ಬ್ಲಾಕ್ ಮೇಲ್ ಮಾಡಲು ನಟಿಯ ಅಪಹರಣ ಮಾಡಿದ್ದ ದುಷ್ಕರ್ಮಿಗಳು!
ದಕ್ಷಿಣ ಭಾರತದ ಖ್ಯಾತ ನಟಿ ಭಾವನಾ ಅವರ ಅಪಹರಣ ಪ್ರಕರಣದ ಹಿಂದೆ ದೊಡ್ಡ ಷಡ್ಯಂತ್ರವೇ ಇದೆ ಎಂದು ತನಿಖೆ ನಡೆಸುತ್ತಿರುವ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೊಚ್ಚಿ: ದಕ್ಷಿಣ ಭಾರತದ ಖ್ಯಾತ ನಟಿ ಭಾವನಾ ಅವರ ಅಪಹರಣ ಪ್ರಕರಣದ ಹಿಂದೆ ದೊಡ್ಡ ಷಡ್ಯಂತ್ರವೇ ಇದೆ ಎಂದು ತನಿಖೆ ನಡೆಸುತ್ತಿರುವ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಕರಣ ಸಂಬಂಧ ಈಗಾಗಲೇ ಮೂವರನ್ನು ಬಂಧಿಸಿರುವ ಪೊಲೀಸರು ನಾಪತ್ತೆಯಾಗಿರುವ ಇತರೆ ನಾಲ್ಕು ಮಂದಿ ಶಂಕಿತ ಆರೋಪಿಗಳಿಗಾಗಿ ವ್ಯಾಪಕ ಬಲೆ ಬೀಸಿದ್ದಾರೆ. ನಿನ್ನೆ ನಟಿ ಭಾವನಾ ಅವರ ಚಾಲಕ ಮಾರ್ಟಿನ್ ಎಂಬಾತನನ್ನು ವಶಕ್ಕೆ ಪಡೆದಿದ್ದ ಪೊಲೀಸರು ಇಂದು ಪ್ರಕರಣದ ಮಾಸ್ಟರ್ ಮೈಂಡ್ ಸುನಿಲ್ ಕುಮಾರ್ ಅಲಿಯಾಸ್ ಪಲ್ಸರ್ ಸುನಿಯನ್ನು ವಶಕ್ಕೆ ಪಡೆಯಲು ಯತ್ನಿಸಿದ್ದರು. ಆದರೆ ಆರೋಪಿ ಕೂದಲೆಳೆ ಅಂತರದಲ್ಲಿ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಪೊಲೀಸರ ತನಿಖೆಯಿಂದ ಹಲವು ಸ್ಫೋಟಕ ಮಾಹಿತಿಗಳು ಹೊರ ಬೀಳುತ್ತಿದ್ದು, ನಟಿಯನ್ನು ಬೆದರಿಸುವ ತಂತ್ರದಿಂದಲೇ ಆಕೆಯನ್ನು ಅಪರಹಣ ಮಾಡಲಾಗಿತ್ತು ಎಂದು ತಿಳಿದುಬಂದಿದೆ.
ನಟಿಯರ ಫೋಟೋಗಳ ತೆಗೆದು ಬ್ಲಾಕ್ ಮೇಲ್ ಮಾಡಲು ಮುಂದಾಗಿದ್ದ ದುಷ್ಕರ್ಮಿಗಳು
ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸುನಿ ನಟಿ ಭಾವನಾ ಅವರ ಮಾಜಿ ಕಾರು ಚಾಲಕನಾಗಿದ್ದನಂತೆ. ಈತನೇ ನಟಿಯ ಬೆತ್ತಲೆ ಚಿತ್ರಗಳನ್ನು ತೆಗೆದು ಅವುಗಳನ್ನಿಟ್ಟುಕೊಂಡು ಬೆದರಿಕೆ ಹಾಕುವ ಯೋಜನೆ ರೂಪಿಸಿದ್ದನಂತೆ. ಇದೇ ಕಾರಣಕ್ಕೆ ನಟಿ ಭಾವನಾ ಅವರ ಅಪಹರಣ ಮಾಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಿನ್ನೆ ಬಂಧಿತನಾಗಿದ್ದ ಚಾಲಕ ಮಾರ್ಟಿನ್ ನೀಡಿರುವ ಹೇಳಿಕೆಯಂತೆ, ಸುನಿ ನಟಿಯರ ಅಪಹರಣಕ್ಕೆ ಯೋಜನೆ ರೂಪಿಸಿದ್ದ. ಅವರನ್ನು ಅಪಹರಣ ಮಾಡಿ ಫೋಟೋಗಳನ್ನು ತೆಗೆದರೆ ಅವರು ಪೊಲೀಸರಿಗೆ ದೂರು ನೀಡುವುದಿಲ್ಲ ಎಂದು ಹೇಳಿದ್ದ. ಹೀಗಾಗಿ ನಿನ್ನೆ ಭಾವನಾ ಅವರನ್ನು ಕರೆತರುವಾಗ ಸುನಿ ಎಸ್ ಎಂಎಸ್ ಮೂಲಕ ಮಾಹಿತಿ ನೀಡಿದ್ದೆ. ಮುಸುಕಧಾರಿಯಾಗಿ ಬಂದ ಸುನಿ ಕಾರು ಹತ್ತಿದ್ದ ಎಂದು ಮಾರ್ಟಿನ್ ಹೇಳಿಕೆ ನೀಡಿದ್ದಾನೆ.
ಮತ್ತೋರ್ವ ಪ್ರಮುಖ ನಟಿಯ ಅಪಹರಣಕ್ಕೂ ಯೋಜನೆ ರೂಪಿಸಿದ್ದ ದುಷ್ಕರ್ಮಿಗಳು
ಕೇವಲ ನಟಿ ಭಾವನಾ ಅಷ್ಟೇ ಅಲ್ಲೇ ದಕ್ಷಿಣ ಭಾರತದ ಮತ್ತೋರ್ವ ಪ್ರಮುಖ ನಟಿಯ ಅಪಹರಣಕ್ಕೂ ಸುನಿ ಮತ್ತು ಗ್ಯಾಂಗ್ ಯೋಜನೆ ರೂಪಿಸಿದ್ದರಂತೆ. ಹೆಸರು ಹೇಳಲಿಚ್ಛಿಸದ ಪೊಲೀಸರು ನಟಿಗೆ ಈಗಾಗಲೇ ಮದುವೆಯಾಗಿದ್ದು, ಅವರು ವಿವಿಧ ಚಿತ್ರಗಳಲ್ಲಿ ನಟಿಸಿದ್ದಾರೆ ಎಂದು ಮಾತ್ರ ಹೇಳಿದ್ದಾರೆ.
ಪ್ರಸ್ತುತ ಎರ್ನಾಕುಲಂ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ವ್ಯಾಪಕ ತನಿಖೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


