8 ವರ್ಷಗಳ ಆ್ಯಂಕರಿಂಗ್ ಗೆ ಏಕಾಏಕಿ ಗುಡ್ ಬೈ: ನಿವೃತ್ತಿ ಹಿಂದಿನ ಕಾರಣ ಬಿಟ್ಚಿಟ್ಟ ಅನುಪಮಾಗೌಡ!
‘ನಾನು ನಿಮ್ಮೆಲ್ಲರಲ್ಲೂ ಕ್ಷಮೆ ಕೇಳುತ್ತೇನೆ. ಹೊಸ ಶೋನಲ್ಲಿ ನಾನು ಇರಬೇಕಿತ್ತು. ಆದರೆ, ಇಲ್ಲ. ವಾಹಿನಿಯವರು ಏನೇನೋ ಪ್ರಾಮಿಸ್ ಮಾಡಿಕೊಂಡಿದ್ದಾರೆ. ಅಪೂರ್ಣವಾಗಿ ಈ ಪ್ರಯಾಣ ಕೊನೆ ಮಾಡುತ್ತಿದ್ದೇನೆ.

ಬೆಂಗಳೂರು: ಕನ್ನಡದ ಜನಪ್ರಿಯ ನಿರೂಪಕಿ ಅನುಪಮ ತನ್ನ ನಿರೂಪಣಾ ಜರ್ನಿಗೆ ವಿದಾಯ ಹೇಳಿದ್ದಾರೆ.
ತನ್ನ ಯೂಟ್ಯೂಬ್ ವಾಹಿನಿಯಲ್ಲಿ ಈ ವಿಚಾರವನ್ನು ಅನುಪಮ ಹಂಚಿಕೊಂಡಿದ್ದಾರೆ. 8 ವರ್ಷಗಳ ಕಾಲ ನೀವೆಲ್ಲ ನನ್ನನ್ನು ಬೆಂಬಲಿಸಿದ್ದೀರಿ, ಬೆನ್ನುತಟ್ಟಿತಿದ್ದಿ ಈಗ ನನ್ನ ಆ್ಯಂಕರಿಂಗ್ ಜರ್ನಿ ಮುಕ್ತಾಯವಾಗಿದೆ ಎಂದಿದ್ದಾರೆ.
ವಿಡಿಯೋದಲ್ಲಿ ಅವರು ತಮ್ಮ ಆ್ಯಂಕರಿಂಗ್ ಜರ್ನಿ ನೆನೆದಿದ್ದಾರೆ. ಅವಕಾಶ ನೀಡಿದ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ. ‘ನಾನು ನಿಮ್ಮೆಲ್ಲರಲ್ಲೂ ಕ್ಷಮೆ ಕೇಳುತ್ತೇನೆ. ಹೊಸ ಶೋನಲ್ಲಿ ನಾನು ಇರಬೇಕಿತ್ತು. ಆದರೆ, ಇಲ್ಲ. ವಾಹಿನಿಯವರು ಏನೇನೋ ಪ್ರಾಮಿಸ್ ಮಾಡಿಕೊಂಡಿದ್ದಾರೆ. ಅಪೂರ್ಣವಾಗಿ ಈ ಪ್ರಯಾಣ ಕೊನೆ ಮಾಡುತ್ತಿದ್ದೇನೆ. ನೀವೆಲ್ಲ ಸಾಕಮ್ಮ ಎನ್ನುವುದರೊಳಗೆ ನಾನೇ ಆ್ಯಂಕರಿಂಗ್ ಮುಗಿಸಿದ್ದೇನೆ’ ಎಂದಿದ್ದಾರೆ ಅನುಪಮಾ. ‘ಸೀರಿಯಲ್ಗೆ ಮತ್ತೆ ಬರುತ್ತೇನೋ ಇಲ್ಲವೋ ಎಂಬುದು ಗೊತ್ತಿಲ್ಲ’ ಎಂದಿದ್ದಾರೆ ಅವರು.
