ಸಿಬ್ಬಂದಿಯೊಂದಿಗೆ ರೌಡಿಯಂತೆ ವರ್ತಿಸಿದ ನಟಿ ಪೂಜಾ ಮಿಶ್ರಾ
ಟಿವಿ ರಿಯಾಲಿಟಿ ಶೋಗಳಲ್ಲಿ ಅತೀ ಹೆಚ್ಚು ಜನಪ್ರಿಯಗಳಿಸಿರುವ ಬಿಗ್ ಬಾಸ್ ಸೀಸನ್ 5ರ ಸ್ಪರ್ಧಿ ಪೂಜಾ ಮಿಶ್ರಾ ತಮ್ಮ ಬಾಯಿಯಿಂದ ಮತ್ತೆ ಮತ್ತೆ ಸುದ್ದಿಗೆ ಬರುತ್ತಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಮುಂಬೈನಲ್ಲಿ ತಂಗಿದ್ದ ಹೋಟೆಲ್ ವೊಂದರಲ್ಲಿ ಕ್ಷುಲ್ಲಕ ಕಾರಣಕ್ಕೆ ಸಿಬ್ಬಂದಿಯೋರ್ವರನ್ನು...

ನವದೆಹಲಿ: ಟಿವಿ ರಿಯಾಲಿಟಿ ಶೋಗಳಲ್ಲಿ ಅತೀ ಹೆಚ್ಚು ಜನಪ್ರಿಯಗಳಿಸಿರುವ ಬಿಗ್ ಬಾಸ್ ಸೀಸನ್ 5ರ ಸ್ಪರ್ಧಿ ಪೂಜಾ ಮಿಶ್ರಾ ತಮ್ಮ ಬಾಯಿಯಿಂದ ಮತ್ತೆ ಮತ್ತೆ ಸುದ್ದಿಗೆ ಬರುತ್ತಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಮುಂಬೈನಲ್ಲಿ ತಂಗಿದ್ದ ಹೋಟೆಲ್ ವೊಂದರಲ್ಲಿ ಕ್ಷುಲ್ಲಕ ಕಾರಣಕ್ಕೆ ಸಿಬ್ಬಂದಿಯೋರ್ವರನ್ನು ಥಳಿಸಿ ಸುದ್ದಿಯಾಗಿದ್ದು ಎಲ್ಲರಿಗೂ ತಿಳಿದಿರುವ ವಿಚಾರ. ಇದೀಗ ಮತ್ತೆ ಇಂಥಹದ್ದೇ ಘಟನೆಯಲ್ಲಿ ಪೂಜಾ ಮತ್ತೆ ಸುದ್ದಿಗೆ ಬಂದಿದ್ದಾರೆ.
ಮಾಡೆಲ್ ಕಮ್ ನಟಿಯಾಗಿರುವ ಪೂಜಾ ಮಿಶ್ರ ಮತ್ತೆ ಕಾಳಿ ಅವತಾರ ತಾಳಿದ್ದಾಳೆ. ಕರೋಲ್ ಬಾಗ್ ನ ಜನಪ್ರಿಯ 24*7 ಶಾಪಿಂಗ್ ಮಾಲ್ ಗೆ ಹೋಗಿದ್ದ ಪೂಜಾ ಅಲ್ಲಿನ ಸಿಬ್ಬಂದಿಯೊಂದಿಗೆ ಜಗಳವಾಡಿದ್ದಾರೆ. ನಂತರ ಇಬ್ಬರ ಮಾತಿನ ಚಕಮಕಿ ತಾರಕಕ್ಕೇರಿದೆ. ಇದರಿಂದ ಕುಪಿತಗೊಂಡಿರುವ ಪೂಜಾ ಮಿಶ್ರಾ ಸಿಬ್ಬಂದಿಗೆ ಮನಬಂದಂತೆ ಥಳಿಸಿದ್ದಾರೆ. ಇದಲ್ಲದೇ, ತನ್ನ ಬಳಿ ಇದ್ದ ಪಿಸ್ತೂಲ್ ತೆಗೆದುಕೊಂಡು ಗುಂಡುಹಾರಿಸಿ ಸಾಯಿಸುವುದಾಗಿ ಸಿಬ್ಬಂದಿಗಳಿಗೆ ಬೆದರಿಕೆ ಹಾಕಿದ್ದಾರೆಂದು ತಿಳಿದುಬಂದಿದೆ.
