ಸರ್ಕಾರ ಉರುಳಿಸುವ ಇರಾದೆ ಮುಲಾಯಂಗಿದೆಯೇ?
ಬೊಗಳೊ ನಾಯಿ ಕಚ್ಚುವುದಿಲ್ಲ.ಇತ್ತೀಚೆಗೆ ಸಮಾಜವಾದಿ ಪಕ್ಷದ ನಾಯಕ ...
ಬೊಗಳೊ ನಾಯಿ ಕಚ್ಚುವುದಿಲ್ಲ.
ಇತ್ತೀಚೆಗೆ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಗಾಳಿಯಲ್ಲಿ ಗುಂಡು (ಮಾತಿನ) ಹಾರಿಸುತ್ತಿರುವುದನ್ನು ನೋಡಿದರೆ ಈ ಮಾತು ನೆನಪಿಗೆ ಬರುತ್ತದೆ. ಈಗಾಗಲೇ ತೀವ್ರ ನಿಗಾ ಘಟಕ (ICU)ನಲ್ಲಿರುವ ಕೇಂದ್ರದ ಯುಪಿಎ ಸರ್ಕಾರಕ್ಕೆ ಕೃತಕ ಉಸಿರಾಟ ಒದಗಿಸುತ್ತಿರುವುದು ಮುಲಾಯಂ ಮತ್ತು ಮಾಯಾವತಿಯ ಬಿಎಸ್ಪಿ. ಇವರಿಬ್ಬರ ಪೈಕಿ ಯಾರೇ ಕೈ ಕೊಟ್ಟರೂ ಸರ್ಕಾರ ಪತನವಾಗುತ್ತದೆ. ಮುಲಾಯಂಗೆ ಇದು ತಿಳಿಯದ ವಿಷಯವೇನಲ್ಲ. ಅದಕ್ಕಾಗಿಯೇ ಅವರು ಪದೇ ಪದೇ ಕುಸ್ತಿ ಪೈಲ್ವಾನನಂತೆ ತೋಳೇರಿಸಿ ತೊಡೆ ತಟ್ಟುತ್ತಿರುತ್ತಾರೆ. (ಅಸಲಿಗೆ ಅವರು ಕುಸ್ತಿ ಪೈಲ್ವಾನ್ ಹೌದು). ಆದರೆ ಇತ್ತೀಚಿನ ದಿನಗಳಲ್ಲಿ ಈ ರಣಕೇಕೆ ಜೋರು ಪಡೆದಿದೆ. 'ಕಾಂಗ್ರೆಸ್ ವಂಚಕರ ಕೂಟ. ತನ್ನದೇ ಮಿತ್ರ ಪಕ್ಷ (ಡಿಎಂಕೆ)ದ ಪ್ರಮುಖ ನಾಯಕನನ್ನೇ ಜೈಲಿಗಟ್ಟಿದ ಮಿತ್ರದ್ರೋಹಿ'. 'ನನ್ನ ಬೆಂಬಲವಿಲ್ಲದೆ ಸರ್ಕಾರ ಅರೆಕ್ಷಣವೂ ಅಧಿಕಾರದಲ್ಲಿ ಮುಂದುವರಿಯಲು ಸಾಧ್ಯವಿಲ್ಲ. ಲೋಕಸಭೆಗೆ ಯಾವಾಗ ಮಧ್ಯಂತರ ಚುನಾವಣೆ ನಡೆಯುತ್ತದೆ ಎಂಬುದನ್ನು ನಾನು ನಿರ್ಧರಿಸುತ್ತೇನೆ' ಎಂದೆಲ್ಲ ಮುಲಾಯಂ ಗುಡುಗಿದ್ದಾರೆ. ಮಿಂಚು, ಗುಡುಗು ಆದ ಮೇಲೆ ಮಳೆ ಬೀಳಬೇಕು. ಆದರೆ ಮುಲಾಯಂರ ಗುಡುಗಿಗೆ ಸರ್ಕಾರ ಬೀಳಿಸುವ ಇರಾದೆಯೂ ಇಲ್ಲ, ಧೈರ್ಯವೂ ಇಲ್ಲ. ಆದರೆ ಹೇಗಾದರೂ ಮಾಡಿ ಆದಷ್ಟು ಶೀಘ್ರ ಚುನಾವಣೆ ನಡೆಯುವಂತೆ ಮಾಡಬೇಕು ಎಂಬ ಆಕಾಂಕ್ಷೆ. ಸದ್ಯದ ಪರಿಸ್ಥಿತಿಯಲ್ಲಿ ಚುನಾವಣೆಗೆ ತುದಿಗಾಲ ಮೇಲೆ ನಿಂತಿರುವ ಪಕ್ಷಗಳೆಂದರೆ ಮುಲಾಯಂರ ಎಸ್ಪಿ ಮತ್ತು ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಪಕ್ಷಗಳು ಮಾತ್ರ. ಮಮತಾ ಈಗಾಗಲೇ ಯುಪಿಎದಿಂದ ದೂರ ಸರಿದಾಗಿದೆ. ಮುಲಾಯಂ ಕೈ ಕೊಟ್ಟರೆ ಇವರಿಬ್ಬರ ಕನಸು ಸಾಕಾರಗೊಳ್ಳಲಿದೆ. ಇಷ್ಟಕ್ಕೂ ಲೋಕಸಭೆಗೆ ಅಕಾಲಿಕ ಚುನಾವಣೆ ಆಗಲೇಬೇಕು ಎಂಬ ಉಮೇದು ಮುಲಾಯಂಗೇಕೆ? ಕಳೆದ ವರ್ಷ ಉತ್ತರ ಪ್ರದೇಶದ ಅನೇಕ ಗೊಂದಲ, ಸಮಸ್ಯೆಗಳಿಗೆ ಉತ್ತರ ನೀಡುವ ಹೊಣೆ ಹೊರಬಹುದಿತ್ತು. ಆದರೆ ಆ ಗುರುತರ ಜವಾಬ್ದಾರಿಯನ್ನು ಮಗನ ಕೊರಳಿಗೆ ಹಾಕಿ ಮುಲಾಯಂ ದಿಲ್ಲಿ ಗದ್ದುಗೆಯ ಮೇಲೆ ದೃಷ್ಟಿ ನೆಟ್ಟರು. ಯಾವುದೇ ಹೊಸ ಸರ್ಕಾರಕ್ಕೆ ಒಂದು ಹನಿಮೂನ್ ಪಿರಿಯಡ್ ಎಂಬುದು ಇರುತ್ತದೆ. ಅದು ಆರು ತಿಂಗಳಿರಬಹುದು. ಇಲ್ಲವೇ ವರ್ಷವಿರಬಹುದು. ಹೊಸ ವ್ಯವಸ್ಥೆಗೆ ಸೆಟಲ್ ಆಗಲು ಈ ಅವಧಿ. ಆಗಿನ್ನೂ ಸರ್ಕಾರದ ಪರ ಜನರ ಸಹಾನುಭೂತಿ ಕರಗಿರುವುದಿಲ್ಲ. ಅದನ್ನೇ ಬಂಡವಾಳ ಮಾಡಿಕೊಂಡು ಇತರ ಚುನಾವಣೆಗೆ (ಸ್ಥಳೀಯ ಸಂಸ್ಥೆ, ಪಂಚಾಯ್ತಿ ಮುಂತಾದವು) ನಡೆಸಿ ಜನರ ವಿಶ್ವಾಸ ಗಟ್ಟಿ ಮಾಡಿಕೊಳ್ಳಲು ಅಂತಹ ಸರ್ಕಾರಗಳು ಪ್ರಯತ್ನಿಸುವುದು ಸಹಜ.
