'83' ಕನ್ನಡ ಅವತರಣಿಕೆ ಸುದೀಪ್ ರಿಂದ ಬಿಡುಗಡೆ
1983ರ ವಿಶ್ವಕಪ್ ಟೂರ್ನಿ ಕುರಿತ ಬಹು ನಿರೀಕ್ಷಿತ 83 ಸಿನಿಮಾವನ್ನು ಕನ್ನಡದಲ್ಲಿ ನಟ ಕಿಚ್ಚಾ ಸುದೀಪ್ ಬಿಡುಗಡೆ ಮಾಡುತ್ತಿದ್ದಾರೆ.

ಬೆಂಗಳೂರು: 1983ರ ವಿಶ್ವಕಪ್ ಟೂರ್ನಿ ಕುರಿತ ಬಹು ನಿರೀಕ್ಷಿತ 83 ಸಿನಿಮಾವನ್ನು ಕನ್ನಡದಲ್ಲಿ ನಟ ಕಿಚ್ಚಾ ಸುದೀಪ್ ಬಿಡುಗಡೆ ಮಾಡುತ್ತಿದ್ದಾರೆ.
ಹೌದು.. ಬಹುನಿರೀಕ್ಷಿತ ‘83’ ಸಿನಿಮಾ (83 Movie) ಬಿಡುಗಡೆಗೆ ಸಜ್ಜಾಗಿದ್ದು, ಮೊದಲ ಲಾಕ್ಡೌನ್ ಶುರುವಾಗುವುದಕ್ಕೂ ಮುನ್ನವೇ ಈ ಸಿನಿಮಾ ರಿಲೀಸ್ಗೆ ಸಿದ್ಧವಾಗಿತ್ತು. ಆದರೆ ಲಾಕ್ಡೌನ್ ಜಾರಿಯಾದ ಬಳಿಕ ಬಿಡುಗಡೆ ದಿನಾಂಕ ಮುಂದೂಡುವುದು ಅನಿವಾರ್ಯ ಆಗಿತ್ತು. ಇದೀಗ ರಣವೀರ್ ಸಿಂಗ್ (Ranveer Singh) ನಟನೆಯ ಈ ಚಿತ್ರ ಈಗ ಎಲ್ಲ ವಿಘ್ನಗಳನ್ನು ನಿವಾರಿಸಿಕೊಂಡು ಡಿಸೆಂಬರ್ 24ರಂದು ತೆರೆ ಕಾಣಲಿದೆ. ವಿಶೇಷ ಏನೆಂದರೆ ನಟ ಕಿಚ್ಚ ಸುದೀಪ್ (Kichcha Sudeep) ಅವರು ಕೂಡ ಈಗ ಈ ಚಿತ್ರತಂಡಕ್ಕೆ ಸಾಥ್ ನೀಡಿದ್ದು, ಕನ್ನಡ ಅವತರಣಿಕೆಯ ಸಿನಿಮಾವನ್ನು ನಟ ಸುದೀಪ್ ಅವರು ಬಿಡುಗಡೆ ಮಾಡುತ್ತಿದ್ದಾರೆ.
ಅಂದರೆ, ಕನ್ನಡದಲ್ಲಿ ‘83’ ಸಿನಿಮಾವನ್ನು ಸುದೀಪ್ ಅರ್ಪಿಸುತ್ತಿದ್ದು, ಮೂಲತಃ ಹಿಂದಿಯಲ್ಲಿ ಮೂಡಿಬಂದಿರುವ ಈ ಸಿನಿಮಾ ಇತರೆ ಭಾಷೆಗಳಿಗೆ ಡಬ್ ಆಗಿದೆ. ಕನ್ನಡ, ತೆಲುಗು, ಮಲಯಾಳಂ ಮತ್ತು ತೆಲುಗಿನಲ್ಲಿ ‘83’ ರಿಲೀಸ್ ಆಗಲಿದೆ. ಕನ್ನಡ ಅವತರಣಿಕೆಯನ್ನು ಸುದೀಪ್ ಬಿಡುಗಡೆ ಮಾಡುತ್ತಿದ್ದಾರೆ. ಆ ಕಾರಣದಿಂದಲೂ ಈ ಚಿತ್ರ ಭಾರಿ ನಿರೀಕ್ಷೆ ಮೂಡಿಸಿದೆ. ಕಿಚ್ಚಾ ಸುದೀಪ್ ಅವರ ಶಾಲಿನಿ ಆರ್ಟ್ಸ್ ಹಾಗೂ ರಿಲಯನ್ಸ್ ಎಂಟರ್ಟೇನ್ಮೆಂಟ್ ಸಂಸ್ಥೆ ವಿತರಣೆಯ ಜವಾಬ್ದಾರಿಯನ್ನು ಹೊತ್ತುಕೊಂಡಿವೆ.
