ಮುದ್ದೆ ಉಂಡವರ 'ಆನೆಬಲ'
ಗ್ರಾಮೀಣ ಸೊಗಡಿನ, ಅದರಲ್ಲೂ ವಿಶೇಷವಾಗಿ ಮಂಡ್ಯ ನೆಲದ ಕಥಾಹಂದರದ ಚಿತ್ರ 'ಆನೆಬಲ' ಧ್ವನಿಸಾಂದ್ರಿಕೆ ಬಿಡುಗಡೆಯಾಗಿದೆ.

ಬೆಂಗಳೂರು: ಗ್ರಾಮೀಣ ಸೊಗಡಿನ, ಅದರಲ್ಲೂ ವಿಶೇಷವಾಗಿ ಮಂಡ್ಯ ನೆಲದ ಕಥಾಹಂದರದ ಚಿತ್ರ 'ಆನೆಬಲ' ಧ್ವನಿ ಸುರಳಿ ಇತ್ತೀಚಿಗೆ ಬಿಡುಗಡೆಯಾಗಿದೆ.
ರಾಗಿ ಮುದ್ದೆಯ ಮಹಿಮೆ ಸಾರುವ 'ಮುದ್ದೆ ಮುದ್ದೆ ರಾಗಿ ಮುದ್ದೆ, ನಿದ್ದೆ ನಿದ್ದೆ ತಂಪು ನಿದ್ದೆ', 'ಮಳವಳ್ಳಿ ಜಾತ್ರೇಲಿ' ಹಾಡುಗಳ ಸಾಹಿತ್ಯ, ಸಂಗೀತ ಕೇಳುಗರ ಗಮನ ಸೆಳೆಯುತ್ತದೆ. ಮೇಕಿಂಗ್ ಕೂಡ ಸೊಗಸಾಗಿ ಮೂಡಿ ಬಂದಿದೆ.
ನಾಯಕ ನಟ ಸಾಗರ್ ದೇಸಿ ಸ್ಟೆಪ್ಸ್ ಸಖತ್ತಾಗಿದೆ. ಜನತಾ ಟಾಕೀಸ್ ಅಡಿಯಲ್ಲಿ ನಿರ್ಮಾಣವಾಗಿರುವ ಚಿತ್ರಕ್ಕೆ ಎ ವಿ ವೇಣುಗೋಪಾಲ್ ಅಡಕಿಮಾರನಹಳ್ಳಿ ಹಾಗೂ ಎಮ್ ಎಸ್ ರಘುನಂದನ್ ಬಂಡವಾಳ ಹೂಡಿದ್ದಾರೆ. ಸೂನಗಹಳ್ಳಿ ರಾಜು ಕತೆ, ಚಿತ್ರಕತೆ, ಸಂಭಾಷಣೆ ಹಾಗೂ ನಿರ್ದೇಶನವಿದೆ.
ಚಿತ್ರದುದ್ದಕ್ಕೂ ರಾಗಿ ಹಾಗೂ ರಾಗಿ ಮುದ್ದೆ ಪ್ರಮುಖ ಪಾತ್ರ ವಹಿಸುತ್ತದೆ. ಇದುವರೆಗೂ ಈ ವಸ್ತು ವಿಷಯದಡಿ ಯಾವುದೇ ಚಿತ್ರ ಮೂಡಿಬಂದಿಲ್ಲ. ಜತೆಗೆ ಜನಪದ ಸಂಸ್ಕೃತಿ, ಸೋಬಾನೆ ಪದಗಳ ಬಳಕೆ, ಹಳ್ಳಿಯ ಸೊಬಗನ್ನು ಅತ್ಯದ್ಭುತವಾಗಿ ಚಿತ್ರಿಸಲಾಗಿದೆ ಎಂದು ನಿರ್ದೇಶಕ ಸೂನಗಹಳ್ಳಿ ರಾಜು ತಿಳಿಸಿದ್ದಾರೆ.
ಹಳ್ಳಿಯ ಕೆಲಸಗಳಿಗೆ ಕೈ ಜೋಡಿಸುವ ಯುವಪಡೆ, ಓದಿನ ಜತೆಗೆ ಅವರ ತುಂಟಾಟ, ತಮಾಷೆಗಳನ್ನು ಮಂಡ್ಯ ನೆಲದ ಭಾಷೆಯಲ್ಲಿ ಹಾಸ್ಯಮಯವಾಗಿ ಹೆಣೆಯಲಾಗಿದೆ. ೧೨೦ಕ್ಕೂ ಹೆಚ್ಚುಯ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ೧೦೨ ವರ್ಷ ವಯಸ್ಸಿನ ವಳಗೆರೆಹಳ್ಳಿ ಗೌರಮ್ಮ ಕೂಡ ಪಾತ್ರವೊಂದಕ್ಕೆ ಜೀವ ತುಂಬಿರುವುದಲ್ಲದೆ ಸ್ವತಃ ಡಬ್ಬಿಂಗ್ ಮಾಡಿದ್ದಾರೆ. ಚಿತ್ರದಲ್ಲಿ ನೈಜತೆ ಮತ್ತು ಸಹಜತೆ ಢಾಳಾಗಿದೆ ಎಂದಿದ್ದಾರೆ.
'ಮುದ್ದೆ ಮುದ್ದೆ' ಹಾಡಿಗೆ ಡಾ ನಾಗೇಂದ್ರ ಪ್ರಸಾದ್ ಸಾಹಿತ್ಯ ಒದಗಿಸಿದ್ದರೆ, 'ಮಳವಳ್ಳಿ ಜಾತ್ರೇಲಿ ತುಂಡ್ ಹೈಕ್ಳಾ ದರ್ಬಾರು' ಹಾಡನ್ನು ನಿರ್ದೇಶಕ ಸೂನಗಹಳ್ಳಿ ರಾಜು ಅವರೇ ಬರೆದಿದ್ದಾರೆ.
ನಿರ್ಮಾಪಕ ಎ ವಿ ವೇಣುಗೋಪಾಲ್, ನಾಟಿ ಸೈಲ್ ಕತೆ ಮತ್ತು ನೇರ ನಿರೂಪಣೆಯ ಕತೆಯನ್ನು ಕೇಳಿ, ಇಷ್ಟಪಟ್ಟು ಬಂಡವಾಳ ಹೂಡಿದ್ದೇವೆ ಚಿತ್ರೀಕರಣ ಮುಕ್ತಾಯವಾಗಿದ್ದು, ಡಿಸೆಂಬರ್ ಗೆ ತೆರೆಗೆ ತರುವ ಪ್ರಯತ್ನ ನಡೆದಿದೆ ಎಂದು ಹೇಳಿದ್ದಾರೆ.
'ಆನೆಬಲ' ಚಿತ್ರದ ತಾರಾಗಣದಲ್ಲಿ ಸಾಗರ್, ರಕ್ಷಿತ, ಮಲ್ಲರಾಜು, ಚಿರಂಜೀವಿ, ಹರೀಶ್ ಶೆಟ್ಟಿ, ಮುತ್ತುರಾಜು, ಕೀಲಾರ ಉದಯ್, ಶಂಭೂಗೌಡ, ಸಿದ್ದು, ರೂಪ, ಸುಮಾ, ಕಾಳೇನಹಳ್ಳಿ ಕೆಂಚೇಗೌಡ, ಲಂಕೇಶ್ ಸೇರಿದಂತೆ ೧೨೦ಕ್ಕೂ ಹೆಚ್ಚು ಕಲಾವಿದರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