ಈ ಘಟನೆಯ ದೃಶ್ಯಾವಳಿಗಳನ್ನು ಮಾಲ್ ನಲ್ಲಿದ್ದ ವ್ಯಕ್ತಿಯೊಬ್ಬ ತನ್ನ ಮೊಬೈಲ್ ಸೆರೆಹಿಡಿದಿದ್ದು, ದೃಶ್ಯಾವಳಿಯಲ್ಲಿ ಮಾಲ್ ಗೆ ಬಂದ ಪೂಜಾ ಮಿಶ್ರಾ ಅವರು ತಮ್ಮ ಮೊಬೈಲ್ ನಲ್ಲಿ ಯಾರೊಂದಿಗೋ ಸಂಭಾಷೆಯಲ್ಲಿ ತೊಡಗಿರುವುದು ಕಂಡು ಬಂದಿದೆ. ನಂತರ ಫೋನ್ ನಲ್ಲಿ ಮಾತನಾಡುವಾಗ ಸ್ಥಳದಲ್ಲಿ ಕಪ್ಪು ಟಿಶರ್ಟ್ ಹಾಕಿರುವ ವ್ಯಕ್ತಿಯೊಬ್ಬ ತನ್ನನ್ನೇ ನೋಡುತ್ತಿರುವುದಾಗಿ ಜೋರಾಗಿ ಹೇಳಿದ್ದಾಳೆ. ಈ ವೇಳೆ ಕಪ್ಪು ಟಿಶರ್ಟ್ ಹಾಕಿರುವ ವ್ಯಕ್ತಿ ಪೂಜಾ ಮಿಶ್ರಾಳ ಬಳಿ ಮಾತನಾಡಲು ಬಂದಿದ್ದಾನೆ. ನಂತರ ಇದ್ದಕ್ಕಿದ್ದಂತೆ ತನ್ನ ಮಾತಿನ ಶಬ್ಧ ಹಾಗೂ ವರಸೆಯನ್ನು ಬದಲಾಯಿಸಿದ ಪೂಜಾ ಬಾಯಿಗೆ ಬಂದಂತೆ ಮಾತನಾಡಿದ್ದಾಳೆ. ಇದನ್ನು ಕೇಳಿದ ಆ ವ್ಯಕ್ತಿ ನಾನು ನಿನ್ನನ್ನು ನೋಡುತ್ತಿಲ್ಲ. ತಪ್ಪಾಗಿ ಅರ್ಥೈಸಿಕೊಂಡಿದ್ದೀರಾ ಎಂದು ಹೇಳಲು ಬಂದಿದ್ದಾನೆ. ಇದರಿಂದ ಕುಪಿತಗೊಂಡ ಪೂಜಾ ಆ ವ್ಯಕ್ತಿಯನ್ನು ಮನಬಂದಂತೆ ಥಳಿಸಿದ್ದಾಳೆ. ಅಲ್ಲದೆ, ಆತನ ನೆರವಿಗೆ ಬಂದ ಮತ್ತೊಬ್ಬ ವ್ಯಕ್ತಿಯನ್ನು ಥಳಿಸಿದ್ದಾಳೆ.
ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಪೊಲೀಸ್ ಅಧಿಕಾರಿಗಳು, ಮಾಲ್ ನಲ್ಲಿ ಇದ್ದಕ್ಕಿದ್ದಂತೆ ಪೂಜಾ ಕೋಪಗೊಂಡಿದ್ದು ಏಕೆ ಎಂಬುದು ಈ ವರೆಗೂ ತಿಳಿದುಬಂದಿಲ್ಲ. ಪ್ರಸ್ತುತ ಲಭ್ಯವಾಗಿರುವ ವೀಡಿಯೋವನ್ನು ಪರೀಕ್ಷೆ ನಡೆಸಲಾಗುತ್ತಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಾದ್ಯಂತ ಹರಿದಾಡುತ್ತಿದ್ದು, ಪೂಜಾ ಮಿಶ್ರಾ ಕುರಿತಂತೆ ಹಲವು ಟೀಕೆಗಳು ವ್ಯಕ್ತವಾಗುತ್ತಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