ಈಗ ಮುಲಾಯಂ ಉತ್ಸಾಹದ ಹಿಂದಿರುವುದೂ ಇದೇ ಲೆಕ್ಕಾಚಾರ. ಉತ್ತರ ಪ್ರದೇಶದ ಯಾವುದೇ ಪ್ರಬಲ ರಾಜಕಾರಣಿಯೂ ಮನದ ಮೂಲೆಯಲ್ಲಿ ದಿಲ್ಲಿ ಗದ್ದುಗೆಯ ಕುನಸು ಇಟ್ಟುಕೊಂಡೇ ಇರುತ್ತಾನೆ. ಕಾರಣ, ಸಂಸತ್ತಿಗೆ ಇಲ್ಲಿಂದ ಆರಿಸಿ ಹೋಗುವ ಸಂಸದರ ಸಂಖ್ಯೆ. ಉತ್ತರ ಪ್ರದೇಶದ 80 ಸೀಟು ದೇಶದ ರಾಜಕಾರಣದ ದಿಕ್ಸೂಚಿ. ಇಲ್ಲಿ ಗೆದ್ದವರು ದಿಲ್ಲಿಯಲ್ಲಿ ಪ್ರತಿಷ್ಠಾಪನೆಗೊಳ್ಳುವುದು ಖಚಿತ. ಇದಕ್ಕೆ ಮುಲಾಯಂ ಹೊರತಲ್ಲ. 2009ರಲ್ಲಿ ನಡೆದ ಚುನಾವಣೆಯಲ್ಲಿ 22 ಸೀಟು ಗೆದ್ದರೂ ಕಾಂಗ್ರೆಸ್ನೊಂದಿಗೆ ಸಂಬಂಧ ಕುದುರಿಸಿಕೊಳ್ಳಲಾಗದ ಸ್ಥಿತಿ ಮುಲಾಯಂಗಿತ್ತು. ಆದರೆ ಈಗಷ್ಟೇ ಒಂದು ವರ್ಷ ಪೂರೈಸಿರುವ ಅಖಿಲೇಶ್ ಯಾದವ್ ಸರ್ಕಾರ ಇನ್ನೂ ಜನಪ್ರಿಯತೆ ಕಳೆದುಕೊಂಡಿಲ್ಲ. ಈ ಪರಿಸ್ಥಿತಿಯ ಬೆನ್ನೇರಿ ಚುನಾವಣೆಗೆ ಹೋಗಿ ಕನಿಷ್ಠ 40 ಸೀಟು ಗೆದ್ದರೆ ದಿಲ್ಲಿ ಮೇಲೆ ಕಣ್ಣಿಡಬಹುದು ಎಂಬುದು ಅವರ ಲೆಕ್ಕಾಚಾರ. ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸಹ ಮುಲಾಯಂ ಅವರ ದೋಣಿಯಲ್ಲಿಯೇ ಸಾಗುತ್ತಿದ್ದಾರೆ. ಪ್ರಧಾನಿ ಸ್ಥಾನದ ಮೇಲೆ ಕಣ್ಣಿಲ್ಲದಿದ್ದರೂ, ಕೇಂದ್ರದಲ್ಲಿ ಆಯಕಟ್ಟಿನ ಸ್ಥಾನದಲ್ಲಿ ಇರಬೇಕು ಎಂಬುದು ತೃಣಮೂಲ ನಾಯಕಿ ಮಮತಾ ಬಯಕೆ. ಹಾಗಾದರೆ ಪ್ಲಗ್ ಎಳೆಯಲು ಮುಲಾಯಂ ಹಿಂದೇಟು ಹಾಕುತ್ತಿರುವುದಾದರೂ ಏಕೆ? ಯಾವ ಸಮಯಕ್ಕಾಗಿ ಅವರು ಕಾಯುತ್ತಿದ್ದಾರೆ?
