ಶ್ವವಾಯು ಪೀಡಿತವಾಗುವಂತೆ ಮಾಡಿದ್ದಾರೆ, ದೇವೇಗೌಡರ ನೇತೃತ್ವದ ಜಾತ್ಯತೀತ ಜನತಾದಳದ ಪರಿಸ್ಥಿತಿ ಸ್ವಲ್ಪ ಸುಧಾರಿಸಿದ್ದರೂ ಅದು ಅಧಿಕಾರಕ್ಕೆ ಬರುವಷ್ಟು ಶಕ್ತಿಯನ್ನು ಪಡೆದಿಲ್ಲವೆನ್ನುವುದು ಮಾಧ್ಯಮ ಪ್ರಪಂಚದ ಎಲ್ಲ ವಿಭಾಗಗಳೂ ಡಂಗುರ ಹೊಡೆದು ಪ್ರಚಾರ ಮಾಡುತ್ತಿದ್ದರೂ, ಕಾಂಗ್ರೆಸ್ ನಾಯಕರಲ್ಲೇ ಅಂತಹ ವಿಶ್ವಾಸ ಇದ್ದಂತಿಲ್ಲ. ಇದ್ದಿದ್ರೆ ನಾಲ್ವರು ಬಂಡಾಯ ಕಾಂಗ್ರೆಸ್ ಪಕ್ಷೇತರ ಶಾಸಕರಿಗೆ ರತ್ನಗಂಬಳಿಯನ್ನೇಕೆ ಹಾಕಬೇಕಾಗಿತ್ತು?
ಈ ಬಾರಿಯೂ ಕಾಂಗ್ರೆಸ್ ಟಿಕೆಟ್ ಹಂಚಿಕೆಯಲ್ಲಿ ಜಾತಿಯ ಲೆಕ್ಕಾಚಾರ ಇದ್ದಿದ್ದೇ. ಅದು ಸಹಜ, ಆದರೆ ಎಲ್ಲ ಜಾತಿಗಳಲ್ಲೂ, ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳಾದ ಡಾ॥ ಪರಮೇಶ್ವರ, ಸಿದ್ದರಾಮಯ್ಯ ಅವರ ಬೆಂಬಲಿಗರ ನಡುವೆ ಜಗಳಗಳೇ ನಡೆದಿವೆ ಎಂದು ವರದಿ. ಮುಂದಿನ ಕಾಂಗ್ರೆಸ್ ಶಾಸಕಾಂಗ ಪಕ್ಷದಲ್ಲಿ ತಮ್ಮವರೇ ಹೆಚ್ಚಾಗಿರಬೇಕೆಂದು ಪರಮೇಶ್ವರ, ಸಿದ್ದರಾಮಯ್ಯ ಹೋರಾಡಿದ ರೀತಿ-ನೀತಿ ಕಂಡ ಸೋನಿಯಾ ಗಾಂಧಿ ಅವರು, ಎ.ಕೆ. ಆಂಟನಿ ನೇತೃತ್ವದ ಸಮಿತಿಗೇ ಟಿಕೆಟ್ ಹಂಚಿಕೆಯ ಜವಾಬ್ದಾರಿಯನ್ನು ವಹಿಸಬೇಕಾಗಿ ಬಂದಿತ್ತು.
ಇನ್ನು ಮುಂದಿನ ಹಂತದಲ್ಲಿ ಚುನಾವಣೆಯಲ್ಲಿ ಈ ಗುಂಪುಗಳು ಪರಸ್ಪರರ ಸೋಲಿಗೆ ಪ್ರಯತ್ನಿಸುವುದು ಖಚಿತ. ಕಾಂಗ್ರೆಸ್, ಬಿಜೆಪಿ, ಕೆಜೆಪಿಗಳು ಚುನಾವಣೆ ಪೂರ್ವದ ಹೊಂದಾಣಿಕೆಯ ಪ್ರಸ್ತಾಪವನ್ನೇ ಮಾಡಿಲ್ಲ. ಆದರೆ ಜಾತ್ಯತೀತ ಜನತಾದಳ - ಶ್ರೀರಾಮುಲು ಕಾಂಗ್ರೆಸ್ ನಡುವೆ ಒಂದು ಒಪ್ಪಂದ ಕುರಿತ ಮಾತುಕತೆ ನಡೆದರೂ, ಅದು ಮುರಿದು ಬಿತ್ತು. ಬಿಜೆಪಿಯ ಸಹವಾಸ ಮಾಡಿದರೆ, ಕೋಮುವಾದಿಗಳ ಸಹವಾಸ ಮಾಡಿದಂತೆ ಎನ್ನುವಂತೆ, ಶ್ರೀರಾಮುಲು ಕಾಂಗ್ರೆಸ್ಸಿನ ಸಹವಾಸ ಮಾಡಿದರೆ ಅಕ್ರಮ ಗಣಿಗಾರಿಕೆಯ ಕಳ್ಳ ಹಣದ ಲೇಪ ಅಂಟಿಸಿಕೊಂಡಂತೆಯೇ ಆದೀತು ಎನ್ನುವ ಭೀತಿಯೇ ಜೆಡಿಎಸ್ - ಬಿಎಸ್ಸಾರ್ ಕಾಂಗ್ರೆಸ್ ಮಾತುಕತೆ ಕುಸಿದು ಬೀಳಲು ಕಾರಣ.
