'ರಾಮರಸ' ಚಿತ್ರದ ಮೂಲಕ 'ರಣವಿಕ್ರಮ' ಖ್ಯಾತಿಯ ಅದಾ ಶರ್ಮಾ ಕನ್ನಡಕ್ಕೆ ರೀಎಂಟ್ರಿ!
ಜಿ ಸಿನಿಮಾಸ್ ಮತ್ತು ಸೆವೆನ್ ಸ್ಟಾರ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಗುರು ದೇಶಪಾಂಡೆ ಈ ಚಿತ್ರವನ್ನು ನಿರ್ಮಿಸಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ಬಿಎಂ ಗಿರಿರಾಜ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.
'ರಾಮರಸ' ಚಿತ್ರದಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 10ರ ವಿಜೇತ ಕಾರ್ತಿಕ್ ಮಹೇಶ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಶರಣ್ ನಟನೆಯ ಅಧ್ಯಕ್ಷ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ನಟಿ ಹೆಬಾ ಪಟೇಲ್ ಈಗಾಗಲೇ ಚಿತ್ರತಂಡ ಸೇರಿದ್ದಾರೆ. 'ರಾಮರಸ'ದ ಮಹತ್ವಾಕಾಂಕ್ಷೆಯ ಸಿನಿಮೀಯ ಜಗತ್ತಿಗೆ ಇದೀಗ ನಟಿ ಅದಾ ಶರ್ಮಾ ಸೇರ್ಪಡೆಯಾಗಲಿದ್ದಾರೆ ಎಂಬ ಮಾತುಗಳು ಇದೀಗ ಚಿತ್ರರಂಗದಲ್ಲಿ ಕೇಳಿಬರುತ್ತಿವೆ.
ಜಿ ಸಿನಿಮಾಸ್ ಮತ್ತು ಸೆವೆನ್ ಸ್ಟಾರ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಗುರು ದೇಶಪಾಂಡೆ ಈ ಚಿತ್ರವನ್ನು ನಿರ್ಮಿಸಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ಬಿಎಂ ಗಿರಿರಾಜ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.
'ದಿ ಕೇರಳ ಸ್ಟೋರಿ' ಚಿತ್ರದ ಮೂಲಕ ದೇಶದಾದ್ಯಂತ ಹೆಸರಾದ ಅದಾ, ಕನ್ನಡ ಚಿತ್ರರಂಗದ ಪ್ರೇಕ್ಷಕರಿಗೆ ಚಿರಪರಿಚಿತರು. ನಿರ್ದೇಶಕ ಪವನ್ ಒಡೆಯರ್ ಅವರ ನಿರ್ದೇಶನದಲ್ಲಿ 2015ರಲ್ಲಿ ಮೂಡಿಬಂದ ಯಶಸ್ವಿ ಆ್ಯಕ್ಷನ್ ಚಿತ್ರ 'ರಣ ವಿಕ್ರಮ'ದಲ್ಲಿ ಪುನೀತ್ ರಾಜ್‌ಕುಮಾರ್ ಅವರಿಗೆ ಜೋಡಿಯಾಗಿ ನಟಿಸುವ ಮೂಲಕ ಅವರು ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಇದೀಗ 'ರಾಮರಸ' ಚಿತ್ರದ ಮೂಲಕ ಅವರು ಕನ್ನಡಕ್ಕೆ ಮರಳುತ್ತಿರುವುದು ಚಿತ್ರಕ್ಕೆ ವಿಶೇಷ ಮೆರುಗನ್ನು ತಂದುಕೊಟ್ಟಿದ್ದು, ಈ ಕುರಿತ ಅಧಿಕೃತ ಘೋಷಣೆ ಶೀಘ್ರದಲ್ಲೇ ಹೊರಬೀಳಲಿದೆ. ಚಿತ್ರದ ಕಥಾಹಂದರದ ಪ್ರಮುಖ ಭಾಗವಾಗಿರುವ ದೈವಿಕ, ಪೌರಾಣಿಕ ಮತ್ತು ಆಧ್ಯಾತ್ಮಿಕ ಅಂಶಗಳೊಂದಿಗೆ ನೇರ ಸಂಪರ್ಕ ಕಲ್ಪಿಸುವಂತಹ ನಿರ್ಣಾಯಕ ಪಾತ್ರವೊಂದನ್ನು ಅವರು ಈ ಚಿತ್ರದಲ್ಲಿ ನಿರ್ವಹಿಸುವ ನಿರೀಕ್ಷೆಯಿದೆ.
ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ 'ಗುರು ಸಿದ್ಧ' ಎಂಬ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ; ಸುಡುಗಾಡು ಸಿದ್ಧ ಸಮುದಾಯದ ಅಲೆಮಾರಿ ಸಂಪ್ರದಾಯಗಳು, ವಿಶಿಷ್ಟ ನಂಬಿಕೆಗಳು ಮತ್ತು ಆಧ್ಯಾತ್ಮಿಕ ಜೀವನಶೈಲಿಯಿಂದ ಪ್ರಭಾವಿತವಾದ ಈ ಪಾತ್ರವು ಅತ್ಯಂತ ಕುತೂಹಲಕಾರಿಯಾಗಿದೆ.
ಚಿತ್ರದಲ್ಲಿ ಕಾರ್ತಿಕ್ ಮಹೇಶ್ ಸೇರಿದಂತೆ ಶರಣ್, ಹೆಬಾ ಪಟೇಲ್, ಬಾಲಾಜಿ ಮನೋಹರ್ ಮತ್ತು ವೈಶಾಲಿ ಅವರನ್ನೊಳಗೊಂಡ ವೈವಿಧ್ಯಮಯ ತಾರಾಗಣವನ್ನು ಹೊಂದಿದೆ. ಚಿತ್ರದ ತಾಂತ್ರಿಕ ವಿಭಾಗದಲ್ಲಿ, ಛಾಯಾಗ್ರಾಹಕ ಎ.ವಿ. ಕೃಷ್ಣಕುಮಾರ್ (ಕೆಕೆ), ಸಂಗೀತ ನಿರ್ದೇಶಕ ಭರತ್ ಬಿ.ಜೆ., ಸಂಕಲನಕಾರ ಅರ್ಜುನ್ ಕಿಟ್ಟು, ಕಲಾ ನಿರ್ದೇಶಕ ಹೊಸಮನೆ ಮೂರ್ತಿ, ನೃತ್ಯ ನಿರ್ದೇಶಕ ಮುರಳಿ ಮಾಸ್ಟರ್ ಮತ್ತು 'ಕಾಂತಾರ' ಖ್ಯಾತಿಯ ಸಾಹಸ ನಿರ್ದೇಶಕ ಅರ್ಜುನ್ ರಾಜ್ ಅವರಂತಹ ಪ್ರಮುಖರು ಇದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


