Mango Pachcha Movie Review: ದುಡ್ಡಿನ ಹಿಂದೆ ಓಡಿ ಡ್ರಗ್ಸ್ ದಂಧೆಗಿಳಿಯುವ ಪ್ರಶಾಂತ್: ಮೊದಲ ಚಿತ್ರದಲ್ಲೇ ಭರವಸೆ ಮೂಡಿಸಿದ ಸಂಚಿತ್; ಮಾಸ್ ಹೀರೋಗಳ ಸಾಲಿನಲ್ಲಿ ಕಿಚ್ಚನ ಅಳಿಯ ಪಚ್ಚ!

ಸುದೀಪ್ ಸೋದರಳಿಯ ಸಂಚಿತ್ ಸಂಜೀವಿ ನಟನೆಯ ‘ಮ್ಯಾಂಗೋ ಪಚ್ಚ’ ಮೈಸೂರಿನ 2000-2010ರ ನೈಜ ಡ್ರಗ್ಸ್ ದಂಧೆ ಹಿನ್ನೆಲೆಯ ಕ್ರೈಂ ಡ್ರಾಮಾ. ಮಧ್ಯಮ ವರ್ಗದ ಪಚ್ಚ ದುಡ್ಡಿಗಾಗಿ ಪೈರಸಿ, ನಂತರ ಗಾಂಜಾ ದಂಧೆಗೆ ಇಳಿಯುವ ಕಥೆಯಾಗಿದೆ. ಸಂಚಿತ್‌ನ ಮಾಸ್ ಲುಕ್, ಫೈಟ್, ಸ್ಕ್ರೀನ್ ಪ್ರೆಸೆನ್ಸ್ ಗಮನ ಸೆಳೆಯುತ್ತವೆ. ತಾಂತ್ರಿಕವಾಗಿ ಮೈಸೂರು ನವಿರಾದ ಚಿತ್ರಣ, ಬಿಜಿಎಂ ಪ್ಲಸ್ ಆಗಿದೆ.
ಸುದೀಪ್ ಸೋದರಳಿಯ ಸಂಚಿತ್ ಸಂಜೀವಿ ನಟಿಸಿರುವ 'ಮ್ಯಾಂಗೋ ಪಚ್ಚ' ಸಿನಿಮಾ ರೀಲೀಸ್ ಆಗಿದ್ದು ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ವಿವೇಕ್ ನಿರ್ದಶಿಸಿರುವ ಈ ಸಿನಿಮಾ ನೈಜ ಘಟನೆಗಳನ್ನಾಧರಿಸಿದೆ.
ಕನ್ನಡ ಸಿನಿಮಾದಲ್ಲಿ ಈಗಾಗಲೇ ಡ್ರಗ್ ದಂಧೆ ಕುರಿತು ಹಲವು ಸಿನಿಮಾಗಳು ಬಂದಿದ್ದು, ಆ ಸಾಲಿಗೆ ಮ್ಯಾಂಗೋ ಪಚ್ಚ ಕೂಡ ಸೇರಿದೆ. 2000 ರಿಂದ 2010 ರವರೆಗೆ ಮೈಸೂರಿನಲ್ಲಿ ನಡೆದಿರುವ ನೈಜ ಘಟನೆಗಳನ್ನಾಧರಿಸಿ ನಿರ್ಮಿಸಿರುವ ಚಿತ್ರವೇ ‘ಮ್ಯಾಂಗೋ ಪಚ್ಚ’. ಅಪ್ಪಟ ಮಿಡಲ್ ಕ್ಲಾಸ್ ಫ್ಯಾಮಿಲಿಯ ಹುಡುಗ ಪಚ್ಚ. ದುಡ್ಡಿನ ಹಿಂದೆ ಓಡುವ ಪಚ್ಚ ಸಿಡಿ / ಡಿವಿಡಿ ಅಂಗಡಿಯ ಮಾಲೀಕ. ದುಡ್ಡಿಗಾಗಿ ಸಿನಿಮಾಗಳನ್ನ ರೆಕಾರ್ಡ್ ಮಾಡಿ ಪೈರಸಿ ಸಿಡಿಗಳನ್ನ ಮಾರುತ್ತಿರುತ್ತಾನೆ.
ಈ ನಡುವೆ ಅಪ್ಪ ತೀರಿಕೊಂಡಾಗ. ಪಚ್ಚನ ಲೈಫ್ ಬದಲಾಗುತ್ತದೆ. ರಾಜಕಾರಣಿ ಮಹೇಂದ್ರ ಸೃಷ್ಟಿಸಿದ ಅನಿವಾರ್ಯತೆ ಇಂದ ಪಚ್ಚ ಮತ್ತು ಅವನ ಅಪ್ಪನ ಹಿರಿಯ ಹೆಂಡತಿಯ ಮಗ ನಾಗಪ್ಪ ಗಾಂಜಾ ದಂಧೆಗೆ ಇಳಿಯುತ್ತಾರೆ. ಆನಂತರ ಪಚ್ಚನ ಬದುಕಲ್ಲಿ ಏನೇನಾಗುತ್ತದೆ ಎಂಬುದೇ ಚಿತ್ರದ ಕಥಾ ಹಂದರ.