ಬಿಜೆಪಿಯ ತೊಳಲಾಟ: ಭಾರತೀಯ ಜನತಾ ಪಾರ್ಟಿ ನಗರ ಪ್ರದೇಶಗಳ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಪರಾಭವದ ಹೊಡೆತದಿಂದ ಇನ್ನೂ ಚೇತರಿಸಿಕೊಂಡಿಲ್ಲ. ಪಕ್ಷದ ಹೊಸ ನಾಯಕ ಪ್ರಹ್ಲಾದ ಜೋಷಿ ಅವರು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ನೇತೃತ್ವದಲ್ಲೇ ಇತರ ಎಲ್ಲ ನಾಯಕರ ಸಹಕಾರದಿಂದ ಚುನಾವಣೆಯನ್ನು ಎದುರಿಸುವುದಾಗಿ ಹೇಳಿದ್ದಾರೆ. ಶಾಸ್ತ್ರೀಯ ಅರ್ಥದಲ್ಲಿ ಇದನ್ನು ಸಾಮೂಹಿಕ ನಾಯಕತ್ವ ಎನ್ನುವಂತಿಲ್ಲ.
ಉಪಮುಖ್ಯಮಂತ್ರಿ ಈಶ್ವರಪ್ಪ ಅವರ ಭಾಷಣಗಳ ಪದಗಳ ಭರಾಟೆಯನ್ನು ಬಿಟ್ಟರೆ, ಕರ್ನಾಟಕ ಬಿಜೆಪಿಗೆ ಈಗ ಉತ್ಸಾಹವನ್ನು ತುಂಬಬಲ್ಲ ವ್ಯಕ್ತಿಗಳೂ ಕಾಣಿಸುತ್ತಿಲ್ಲ, ಶಕ್ತಿಗಳೂ ಇದ್ದಂತಿಲ್ಲ. ಬಿಎಸ್‌ವೈ ಅವರ ರಾಜಿನಾಮೆಗೆ ಮುಂಚೆ ಬಿಜೆಪಿಯಲ್ಲಿನ ಅತಿರಥ-ಮಹಾರಥರ ಸಾಲಿನಲ್ಲಿ ನಿಂತಿದ್ದ (ಈಗಲೂ ನಿಲ್ಲಬಹುದೇನೋ) ಬೆಳಗಾವಿ ಜಿಲ್ಲೆಯ ಉಮೇಶ ಕತ್ತಿ. ಬಿಜಾಪುರ-ಬಾಗಲಕೋಟೆ ಸೀಮೆಯ ಮುರುಗೇಶ ನಿರಾಣಿ, ಹುಬ್ಬಳ್ಳಿ - ಧಾರವಾಡದ ಬಸವರಾಜ ಬೊಮ್ಮಾಯಿ, ಬೆಂಗಳೂರಿನ ವಿ. ಸೋಮಣ್ಣ (ಎಲ್ಲರೂ ಲಿಂಗಾಯಿತರೇ) ಬಿಜೆಪಿಯಲ್ಲೇ ಇರ್ತಾರೋ, ಯಡಿಯೂರಪ್ಪ ಪಾರ್ಟಿಗೆ ಸೇರ್ತಾರೋ ಎನ್ನುವ ವಿಚಾರವೇ ದೊಡ್ಡ ರಾಜಕೀಯ ಚರ್ಚೆಗೆ ಗ್ರಾಸ ಒದಗಿಸಿತ್ತು.