ಎಲ್ಲವೂ ಮುಲಾಯಂ ಎಣಿಕೆಯಂತೆ ನಡೆದಿದ್ದರೆ ಈ ವರ್ಷಾಂತ್ಯ ಚುನಾವಣೆಗೆ ಹೋಗುವುದು ಅವರ ಗುರಿಯಾಗಿತ್ತು. ಆದರೆ ತಮಿಳರ ವಿಷಯದಲ್ಲಿ ಕ್ಯಾತೆ ತೆಗೆದು ಡಿಎಂಕೆ ಮತ್ತು ಎಫ್ಡಿಐ ವಿಚಾರವಾಗಿ ತೃಣಮೂಲ ಬೆಂಬಲ ಹಿಂಪಡೆದ ಮೇಲೆ ಯುಪಿಎ ಕೃಶವಾಗಿದೆ. ಹೇಳಿದಂತೆ ಮಾಡಲು, ನಿಲುವಿಗೆ ಅಂಟಿಕೊಂಡು ಮುಂದಿನ ಹೆಜ್ಜೆ ಇಡಲು ಮುಲಾಯಂಗೆ ತೊಡಕಾಗಿರುವುದು ಉತ್ತರ ಪ್ರದೇಶದಲ್ಲಿ ಆಡಳಿತ ನಡೆಸುತ್ತಿರುವ ತಮ್ಮದೇ ಪಕ್ಷದ ಸರ್ಕಾರ. ಅಖಿಲೇಶ್ ಯಾದವ್ನ ಹುರುಪು, ಹೊಸ ವಿಚಾರಗಳಿಗೆ ಮರುಳಾಗಿ ಅಲ್ಲಿನ ಜನ ಪ್ರಚಂಡ ಬಹುಮತದೊಂದಿಗೆ ಸಮಾಜವಾದಿ ಪಕ್ಷವನ್ನು ಆಯ್ಕೆ ಮಾಡಿ ಕಳುಹಿಸಿದ್ದೇನೋ ನಿಜ. ಆದರೆ ವರ್ಷದ ಅಲ್ಪ ಅವಧಿಯಲ್ಲಿ ಅಖಿಲೇಶ್ ಯಾದವ್ ಸರ್ಕಾರದ ರಿಪೋರ್ಟ್ ಕಾರ್ಡ್ನಲ್ಲಿ ಎಲ್ಲ ವಿಷಯಗಳಲ್ಲಿ ಸೊನ್ನೆಯೇ ರಾರಾಜಿಸುತ್ತಿದೆ. ಮಾಯಾವತಿ ನೇತೃತ್ವದ ಹಿಂದಿನ ಬಿಎಸ್ಪಿ ಸರ್ಕಾರದ ಪ್ರಕಾಂಡ ಭ್ರಷ್ಟಾಚಾರವನ್ನೇ ಬಂಡವಾಳವಾಗಿಸಿಕೊಂಡು ಜನಮತ ಗೆದ್ದ ಅಖಿಲೇಶ್ ಸರ್ಕಾರಕ್ಕೂ ಇದೇ ಕಳಂಕ ತಟ್ಟಿದೆ. ಕೋಮುಗಲಭೆ, ಹಿಂಸಾಚಾರ, ಅಪರಾಧ ಪ್ರಕರಣಗಳೇ ಸರ್ಕಾರದ ಸಾಧನೆಯಾಗಿದೆ. ಅಖಿಲೇಶ್ ಬಳಿ ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ಯಾವುದೇ ನೀಲನಕ್ಷೆ ಇದ್ದಂತೆ ಕಾಣುತ್ತಿಲ್ಲ. ಈ ಸರ್ಕಾರದ ಮೇಲೆ ಜನರ ವಿಶ್ವಾಸ ಪೂರ್ಣ ಕರಗುವ ಮುನ್ನ ಚುನಾವಣೆಗೆ ಹೋಗಬೇಕಾದ್ದು ಅನಿವಾರ್ಯ. ಈ ಅನಿವಾರ್ಯತೆಯಿಂದಾಗಿಯೇ ಮುಂದಿನ ತಿಂಗಳ ವೇಳೆಗೆ ಸರ್ಕಾರಕ್ಕೆ ನೀಡುತ್ತಿರುವ ಬೆಂಬಲ ಹಿಂಪಡೆಯುವ ಬಗ್ಗೆ ಮುಲಾಯಂ ಮನಸ್ಸು ಮಾಡಿದ್ದುಂಟು.
