ಬರೆದ ಹಣೆಬರಹ ತಿದ್ದಲಿಲ್ಲ ಬ್ರಹ್ಮ; ಪುನೀತ್ ಸರ್ ಇಂದಿಗೂ ನಮ್ಮ ಜೊತೆಯಲ್ಲೇ ಇದ್ದಾರೆ: ನಟ ದರ್ಶನ್
ಕಾಣದ ಕೈಯಲಿ ಗೊಂಬೆಯು ನೀನು, ಹಣೆಬರಹ ತಿದ್ದುವರಾರಿಲ್ಲ ಎಂಬ ಸಾಲುಗಳು ತಮ್ಮನ್ನು ಕಾಡುತ್ತಿರುವುದಾಗಿ ನಟ ದರ್ಶನ್ ಹೇಳಿದ್ದಾರೆ.

ಬೆಂಗಳೂರು: ಕಾಣದ ಕೈಯಲಿ ಗೊಂಬೆಯು ನೀನು, ಹಣೆಬರಹ ತಿದ್ದುವರಾರಿಲ್ಲ ಎಂಬ ಸಾಲುಗಳು ತಮ್ಮನ್ನು ಕಾಡುತ್ತಿರುವುದಾಗಿ ನಟ ದರ್ಶನ್ ಹೇಳಿದ್ದಾರೆ.
ಪುನೀತ ನುಡಿನಮನ ಉದ್ದೇಶಿಸಿ ಮಾತನಾಡಿ, ಅಪ್ಪು ಈ ಸಮಾಜಕ್ಕೆ ಮಾಡುವ ಕೆಲಸಗಳು ಇನ್ನಷ್ಟು ಇದ್ದವು. ಆದರೆ ಬ್ರಹ್ಮದೇವ ಹಣೆಬರಹ ತಿದ್ದಲಿಲ್ಲ. ಆಯುಷ್ಯ ಹೆಚ್ಚಿಸಲಿಲ್ಲ ಎಂದು ಅಲವತ್ತುಕೊಂಡರು. ಪುನೀತ್ ರಾಜ್ ಕುಮಾರ್ ಅವರ ಕಲೆ, ಸೇವಾಕಾರ್ಯಗಳನ್ನು ನಾವೆಲ್ಲರೂ ಮುಂದುವರಿಸಿಕೊಂಡು ಸಾಗಬೇಕಿದೆ ಎಂದು ದರ್ಶನ್ ನುಡಿ ನಮನದಲ್ಲಿ ತಿಳಿಸಿದರು.
ಪುನೀತ್ ಅಗಲಿಕೆ ಸುದ್ದಿ ಅರಮನೆಗೆ ದುಃಖ ತಂದಿತ್ತು: ಯದುವೀರ ಒಡೆಯರ್
ಮೈಸೂರು ಅರಮನೆಗೂ ಡಾ. ರಾಜ್ ಕುಮಾರ್ ಕುಟುಂಬಕ್ಕೂ ಅವಿನಾಭಾವ ಸಂಬಂಧವಿದೆ ಎಂದು ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ದಾರೆ. ಪುನೀತ ನಮನ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿ, ಡಾ. ರಾಜ್ ಅವರ ಐತಿಹಾಸಿಕ ಚಿತ್ರಗಳು ನಮ್ಮ ರಾಜವಂಶದ ಬಗೆಗಿನ ಕುತೂಹಲವನ್ನು ಹೆಚ್ಚಿಸಿತು ಎಂದರು. ಪುನೀತ್ ಅಗಲಿಕೆಯ ಸುದ್ದಿ ಅರಮನೆಗೆ ದುಃಖ ತಂದಿತ್ತು. ಇಂತಹ ನೋವನ್ನು ಭರಿಸುವ ಶಕ್ತಿಯನ್ನು ಡಾ. ರಾಜ್ ಕುಟುಂಬಕ್ಕೆ ತಾಯಿ ಚಾಮುಂಡೇಶ್ವರಿ ನೀಡಲಿ ಎಂದು ಆಶಿಸಿದರು.
ಶಕ್ತಿಧಾಮದ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಲು ಅವಕಾಶ ಕೊಡಿ: ವಿಶಾಲ್
ಅಪ್ಪು ಹೃದಯಾಘಾತದಿಂದ ಅಗಲಿದ್ದಾರೆ ಎಂಬ ಸುದ್ದಿಯನ್ನು ಅಂದು ನಂಬಲು ಸಾಧ್ಯವಾಗಲೇ ಇಲ್ಲ. ಅವರ ನಗೆಮೊಗ ಈಗಲೂ ಕಣ್ಣೆದುರೇ ಇದೆ ಎಂದು ತೆಲುಗು ನಟ ವಿಶಾಲ್ ಹೇಳಿದ್ದಾರೆ.
ಪುನೀತ ನಮನ ಕಾರ್ಯಕ್ರಮದಲ್ಲಿ ಕನ್ನಡದಲ್ಲಿಯೇ ಮಾತು ಆರಂಭಿಸಿ, ನಮ್ಮಪ್ಪ ಕನ್ನಡಿಗ. ಸ್ವಲ್ಪ ಸ್ವಲ್ಪ ಕನ್ನಡ ಬರುತ್ತೆ ಎಂದ ವಿಶಾಲ್, ಅಪ್ಪು ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದಾರೆ. ಅವರು ಮಾಡಿದ ಕಾರ್ಯಗಳಲ್ಲಿ ಒಂದಿಷ್ಟು ಭಾಗಿಯಾಗಲು ಶಕ್ತಿಧಾಮದ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುವ ಸಲುವಾಗಿ ತಮಗೆ ಅವಕಾಶ ನೀಡುವಂತೆ ದೊಡ್ಮನೆ ಕುಟುಂಬಸ್ಥರಲ್ಲಿ ಮನವಿ ಮಾಡಿದರು. ಸ್ವಂತ ಮನೆಗಾಗಿ ಇಟ್ಟಿರುವ ಹಣವನ್ನು ಶಕ್ತಿಧಾಮದ ಮಕ್ಕಳ ವಿದ್ಯಾಭ್ಯಾಸಕ್ಕೆ ನೀಡಲು ಮುಂದಾಗಿರುವೆ. ಹಾಗೂ ಎಲ್ಲಾ ಸೇವಾ ಕೈಂಕರ್ಯ ಮುಂದುವರಿಸಲು ಸಿದ್ಧನಾಗಿರುವೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


