ಪಿ. ಶೇಷಾದ್ರಿ ನಿರ್ದೇಶನದ 'ಮೋಹನದಾಸ' ಚಿತ್ರ ಅಕ್ಟೋಬರ್ 1ರಂದು ತೆರೆಗೆ
ಮಹಾತ್ಮ ಗಾಂಧಿ ಅವರ ಬಾಲ್ಯದ ಬಗ್ಗೆ ತಿಳಿಸುವ ಚಿತ್ರ “ಮೋಹನದಾಸ” ಅಕ್ಟೋಬರ್ 1 ರಂದು ಗಾಂಧಿ ಜಯಂತಿ ವೇಳೆಗೆ ತೆರೆಗೆ ಬರಲಿದೆ. ಕನ್ನಡಕ್ಕೆ ಹಲವು ರಾಷ್ಟ್ರಪ್ರಶಸ್ತಿ ತಂದುಕೊಟ್ಟಿರುವ ನಿರ್ದೇಶಕ ಪಿ.ಶೇಷಾದ್ರಿ ಈ ಚಿತ್ರ ನಿರ್ದೇಶಿಸಿದ್ದಾರೆ.

ಬೆಂಗಳೂರು: ಮಹಾತ್ಮ ಗಾಂಧಿ ಅವರ ಬಾಲ್ಯದ ಬಗ್ಗೆ ತಿಳಿಸುವ ಚಿತ್ರ “ಮೋಹನದಾಸ” ಅಕ್ಟೋಬರ್ 1 ರಂದು ಗಾಂಧಿ ಜಯಂತಿ ವೇಳೆಗೆ ತೆರೆಗೆ ಬರಲಿದೆ. ಕನ್ನಡಕ್ಕೆ ಹಲವು ರಾಷ್ಟ್ರಪ್ರಶಸ್ತಿ ತಂದುಕೊಟ್ಟಿರುವ ನಿರ್ದೇಶಕ ಪಿ.ಶೇಷಾದ್ರಿ ಈ ಚಿತ್ರ ನಿರ್ದೇಶಿಸಿದ್ದಾರೆ.
ಈ ವರೆಗೂ ಗಾಂಧೀಜಿಯವರ ಕುರಿತು ಸಾಕಷ್ಟು ಸಾಕ್ಷ್ಯಚಿತ್ರ ಹಾಗೂ ಪುಸ್ತಕಗಳು ಬಂದಿವೆಯಾದರೂ, ಚಲನಚಿತ್ರಗಳು ಬಂದಿರುವುದು ಕಡಿಮೆ. ಬಾಲ್ಯದ ಕುರಿತಾದ ಚಿತ್ರ ಬಂದಿಲ್ಲ. ರಿಚರ್ಡ್ ಆಟನ್ ಬರೋ ಅವರ "ಗಾಂಧಿ" ಹಾಗೂ ಶ್ಯಾಮ್ ಬೆನಗಲ್ ಅವರ "ಮೇಕಿಂಗ್ ಆಫ್ ಮಹಾತ್ಮ" ಎರಡು ಚಿತ್ರಗಳು ಬಹಳ ವರ್ಷಗಳ ಹಿಂದೆ ಬಂದಿದೆ. ಆದರೆ ಗಾಂಧೀಜಿಯವರ ಬಾಲ್ಯದ ದಿನಗಳು ಎರಡೂ ಚಿತ್ರಗಳಲ್ಲಿಯೂ ಇಲ್ಲ. ಗಾಂಧಿ ಅವರು ಸಹ ತಮ್ಮ ಆತ್ಮಚರಿತ್ರೆ ಯಲ್ಲಿ ಕೇವಲ ಮೂವತ್ತು ಪುಟಗಳಷ್ಟು ಮಾತ್ರ ಬಾಲ್ಯದ ಬಗ್ಗೆ ಬರೆದುಕೊಂಡಿದ್ದಾರೆ ಎಂದು ನಿರ್ದೇಶಕ ಶೇಷಾದ್ರಿ ಸುದ್ದಿಗೋಷ್ಠಿಗೆ ತಿಳಿಸಿದ್ದಾರೆ.
ನಾನು ಬೊಳುವಾರು ಅವರು ಬರೆದಿರುವ "ಪಾಪು ಗಾಂಧಿ ಬಾಪು ಗಾಂಧಿ ಆದ ಕಥೆ" ಪುಸ್ತಕ ಓದಿದ್ದಾಗಿನಿಂದಲ್ಲೂ, ಗಾಂಧಿ ಅವರ ಬಾಲ್ಯದ ಜೀವನದ ಬಗ್ಗೆ ಚಿತ್ರ ಮಾಡಬೇಕೆಂದು ಕೊಂಡಿದ್ದೆ. ಗಾಂಧಿ ಅವರು ಮೋಹನದಾಸ ಆಗಿದ್ದಾಗ ಅಂದರೆ, ಅವರ ಸುಮಾರು 7 ರಿಂದ 14 ವರ್ಷಗಳಲ್ಲಿನ ಜೀವನದ ಘಟನೆಗಳು ಮಾತ್ರ ನಮ್ಮ ಚಿತ್ರದಲ್ಲಿದೆ ಎಂದಿದ್ದಾರೆ.
