ಹೊಟೇಲ್ ಸಿಬ್ಬಂದಿ ಮೇಲೆ ನಟ ದರ್ಶನ್ ಹಲ್ಲೆ ಆರೋಪ: 'ಸಂದೇಶ್ ಪ್ರಿನ್ಸ್' ಗೆ ಪೊಲೀಸರ ಆಗಮನ, ಪರಿಶೀಲನೆ
ಸ್ಯಾಂಡಲ್ ವುಡ್ ನಟ ದರ್ಶನ್ ಮೈಸೂರಿನ ಸಂದೇಶ ಪ್ರಿನ್ಸ್ ಹೊಟೇಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದರು ಎಂಬ ನಿರ್ದೇಶಕ ಇಂದ್ರಜಿತ್ ಲಂಕೇಶ್ ಆರೋಪಕ್ಕೆ ಸಂಬಂಧಪಟ್ಟಂತೆ ಪರಿಶೀಲನೆ ನಡೆಸಲು ಶುಕ್ರವಾರ ಬೆಳಗ್ಗೆ ಪೊಲೀಸರು ಆಗಮಿಸಿದ್ದಾರೆ.

ಮೈಸೂರು: ಸ್ಯಾಂಡಲ್ ವುಡ್ ನಟ ದರ್ಶನ್ ಮೈಸೂರಿನ ಸಂದೇಶ ಪ್ರಿನ್ಸ್ ಹೊಟೇಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದರು ಎಂಬ ನಿರ್ದೇಶಕ ಇಂದ್ರಜಿತ್ ಲಂಕೇಶ್ ಆರೋಪಕ್ಕೆ ಸಂಬಂಧಪಟ್ಟಂತೆ ಪರಿಶೀಲನೆ ನಡೆಸಲು ಶುಕ್ರವಾರ ಬೆಳಗ್ಗೆ ಪೊಲೀಸರು ಆಗಮಿಸಿದ್ದಾರೆ.
ದೇವರಾಜ ಉಪ ವಿಭಾಗದ ಎಸಿಪಿ ಶಶಿಧರ್ ನೇತೃತ್ವದಲ್ಲಿ ಪೊಲೀಸರು ಅಲ್ಲಿನ ಸ್ಥಳಗಳನ್ನು ಪರಿಶೀಲಿಸುತ್ತಿದ್ದಾರೆ. ಅಂದು ದರ್ಶನ್ ಮತ್ತು ಅವರ ಸ್ನೇಹಿತರು ಪಾರ್ಟಿ ನಡೆಸಿದ ಕೋಣೆ, ಅಲ್ಲಿ ಸರ್ವ್ ಮಾಡುತ್ತಿದ್ದ ಸಿಬ್ಬಂದಿಗಳ ಬಗ್ಗೆ, ಸಿಸಿಟಿವಿ ದೃಶ್ಯಾವಳಿಗಳ ಬಗ್ಗೆ ಹೊಟೇಲ್ ಮಾಲೀಕ ಸಂದೇಶ್ ನಾಗರಾಜ್ ಅವರಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ. ನಜರ್ ಬಾದ್ ಠಾಣೆಯ ಇನ್ಸ್ ಪೆಕ್ಟರ್ ಶ್ರೀಕಾಂತ್ ಕೂಡ ತಂಡದಲ್ಲಿದ್ದಾರೆ.
ಸದ್ಯ ಈಗ ಹೊಟೇಲ್ ನಲ್ಲಿ ಸಂದೇಶ್ ಇದ್ದಾರೆ. ನಿನ್ನೆ ಸಾಯಂಕಾಲ ಬೆಂಗಳೂರಿನಿಂದ ಆಗಮಿಸಿದ್ದ ನಟ ದರ್ಶನ್ ಹೊಟೇಲ್ ಗೆ ಆಗಮಿಸಿ ಸಂದೇಶ್ ಅವರಲ್ಲಿ ಮಾತುಕತೆ ನಡೆಸಿ ತಮ್ಮ ತೂಗುದೀಪ ಫಾರ್ಮ್ ಹೌಸ್ ಗೆ ತೆರಳಿದ್ದರು. ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿರುವ ಗಂಗಾಧರ್ ಅವರನ್ನು ಸಹ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಸದ್ಯ ಈಗ ನಟ ದರ್ಶನ್ ತಮ್ಮ ಫಾರ್ಮ್ ಹೌಸ್ ನಲ್ಲಿಯೇ ಇದ್ದಾರೆ. ಕೋವಿಡ್-19 ನಿರ್ಬಂಧ ಹಿನ್ನೆಲೆಯಲ್ಲಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಅವರಿಗೆ ಸಹ ಇಂದು ದರ್ಶನ ಸಿಗಲಿಲ್ಲ. ಇಂದು ಮಧ್ಯಾಹ್ನ ನಂತರ ಅವರು ಸುದ್ದಿಗೋಷ್ಠಿ ನಡೆಸಲಿದ್ದಾರೆಯೇ ಎಂಬ ಕುತೂಹಲ ಕೆರಳಿದೆ.
ಗೃಹ ಸಚಿವರಿಗೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ನಿನ್ನೆ ಮನವಿ ಮಾಡಿದ ಹಿನ್ನೆಲೆ ಗೃಹ ಸಚಿವರು ವಿಷಯ ಬಗ್ಗೆ ತನಿಖೆ ನಡೆಸುವಂತೆ ಮೈಸೂರು ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದರು. ಹೀಗಾಗಿ ಹೋಟೆಲ್‌ಗೆ ಅಧಿಕಾರಿಗಳು ಭೇಟಿ ನೀಡಿ, ಸಂದೇಶ್ ದ್ ಪ್ರಿನ್ಸ್ ಹೋಟೆಲ್ ಮಾಲೀಕ ಸಂದೇಶ್, ಹೋಟೆಲ್ ಸಿಬ್ಬಂದಿಯಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಗಂಗಾಧರ್ ಹೇಳಿಕೆ ದಾಖಲು: ಅಂದು ದರ್ಶನ್ ಅವರು ಸಪ್ಲೈಯರ್ ಮೇಲೆ ಹಲ್ಲೆ ನಡೆಸಿದ್ದರು ಎಂಬ ಆರೋಪಕ್ಕೆ ಸಂಬಂಧಪಟ್ಟಂತೆ ಗಂಗಾಧರ್ ಅವರ ಹೇಳಿಕೆಯನ್ನು ಈಗ ಪೊಲೀಸರು ದಾಖಲಿಸಿಕೊಳ್ಳುತ್ತಿದ್ದಾರೆ. ಅದರ ಸಂಪೂರ್ಣ ವಿಡಿಯೊ ಚಿತ್ರೀಕರಣವಾಗುತ್ತಿದೆ. ಇಂದ್ರಜಿತ್ ಲಂಕೇಶ್ ಅವರು ಗಂಗಾಧರ್ ಎಂಬ ಕೆಲಸಗಾರನ ಮೇಲೆ ಹಲ್ಲೆಯಾಗಿದೆ ಎಂದು ಆರೋಪಿಸಿದ್ದರು. ಗಂಗಾಧರ್ ಅವರು ಇಂದು ಯಾವ ರೀತಿ ಹೇಳಿಕೆ ನೀಡುತ್ತಾರೆ ಎಂಬ ಆಧಾರದಲ್ಲಿ ಕೇಸಿಗೆ ಮುಂದಿನ ತಿರುವು ಪಡೆದುಕೊಳ್ಳಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