ಈ ಸಂದರ್ಭದಲ್ಲೇ ನಡೆದ ಒಂದು ಘಟನೆ ಗಮನಾರ್ಹ. ಸಿದ್ಧಗಂಗೆಯಲ್ಲಿ, ಕರ್ನಾಟಕ ರತ್ನ, ಶತಾಯುಷಿಯ ಪಟ್ಟವನ್ನೂ ಧರಿಸಿದ ಸ್ವಾಮೀಜೀ ಅವರ 106ನೇ ವರ್ಧಂತಿಯ ಉತ್ಸವಕ್ಕೆ ಬಸವರಾಜ ಬೊಮ್ಮಾಯಿ ಅವರು ಹಾರ ಹಿಡಿದು ಬಂದಾಗ, ಅವರನ್ನು ಮುತ್ತಿಕೊಂಡ ಹಲವು ವೀರಶೈವ ಯುವಕರು ಯಡಿಯೂರಪ್ಪ ಅವರ ಪಾರ್ಟಿಗೆ ಸೇರದೇ, ಬಿಜೆಪಿಯಲ್ಲೇ ಉಳಿಯುವ ಬೊಮ್ಮಾಯಿ ತೀರ್ಮಾನವನ್ನು ಉಗ್ರವಾಗಿ ಪ್ರತಿಭಟಿಸಿದರು. ಅಲ್ಲಿ ಕಳಚಿ ಬಿದ್ದಿದ್ದು ಸೆಕ್ಯುಲರ್ ಸಿದ್ಧಾಂತ, ಅದನ್ನು ಯಾರೂ ತಿರಸ್ಕರಿಸದೇ ಹೋದರೂ ಬಹಿರಂಗವಾಗಿ ಒಪ್ಪಲ್ಲ. ಯಡಿಯೂರಪ್ಪ ಅವರ ಪಾರ್ಟಿಗೆ ಅವರೊಬ್ಬರೇ ಸರ್ದಾರರು. ಅನೇಕ ಸ್ನೇಹಿತರ ವಿಚಾರದಲ್ಲಿ ಅವರು ಇಟ್ಟುಕೊಂಡಿದ್ದ ನಂಬಿಕೆ ಸುಳ್ಳಾದರೂ ಅವರು ಬಹಿರಂಗವಾಗಿ ತಮ್ಮ ಮನಸ್ಸಿನ ಅಂತರಾಳದ ತೊಳಲಾಟವನ್ನು ತೋಡಿಕೊಂಡಿಲ್ಲ. ಈಚೆಗೆ ಅವರು ನಾನೆಷ್ಟು ಸ್ಥಾನಗಳನ್ನು ಗೆಲ್ಲಬಲ್ಲೆ ಎನ್ನುವುದು ಮುಖ್ಯವಲ್ಲ ಎನ್ನುವ ಹೊಚ್ಚ ಹೊಸ ಮಾತನ್ನು ಆಡುತ್ತಿದ್ದಾರೆ. ಅದರ ಅರ್ಥ ಸ್ಪಷ್ಟ; ನಾನು ಯಾರನ್ನು ಸೋಲಿಸುತ್ತೀನಿ ಎನ್ನುವುದೇ ಮುಖ್ಯ. ಈಗ ಬಿಜೆಪಿ - ಕೆಜೆಪಿಯ ನಾಯಕರೆಲ್ಲರನ್ನೂ ಒಂಟಿತನ ಕಾಡುತ್ತಿರುವುದೂ ಸ್ಪಷ್ಟವೇ.ಈಗಿನ ಪರಿಸ್ಥಿತಿ ಸ್ಫುಟವಾಗಲು (ಸೂರ್ಯರಶ್ಮಿ ಪ್ರಿಸಮ್ ಮೂಲಕ ಹಾಯ್ದು ಬಂದಾಗ ಶುಭ್ರವಾಗಿ ಎರಡು ಭಾಗಗಳಾದಂತೆ) ಏಪ್ರಿಲ್ ಹತ್ತರ ಅಮಾವಾಸ್ಯೆ ಕಳೆಯಬೇಕಂತೆ.
ಕಿಡಿಗೇಡಿತನ: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಬರ್ತಾರಾ? ಇಲ್ವಾ? ಅವರು ಪಕ್ಷದ ಸಂಸದೀಯ ಮಂಡಳಿಯ ಸದಸ್ಯತ್ವವನ್ನು ಸ್ವೀಕರಿಸಿದ ಅನಂತರ ಕರ್ನಾಟಕದ ಪ್ರಚಾರವೇ ಮಹಾಯಾತ್ರೆಯ ಆರಂಭ. ಪ್ರಥಮ ಚುಂಬನದಲ್ಲೇ ದಂತ ಭಗ್ನವಾಗುವ ಭೀತಿ ಮೋದಿ ಅವರನ್ನು ಕಾಡಿದೆಯೇನು?
-ಸತ್ಯ
anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

