'ಐ ಆಮ್ ಕಲ್ಕಿ'ಗೆ ಮತ್ತೆ ಬಣ್ಣ ಹಚ್ಚಲಿರುವ ನಿರ್ದೇಶಕ ಪ್ರೇಮ್
ಕಳೆದ 3-4 ವರ್ಷಗಳಿಂದ ನಟನೆಯಿಂದ ದೂರ ಉಳಿದಿದ್ದ ಪ್ರೇಮ್ ಅವರು ಕಲ್ಕಿ ಎಂಬ ಚಿತ್ರದ ಮೂಲಕ ಮತ್ತೆ ಬಣ್ಣ ಹಚ್ಚಲಿದ್ದಾರೆಂಬ ಸುದ್ದಿ ಹೊರಬಿದ್ದಿದೆ.

ಕಳೆದ 3-4 ವರ್ಷಗಳಿಂದ ನಟನೆಯಿಂದ ದೂರ ಉಳಿದಿದ್ದ ಪ್ರೇಮ್ ಅವರು ಕಲ್ಕಿ ಎಂಬ ಚಿತ್ರದ ಮೂಲಕ ಮತ್ತೆ ಬಣ್ಣ ಹಚ್ಚಲಿದ್ದಾರೆಂಬ ಸುದ್ದಿ ಹೊರಬಿದ್ದಿದೆ.
ಚಿತ್ರವನ್ನು ಪತ್ರಕರ್ತ ಚಂದ್ರಚೂಡ್ ಅವರು ನಿರ್ದೇಶಿಸುತ್ತಿದ್ದು, ಪ್ರೇಮ್ ಅವರು ನಾಯಕರಾಗಿ ನಟಿಸುತ್ತಿದ್ದಾರೆಂದು ತಿಳಿದುಬಂದಿದೆ.
ಮೊದಲು ಕಲ್ಕಿ ಎಂಬ ಚಿತ್ರವನ್ನು ನಿರ್ದೇಶಿಸುವುದಕ್ಕೆ ಹೊರಟಿದ್ದ ಪ್ರೇಮ್ ಅವರು ನಂತರ ದಿ ವಿಲನ್ ಚಿತ್ರವನ್ನು ಮಾಡಿದ್ದರು. ನಂತರ ಏಕ್ ಲವ್ ಯಾ ಚಿತ್ರವನ್ನು ಘೋಷಿಸಿದ್ದರು. ಇದೆಲ್ಲದರಿಂದ 3-4 ವರ್ಷಗಳ ಕಾಲ ಪ್ರೇಮ್ ಅವರು ಬಣ್ಣ ಹಚ್ಚಲಾಗಲಿಲ್ಲ. ಇದೀಗ ಏಕ್ ಲವ್ ಯಾ ಚಿತ್ರ ಮುಗಿಯುವ ಹಂತಕ್ಕೆ ಬಂದಿದ್ದು, ಮುಂದಿನ ವರ್ಷ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.
ಇದಾದ ಬಳಿಕ ಪ್ರೇಮ್ ಅವರು 1-2 ವರ್ಷಗಳ ಕಾಲ ನಟನೆಯಲ್ಲಿ ಬಿಝಿಯಾಗಿರುವಂತಿದೆ ಇದಕ್ಕೆ ಕಾರಣ ಇತ್ತೀಚೆಗೆ ಪ್ರೇಮ್ ಹುಟ್ಟುಹಬ್ಬದ ಸಂದರ್ಭದಲ್ಲಿ ಮೂರು ಚಿತ್ರತಂಡಗಳು ಅವರಿಗೆ ಶುಭಕೋರಿ ಪೋಸ್ಟರ್ ಗಳನ್ನು ಬಿಡುಗಡೆ ಮಾಡಿರುವುದಾಗಿದೆ. ಮೊದಲನೆಯದಾಗಿ ಎಂ.ಎಸ್.ಆರ್ ಪ್ರೊಡಕ್ಷನ್'ನ ಹೆಸರಿಡದ ಚಿತ್ರದಲ್ಲಿ ಪ್ರೇಮ್ ನಟಿಸುತ್ತಿದ್ದು, ಈ ಚಿತ್ರವನ್ನು ಹೆಚ್.ವಿಜಯಕುಮಾರ್ ಅವರು ನಿರ್ದೇಶನ ಮಾಡಲಿದ್ದಾರೆ.
