ಸಿನಿಮಾ ವಿಮರ್ಶೆ

'ಅಪೂರ್ವ'ದ ಕತ್ತಲೆಯಲ್ಲಿ Quoteಗಳ ಕಾಟ!

ಕನ್ನಡ ಚಿತ್ರರಂಗಕ್ಕೆ ಪ್ರೀತಿ-ಪ್ರೇಮ ಕೇಂದ್ರಿತ ಸಿನೆಮಾಗಳನ್ನು-ಹಾಡುಗಳನ್ನು ಧಾರಾಳವಾಗಿ ಧಾರೆ ಎರೆದಿರುವ ನಟ-ನಿರ್ದೇಶಕ ರವಿಚಂದ್ರನ್ ಅವರ ಸಿನೆಮಾದ ಬಗ್ಗೆ ಸಹಜ ಕುತೂಹಲ ಇದ್ದದ್ದೇ.

'ಅಪೂರ್ವ'ದ ಕತ್ತಲೆಯಲ್ಲಿ Quoteಗಳ ಕಾಟ!
ಅಪೂರ್ವ ಸಿನೆಮಾ ವಿಮರ್ಶೆ
Published On :

ಕನ್ನಡ ಚಿತ್ರರಂಗಕ್ಕೆ ಪ್ರೀತಿ-ಪ್ರೇಮ ಕೇಂದ್ರಿತ ಸಿನೆಮಾಗಳನ್ನು-ಹಾಡುಗಳನ್ನು ಧಾರಾಳವಾಗಿ ಧಾರೆ ಎರೆದಿರುವ ನಟ-ನಿರ್ದೇಶಕ ರವಿಚಂದ್ರನ್ ಅವರ ಸಿನೆಮಾದ ಬಗ್ಗೆ ಸಹಜ ಕುತೂಹಲ ಇದ್ದದ್ದೇ. XXX (ಎಕ್ಸ್ಪೀರಿಯೆನ್ಸ್, ಎಕ್ಸಲ್ಲೆನ್ಸ್, ಎಕ್ಸ್ಪೆರಿಮೆಂಟ್ - ಅನುಭವ, ಉತ್ಕೃಷ್ಟ ಮತ್ತು ಪ್ರಯೋಗ) ಎಂದು ಕರೆದುಕೊಂಡು ಕಥೆ ರಚಿಸಿ, ಸ್ಕ್ರಿಪ್ಟ್ ಬರೆದು, ನಿರ್ದೇಶಿಸಿ, ನಟಿಸಿ, ಸಂಗೀತ ನೀಡಿ, ಸಂಕಲನ ಮಾಡಿರುವ ರವಿಚಂದ್ರನ್ (ಅವರೇ ಹೇಳಿಕೊಂಡಂತೆ ಒನ್ ಮ್ಯಾನ್ ಶೋ) ಅವರ ಈ ಸಿನೆಮಾಗೆ ಹೊಸ ಪ್ರೇಮಲೋಕ ಸೃಷ್ಟಿಸಲು ಸಾಧ್ಯವಾಗಿದೆಯೇ?

ರವಿಚಂದ್ರನ್ ಅವರಿಗೆ ಏಕಾಂಗಿತನವನ್ನು ತೆರೆಯ ಮೇಲೆ ತರುವ ತೀವ್ರತೆ ಈ ಸಿನೆಮಾದಲ್ಲೂ ಕಾಡದೆ ಬಿಟ್ಟಿಲ್ಲ. ಒಂದು ಕೋಣೆಯಲ್ಲಿ ಏಕಾಂಗಿಯಾಗಿ  ಕೂತು 'ಡೆತ್ ನೋಟ್' ಬರೆಯುತ್ತ, ತಮ್ಮ ಇಳಿವಯಸ್ಸಿನ ಪ್ರೀತಿಯ ಬಗ್ಗೆ ಸ್ವಗತವನ್ನು ಹಂಚಿಕೊಳ್ಳುತ್ತಾ ಪ್ರಾರಂಭವಾಗುವ ಸಿನೆಮಾದ ಮೊದಲ ೨೦ ನಿಮಿಷಗಳಲ್ಲಿ ಏನೂ ಘಟಿಸುವುದಿಲ್ಲ. ತೆರೆಯ ಮೇಲೆ ಇಂಗ್ಲಿಶ್ ನಲ್ಲಿ ಬರೆದ ಸಾಲು ಸಾಲು ಸೂಕ್ತಿಗಳು ಮೂಡುತ್ತಲೇ ಹೋಗುತ್ತವೆ. ಪ್ರೀತಿ-ಸಾವು-ಜೀವನದ ಬಗ್ಗೆ ಬರೆದ ಈ ಉಕ್ತಿಗಳಲ್ಲಿ ಪಂಚ್ ಕೂಡ ಇಲ್ಲದೆ, ಅಂತಹ ಮಹತ್ವದ ಅರ್ಥವೂ ಇರದೆ, ಸಾಧಾರಣ ಎನ್ನಬಹುದಾದ ಈ ಕೋಟ್ ಗಳು ಕಣ್ಣಿಗೆ-ಬುದ್ಧಿಗೆ ತ್ರಾಸವಾಗುವಂತೆ ಮೂಡುತ್ತಲೇ ಹೋಗುವುದು ಸಿನೆಮಾದ ಬಗ್ಗೆ ಮೊದಲಿಗೇ ಪ್ರೇಕ್ಷಕನಲ್ಲಿ ಪ್ರಶ್ನೆ ಮೂಡಿಸುತ್ತವೆ.

