'ಟೀಸರ್ ನೋಡಿ ಯಾವುದೇ ನಿರ್ಧಾರಕ್ಕೆ ಬರಬೇಡಿ': ಯಶ್ ನಟನೆಯ ಟಾಕ್ಸಿಕ್ ಚಿತ್ರದ ಬಗ್ಗೆ ಕೆಎಫ್‌ಸಿಸಿ ಅಧ್ಯಕ್ಷೆ ಡಾ. ಜಯಮಾಲಾ
ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಅಡಿಯಲ್ಲಿ ವೆಂಕಟ್ ಕೆ ನಾರಾಯಣ ಮತ್ತು ಯಶ್ ನಿರ್ಮಿಸಿದ ಟಾಕ್ಸಿಕ್ ಮಾರ್ಚ್ 19 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಯಶ್ ನಟನೆಯ ಬಹುನಿರೀಕ್ಷಿತ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಬಿಡುಗಡೆಗೂ ಮುನ್ನವೇ ಸಾಕಷ್ಟು ವಿಚಾರಗಳಿಗೆ ಸುದ್ದಿಯಾಗುತ್ತಿದೆ. ಚಿತ್ರತಂಡ ಇತ್ತೀಚೆಗಷ್ಟೇ ಟೀಸರ್ ಬಿಡುಗಡೆ ಮಾಡಿದ್ದು, ಹಲವಾರು ದೂರುಗಳು ದಾಖಲಾಗಿವೆ. ರಾಷ್ಟ್ರೀಯ ಕ್ರಿಶ್ಚಿಯನ್ ಫೆಡರೇಶನ್ ಇತ್ತೀಚೆಗಷ್ಟೇ ಔಪಚಾರಿಕ ದೂರು ದಾಖಲಿಸಿದ್ದು, ಟೀಸರ್‌ನಲ್ಲಿನ ಕೆಲವು ದೃಶ್ಯಗಳು ಸಂತ ಮೈಕೆಲ್ ಅವರಿಗೆ ಅಗೌರವ ಸೂಚಿಸುತ್ತದೆ ಮತ್ತು ಧಾರ್ಮಿಕ ನಂಬಿಕೆಗಳಿಗೆ ನೋವುಂಟು ಮಾಡಿದೆ ಎಂದು ದೂರಿದೆ. ಇದಕ್ಕೂ ಮೊದಲು, ಇತರ ಗುಂಪುಗಳು ಮತ್ತು ಕಾರ್ಯಕರ್ತರು ಟೀಸರ್‌ನಲ್ಲಿನ ಕೆಲವು ದೃಶ್ಯಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು.
ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (KFCC) ಅಧ್ಯಕ್ಷೆ ಡಾ. ಜಯಮಾಲಾ, ಕೇವಲ ಟೀಸರ್ ಆಧರಿಸಿ ಯಾವುದೇ ತೀರ್ಮಾನಕ್ಕೆ ಬರಬೇಡಿ ಎಂದು ವೀಕ್ಷಕರನ್ನು ಒತ್ತಾಯಿಸಿದ್ದಾರೆ. ಟಾಕ್ಸಿಕ್ ಇನ್ನೂ ಸೆನ್ಸಾರ್ ಮಂಡಳಿಯಿಂದ ಪ್ರಮಾಣೀಕರಣ ಪಡೆದಿಲ್ಲ. ಆದ್ದರಿಂದ, ಈ ಹಂತದಲ್ಲಿ ಅಂತಿಮ ತೀರ್ಪು ನೀಡಲು ಆಗುವುದಿಲ್ಲ ಎಂದರು.
'ಟಾಕ್ಸಿಕ್ ಟೀಸರ್ ಬಗ್ಗೆ ದೂರುಗಳು ಬಂದಿವೆ. ಆದರೆ, ನಿಖರವಾಗಿ ಏನು ತಪ್ಪಾಗಿದೆ ಎಂದು ನನಗೆ ತಿಳಿದಿಲ್ಲ. ಟೀಸರ್ ಪ್ರೇಕ್ಷಕರನ್ನು ಥಿಯೇಟರ್‌ಗಳಿಗೆ ಆಕರ್ಷಿಸುವ ಒಂದು ಬಗೆಯಾಗಿದೆ. ಸೆನ್ಸಾರ್ ಮಂಡಳಿಯಿಂದ ಪರಿಶೀಲಿಸುವ ಮೊದಲೇ ಚಿತ್ರದ ಬಗ್ಗೆ ಚರ್ಚಿಸುವುದು ಸರಿಯಲ್ಲ. ಚಿತ್ರಕ್ಕಾಗಿ ನಿರ್ಮಾಪಕರು ನೂರಾರು ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡುತ್ತಾರೆ ಮತ್ತು ವೀಕ್ಷಕರು ಅಭಿಪ್ರಾಯವನ್ನು ಬೆಳೆಸಿಕೊಳ್ಳುವ ಮೊದಲು ಪೂರ್ಣ ಚಿತ್ರವನ್ನು ನೋಡಬೇಕು' ಎಂದು ಹೇಳಿದರು.