1983ರಲ್ಲಿ ಭಾರತ ಕ್ರಿಕೆಟ್ ತಂಡ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿದ ಘಟನೆಯನ್ನೇ ಆಧಾರವಾಗಿ ಇಟ್ಟುಕೊಂಡು ‘83’ ಸಿನಿಮಾ ಮೂಡಿಬಂದಿದೆ. ಕಪಿಲ್ ದೇವ್ ಪಾತ್ರದಲ್ಲಿ ನಟಿಸಲು ರಣವೀರ್ ಸಿಂಗ್ ತುಂಬ ಶ್ರಮಪಟ್ಟಿದ್ದಾರೆ. ಟೀಸರ್ ಮತ್ತು ಪೋಸ್ಟರ್ಗಳಲ್ಲಿ ಅವರ ಲುಕ್ ಗಮನ ಸೆಳೆದಿದೆ. ಇಡೀ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ. ಈ ವರ್ಷಾಂತ್ಯಕ್ಕೆ ‘83’ ಮೂಲಕ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ಸಿಗಲಿದೆ.
ಈ ಬಗ್ಗೆ ಮಾತನಾಡಿರುವ ಚಿತ್ರದ ನಿರ್ದೇಶಕ ನಿರ್ಮಾಪಕರಲ್ಲಿ ಒಬ್ಬರಾದ ಕಬೀರ್ ಖಾನ್ ಅವರು, 'ಇದು ಬಹಳ ಸಂತೋಷದ ಮತ್ತು ಹೆಮ್ಮೆಯ ವಿಚಾರ. ಕಿಚ್ಚ ಸುದೀಪ್ ಅವರು ನಮ್ಮ ತಂಡದೊಂದಿಗೆ ಸೇರಿಕೊಂಡಿರುವುದರಿಂದ ‘83’ ಸಿನಿಮಾಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಗಲಿದೆ ಎಂದು ಹೇಳಿದ್ದಾರೆ.
ಅಂತೆಯೇ ನಟ ಸುದೀಪ್ ಕೂಡ ಈ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದು, 'ಕನ್ನಡದಲ್ಲಿ ತೆರೆ ಕಾಣುತ್ತಿರುವ ‘83’ ಸಿನಿಮಾವನ್ನು ಅರ್ಪಿಸಲು ನನಗೆ ಸಂತೋಷ ಆಗುತ್ತದೆ. ಕ್ರಿಕೆಟ್ ಎಂಬುದು ಭಾರತಿಯರಿಗೆ ಒಂದು ಧರ್ಮವೇ ಆಗಿ ಹೋಗಿರುವಾಗ ಈ ನೈಜ ಕಥೆಯನ್ನು ತೆರೆಯ ಮೇಲೆ ತಂದಿರುವುದಕ್ಕೆ ಅಭಿನಂದನೆಗಳು. ಇದು ನಿಜಕ್ಕೂ ಬಹು ನಿರೀಕ್ಷೆಯ ಸಿನಿಮಾ’ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
ದೀಪಿಕಾ ಪಡುಕೋಣೆ, ಕಬೀರ್ ಖಾನ್, ವಿಷ್ಣು ವರ್ಧನ್ ಇಂದುರಿ, ಸಾಜಿದ್ ನಾಡಿಯದ್ವಾಲ, ಫಾಂಟಮ್ ಫಿಲ್ಮ್ಸ್ ಹಾಗೂ 83 ಫಿಲ್ಮ್ ಲಿಮಿಟೆಡ್ ಮೂಲಕ ಈ ಚಿತ್ರ ನಿರ್ಮಾಣ ಆಗಿದೆ. ಕಪಿಲ್ ದೇವ್ ಪಾತ್ರದಲ್ಲಿ ರಣವೀರ್ ಸಿಂಗ್ ಅಭಿನಯಿಸಿದ್ದರೆ, ಅವರ ಪತ್ನಿ ರೋಮಿ ಭಾಟಿಯಾ ಪಾತ್ರವನ್ನು ದೀಪಿಕಾ ಪಡುಕೋಣೆ ನಿರ್ವಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