ಸಿನೆಮಾದ ಕೇಂದ್ರ ಕಥೆ ಶುರುವಾದ ಮೇಲೂ ಈ ಕೋಟ್ ಗಳ ಕಾಟ ನಿಲ್ಲುವುದೇ ಇಲ್ಲ. ರಾಜಶೇಖರ್ ದೊಡ್ಡ ಮಾಲ್ ಒಂದರಲ್ಲಿ ಚಿತ್ರ ಬಿಡಿಸುವ ಕಲಾವಿದ. ೬೧ ವರ್ಷದ ಈ ವ್ಯಕ್ತಿಗೆ ತನ್ನ ಕುಟುಂಬದ ಯಾವ ಸಂಬಂಧಗಳ (ಪತ್ನಿ-ಮಗ ಒಳಗೊಂಡಂತೆ) ಜೊತೆಗೂ ಪ್ರೀತಿ ಇಲ್ಲ. ಜೀವನದಲ್ಲಿ ಪ್ರೀತಿ ಅರಸುವ ಈ ಏಕಾಂಗಿಗೆ ೧೯ ವರ್ಷದ ಅಪೂರ್ವಳ ಭೇಟಿಯಾಗುತ್ತದೆ. (ಇದು ನಟ ರವಿಚಂದ್ರನ್ ಅವರ ಎಂದಿನ ಶೈಲಿಯಲ್ಲಿ - ಕಾಲು ಜಾರಿ ಹಲವಾರು ಬಾರಿ ಮೇಲೆ ಬಿದ್ದು ಅಪ್ಪಿಕೊಳ್ಳುವ ಮೂಲಕ!). ಇಬ್ಬರೂ ಆಕಸ್ಮಿಕವಾಗಿ ಲಿಫ್ಟ್ ನಲ್ಲಿ ಸೆರೆಯಾದಾಗ, ಮಾಲ್ ಮೇಲೆ ಭಯೋತ್ಪಾದಕ ದಾಳಿಯಾಗುತ್ತದೆ. (ಭಯೋತ್ಪಾದಕ ದಾಳಿ ನಮಗೆ ಕೇಳುತ್ತದಷ್ಟೇ, ಚಲನಚಿತ್ರ ನಡೆಯುವುದೆಲ್ಲಾ ಲಿಫ್ಟ್ ನಲ್ಲೇ) ಈ ಹಿರಿಯ ವ್ಯಕ್ತಿ ಮತ್ತು ಯುವತಿಯ ನಡುವಿನ ಪ್ರೇಮ ಕಥೆ ಆರಂಭವಾಗುವುದು ಇಲ್ಲಿಯೇ!

