ಸಿನಿಮಾವೇ ನನ್ನ ಜೀವನ, ಸಿನಿಮಾ ರಿಲೀಸ್ ಇಲ್ಲದಿದ್ದರೆ ನನಗಿಂತ ಹೆಚ್ಚು ಯಾರೂ ಒದ್ದಾಡಲ್ಲ: ನಟ ಸುದೀಪ್
ಕಳೆದ ವರ್ಷ ‘ಮಾರ್ಕ್’ ಸಿನಿಮಾದ ಚಿತ್ರೀಕರಣದ ವೇಳೆ ಮಹಾಬಲಿಪುರಂನಿಂದ ‘ಬಿಗ್ ಬಾಸ್’ ನಿರೂಪಣೆಗೆ ಅವರು ಪ್ರಯಾಣಿಸುತ್ತಿದ್ದರು. ಈ ವರ್ಷ, ಅನುಪ್ ಭಂಡಾರಿ ನಿರ್ದೇಶನದ ಬಿಲ್ಲಾ ರಂಗ ಬಾಷಾ ನಿರ್ಮಾಣ ಹಂತದಲ್ಲಿದ್ದು, ಅವರ ಸೆಟ್ ಬಿಗ್ ಬಾಸ್ ಮನೆಯಿಂದ ಕೇವಲ 15 ನಿಮಿಷಗಳ ದೂರದಲ್ಲಿದೆ.

ಬೆಂಗಳೂರು: ಸಿನಿಮಾ ಲೇಟ್ ಆಗೋದು ಇಂಟೆನ್ಷನಲ್ ಅಲ್ವೇ ಅಲ್ಲ, ನನಗೆ ಸಿನಿಮಾವೇ ಜೀವನ. ನನ್ನ ಸಿನಿಮಾ ಬಿಡುಗಡೆಯಾಗದಿದ್ದಾಗ ನನಗಿಂತ ಹೆಚ್ಚು ಬೇರೆ ನೋವು ಅನುಭವಿಸುವುದಿಲ್ಲ ಎಂದು ಸ್ಯಾಂಡಲ್‌ವುಡ್ ಬಾದ್‌ಷಾ ಕಿಚ್ಚ ಸುದೀಪ್ ಅವರು ಭಾವುಕರಾಗಿ ನುಡಿದಿದ್ದಾರೆ.
ಸುದೀಪ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 13’ರ ನಿರೂಪಕರಾಗಿ ಮತ್ತೆ ಕಿರುತೆರೆಗೆ ಮರಳಲು ಸಜ್ಜಾಗಿದ್ದಾರೆ. ಸೆಪ್ಟೆಂಬರ್ 6ರಿಂದ ಕಲರ್ಸ್ ಕನ್ನಡ ಹಾಗೂ ಜಿಯೋಹಾಟ್‌ಸ್ಟಾರ್‌ನಲ್ಲಿ ಕಾರ್ಯಕ್ರಮ ಪ್ರಸಾರವಾಗಲಿದೆ. ಈ ಬಾರಿ ‘ಫ್ಲೈಟ್’ ಥೀಮ್‌ನಲ್ಲಿ ಶೋ ಮೂಡಿಬರಲಿದ್ದು, ಸೆಲೆಬ್ರಿಟಿಗಳು ಹಾಗೂ ಸಾಮಾನ್ಯ ಸ್ಪರ್ಧಿಗಳ ಮಿಶ್ರಣ ಇರಲಿದೆ.
ಬನಿಜಯ್ ಏಷ್ಯಾ ಹಾಗೂ ಎಂಡೆಮೋಲ್ ಶೈನ್ ಇಂಡಿಯಾ ಜಂಟಿಯಾಗಿ ನಿರ್ಮಿಸುತ್ತಿರುವ ಈ ಕಾರ್ಯಕ್ರಮ ಕರ್ನಾಟಕದಲ್ಲಿ ಸಾಂಸ್ಕೃತಿಕ ವಿದ್ಯಮಾನವಾಗಿ ಬೆಳೆದಿದ್ದು, ಸುದೀಪ್ ಅವರ ವಿಭಿನ್ನ ನಿರೂಪಣಾ ಶೈಲಿ ಹಾಗೂ ಪ್ರೇಕ್ಷಕರೊಂದಿಗಿನ ನಂಟು ಅದರ ಜನಪ್ರಿಯತೆಯ ಪ್ರಮುಖ ಕಾರಣವಾಗಿದೆ.