ಗುಜರಾತ್ ನ ಪೋರ್ ಬಂದರ್, ರಾಜಕೋಟ್ ನಲ್ಲಿ ಚಿತ್ರೀಕರಾಣ ನಡೆಸಲಾಗಿದೆ. ಗಾಂಧಿ ಅವರು ಹುಟ್ಟಿಬೆಳೆದ ಮನೆಯಲ್ಲೂ ಚಿತ್ರೀಕರಣ ಮಾಡಿರುವುದು ವಿಶೇಷ. ಗಾಂಧಿ ಜಯಂತಿ ಸುಸಂದರ್ಭದಲ್ಲೇ ನಮ್ಮ ಚಿತ್ರ ಸುಮಾರು ನೂರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಕನ್ನಡ, ಹಿಂದಿ, ಇಂಗ್ಲಿಷ್ ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಈ ಚಿತ್ರವನ್ನು ನೋಡುವುದರ ಮೂಲಕ ಗಾಂಧಿ ಜಯಂತಿಯನ್ನು ಸಮರ್ಥವಾಗಿ ಆಚರಿಸೋಣ ಎಂದರು ನಿರ್ದೇಶಕ ಪಿ.ಶೇಷಾದ್ರಿ.
ಕಳೆದಬಾರಿ ಲಾಕ್ ಡೌನ್ ತೆರವುಗೊಂಡಾಗ ನನ್ನ "ಆಕ್ಟ್ 1978" ಬಿಡುಗಡೆಯಾಗಿತ್ತು. ಈ ಬಾರಿ ಸರ್ಕಾರ ನೂರರಷ್ಟು ಚಿತ್ರಮಂದಿರಗಳಲ್ಲಿ ಭರ್ತಿಗೆ ಅವಕಾಶ ನೀಡಿರುವ ಸಂದರ್ಭದಲ್ಲಿ ನನ್ನ ಅಭಿನಯದ "ಮೋಹನದಾಸ" ಮೊದಲ ಚಿತ್ರವಾಗಿ ಬಿಡುಗಡೆಯಾಗುತ್ತಿದೆ. ಪಿ.ಶೇಷಾದ್ರಿ ಅವರ ಜೊತೆ ಕೆಲಸ ಮಾಡಿದ್ದು ಸಂತಸ ತಂದಿದೆ. ಮಹಾತ್ಮ ಗಾಂಧಿ ಆಗುವುದಕ್ಕಿಂತ ಮುಂಚೆ ಅವರು ಮೋಹನದಾಸ. ಗಾಂಧಿ ಅವರ ಬಾಲ್ಯದ ಕಥೆಯನ್ನು ಆಧರಿಸಿ ಈ ಚಿತ್ರ ನಿರ್ಮಾಣವಾಗಿದೆ. ನಾನು ಮೋಹನದಾಸ ಅವರ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದರು ಹಿರಿಯ ನಟಿ ಶೃತಿ.
ಮೋಹನದಾಸ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಮರ್ಥ, ಹಿರಿಯನಟ ದತ್ತಣ್ಣ ಸೇರಿದಂತೆ ಚಿತ್ರದಲ್ಲಿ ನಟಿಸಿರುವ ಅನೇಕ ಕಲಾವಿದರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಹಿರಿಯ ನಟ ದತ್ತಣ್ಣ ಅಭಿನಯದ 200ನೇ ಚಿತ್ರ ಇದು. ನನ್ನ ನಿರ್ದೇಶನದ 12 ನೇ ಚಿತ್ರವಿದು. ನನ್ನ ಅಷ್ಟು ಚಿತ್ರಗಳಲ್ಲೂ ಅವರು ಅಭಿನಯಿಸಿದ್ದಾರೆ. ನಾನು ದತ್ತಣ್ಣ ಇಲ್ಲದೇ ಚಿತ್ರವನ್ನೇ ಮಾಡಿಲ ಎಂಬ ಖುಷಿಯ ವಿಚಾರವನ್ನು
ಪಿ.ಶೇಷಾದ್ರಿ ಈ ಸಂದರ್ಭದಲ್ಲಿ ಹಂಚಿಕೊಂಡರು. ಮಿತ್ರಚಿತ್ರ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಪಿ.ಶೇಷಾದ್ರಿ ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಜಿ.ಎಸ್.ಭಾಸ್ಕರ್ ಛಾಯಾಗ್ರಹಣ, ಬಿ.ಎಸ್.ಕೆಂಪರಾಜ್ ಸಂಕಲನ ಹಾಗೂ ಪ್ರವೀಣ್ ಗೋಡ್ಕಿಂಡಿ ಅವರ ಸಂಗೀತ ಹಾಗೂ ಹೊಸ್ಮನೆ ಮೂರ್ತಿ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಸಮರ್ಥ, ಪರಮಸ್ವಾಮಿ, ಶೃತಿ, ಅನಂತ್ ಮಹದೇವನ್, ದತ್ತಣ್ಣ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