ಈ ನಿಟ್ಟಿನಲ್ಲಿ ಮುಲಾಯಂ, ಬಿಜೆಪಿಯೂ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳನ್ನೂ ಸಂಪರ್ಕಿಸಿದ್ದೂ ಉಂಟು. ಆದರೆ ತೃಣಮೂಲ ನಾಯಕಿ ಮಮತಾ ಹೊರತುಪಡಿಸಿ ಉಳಿದವರೆಲ್ಲರೂ ಮುಲಾಯಂ ಆಸೆಗೆ ತಣ್ಣೀರು ಎರೆಚಿದ್ದಾರೆ. ಒಂದು ಸರ್ಕಾರವನ್ನು ಅಸ್ಥಿರಗೊಳಿಸಿದ ಅಪಕೀರ್ತಿಗೆ ಒಳಗಾಗುವುದು ಮುಲಾಯಂಗೂ ಬೇಕಿಲ್ಲ. ಹಾಗೆಂದು ಯುಪಿಎದಲ್ಲಿ ಮುಂದುವರಿಯಲು, ಚುನಾವಣೆಗೆ ಮುಂದಿನ ವರ್ಷದವರೆಗೆ ಕಾಯುವುದು ಮುಲಾಯಂಗೆ ಆಗದ ಕೆಲಸ. ಮುಲಾಯಂ ಪಾಲಿಗೆ ಇದು ಟ್ಟಿಢಿ ್ಟ್ಠ ಟಿಜಢಜ್ಠ ಕ್ಷಣ. ಆದರೆ ಅಂತಹ ದರ್ದು ಉಳಿದ ಪಕ್ಷಗಳಿಗಿಲ್ಲ. ಮೇಲಾಗಿ ಯಾವುದೇ ರಾಜಕೀಯ ಪಕ್ಷ ಮುಲಾಯಂರ ಮಾತುಗಳನ್ನಾಗಲಿ, ನಿಲುವುಗಳನ್ನಾಗಲಿ ನಂಬುವ ಸ್ಥಿತಿಯಲ್ಲಿಲ್ಲ. ಕ್ಷಣಕ್ಕೊಂದು ಬಣ್ಣ ಬದಲಿಸುವ ಮುಲಾಯಂರನ್ನು ಅವರ ಒಂದು ಕಾಲದ ಅತ್ಯಂತ ನಿಕಟ ಗೆಳೆಯರಾಗಿದ್ದ ಕಮ್ಯುನಿಸ್ಟ್ ಪಕ್ಷಗಳೇ ದೂರ ಮಾಡಿವೆ. 2008ರಲ್ಲಿ ಅಮೆರಿಕ ಜೊತೆಗೆ ಅಣುಬಂಧದ ವಿಚಾರವಾಗಿ ಎಡರಂಗ ಮನಮೋಹನ್ ಸರ್ಕಾರದ ಕೊರಳ ಪಟ್ಟಿ ಹಿಡಿದು ನಿಂತಿದ್ದಾಗ ಅದನ್ನು ಬಚಾವ್ ಮಾಡಿದ ಮುಲಾಯಂ ಅವರನ್ನು ನಂಬಲು ಈಗ ಎಡ ಪಕ್ಷಗಳು ಸಿದ್ಧವಿಲ್ಲ. ಮುಲಾಯಂ ಎಡಬಿಡಂಗಿತನ ಅಣುಬಂಧದ ವಿಚಾರಕ್ಕಷ್ಟೇ ಸೀಮಿತವಾಗಿಲ್ಲ. ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ವಿದೇಶಿ ಬಂಡವಾಳಕ್ಕೆ ಅನುವು ಮಾಡಿಕೊಡಲು ಸರ್ಕಾರ ಮುಂದಾದಾಗ ಕಾಂಗ್ರೆಸ್ ಮತ್ತು ಬಿಜೆಪಿ ಹೊರತುಪಡಿಸಿದ ಪಕ್ಷಗಳ ನಾಯಕರ ಜೊತೆ ಕೈ ಜೋಡಿಸಿ ಎಫ್ಡಿಐ ಮತ್ತು ಸರ್ಕಾರದ ವಿರುದ್ಧ ಖಾರವಾಗಿ ಮಾತನಾಡಿ ದಿಲ್ಲಿಯ ಬೀದಿಯಲ್ಲಿ ಮೋರ್ಚಾ ತೆಗೆದು ಜೋರು ಧ್ವನಿಯಲ್ಲಿ ಕೂಗಾಡಿದ್ದ ಮುಲಾಯಂ ನಂತರ ಲೋಕಸಭೆಯಲ್ಲಿ ಈ ಮಸೂದೆ ಅಂಗೀಕಾರಕ್ಕೆ ಸರ್ಕಾರದ ಜೊತೆ ಕೈಜೋಡಿಸಿದರು. ಕಾರಣ ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು!
