'ದ ವಿಲನ್' ಫಸ್ಟ್ ಲುಕ್ ಬಿಡುಗಡೆ; ಅಭಿಮಾನಿಗಳು ಫಿದಾ!
ಪ್ರೇಮ್ ನಿರ್ದೇಶನದ 'ದ ವಿಲನ್' ಸಿನೆಮಾದ ಮೊದಲ ನೋಟದ ದರ್ಶನಕ್ಕಾಗಿ ಕಾದು ಕುಳಿತ ಅಭಿಮಾನಿಗಳಿಗೆ ಸಂತಸ ತಂದಿದೆ. ಮೊದಲ ಬಾರಿಗೆ ಒಟ್ಟಿಗೆ ನಟಿಸುತ್ತಿರುವ ನಟ ಶಿವರಾಜ್ ಕುಮಾರ್

Published On :
ಬೆಂಗಳೂರು: ಪ್ರೇಮ್ ನಿರ್ದೇಶನದ 'ದ ವಿಲನ್' ಸಿನೆಮಾದ ಮೊದಲ ನೋಟದ ದರ್ಶನಕ್ಕಾಗಿ ಕಾದು ಕುಳಿತ ಅಭಿಮಾನಿಗಳಿಗೆ ಸಂತಸ ತಂದಿದೆ. ಮೊದಲ ಬಾರಿಗೆ ಒಟ್ಟಿಗೆ ನಟಿಸುತ್ತಿರುವ ನಟ ಶಿವರಾಜ್ ಕುಮಾರ್ ಮತ್ತು ಸುದೀಪ್ ಅವರ ಅವತಾರಗಳನ್ನು ಶನಿವಾರ ಬಿಡುಗಡೆ ಮಾಡಲಾಗಿದ್ದು ಅಭಿಮಾನಿಗಳ ನಡುವೆ ಇದು ವೈರಲ್ ಆಗಿ ಹರಡಿದೆ.
"ಈ ಪೋಸ್ಟರ್ ವಿನ್ಯಾಸ ಮಾಡಿ ಬಿಡುಗಡೆ ಮಾಡಲು ಸುಮಾರು ಎರಡು ತಿಂಗಳ ಕಾಲ ಹಿಡಿಯಿತು. ಇದನ್ನು ಅಂತಿಮಗೊಳಿಸಲು ಕನಿಷ್ಠ ಮೂರೂ ಜನ ಅವಿರತವಾಗಿ ಶ್ರಮಿಸಿದ್ದಾರೆ" ಎಂದು ತಿಳಿಸುವ ಪ್ರೇಮ್ "ಇದು ಸಿನಿ ಪ್ರೇಕ್ಷಕರ ನಿರೀಕ್ಷೆಯನ್ನು ಉಳಿಸಿಕೊಂಡಿರುವುದಕ್ಕೆ ಖುಷಿಯಾಗಿದೆ" ಎನ್ನುತ್ತಾರೆ.
"ಈ ಪೋಸ್ಟರ್ ಸುತ್ತ ಇರುವ ಚರ್ಚೆ ಮತ್ತು ಮಾತುಕತೆ ಬಾಹುಬಲಿ ಮತ್ತು ೨.೦ ಮಟ್ಟದ್ದು.. ಈ ಅಭೂತಪೂರ್ವ ಕುತೂಹಲ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ. ಇದು ಭಾರತದ ಉತ್ಕೃಷ್ಟ ಸಿನೆಮಾ ಮಟ್ಟವನ್ನು ಮುಟ್ಟಬೇಕೆಂಬ ನನ್ನ ಪ್ರಯತ್ನ ಮುಂದುವರೆದಿದೆ" ಎನ್ನುತ್ತಾರೆ ಪ್ರೇಮ್. ಶಿವರಾಜ್ ಕುಮಾರ್ ಮತ್ತು ಸುದೀಪ್ ನೂತನ ಕೇಶ ಶೈಲಿಯಲ್ಲಿ ಕಾಣಿಸಿಕೊಂಡಿರುವ ಪೋಸ್ಟರ್ ನಲ್ಲಿ ಸುದೀಪ್ ಅವರ ಕಣ್ಣೋಟ ಕೂಡ ನೀಲಿಗೆ ತಿರುಗಿದೆ. ಈ ಚಿಹ್ನೆಗಳನ್ನು ಅಭಿಮಾನಿಗಳು ಸೂಕ್ಷ್ಮವಾಗಿ ಗಮನಿಸಬೇಕು ಎನ್ನುವ ಪ್ರೇಮ್, ಈ ಚಿಹ್ನೆಗಳು ಸಿನೆಮಾವನ್ನು ಮುನ್ನಡೆಸಲಿವೆ ಎಂದಿದ್ದಾರೆ.
"ಇವುಗಳು ವಿಲನ್ ಗಳ ಸಾಂಕೇತಿಕ ಭಾಷೆ" ಎಂದು ವಿವರಿಸುವ ಪ್ರೇಮ್ "ಇದು ಆರಂಭ ಮಾತ್ರ ಮತ್ತು ಇನ್ನು ತೋರಿಸುವುದಕ್ಕೆ ಸಾಕಷ್ಟಿದೆ. ಶಿವರಾಜ್ ಕುಮಾರ್ ಅವರಿಗೆ ಇನ್ನೆರಡು ಛಾಯೆಗಳು ಮತ್ತು ಸುದೀಪ್ ಅವರಿಗೆ ಇನ್ನು ಮೂರೂ ವಿಭಿನ್ನ ನೋಟಗಳನ್ನು ನಾನು ನೀಡಲಿದ್ದೇನೆ" ಎನ್ನುತ್ತಾರೆ.
ಸೋಮವಾರದಿಂದ ಸಿನೆಮಾ ಚಿತ್ರೀಕರಣ ಪ್ರಾರಂಭವಾಗಲಿದ್ದು, ಸುದೀಪ್ ಮತ್ತು ಸಹನಟರ ಭಾಗ ಮೊದಲಿಗೆ ಚಿತ್ರೀಕರಣಗೊಳ್ಳಲಿದೆ. ಸಿ ಆರ್ ಮನೋಹರ್ ನಿರ್ಮಾಣದ ಈ ಚಿತ್ರದ ತೆಲುಗು ಅವತರಿಣಿಕೆಯಲ್ಲಿ ಶ್ರೀಕಾಂತ್ ನಟಿಸಲಿದ್ದು ಅವರು ಕೂಡ ಇಂದಿನಿಂದ ಸೆಟ್ ಸೇರಲಿದ್ದಾರೆ. "ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಜರುಗಲಿದ್ದು, ಮುಂದೆ ಲಂಡನ್ ಗೆ ತೆರಳಲಿದ್ದೇವೆ. ಅಲ್ಲಿ ಶಿವಣ್ಣ ತಂಡ ಸೇರಲಿದ್ದಾರೆ" ಎಂದು ತಿಳಿಸುತ್ತಾರೆ ಪ್ರೇಮ್.
ಶ್ರುತಿ ಹರಿಹರನ್ ನಾಯಕನಟಿಯಾಗಿ ಕಾಣಿಸಿಕೊಳ್ಳಲಿದ್ದು, ಮತ್ತೊಬ್ಬ ಹೀರೋಯಿನ್ ಹುಡುಕಾಟದಲ್ಲಿದೆ ಚಿತ್ರತಂಡ. ಅರ್ಜುನ್ ಜನ್ಯ ಸಿನೆಮಾಗೆ ಸಂಗೀತ ಒದಗಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