ಮಜಾ ಭಾರತ’, ‘ಕನ್ನಡ ಕೋಗಿಲೆ’, ‘ರಾಜಾ ರಾಣಿ’, ‘ನಮ್ಮಮ್ಮ ಸೂಪರ್ ಸ್ಟಾರ್’, ‘ಸುವರ್ಣ ಸೂಪರ್ಸ್ಟಾರ್ಸ್’, ‘ಸುವರ್ಣ ಜ್ಯಾಕ್ಪಾಟ್’, ‘ಗರ್ಲ್ಸ್ vs ಬಾಯ್ಸ್’, ‘ಕ್ವಾಟ್ಲೆ ಕಿಚನ್’ ಶೋಗಳನ್ನು ಅವರು ಹೋಸ್ಟ್ ಮಾಡಿದ್ದಾರೆ. ಕೊನೆಯ ಶೋ ಅನ್ನು ಅವರಿಗೆ ಪೂರ್ಣವಾಗಿ ಮುಗಿಸುವ ಅವಕಾಶವೂ ಸಿಕ್ಕಿಲ್ಲ ಎಂಬ ಬೇಸರ ಅವರನ್ನು ಕಾಡುತ್ತಿದೆ.
ನಾನೊಬ್ಬಳು ಒಳ್ಳೆ ಆ್ಯಂಕರ್ ಅಂತ ಅನ್ನಿಸಿಕೊಳ್ಳಲು ಮುಖ್ಯವಾದ ಕಾರಣ ಪರಂ ಸರ್ (ಪರಮೇಶ್ವರ್ ಗುಂಡ್ಕಲ್) ಅವರನ್ನು ನೆನಪು ಮಾಡಿಕೊಳ್ಳದಿದ್ರೆ ತಪ್ಪು ಆಗುತ್ತದೆ. ನನ್ನನ್ನು ತಿದ್ದಿ ತೀಡಿದವರಲ್ಲಿ ಅವರು ಕೂಡ ಒಬ್ಬರು. ಅವರಿಗೆ ನಾನು ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ.
ನಾನು ಇವತ್ತು ಆರ್ಥಿಕವಾಗಿ ಪ್ರಬಲವಾಗಿದ್ದೇನೆ ಎಂದರೆ ಅದಕ್ಕೆ ಕಾರಣ ನನ್ನ ನಟನಾ ವೃತ್ತಿ ಅಲ್ಲ. ನಿರೂಪಣೆಯ ವೃತ್ತಿ. ನನ್ನ ಯಶಸ್ಸಿಗೆ ಕಾರಣವಾಗಿರುವುದು ನಿರೂಪಣೆಯ ವೃತ್ತಿ ಎಂದು ಅನುಪಮ ಹೇಳಿದ್ದಾರೆ.
'ಕನ್ನಡ ಕೋಗಿಲೆ' ಶೋ ನಡೆಸುವಾಗ ನನ್ನ ತಂದೆ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದರು. ಆ ಕ್ಷಣನೂ ನಾನು ವೇದಿಕೆಯಲ್ಲಿ ಆ್ಯಂಕರಿಂಗ್ ಮಾಡಬೇಕಿತ್ತು. ಎಷ್ಟೇ ಪ್ರಯತ್ನ ಪಟ್ಟರೂ ಆವತ್ತು ಶೋ ಬೇಗ ಮುಗಿಸೋಕೆ ಆಗಿರಲಿಲ್ಲ. ಏನೂ ಮಾಡಿದರೂ ಬೇಗ ಮುಗಿಸಲು ಹಾಗಿರಲಿಲ್ಲ. ಅದು ನನ್ನ ಕೆಲಸ ಆಗಿತ್ತು. ಒಂದು ವಾರದ ಬಳಿಕ ನನ್ನ ತಂದೆ ತೀರಿ ಹೋದಾಗ, ಮೂರು ದಿನದಲ್ಲೇ ನಾನು ಮತ್ತೆ ವೇದಿಕೆಗೆ ಬರಬೇಕಿತ್ತು. ಆ ಒಂದು ಕ್ಷಣವನ್ನು ನಾನು ಮರೆಯುವುದಿಲ್ಲವೆಂದಿದ್ದಾರೆ.
