ಭಾವೀ ಪತ್ನಿ ಜೊತೆ ಶಾಪಿಂಗ್ ಇಲ್ಲಾ, ಸಿನಿಮಾದಲ್ಲಿ ಬ್ಯುಸಿಯಾಗಿದ್ದೇನೆ!
ಭಾವೀ ಪತ್ನಿ ರೇವತಿ ಜೊತೆ ಶಾಪಿಂಗ್ ಇಲ್ಲಾ,ಸದ್ಯಕ್ಕೆ ಸಿನಿಮಾ ಶೂಟಿಂಗಿನಲ್ಲಿ ಬ್ಯುಸಿಯಾಗಿದ್ದೆನೆ ಎಂದು ನಟ ಹಾಗೂ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ಮಂಡ್ಯ: ಭಾವೀ ಪತ್ನಿ ರೇವತಿ ಜೊತೆ ಶಾಪಿಂಗ್ ಇಲ್ಲಾ,ಸದ್ಯಕ್ಕೆ ಸಿನಿಮಾ ಶೂಟಿಂಗಿನಲ್ಲಿ ಬ್ಯುಸಿಯಾಗಿದ್ದೆನೆ ಎಂದು ನಟ ಹಾಗೂ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಬರೋ ಏ.೧೭ ಕ್ಕೆ ಮದುವೆ ಫಿಕ್ಸ್ ಆಗಿದೆ ನಿಜ, ಆದರೆ ರೇವತಿಯವರೊಂದಿಗೆ ಶಾಪಿಂಗ್ ಗೆ ಹೋಗಿಲ್ಲ, ಆದರೆ ಏ.೧೦ ರ ವರೆಗೂ ನನ್ನ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿ ಇದ್ದೇನೆ, ಶೂಟಿಂಗ್ ಮುಗಿದ ಬಳಿಕ ಭೇಟಿಯಾಗುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಏಪ್ರಿಲ್ ೧೭ಕ್ಕೆ ಮದುವೆ ನಿಗದಿಯಾಗಿದೆ, ನನ್ನ ಮದುವೆ ಜವಾಬ್ದಾರಿಯನ್ನ ತಂದೆ ಕುಮಾರಸ್ವಾಮಿ ಹಾಗೂ ತಾಯಿ ಅನಿತಾ ವಹಿಸಿಕೊಂಡಿದ್ದಾರೆ, ನಮ್ಮ ಇಡೀ ಕುಟುಂಬ ಆಸಕ್ತಿ ವಹಿಸಿ ಮದುವೆ ಕಾರ್ಯದಲ್ಲಿ ತೊಡಗಿದೆ, ನಾನು ಇನ್ನೂ ಹೆಸರಿಡದ ನನ್ನ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದೇನೆ, ಏಪ್ರಿಲ್ ೧೦ ರ ಬಳಿಕ ಮದುವೆ ಕಾರ್ಯದಲ್ಲಿ ತೊಡಗುವೆ ಎಂದರು.
ಮದುವೆ ಆಹ್ವಾನ ಪತ್ರಿಕೆ ಮುದ್ರಣ ಆಗ್ತಿದೆ. ಶೀಘ್ರವೇ ಹಂಚಿಕೆ ಕಾರ್ಯ ಆರಂಭವಾಗಲಿದೆ, ಮಂಡ್ಯ, ರಾಮನಗರ ಭಾಗದ ಜನತೆಯ ಜೊತೆ ನನಗೆ ಒಡನಾಟ ಜಾಸ್ತಿ ಇದೆ, ನಾನೇ ಖುದ್ದಾಗಿ ಮದುವೆ ಆಮಂತ್ರಣ ನೀಡುತ್ತೆನೆ, ಮದುವೆ ಕಾರ್ಯಕ್ಕೆ ಎರಡೂ ಜಿಲ್ಲೆಯ ಜನರನ್ನ ಆಹ್ವಾನಿಸುತ್ತೇವೆ, ಪ್ರತಿ ಮನೆ ಮನೆಗೂ ಆಮಂತ್ರಣ ಕೊಡೋದಕ್ಕೆ ನಮ್ಮ ಕಾರ್ಯಕರ್ತರಿಗೆ ಸೂಚಿಸಲಾಗಿದೆ, ಎಲ್ಲರು ಬಂದು ಆಶೀರ್ವಾದ ಮಾಡಬೇಕು, ನಮ್ ಜೊತೆ ಬಂದು ಊಟ ಮಾಡಬೇಕು ಅನ್ನೋದು ನಮ್ಮ ಆಶಯ ಎಂದು ಅವರು ತಿಳಿಸಿದರು.
ನಿನ್ನೆ ಕೆ.ಆರ್.ಪೇಟೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಪ್ರತಿಭಟನಾ ಧರಣಿ ನಡೆಸಿದ ವಿಚಾರವಾಗಿ ಮಾತನಾಡಿದ ಅವರು, ಮಂಡ್ಯದಲ್ಲಿ ಉಪಚುನಾವಣೆ ಬಳಿಕ ದ್ವೇಷದ ರಾಜಕಾರಣ ಜಾಸ್ತಿ ಆಗಿದೆ. ಇದಕ್ಕೆ ಕಡಿವಾಣ ಹಾಕಬೇಕು.
ಈ ರೀತಿಯ ರಾಜಕಾರಣ ಮಾಡೋದು ತಪ್ಪು, ಹಿರಿಯರಾದ ದೇವೇಗೌಡರು ನಮಗೆಲ್ಲಾ ಮಾದರಿ. ಹೋರಾಟ ಮಾಡಿಕೊಂಡೇ ಬಂದವರು, ನೊಂದ ಕಾರ್ಯಕರ್ತರ ಪರ ಅವರು ನಿಂತಿದ್ದಾರೆ, ನಾವು ಸಹ ಕಾರ್ಯಕರ್ತರಿಗೆ ತೊಂದರೆಯಾದಾಗ ಅವರ ಪರ ನಿಲ್ತೀವಿ, ಅದರಲ್ಲಿ ತಪ್ಪೇನಿದೆ ಎಂದರು.
ಇದಕ್ಕೂ ಮುನ್ನಾ ಮಂಡ್ಯದ ಒಳಾಂಗಣ ಕ್ರಿಡಾಂಗಣದ ಆವರಣದಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ಕ್ಷೀರಸಾಗರ ಸಂಘ, ಪಶುಸಂಗೋಪನಾ ಇಲಾಖೆ, ಮನ್ಮುಲ್ ವತಿಯಿಂದ ಏರ್ಪಡಿಸಿದ್ದ ರಾಜ್ಯಮಟ್ಟದ ಹಾಲುಕರೆಯುವ ಸ್ಪರ್ಧೆಯ ಕಾರ್ಯಕ್ರಮದಲ್ಲಿ ನಿಖಿಲ್ ಕುಮಾರಸ್ವಾಮಿ ಪಾಲ್ಗೊಂಡು ಶುಭಹಾರೈಸಿದರು. ಈ ವೇಳೆ ಶಾಸಕ ಎಂ.ಶ್ರೀನಿವಾಸ್,ನಗರಸಭಾಸದಸ್ಯ ನಾಗೇಶ್ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