ನಿರ್ದೇಶಕರು ಸಾಮಾನ್ಯವಾಗಿ ವೈವಿಧ್ಯಮಯ ಸಾಂಸ್ಕೃತಿಕ ಮತ್ತು ಧಾರ್ಮಿಕ ಮೌಲ್ಯಗಳನ್ನು ಗೌರವಿಸುತ್ತಾರೆ. ಸಣ್ಣ ತುಣುಕುಗಳು ಅಥವಾ ಚಿತ್ರಗಳ ಆಧಾರದ ಮೇಲೆ ಅವಸರದ ಟೀಕೆಗಳನ್ನು ಮಾಡಲಾಗುತ್ತದೆ. 'ಪೂರ್ಣ ಕಥೆ ಅಥವಾ ನಿರೂಪಣೆಯ ಉದ್ದೇಶವನ್ನು ತಿಳಿಯದೆ, ಚಿತ್ರವು ಏನನ್ನು ಒಳಗೊಂಡಿದೆ ಎಂಬುದನ್ನು ತೀರ್ಮಾನಿಸುವುದು ಸೂಕ್ತವಲ್ಲ' ಎಂದು ಅವರು ಹೇಳಿದರು.
ಆರೋಪಗಳಿಗೆ ಪ್ರತಿಕ್ರಿಯಿಸಿದ ಡಾ. ಜಯಮಾಲಾ, ಯಾವುದೇ ಅಶ್ಲೀಲ ಅಥವಾ ಅಗೌರವ ತೋರುವ ದೃಶ್ಯಗಳ ಅಸ್ತಿತ್ವವನ್ನು ನಿರ್ಮಾಪಕರು ನಿರಾಕರಿಸಿದ್ದಾರೆ. ಚಿತ್ರವು ಇನ್ನೂ ಸೆನ್ಸಾರ್‌ಗಾಗಿ ಕಾಯುತ್ತಿರುವ ಕಾರಣ, ಗುರುತಿಸಲಾದ ಯಾವುದೇ ಸಮಸ್ಯೆಗಳನ್ನು ಸೆನ್ಸಾರ್ ಮಂಡಳಿಯು ಪರಿಹರಿಸುತ್ತದೆ. ಸರಿಪಡಿಸುವ ಕ್ರಮ ಅಗತ್ಯವಿದ್ದರೆ, ನಿಯಂತ್ರಣ ಸಂಸ್ಥೆಗಳು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತವೆ ಎಂದು ಅವರು ಹೇಳಿದರು.
ಯಶ್ ಮತ್ತು ಗೀತು ಮೋಹನ್‌ದಾಸ್ ಬರೆದಿರುವ ಚಿತ್ರಕ್ಕೆ ಗೀತು ಮೋಹನ್‌ದಾಸ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಒಳಗೊಂಡ ಸಮಗ್ರ ತಾರಾಗಣವಿದೆ. ಚಿತ್ರವನ್ನು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಏಕಕಾಲಕ್ಕೆ ಚಿತ್ರೀಕರಿಸಲಾಗಿದೆ. ಹಿಂದಿ, ತೆಲುಗು, ತಮಿಳು, ಮಲಯಾಳಂ ಮತ್ತು ಇತರ ಭಾಷೆಗಳಲ್ಲಿ ಡಬ್ಬಿಂಗ್ ಆವೃತ್ತಿಗಳನ್ನು ಯೋಜಿಸಲಾಗಿದೆ.
ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಅಡಿಯಲ್ಲಿ ವೆಂಕಟ್ ಕೆ ನಾರಾಯಣ ಮತ್ತು ಯಶ್ ನಿರ್ಮಿಸಿದ ಟಾಕ್ಸಿಕ್ ಮಾರ್ಚ್ 19 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