ಯುವತಿ ಮತ್ತು ಹಿರಿಯ ವ್ಯಕ್ತಿಯ ನಡುವಿನ ಪ್ರೇಮದ ಬಗ್ಗೆಯಾದರೂ ಒಳ್ಳೆಯ ಕಥೆ ಕಟ್ಟಿಕೊಡುತ್ತಾರೇನೋ ಎಂಬ ನಿರೀಕ್ಷೆಯಲ್ಲಿ ಕಾಯುವ ಪ್ರೇಕ್ಷಕನಿಗೆ, ಇವರಿಬ್ಬರ ನಡುವಿನ ತೂಕವಿಲ್ಲದ ಸಂಭಾಷಣೆ ತಲೆಚಿಟ್ಟು ಹಿಡಿಸುತ್ತದೆ. ಈ ಇಬ್ಬರ ನಡುವಿನ ಉತ್ಕಟ ಪ್ರೇಮ ಭಾವನೆಗಳಿಗಿಂತಲೂ, ಹಿನ್ನಲೆಯಲ್ಲಿ ನಡೆಯುತ್ತಿರುವ (ಕೇಳುತ್ತಿರುವ) ಭಯೋತ್ಪಾದನೆಯ ಹಿಂಸೆಗೆ ಪ್ರತಿಕ್ರಿಯಿಸುತ್ತಾ ಹೋಗುವ ಈ ವ್ಯಕ್ತಿಗಳು ವಯಸ್ಸಿನ ಅಂತರವನ್ನು ಮೀರಿ ಹೇಗೆ ಪ್ರೇಮಿಸುತ್ತಾರೆ ಎಂಬುದೇ ಸಿನೆಮಾದ ಕೇಂದ್ರ. ಈ ಹಂತದಲ್ಲಿ ರಾಜಶೇಖರ್, ಜೀವನ-ಸಾವು-ಪ್ರೇಮ ದ ಬಗ್ಗೆ ನೀಡುವ ಬೋಧನೆ ಬೋರು ಹೊಡೆಸುವುದಲ್ಲದೆ, ಅಲ್ಲಲ್ಲಿ ಮೂಡುವ ಹಾಡುಗಳು ಕೂಡ ಇದನ್ನು ಇಮ್ಮಡಿಗೊಳಿಸುತ್ತವೆ. ಕೊನೆಗೆ ಭಯೋತ್ಪಾದನಾ ದಾಳಿ ಅಂತ್ಯಗೊಂಡು ಇವರು ಸುರಕ್ಷಿತವಾಗಿ ಹೊರಗೆ ಬಂದ ಮೇಲೆಯೂ ಇವರ ಪ್ರೀತಿ ಉಳಿಯುವುದೇ?

ಮಹತ್ವದ ಎಳೆಯನ್ನೊಂದಿಟ್ಟುಕೊಂಡು, ಅತಿ ಸಾಧಾರಣ ಕಥೆಯೊಂದನ್ನು ಕಟ್ಟಿ, ಬಹಳ ಕೆಟ್ಟ ನಿರೂಪಣೆಯಲ್ಲಿ ಸೊರಗಿರುವ ಸಿನೆಮಾ ಇಲ್ಲಿಯವರೆಗೂ ಚಿತ್ರರಂಗ ಕಂಡ ರವಿಚಂದ್ರನ್ ಇವರೇ ಎಂಬ ಪ್ರಶ್ನೆ ಮೂಡಿಸಿ ಪ್ರೇಕ್ಷಕನನ್ನು ಘಾಸಿಗೊಳಿಸಬಹುದು. ೧೯ ವರ್ಷದ ಯುವತಿ ಮತ್ತು ೬೧ ವರ್ಷದ ಹಿರಿಯ ವ್ಯಕ್ತಿಯ ನಡುವೆ ಪ್ರೀತಿಯಲ್ಲಿ ಹುಟ್ಟಬಹುದಾದ ಸಂಘರ್ಶವಾಗಲೀ, ಪ್ರೀತಿಯ ಭಾವನೆಗಳಾಗಲೀ ಯಾವುದನ್ನೂ ಪರಿಣಾಮಕಾರಿಯಾಗಿ ಸೆರೆಹಿಡಿಯದ ಈ ಚಿತ್ರ, ನಿರ್ದೇಶಕನ ಒಣ ತತ್ವದ ಸಂಭಾಷಣೆಯ ಬೋಧನೆಗಾಗಿ ಮೀಸಲಾಗಿರುವುದು ಪ್ರೇಕ್ಷಕನಿಗೆ ಹಿಂಸೆಯೇ ಸರಿ. ಲಿಫ್ಟ್ ನಲ್ಲಿ ನಡೆಯುವ ಕಥೆ ಮತ್ತು ಹಿನ್ನಲೆಯಲ್ಲಿ ಕೇಳಿ ಬರುವ ಭಯೋತ್ಪಾದಕ ಕೃತ್ಯ, ಒಂದು ಫೈಟ್, ಕನಸಿನ ಒಂದು ಹಾಡು ಹೊರತುಪಡಿಸಿದರೆ ಬೇರ್ಯಾವ ಘಟನೆಗಳೂ ಸಿನೆಮಾದಲ್ಲಿ ಇಲ್ಲದಿರುವುದು ಕೂಡ ಪ್ರೇಕ್ಷಕನಿಗೆ ಉಸಿರುಗಟ್ಟಿದ ಅನುಭವ.  ಛಾಯಾಗ್ರಹಣವನ್ನೊಂದು ಬಿಟ್ಟು, ಸಿನೆಮಾದ ಇನ್ನೆಲ್ಲಾ ಆಯಾಮಗಳನ್ನು ತಮ್ಮ ಮೇಲೆ ಎಳೆದುಕೊಂಡಿರುವ ರವಿಚಂದ್ರನ್ ಇಷ್ಟು ದೀರ್ಘ ಕಾಲದ ಅನುಭವದ ನಂತರವೂ ಪ್ರಯೋಗ ಎಂಬ ಹೆಸರಿನಲ್ಲಿ ಇಷ್ಟು ನೀರಸ ಚಿತ್ರ ನೀಡಿರುವುದು ವಿಪರ್ಯಾಸ! ರವಿಚಂದ್ರನ್ ಸಿನೆಮಾ ಎಂದರೆ ಅತ್ಯುತ್ತಮ ಹಾಡುಗಳು ಇರುತ್ತವೆ ಎಂಬುದಕ್ಕೂ ಈ ಸಿನೆಮಾ ಅಪವಾದ. ಹಲವು ಹಾಡುಗಳ ಸಾಹಿತ್ಯದ ಗುಣಮಟ್ಟ ಪಾತಾಳಕ್ಕೆ ಇಳಿದಿದ್ದು, ಟ್ಯೂನ್ ಗಳು ಕೂಡ ಎಲ್ಲಿಯೂ ಮನಸ್ಸಿಗೆ ಮುದ ನೀಡುವುದಿಲ್ಲ. ಚೊಚ್ಚಲ ಬಾರಿಗೆ ನಟಿಸಿರುವ ಅಪೂರ್ವ ನಟನೆ ಕೂಡ ಮನಸ್ಸಿನಲ್ಲಿ ಉಳಿಯುವುದಿಲ್ಲ.