ಇದೆಂಥಾ ವಿಪರ್ಯಾಸ. ಕೋಮುವಾದಕ್ಕೂ, ಎಫ್ಡಿಐ ವಿಷಯಕ್ಕೂ ಯಾವ ಸಂಬಂಧ, ಇದಕ್ಕೆ ಸಮರ್ಥನೆಯಾದರೂ ಏನು? ಸ್ವತಃ ಮುಲಾಯಂಗೆ ಗೊತ್ತು ಈ ಹೋಲಿಕೆ ಸಮರ್ಥನೆಗೆ ನಿಲುಕದ್ದು ಎಂದು. ಆದರೂ ಮಾತಿಗೂ, ಕೃತಿಗೂ ಸಂಬಂಧವಿಲ್ಲದಂತೆ ನಡೆದುಕೊಳ್ಳುವುದು ಅವರ ಹುಟ್ಟುಗುಣ. ಎಷ್ಟಾದರೂ ಮುಲಾಯಂ ಒಬ್ಬ ಅನುಕೂಲಸಿಂಧು ರಾಜಕಾರಣಿ ಅಲ್ಲವೆ? ಹಾಗಾಗಿ ದೋಸೆ ಮೊಗಚಿಹಾಕಿದಂತೆ ನಿಲುವನ್ನು ಬದಲಿಸುವುದು ಅವರಿಗೆ ರಕ್ತಗತವಾಗಿ ಬಂದ ಕಲೆ. 2008ರಲ್ಲಿ ಅಣುಬಂಧ ವಿಚಾರದಲ್ಲಿ ಸರ್ಕಾರವನ್ನು ಬಚಾವ್ ಮಾಡಿದ ನಿಲುವಿನ ಹಿಂದೆ ಇದ್ದದ್ದೂ ಇದೇ ಅನುಕೂಲ ಸಿಂಧು ರಾಜಕಾರಣವೇ. ಬೆಂಬಲಕ್ಕೆ ಪ್ರತಿಯಾಗಿ ಅಂದು ಮುಲಾಯಂ ನಿರೀಕ್ಷಿಸಿದ್ದು ಸರ್ಕಾರದಲ್ಲಿ ಸ್ಥಾನಮಾನ ಮತ್ತು 2009ರ ಲೋಕಸಭಾ ಚುನಾವಣೆಗೆ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ. ಆದರೆ ಇವೆರಡೂ ಆಗಲಿಲ್ಲ. ಯಾವುದೇ ಸ್ವಾಭಿಮಾನಿ ರಾಜಕಾರಣಿಯಾಗಿದ್ದರೆ ಆತ ಮತ್ತೆ ಕಾಂಗ್ರೆಸ್ನತ್ತ ಮುಖ ಹಾಕಿ ಸಹ ಮಲಗುತ್ತಿರಲಿಲ್ಲ.