ಆದರೆ ಹಿಂದಿನ ಸೀಸನ್‌ಗಳಿಗೆ ಹೋಲಿಸಿದರೆ ಈ ಬಾರಿ ಸುದೀಪ್ ಅವರು ಯಾವುದೇ ಸಿನಿಮಾ ಬಿಡುಗಡೆಯಿಲ್ಲದೇ ‘ಬಿಗ್ ಬಾಸ್’ಗೆ ಮರಳುತ್ತಿದ್ದಾರೆ. ಹೀಗಾಗಿ ಅವರ ಸಿನಿಮಾ ಪಯಣದ ಬಗ್ಗೆ ಮತ್ತೊಮ್ಮೆ ಚರ್ಚೆ ಹಾಗೂ ಊಹಾಪೋಹಗಳು ಆರಂಭವಾಗಿವೆ. ಆದರೆ, ಸಿನಿಮಾ ಬಿಡುಗಡೆಯಾಗದೇ ಇರುವುದರಿಂದ ಚಿತ್ರರಂಗದ ಮೇಲಿನ ಆಸಕ್ತಿ ಕಳೆದುಕೊಂಡಿದ್ದೇನೆ ಎಂಬರ್ಥವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಸೀಸನ್ ಬಗ್ಗೆ ನನಗೆ ನಿಜಕ್ಕೂ ಸಂತೋಷವಿದೆ. ‘ಬಿಗ್ ಬಾಸ್’ ನಿರೂಪಣೆ ಮತ್ತು ಸಿನಿಮಾದ ಕೆಲಸ ಎರಡನ್ನೂ ಸುಲಭವಾಗಿ ನಿರ್ವಹಿಸಬಹುದು” ಎಂದು ಹೇಳಿದ್ದಾರೆ.
ಕಳೆದ ವರ್ಷ ‘ಮಾರ್ಕ್’ ಸಿನಿಮಾದ ಚಿತ್ರೀಕರಣದ ವೇಳೆ ಮಹಾಬಲಿಪುರಂನಿಂದ ‘ಬಿಗ್ ಬಾಸ್’ ನಿರೂಪಣೆಗೆ ಅವರು ಪ್ರಯಾಣಿಸುತ್ತಿದ್ದರು. ಈ ವರ್ಷ, ಅನುಪ್ ಭಂಡಾರಿ ನಿರ್ದೇಶನದ ಬಿಲ್ಲಾ ರಂಗ ಬಾಷಾ ನಿರ್ಮಾಣ ಹಂತದಲ್ಲಿದ್ದು, ಅವರ ಸೆಟ್ ಬಿಗ್ ಬಾಸ್ ಮನೆಯಿಂದ ಕೇವಲ 15 ನಿಮಿಷಗಳ ದೂರದಲ್ಲಿದೆ.
ಈ ಹಿಂದೆ ಎರಡೂ ಕೆಲಸಗಳನ್ನು ಹೊಂದಿಸಿಕೊಳ್ಳಲು ಶುಕ್ರವಾರ, ಶನಿವಾರ ಮತ್ತು ಭಾನುವಾರ ಸಿನಿಮಾ ಚಿತ್ರೀಕರಣ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಈ ಬಾರಿ ಶುಕ್ರವಾರದವರೆಗೂ ಬಿಆರ್‌ಬಿ ಚಿತ್ರೀಕರಣ ಮಾಡಬಹುದಾಗಿರುವುದಕ್ಕೆ ಖುಷಿಯಾಗಿದೆ ಎಂದು ತಿಳಿಸಿದ್ದಾರೆ.