ಏಕಾಂಗಿತನ, ವಯಸ್ಸಿನ ನಡುವೆ ದೊಡ್ಡ ಅಂತರದ ಹೊರತಾಗಿಯೂ ಪ್ರೇಮ ಇವೆಲ್ಲವೂ ಸಿನೆಮಾಗೆ ಅಗತ್ಯವಾದ ವಸ್ತುಗಳೇ, ಆದರೆ ಈ ಅಸಾಮಾನ್ಯ ಸಂಗತಿಗಳನ್ನು ತೆರೆಯ ಮೇಲೆ ಪರಿಣಾಮಕಾರಿಯಾಗಿ ಕಟ್ಟಿಕೊಡುವುದು ಅಷ್ಟೇ ತ್ರಾಸದಾಯಕ ಕೆಲಸ ಕೂಡ. (ಈ ಸಮಯದಲ್ಲಿ ಸಿನೆಮಾ ಒಂದು ಸಾಮೂಹಿಕ ಕಲೆ ಎಂಬುದು ನೆನಪಿಗೆ ಬಂದರೂ ಸಾಕು). ಸಿನೆಮಾದ ಎಲ್ಲ ತಾಂತ್ರಿಕ ಆಯಾಮಗಳನ್ನು ತಮ್ಮ ತಲೆಯ ಮೇಲೆ ಎಳೆದುಕೊಂಡು 'ಅಪೂರ್ವ'ದಲ್ಲಿ ತಮ್ಮನ್ನು ಮುಳುಗಿಸಿಕೊಂಡು (ಸಂಪೂರ್ಣವಾಗಿ ತೊಡಗಿಸಿಕೊಂಡು ಎಂಬರ್ಥದಲ್ಲಿ) ತಮ್ಮ ಸೃಜನಶೀಲೆತಯೆನ್ನು ಮುಳುಗಿಸಿಕೊಂಡಿರುವ (ಕಳೆದುಕೊಂಡಿರುವ) ನಟ ನಿರ್ದೇಶಕ ರವಿಚಂದ್ರನ್ ಮರಳಿ ಬೆಳಗಲಿ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.