ಆದರೆ ಮುಲಾಯಂಗೆ ಅಂತಹ ಸ್ವಾಭಿಮಾನ ಎಲ್ಲಿದೆ? ಅವರಿಗಿರುವುದು ಅಧಿಕಾರದ ಹಸಿವು ಮತ್ತು ತಮ್ಮ ಮೇಲಿರುವ ಕೇಸುಗಳಿಂದ ಬಚಾವಾಗುವುದು ಹೇಗೆ ಮತ್ತು ಅದಕ್ಕಾಗಿ ಏನೆಲ್ಲ ಕಸರತ್ತು ಮಾಡಬೇಕು ಎಂಬ ಚಿಂತೆ ಅಷ್ಟೆ. ಇದಕ್ಕಾಗಿ ಯಾರ ಜೊತೆ ಬೇಕಾದರೂ ಡೀಲ್ ಮಾಡಿಕೊಳ್ಳಲು ಅವರು ಹಿಂದೇಟು ಹಾಕುವುದಿಲ್ಲ. 'ಕಾಂಗ್ರೆಸ್ ಒಂದು ಶಾಪ, ಅದನ್ನು ಕಂಡರಾಗದು' ಎಂದು ಹೇಳುತ್ತಲೇ, ಅದೇ ಪಕ್ಷದ ಜೊತೆ ಹಾಸಿಗೆ ಹಂಚಿಕೊಳ್ಳುವುದಾದರೂ ಏಕೆ? ಈ ಪ್ರಶ್ನೆಗೆ ಮುಲಾಯಂ ಬಳಿ ಉತ್ತರ ಇಲ್ಲ. ಪರಸ್ಪರ ನಿಂದಿಸುತ್ತಲೇ ಕೂಡಿ ಬಾಳುವ ಸಮಯ ಸಾಧಕತನಕ್ಕೆ ಬದಲಾಗಿ ಪರಿಸ್ಥಿತಿಯನ್ನು ಸವಾಲಾಗಿ ಸ್ವೀಕರಿಸಿ ಹೋರಾಡುವ ಎದೆಗಾರಿಕೆ, ನಾಯಕತ್ವವನ್ನು ಮುಲಾಯಂ ಏಕೆ ತೋರುತ್ತಿಲ್ಲ? ಸುಖಾಸುಮ್ಮನೆ ಗಾಳಿಯಲ್ಲಿ ಗುದ್ದಾಡುವುದು ಯಾವ ಪುರುಷಾರ್ಥಕ್ಕೆ? ಹಾಗೆ ಮಾಡದ ಹೊರತಾಗಿ ಕಾಂಗ್ರೆಸ್ ಮುಲಾಯಂರನ್ನು ಬ್ಲಾ ್ಯಕ್ಮೇಲ್ ಮಾಡುತ್ತಿದೆಯೋ ಅಥವಾ ಮುಲಾಯಂ ಕಾಂಗ್ರೆಸ್ಸನ್ನು ಬ್ಲಾ ್ಯಕ್ಮೇಲ್ ಮಾಡುತ್ತಿದ್ದಾರೋ ಎಂಬ ಅನುಮಾನ ಮೂಡುವುದಿಲ್ಲವೇ? ಅಥವಾ ರಹಸ್ಯ ಒಪ್ಪಂದ ಮಾಡಿಕೊಂಡು ಜನರಿಗೆ ಮಂಕುಬೂದಿ ಎರೆಚುವ ಕೆಲಸ ಮಾಡುತ್ತಿದ್ದಾರೋ ಎನಿಸುವುದಿಲ್ಲವೇ? ತಾನು ಎಷ್ಟೇ ಗುಟುರು ಹಾಕಿದರೂ ಕಾಂಗ್ರೆಸ್ಗೆ ಬೇಕಾಗುವ ತನಕ ಈ ಸರ್ಕಾರ ಕುಂಟುತ್ತ, ತೆವಳುತ್ತ ಸಾಗುತ್ತದೆ ಎಂಬುದು ಮುಲಾಯಂಗೆ ತಿಳಿದಿಲ್ಲವೇ?
ಇಂತಹ ಕೈಲಾಗದ ನಾಯಕರ ವೈಯಕ್ತಿಕ ಅಭಿಲಾಷೆಗಳಿಗೆ ಪ್ರಜಾಪ್ರಭುತ್ವ ಒತ್ತೆಯಾಗಲು ಅವಕಾಶ ಕೊಡಬೇಕೇಕೆ? ಇನ್ನು ಯಾವುದೇ ದೂರದೃಷ್ಟಿ ಇಲ್ಲದೆ ಕೇವಲ ಅಧಿಕಾರದ ದಾಸರಾಗಿರುವ ಮುಲಾಯಂರಂಥ ನಾಯಕರ ತೃತೀಯ ರಂಗದ ಕನಸನ್ನು ಮೊಗ್ಗಿನಲ್ಲೇ ಚಿವುಟದಿದ್ದರೆ ಅದು ಕ್ಯಾನ್ಸರ್ನಂತೆ ಹಬ್ಬಿ ದೇಶವನ್ನೇ ಬಲಿತೆಗೆದುಕೊಳ್ಳುವ ಅಪಾಯ ಇದೆ.
Enough of this Drama.
- ಕೆ.ಎಸ್.ಜಗನ್ನಾಥ್
jagannath.kudinoor@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