ಇನ್ನು ಎರಡನೆಯ ಚಿತ್ರವೆಂದರೆ ಅದು ಐ ಆಮ್ ಕಲ್ಕಿ. ಈ ಚಿತ್ರವನ್ನು ಚಕ್ರವರ್ತಿ ಚಂದ್ರಚೂಡ್ ನಿರ್ದೇಶನ ಮಾಡುತ್ತಿದ್ದು, ಆನೆ ಪಟಾಕಿ ನಿರ್ಮಿಸಿದ್ದ ಸುರೇಶ್ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಮೂರನೆಯ ಚಿತ್ರವಾಗಿ ಕಿಲಾಡಿ ಕಿಷ್ಣ ಇದೆ. ಸದ್ಯ ಗಾಂಧಿಗಿರಿ ಚಿತ್ರವನ್ನು ನಿರ್ದೇಶಿಸುತ್ತಿರುವ ರಘು ಹಾಸನ್ ಅವರೇ ಈ ಚಿತ್ರವನ್ನೂ ನಿರ್ದೇಶಿಸಲಿದ್ದಾರೆ. ಅಲ್ಲಿಗೆ ಪ್ರೇಮ್ ಕೈಯಲ್ಲಿ ಮೂರು ಚಿತ್ರವಿರುವುದು ಪಕ್ಕಾ ಆಗಿದೆ. ಈ ಮೂರು ಚಿತ್ರದಲ್ಲಿ ಪ್ರೇಮ್ ಅವರು ಮೊದಲು ಯಾವ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆಂಬುದು ಕುತೂಹಲ ಕೆರಳಿಸಿದೆ.
ಕಲ್ಕಿ ಚಿತ್ರದಲ್ಲಿ ತಮಿಳು ಸ್ಟಾರ್ ನಟರೊಬ್ಬರು ನಟಿಸುತ್ತಿದ್ದಾರೆಂದು ಹೇಳಲಾಗುತ್ತಿದೆ. ತಮಿಳು ಚಿತ್ರರಂಗದ ಸ್ಟಾರ್ ನಟ ಎಂದೇ ಹೇಳಲಾಗುವ ಬಾಬಿ ಸಿಂಹ ಅವರು ಕಲ್ಕಿ ಚಿತ್ರದ ಮೂಲಕ ಸ್ಯಾಂಡಲ್'ವುಡ್'ಗೆ ಪಾದಾರ್ಪಣೆ ಮಾಡಲಿದ್ದಾರೆನ್ನಲಾಗಿದೆ. ಚಿತ್ರದಲ್ಲಿ ಬಾಬಿ ಅವರು ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆಂದು ಹೇಳಲಾಗುತ್ತಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಚಂದ್ರಚೂಡ್ ಅವರು, ಬಾಬಿ ಸಿಂಹ ಅವರೊಂದಿಗೆ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಲಾಗಿದೆ. ಈ ಬಗ್ಗೆ ಶೀಘ್ರದಲ್ಲಿಯೇ ಅಧಿಕೃತವಾಗಿ ಮಾಹಿತಿ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
'ಕಲ್ಕಿ' ವಿಷ್ಣುವಿನ ಕೊನೆಯ ಅವತಾರವೆಂದು ಹಿಂದೂ ಪುರಾಣಗಳಲ್ಲಿ ಹೇಳಲಾಗುತ್ತಿದ್ದು, ಚಿತ್ರಕ್ಕೆ ಈ ಹೆಸರನ್ನು ಇಟ್ಟಿರುವ ಚಂದ್ರಚೂಡ್ ಅವರು, ಟ್ಯಾಗ್ ಲೈನ್ ನ್ನು 'ಯು ಸ್ಮೆಲ್ ಲೈಕ್ ಲವ್' ಎಂದು ಇಡುವ ಮೂಲಕ ಪ್ರೇಕ್ಷಕರ ಕುತೂಹಲವನ್ನು ಕೆರಳಿಸಿದ್ದಾರೆ. ಕಳೆದ ಆರು ತಿಂಗಳುಗಳಲ್ಲಿ ರಾಜ್ಯದಲ್ಲಿ ನಡೆದ ಸರಣಿ ಘಟನೆಗಳನ್ನಾಧರಿಸಿ ಚಿತ್ರವನ್ನು ನಿರ್ಮಾಣ ಮಾಡಲಾಗುತ್ತಿದೆ.
ಡ್ರಗ್ಸ್ ದಂಧೆ, ಇಂಜಿನಿಯರ್ ಆದಿತ್ಯ ರಾವ್, ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಬೆದರಿಕೆ ಸೇರಿದಂತೆ ಇತರೆ ಘಟನೆಗಳನ್ನು ಚಿತ್ರದಲ್ಲಿ ಹೈಲೈಟ್ ಮಾಡಲಾಗುತ್ತಿದ್ದು, ಚಿತ್ರದಲ್ಲಿ ಚಂದ್ರಚೂಡ್ ಅವರು ಕೂಡ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆನ್ನಲಾಗುತ್ತಿದೆ.
ಚಿತ್ರವನ್ನು ಸುರೇಶ್ ಬಾಬು ಅವರು ನಿರ್ಮಿಸುತ್ತಿದ್ದು, ಸಾಧುಕೋಕಿಲಾ ಅವರ ಪುತ್ರ ಸುರಾಗ್ ಎಸ್ ಅವರು ಸಂಗೀತ ಸಂಯೋಜನೆ ಮಾಡಲಿದ್ದಾರೆ. ಡಿಸೆಂಬರ್ 16ರಿಂದ ಚಿತ್ರ ಸೆಟ್ಟೇರಲಿದೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


