ಸಿನಿಮಾ ಸುದ್ದಿ

ಮಲಯಾಳಂ ಚಿತ್ರರಂಗದ ಖ್ಯಾತ ಹಾಸ್ಯನಟ ಮಾಮುಕೋಯ ಇನ್ನಿಲ್ಲ!

ಭಾರತೀಯ ಚಿತ್ರರಂಗ ಕಂಡ ಅತ್ಯಂತ ಪ್ರತಿಭಾವಂತ ನಟ, ಮಲಯಾಳಂ ಚಿತ್ರರಂಗದ ದೈತ್ಯ ಪ್ರತಿಭೆ ಮಾಮುಕೋಯ ಅವರು ಬುಧವಾರ ವಿಧಿವಶರಾಗಿದ್ದಾರೆ.

ಮಲಯಾಳಂ ಚಿತ್ರರಂಗದ ಖ್ಯಾತ ಹಾಸ್ಯನಟ ಮಾಮುಕೋಯ ಇನ್ನಿಲ್ಲ!
ಖ್ಯಾತ ಹಾಸ್ಯನಟ ಮಾಮುಕೋಯ
Published On :

ಕೋಝಿಕ್ಕೋಡ್: ಭಾರತೀಯ ಚಿತ್ರರಂಗ ಕಂಡ ಅತ್ಯಂತ ಪ್ರತಿಭಾವಂತ ನಟ, ಮಲಯಾಳಂ ಚಿತ್ರರಂಗದ ದೈತ್ಯ ಪ್ರತಿಭೆ ಮಾಮುಕೋಯ ಅವರು ಬುಧವಾರ ವಿಧಿವಶರಾಗಿದ್ದಾರೆ.

ಸೋಮವಾರವಷ್ಟೇ ಕಾಳಿಕಾವುನಲ್ಲಿ ನಡೆಯುತ್ತಿದ್ದ ಫುಟ್ಬಾಲ್ ಪಂದ್ಯಾವಳಿಯ ವೇಳೆ ಮಾಮುಕೋಯ ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ವಂಡೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅವರ ಆರೋಗ್ಯದ ಗಂಭೀರತೆಯನ್ನು ಅರಿತು ಕೋಝಿಕ್ಕೊಡ್ ಖಾಸಗಿ ಆಸ್ಪತ್ರೆಗೆ ನಿನ್ನೆಯಷ್ಟೇ ಸ್ಥಳಾಂತರಿಸಲಾಗಿತ್ತು.

ಕೋಝಿಕೋಡ್ ನಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ನಿನ್ನೆಯಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಲಕ್ಷಾಂತರ ಅಭಿಮಾನಿಗಳು ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸಿದ್ದರು. ಆದರೆ, ಅಭಿಮಾನಿಗಳ ಪ್ರಾರ್ಥನೆ ಈಡೇರಲಿಲ್ಲ. ಇಂದು ಚಿಕಿತ್ಸೆ ಫಲಕಾರಿಯಾಗದೇ ಹಾಗೂ ಹೃದಯಾಘಾತದಿಂದಾಗಿ ಮಾಮುಕೋಯ ಅವರು ನಿಧನರಾಗಿದ್ದಾರೆಂದು ವರದಿಗಳು ತಿಳಿಸಿವೆ.

ಮಲಯಾಳಂ ಸಿನಿಮಾ ರಂಗದ ಹೆಸರಾಂತ ಹಾಸ್ಯ ಕಲಾವಿದರಾಗಿದ್ದ ಮಾಮುಕೋಯ ಈವರೆಗೂ 450ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.

1946 ರಲ್ಲಿ ಹುಟ್ಟಿದ ಅವರು, ಮೊದಲಿಗೆ ರಂಗಭೂಮಿ ಕಲಾವಿದರಾಗಿ ನಟನೆ ಆರಂಭಿಸಿದ್ದರು. ಆ ಬಳಿಕ 1979 ರಲ್ಲಿ ನಿಲಂಬೂರ್ ಬಾಲನ್ ನಿರ್ದೇಶನದ ‘ಅನ್ಯಾರುಡೆ ಭೂಮಿ’ ಚಿತ್ರದ ಮೂಲಕ ಮಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.

ʼದೂರೆ ದೂರೆ ಓರು ಕೂಡು ಕೂಟಂ’, ‘ಗಾಂಧಿನಗರ್ ಸೆಕೆಂಡ್‌ ಸ್ಟ್ರೀಟ್‌, ‘ನಾಡೋಡಿಕ್ಕಟ್ಟು’, ‘ಪಟ್ಟಣಪ್ರವೇಶಂʼ,‘ಉನ್ನಿಕಲೆ ಒರು ಕಧ ಪಾರಾಯಂʼ ‘ವಡಕ್ಕುನೋಕ್ಕಿಯಂʼ, ʼಉಸ್ತಾದ್‌ ಹೊಟೇಲ್‌ʼ, ‘ಇಂಡಿಯನ್‌ ರೂಪೀಸ್,’ ‘ಮಿನ್ನಲ್ ಮುರಳಿʼ, ‘ಕುರುತಿʼ, ‘ತೀರ್ಪ್ಪು ಹೀಗೆ ಸುಮಾರು 450 ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.

ಹಾಸ್ಯಪಾತ್ರಗಳಿಂದಲೇ ಗಮನ ಸೆಳೆದ ಅವರು ಎರಡು ಬಾರಿ ತಮ್ಮ ನಟನೆಗೆ ಕೇರಳ ಸ್ಟೇಟ್‌ ಅವಾರ್ಡ್ ನ್ನು ಪಡೆದುಕೊಂಡಿದ್ದಾರೆ. ಮಲಯಾಳಂನ ಬಹುತೇಕ ನಟರೊಂದಿಗೆ ತೆರೆ ಹಂಚಿಕೊಂಡ ಹೆಗ್ಗಳಿಕೆ ಇವರದ್ದಾಗಿದ್ದು, ಅಗಲಿದ ಹಿರಿಯ ನಟನ ಆತ್ಮಕ್ಕೆ ಮಲಯಾಳಂ ಸಿನಿಮಾ ರಂಗಕ್ಕೆ ಕಂಬನಿ ಮಿಡಿದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.