12 ಸೀಸನ್‌ಗಳನ್ನು ನಿರೂಪಿಸಿರುವ ಸುದೀಪ್ ಅವರಿಗೆ ‘ಬಿಗ್ ಬಾಸ್’ ಕಾರ್ಯಕ್ರಮ ಎಂದಿಗೂ ಬೇಸರ ಮೂಡಿಸಿಲ್ಲವಂತೆ. ಪ್ರತಿಯೊಂದು ಸೀಸನ್ ಕೂಡ ವಿಭಿನ್ನವಾಗಿರುತ್ತದೆ ಎಂದು ಹೇಳಿದ್ದಾರೆ.
ನನಗೆ ಬೋರ್ ಆಗಿದ್ದರೆ, ಎಷ್ಟೇ ಹಣ ಕೊಟ್ಟರೂ ಕಾರ್ಯಕ್ರಮದಿಂದ ಹೊರಬರುತ್ತಿದ್ದೆ. ಕನ್ನಡ ‘ಬಿಗ್ ಬಾಸ್’ ಅನ್ನು ಪ್ರೇಕ್ಷಕರು ಐಪಿಎಲ್ ನೋಡುವ ರೀತಿಯಲ್ಲಿ ನೋಡುತ್ತಾರೆ. ಪ್ರತಿಯೊಂದು ಸೀಸನ್ ಕೂಡ ವಿಭಿನ್ನವಾಗಿತ್ತು ಮತ್ತು ಮುಂದೆಯೂ ವಿಭಿನ್ನವಾಗಿರಲಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ತಮ್ಮ ಸಿನಿಮಾಗಳು ವಿಳಂಬವಾಗುತ್ತಿವೆ ಎಂಬ ನಿರಂತರ ಚರ್ಚೆಗೂ ಸುದೀಪ್ ಪ್ರತಿಕ್ರಿಯಿಸಿದ್ದಾರೆ. ನನ್ನ ಸಿನಿಮಾ ಬಿಡುಗಡೆಯಾಗದಿದ್ದಾಗ ನನ್ನಷ್ಟು ನೋವು ಅನುಭವಿಸುವವರು ಯಾರೂ ಇಲ್ಲ ಎಂದು ಹೇಳಿದ್ದಾರೆ.
ಕಳೆದ ವರ್ಷ ‘ಬಿಗ್ ಬಾಸ್’ ಜವಾಬ್ದಾರಿಯ ಜೊತೆಗೆ ‘ಮಾರ್ಕ್’ ಸಿನಿಮಾದ ಕೆಲಸವನ್ನೂ ಅವರು ನಿರ್ವಹಿಸಿದ್ದರು. ಸುಮಾರು 120 ದಿನಗಳ ಕಾಲ 22 ಸೆಟ್‌ಗಳು ಹಾಗೂ ವಿವಿಧ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಿದ್ದರು.
“ಐದೂವರೆ ತಿಂಗಳು ನಿದ್ದೆಯೇ ಇಲ್ಲದೆ ಕೆಲಸ ಮಾಡಿದ್ದೆ. ಒಂದು ಸಿನಿಮಾ ಕೊಟ್ಟಿದ್ದೇನೆ. ಸಿನಿಮಾದ ಮೇಲಿನ ನನ್ನ ಪ್ರೀತಿಗಿಂತ ದೊಡ್ಡದು ಯಾವುದೂ ಇಲ್ಲ.
ಕೆಲವೊಮ್ಮೆ ಕಥೆ, ವೈಯಕ್ತಿಕ ಕಾರಣಗಳು ಅಥವಾ ಇತರ ಅನಿವಾರ್ಯ ಪರಿಸ್ಥಿತಿಗಳಿಂದ ಸಿನಿಮಾಗಳು ಕೈ ತಪ್ಪಬಹುದು ಎಂದಿರುವ ಅವರು, ತಾವು ಸಿನಿಮಾ ಮಾಡುತ್ತಿಲ್ಲ ಎಂದ ಮಾತ್ರಕ್ಕೆ ಪ್ರವಾಸ ಅಥವಾ ಪಾರ್ಟಿಯಲ್ಲಿ ಸಮಯ ಕಳೆಯುತ್ತಿದ್ದೇನೆ ಎಂದು ಅರ್ಥವಲ್ಲ ಎಂದಿದ್ದಾರೆ.