ಸಿನಿಮಾ ಅವಧಿ ಕೇವಲ ಒಂದೂವರೆ ಗಂಟೆಯಾಗಿದೆ. ಹೀಗಾಗಿ ಸಿನಿಮಾ ಬೇಗ ಬೇಗ ಸಾಗುತ್ತಿದೆ ಎನಿಸುತ್ತೆ. ಸಮಯ ತೆಗೆದುಕೊಂಡು ಕೆಲವು ಪಾತ್ರಗಳನ್ನ ಇನ್ನೂ ಚೆನ್ನಾಗಿ ನಿರೂಪಿಸಬಹುದಿತ್ತು ಎನ್ನಿಸುತ್ತದೆ. ಆಗ ಚಿತ್ರಕಥೆಗೆ ಇನ್ನೊಂದಿಷ್ಟು ಡೆಪ್ತ್ ಬರುತ್ತಿತ್ತು. ಲವ್ ಸ್ಟೋರಿಗೆ ಇನ್ನು ಸ್ವಲ್ಪ ಒತ್ತು ಕೊಡಬಹುದಿತ್ತು.
ಮೊದಲ ಸಿನಿಮಾದಲ್ಲೇ ಸಂಚಿತ್ ಸಂಜೀವ್ ಪ್ರಾಮಿಸಿಂಗ್ ಎನಿಸುತ್ತಾರೆ. ಒಳ್ಳೆಯ ಹೈಟ್, ಪರ್ಸನಾಲಿಟಿ ಹಾಗೂ ಲುಕ್ ಹೊಂದಿರುವ ಸಂಚಿತ್ ಸಂಜೀವ್‌ಗೆ ಉತ್ತಮ ಸ್ಕ್ರೀನ್ ಪ್ರೆಸೆನ್ಸ್ ಇದೆ. ಸಂಚಿತ್ ಸಂಜೀವ್ ಪರ್ಸನಾಲಿಟಿಯಲ್ಲಿ ಸುದೀಪ್ ಅವರನ್ನು ನೆನಪಿಸುತ್ತಾರೆ. ಸಂಚಿತ್ ಸಂಜೀವ್ ಆಗಾಗ ಜೂನಿಯರ್ ಕಿಚ್ಚನಂತೆ ಕಾಣಿಸುತ್ತಾರೆ. ಸಿನಿಮಾದಲ್ಲಿ ಭರ್ಜರಿಯಾಗಿ ಫೈಟ್ ಸಹ ಮಾಡಿದ್ದಾರೆ.
ಪಚ್ಚನ ಮಲ ಸಹೋದರನಾಗಿ ಮಯೂರ್ ಪಟೇಲ್ ನಟಿಸಿದ್ದಾರೆ. ಮಯೂರ್ ಪಟೇಲ್, ಹರಿಣಿ, ಹಂಸಾ ಪ್ರತಾಪ್, ಉಗ್ರಂ ಮಂಜು, ಕಾಜಲ್ ಕುಂದರ್, ಪ್ರಶಾಂತ್ ಹಿರೇಮಠ್ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
2000ನೇ ಇಸವಿಯಲ್ಲಿ ಅಂದಿನ ಮೈಸೂರು ಹೇಗಿತ್ತು, ಅಂದು ಕಾರುಗಳು, ಬೈಕ್‌ಗಳು ಹೇಗಿದ್ದವು ಎಂಬುದನ್ನು ತೆರೆ ಮೇಲೆ ಅಚ್ಚುಕಟ್ಟಾಗಿ ತೋರಿಸಿದ್ದಾರೆ. ಕಲಾ ನಿರ್ದೇಶಕ ವಿಶ್ವಾಸ್ ಕಶ್ಯಪ್ ಕೆಲಸ ಅಚ್ಚುಕಟ್ಟಾಗಿದೆ. ಚರಣ್ ರಾಜ್ ಹಿನ್ನಲೆ ಸಂಗೀತ ಚಿತ್ರಕ್ಕೆ ವೇಗ ನೀಡಿದೆ. ಶೇಖರ್ ಚಂದ್ರ ಅವರ ಕ್ಯಾಮರಾ ಕೈಚಳಕ ಚೆನ್ನಾಗಿದ್ದು ಮೈಸೂರನ್ನು ಸುಂದರವಾಗಿ ಸೆರೆ ಹಿಡಿದಿದ್ದಾರೆ. ಪಚ್ಚನ ಕತೆ ಈ ಸಿನಿಮಾದಲ್ಲಿ ಮುಗಿದಿಲ್ಲ, ಸೀಕ್ವೆಲ್ ಸಹ ಬರುತ್ತದೆ ಎಂಬ ಸುಳಿವನ್ನು ನಿರ್ದೇಶಕರು ನೀಡಿದ್ದಾರೆ.
ನಿರ್ದೇಶಕ: ವಿವೇಕ್
ಕಲಾವಿದರು: ಸಂಚಿತ್, ಕಾಜಲ್ ಕುಂದರ್, ಜೈ ಗೋಪಿನಾಥ್, ಹರಿಣಿ ಶ್ರೀಕಾಂತ್, ಮಯೂರ್ ಪಟೇಲ್, ಪ್ರಶಾಂತ್ ಹಿರೇಮಠ್, ಉಗ್ರಂ ಮಂಜು, ಹಂಸ, ಮತ್ತು ಸಿದ್ಧಾರ್ಥ್ ಮಾಧ್ಯಮಿಕ

ಮ್ಯಾಂಗೋ ಪಚ್ಚ ಚಿತ್ರದ ಟ್ರೈಲರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