ಯಾವುದೇ ಕೆಲಸ ಆಗಲಿ. ಅದನ್ನು ಎಂಜಾಯ್ ಮಾಡಬೇಕು. ಜೀವಿಸಬೇಕು, ಬದುಕಬೇಕು. ಆದರೆ ಕಳೆದ ಕೆಲ ತಿಂಗಳಿನಿಂದ ನಾನು ಎಂಜಾಯ್ ಮಾಡುತ್ತಿರಲಿಲ್ಲ. ಮೊದಲಿಗೆ ನಾನು ಕಲಾವಿದೆ ಆಗಿದ್ದೆ. ನನ್ನನ್ನು ನಿರೂಪಕಿ ಎಂದು ಎಲ್ಲರೂ ಕರೆದಾಗ, ನಾನು ಕಲಾವಿದೆ ಎನ್ನುತ್ತಿದ್ದೆ. ಆದರೆ ನಿರೂಪಕಿ ಕೆಲಸದಿಂದ ತುಂಬಾ ಪ್ರೀತಿ ಸಿಕ್ಕಿದ ಮೇಲೆ ಅದನ್ನು ನಾನು ಒಪ್ಪಿಕೊಂಡೆ.
ತುಂಬಾ ಪ್ರೀತಿಯಿಂದ ಕೆಲಸ ಮಾಡಲು ಶುರು ಮಾಡಿದೆ. ತುಂಬಾ ಸಮಯದಲ್ಲಿ ನನಗೆ ಅಪಾರ ಪ್ರೀತಿ ಸಿಕ್ಕಿದೆ. ಆದರೆ ಜನರ ಪ್ರೀತಿಗೆ ತಕ್ಕ ಹಾಗೆ ನಾನು ಕೆಲಸ ಮಾಡುತ್ತಿದ್ದೇನೆ ಅಥವಾ ಅರ್ಹಳಾಗಿ ದುಡಿಯುತ್ತಿದ್ದೇನೆ ಅಂತ ನನಗೆ ಅನ್ನಿಸುತ್ತಿರಲಿಲ್ಲ. ಕಳೆದ ವರ್ಷವೇ ನಾನು ಈ ನಿರ್ಧಾರ ತೆಗೆದುಕೊಳ್ಳುವ ಯೋಚನೆ ಇತ್ತು. ಆದರೆ ಮನೆ ಅದು ಇದು ಅಂತ ಮುಂದೂಡುತ್ತಾ ಬಂದಿದ್ದೆ ಎಂದಿದ್ದಾರೆ.
ಈ ವರ್ಷದ ಆರಂಭದಲ್ಲಿ ಇನ್ನು ನಿರೂಪಣೆ ಸಾಕು ಅಂತ ಅನ್ನಿಸ್ತು. ನಾನು ನಿಜಕ್ಕೂ ಇದನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತೇನೆ. ನಾನು ನಟನೆ ಬಿಡುತ್ತಿಲ್ಲ. ವರ್ಷಕ್ಕೊಂದು ಪ್ರಾಜೆಕ್ಟ್ ಬಂದ್ರೂ ನನ್ನೊಳಗಿನ ನಟನಾ ಪ್ರತಿಭೆ ತೋರಿಸೋಕೆ ಸಾಕು ಎಂದಿದ್ದಾರೆ.
2003ರಲ್ಲಿ ರಿಲೀಸ್ ಆದ ‘ಲಂಕೇಶ್ ಪತ್ರಿಕೆ’ ಸಿನಿಮಾದಲ್ಲಿ ಬಾಲನಟಿಯಾಗಿ ಅನುಪಮಾ ಗಮನ ಸೆಳೆದರು. ಆ ಬಳಿಕ 2014ರಲ್ಲಿ ರಿಲೀಸ್ ಆದ ‘ಅಕ್ಕ’ ಧಾರಾವಾಹಿ ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟಿತ್ತು. ಈ ಧಾರಾವಾಹಿಯಲ್ಲಿ ಅವರು ದ್ವಿಪಾತ್ರದಲ್ಲಿ ಮಿಂಚಿದ್ದರು. ಇದು ಅವರಿಗೆ ದೊಡ್ಡ ಸವಾಲಾಗಿತ್ತು. 2017-18ರಲ್ಲಿ ಬಿಗ್ ಬಾಸ್ನಲ್ಲಿ ಸ್ಪರ್ಧೆ ಮಾಡಿದರು. ಅವರು ಕೆಲವು ಸಿನಿಮಾ ಕೂಡ ಮಾಡಿದ್ದು, ರಾಜ್ಯ ಪ್ರಶಸ್ತಿ ಗೆದ್ದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




