'ಬಾಸ್' ಬಿಡುಗಡೆಗೆ ತಡೆ ಕೋರಿ ನಟ ದರ್ಶನ್ ಮೇಲ್ಮನವಿ: ಹೈಕೋರ್ಟ್ ವಜಾ
ವಿಚಾರಣೆಯಲ್ಲಿರುವ ಪ್ರಕರಣಕ್ಕೆ ಹೋಲುವ ಕೆಲವು ಘಟನೆಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ ಎಂಬ ಕಾರಣಕ್ಕೆ, ಆ ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯವು ಆ ಚಿತ್ರದಿಂದ ಪ್ರಭಾವಿತವಾಗಿ ಅಥವಾ ಅದರ ಪ್ರಭಾವಕ್ಕೆ ಒಳಗಾಗಿ ತೀರ್ಪು ನೀಡುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಅವರ ಪತ್ನಿ ವಿಜಯಲಕ್ಷ್ಮಿ ಸಲ್ಲಿಸಿದ್ದ 'ಬಾಸ್' ಚಿತ್ರದ ಬಿಡುಗಡೆ ತಡೆಯುವ ಮೇಲ್ಮನವಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್, ವಿಚಾರಣೆಯಲ್ಲಿರುವ ಪ್ರಕರಣಕ್ಕೆ ಹೋಲುವ ಕೆಲವು ಘಟನೆಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ ಎಂಬ ಕಾರಣಕ್ಕೆ, ಆ ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯವು ಆ ಚಿತ್ರದಿಂದ ಪ್ರಭಾವಿತವಾಗಿ ಅಥವಾ ಅದರ ಪ್ರಭಾವಕ್ಕೆ ಒಳಗಾಗಿ ತೀರ್ಪು ನೀಡುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಘಟನೆಗಳನ್ನು ಆಧರಿಸಿ ನಿರ್ಮಿಸಲಾಗಿದೆ ಎಂದು ಆರೋಪಿಸಿ, ಸಿರಿ ಪ್ರೊಡಕ್ಷನ್ಸ್ ನಿರ್ಮಿಸಿರುವ ಹಾಗೂ ಲಾವಾ ವಿ ನಿರ್ದೇಶಿಸಿರುವ 'ಬಾಸ್' ಚಿತ್ರದ ಬಿಡುಗಡೆಯನ್ನು ತಡೆಯುವಂತೆ ಕೋರಿ ದರ್ಶನ್ ಮತ್ತು ವಿಜಯಲಕ್ಷ್ಮಿ ಸಲ್ಲಿಸಿದ್ದ ಅರ್ಜಿಯನ್ನು ಸೆಷನ್ಸ್ ನ್ಯಾಯಾಲಯ ಜೂನ್ 2ರಂದು ವಜಾಗೊಳಿಸಿತ್ತು. ಆ ಆದೇಶವನ್ನು ಪ್ರಶ್ನಿಸಿ ದರ್ಶನ್ ಮತ್ತು ವಿಜಯಲಕ್ಷ್ಮಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
ಈ ಕುರಿತು ನ್ಯಾಯಾಲಯ, ದರ್ಶನ್ ವಿರುದ್ಧ ಕೊಲೆ ಪ್ರಕರಣ ದಾಖಲಾದ ನಂತರ, ನ್ಯಾಯಾಲಯದ ವಿಚಾರಣೆ ಮತ್ತು ತನಿಖೆಯ ಬೆಳವಣಿಗೆಗಳನ್ನು ಆಧರಿಸಿ ಮುದ್ರಣ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳು ಪ್ರತಿದಿನ ವರದಿ ಮಾಡುತ್ತಿವೆ. ಹೀಗಾಗಿ ಪ್ರಕರಣಕ್ಕೆ ಸಂಬಂಧಿಸಿದ ಸಾಕಷ್ಟು ಮಾಹಿತಿ ಈಗಾಗಲೇ ಸಾರ್ವಜನಿಕ ವಲಯದಲ್ಲಿದೆ ಎಂದು ಹೇಳಿತು.
ಚಿತ್ರದಲ್ಲಿರುವ ವಿಷಯಗಳು ಕೂಡ ಸಾರ್ವಜನಿಕ ವಲಯದಲ್ಲಿರುವ ಮಾಹಿತಿಯನ್ನು ಆಧರಿಸಿವೆ. ಆದ್ದರಿಂದ ಅರ್ಜಿದಾರರ ಸಾಂವಿಧಾನಿಕ ಖಾಸಗಿತನದ ಹಕ್ಕು ಉಲ್ಲಂಘನೆಯಾಗಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.
'ಬಾಸ್' ಚಿತ್ರಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಈಗಾಗಲೇ ಪ್ರಮಾಣಪತ್ರ ನೀಡಿದ್ದು, ಮಾರ್ಗಸೂಚಿಗಳ ಪ್ರಕಾರ ಚಿತ್ರದ ಆರಂಭದಲ್ಲೇ ಅಗತ್ಯವಾದ ಡಿಸ್ಕ್ಲೈಮರ್‌ಗಳನ್ನು ಸಹ ಪ್ರದರ್ಶಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಇನ್ನೊಂದೆಡೆ, ದರ್ಶನ್ ಮತ್ತು ವಿಜಯಲಕ್ಷ್ಮಿ ಪರ ವಕೀಲರು, ಚಿತ್ರದ ಟೀಸರ್‌ನಲ್ಲಿ "Inspired by True Events" ಎಂಬ ಘೋಷಣೆ ಇರುವುದಲ್ಲದೆ, ದರ್ಶನ್‌ಗೆ ಅಭಿಮಾನಿಗಳು ಬಳಸುವ 'ಬಾಸ್' ಎಂಬ ಹೆಸರು ಬಳಸಲಾಗಿದೆ. ಚಿತ್ರದಲ್ಲಿ ನಡೆಯುತ್ತಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ 13 ವಾಸ್ತವಿಕ ಸಾಮ್ಯತೆಗಳು ಇರುವುದರಿಂದ ಚಿತ್ರದ ಬಿಡುಗಡೆ ತಡೆಯಬೇಕು ಎಂದು ವಾದಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