ಸಿನಿಮಾ ನನ್ನ ಜೀವನ. ಕ್ಯಾಮೆರಾ ಮುಂದೆ ಇರುವುದು ನನಗೆ ತುಂಬಾ ಇಷ್ಟ. ನಾನು ಸಿನಿಮಾ ಮಾಡುತ್ತಿಲ್ಲ ಎಂದರೆ ನಾನು ಪ್ರವಾಸಕ್ಕೆ ಹೋಗುತ್ತಿದ್ದೇನೆ ಅಥವಾ ಪಾರ್ಟಿ ಮಾಡುತ್ತಿದ್ದೇನೆ ಎಂದಲ್ಲ. ಸದ್ಯ ಸಾಕಷ್ಟು ಸಿನಿಮಾಗಳ ಬಗ್ಗೆ ನಿರ್ದೇಶಕರೊಂದಿಗೆ ಮಾತುಕತೆ ನಡೆಯುತ್ತಿದೆ. “ನಾನು ಸಾಕಷ್ಟು ನಿರ್ದೇಶಕರೊಂದಿಗೆ ಚರ್ಚೆಯಲ್ಲಿದ್ದೇನೆ ಎಂದು ಹೇಳಿದ್ದಾರೆ.
ಶ್ರೀಕೃಷ್ಣದೇವರಾಯ ಪಾತ್ರದ ಬಗ್ಗೆ ಸುದೀಪ್ ಮೌನ
ಇದೇ ವೇಳೆ ಸುದೀಪ್ ಅವರ ಮುಂದಿನ ಸಿನಿಮಾಗಳ ಕುರಿತ ಚರ್ಚೆಯಲ್ಲಿ ಶ್ರೀಕೃಷ್ಣದೇವರಾಯನ ಪಾತ್ರವೂ ಪ್ರಮುಖವಾಗಿ ಕೇಳಿಬರುತ್ತಿದೆ. ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಈ ಕುರಿತು ಘೋಷಣೆ ಬರಬಹುದೇ ಎಂಬ ಪ್ರಶ್ನೆಗೆ ಸುದೀಪ್ ಯಾವುದೇ ಸ್ಪಷ್ಟ ಉತ್ತರ ನೀಡಿಲ್ಲ.
ಇಂದಿನ ಕೃತಕ ಬುದ್ಧಿಮತ್ತೆ (AI) ಆಧಾರಿತ ಊಹಾಪೋಹಗಳ ಯುಗದಲ್ಲಿ ಯಾವುದನ್ನಾದರೂ ಸುದ್ದಿಯನ್ನಾಗಿ ಮಾಡಬಹುದು. ಆದರೆ, ಅಧಿಕೃತ ಘೋಷಣೆಯನ್ನು ಸಂಬಂಧಪಟ್ಟ ನಿರ್ಮಾಣ ಸಂಸ್ಥೆಯೇ ಮಾಡಬೇಕು ಎಂದು ಹೇಳಿದ್ದಾರೆ.
‘ಟಾಕ್ಸಿಕ್’ ಪೋಸ್ಟ್ ಬಗ್ಗೆಯೂ ಸುದೀಪ್ ಮಾತು
ಇತ್ತೀಚೆಗೆ ‘ಟಾಕ್ಸಿಕ್’ ಸಿನಿಮಾ ಕುರಿತು ಸುದೀಪ್ ಮಾಡಿದ್ದ ಸಾಮಾಜಿಕ ಜಾಲತಾಣದ ಪೋಸ್ಟ್ ಬಗ್ಗೆಯೂ ಅವರು ಸ್ಪಷ್ಟನೆ ನೀಡಿದ್ದಾರೆ.
ಅವರು ನನ್ನ ಸಹೋದ್ಯೋಗಿ, ಒಬ್ಬ ಕನ್ನಡಿಗ, ಕನ್ನಡ ಸಿನಿಮಾ ಹಾಗೂ ಆ ಸಿನಿಮಾದ ಹಿಂದೆ ಇರುವ ಕನ್ನಡದ ಪ್ರಯತ್ನಕ್ಕೆ ಬೆಂಬಲವಾಗಿ ನಾನು ತೆಗೆದುಕೊಂಡ ನಿಲುವು ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




