ಕನ್ನಡಕ್ಕೆ ಮರಳಿದ ತೇಜ್ `ಡ್ಯೂಡ್'
ಮೀಸೆ ಚಿಗುರುವ ವಯಸ್ಸಿಗೇ `ಮೀಸೆ ಚಿಗುರಿದಾಗ’ ಎನ್ನುವ ಚಿತ್ರದಲ್ಲಿ ನಾಯಕನಟನಾಗಿ ಕಾಣಿಸಿಕೊಂಡಿದ್ದ ಅಪ್ಪಟ ಕನ್ನಡದ ಹುಡುಗ. ತೇಜಸ್...
ಮೀಸೆ ಚಿಗುರುವ ವಯಸ್ಸಿಗೇ `ಮೀಸೆ ಚಿಗುರಿದಾಗ’ ಎನ್ನುವ ಚಿತ್ರದಲ್ಲಿ ನಾಯಕನಟನಾಗಿ ಕಾಣಿಸಿಕೊಂಡಿದ್ದ ಅಪ್ಪಟ ಕನ್ನಡದ ಹುಡುಗ. ತೇಜಸ್ ಇದೀಗ ಮತ್ತೆ ಕನ್ನಡಕ್ಕೆ ಮರಳುತ್ತಿದ್ದಾರೆ.
ಪ್ರವೀಣ್ ನಾಯಕ್ ನಿರ್ದೇಶಿಸಿದ್ದ `ಮೀಸೆ ಚಿಗುರಿದಾಗ’ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ಯುವಕ. ಈ ಚಿತ್ರದಲ್ಲಿ ನಟಿಸಿದ ನಂತರ ಓದು ಮುಂದುವರೆಸಿದ ತೇಜಸ್ ನಂತರ ಪ್ರತಿಷ್ಟಿತ ಇನ್‍ಫೋಸಿಸ್ ಸಂಸ್ಥೆಯಲ್ಲಿ ನೌಕರಿಗೂ ಸೇರಿದ್ದರು.
ಆದರೂ ನಟನೆಯ ಗೀಳು ತೇಜಸ್‍ಗೆ ಬಿಟ್ಟುಹೋಗಿರಲಿಲ್ಲ. ಆ ಸಂದರ್ಭದಲ್ಲೇ ತಮಿಳು ಚಿತ್ರರಂಗದಲ್ಲಿ ತೇಜಸ್‍ಗೆ ಅವಕಾಶಗಳ ಬಾಗಿಲು ತೆರೆಯಲು ಆರಂಭಿಸಿದವು. `ಕಾದಲನ್’ ಎಂಬ ಬ್ಲಾಕ್ ಬಸ್ಟರ್ ಸಿನಿಮಾವನ್ನು ನಿರ್ಮಿಸಿದ್ದ ಕೆ.ಟಿ. ಕುಂಜುಮನ್‍ರ ನಿರ್ಮಾಣದಲ್ಲಿ ನಟಿಸುವ ಛಾನ್ಸು ತೇಜಸ್ ಪಾಲಾಗಿತ್ತು. ಅದರ ಪ್ರತಿಳಲವೆಂಬಂತೆ ಕಾದಲುಕ್ಕುಂ ಮರಣಮಿಲ್ಲೈ, ಕೊಂಜಂ ವೆಗಿಲ್ ಕೊಂಜಮ್ ಮಳೈ, ಗಾಂತಂ ಹೀಗೆ ಒಂದರ ಹಿಂದೆ ಒಂದರಂತೆ ಮೂರು ಚಿತ್ರಗಳಲ್ಲಿ ತೇಜಸ್ ನಟಿಸಿದರು. ಈ ಚಿತ್ರಗಳು ತೇಜಸ್ ತಮಿಳು ಚಿತ್ರರಂಗದಲ್ಲಿ ಅಪಾರವಾದ ಹೆಸರನ್ನೂ ತಂದುಕೊಟ್ಟಿದೆ.
ಸದ್ಯ ತೇಜಸ್ ತಮ್ಮ ಹೆಸರನ್ನು ಕೊಂಚ ಮೊಟಕುಗೊಳಿಸಿಕೊಂಡು ತೇಜ್ ಎಂಬ ಹೆಸರಿನಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. `ಮೊಳಿವದ್ ಯದನಾಲ್’ ಎಂಬ ತಮಿಳುಚಿತ್ರ ಸಂಪೂರ್ಣ ಸಿದ್ದಗೊಂಡು ಮುಂದಿನ ತಿಂಗಳಲ್ಲಿ ತೆರೆಗೆ ಬರಲು ಅಣಿಯಾಗುತ್ತಿದೆ. ಇದರ ಜೊತೆಗೆ `ವಿನ್ನೈ ತೊಡು’ ಎಂಬ ಚಿತ್ರ ಕೂಡಾ ನಿರ್ಮಾಣ ಹಂತದಲ್ಲಿದೆ.
ಈಗ ಮತ್ತೊಂದು ವಿಶೇಷವೆಂದರೆ, ತೇಜ್ ಕನ್ನಡ ಚಿತ್ರರಂಗಕ್ಕೆ ಮತ್ತೆ ಮರಳಿದ್ದಾರೆ. ಅದು `ಡ್ಯೂಡ್’ ಚಿತ್ರದ ಮೂಲಕ. ಕನ್ನಡದವರೇ ಆಗಿದ್ದು ತಮಿಳಿನ ಒಂದಷ್ಟು ಚಿತ್ರಗಳಿಗೆ ಕೆಲಸ ಮಾಡಿರುವ ಅಜಿತ್ ಮಿಲನ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ತಮ್ಮದೇ ಜ್ಯುವೆಲ್ಲರಿ ವ್ಯವಹಾರ ಮತ್ತು ಈ ಕಾಮರ್ಸ್ ಬ್ಯುಸಿನೆಸ್‍ಗಳನ್ನು ಹೊಂದಿರುವ ರೋಹಿತ್ ಜೈನ್ ಮತ್ತು ದಿಲೀಪ್ ಜೈನ್ ಒಟ್ಟಾಗಿ ಸೇರಿ ಸಂಕೇಶ್ವರ ಫಿಲಂಸ್ ಸಂಸ್ಥೆಯ ಮೂಲಕ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕನ್ನಡದ ಯಾರೇ ಕೂಗಾಡಲಿ ಚಿತ್ರಕ್ಕೆ ಛಾಯಾಗ್ರಾಹಕರಾಗಿದ್ದ ಸುಕುಮಾರ್ ಈ ಚಿತ್ರಕ್ಕೆ ಕ್ಯಾಮೆರಾ ಹಿಡಿಯುತ್ತಿದ್ದಾರೆ. ಇನ್ನು ಶೌರ್ಯ ಮತ್ತು ಡವ್ ಚಿತ್ರಗಳಲ್ಲಿ ನಟಿಸಿರುವ ಮದಲ್ಸಾ ಶರ್ಮಾ ಮತ್ತು ಲಂಡನ್‍ನ ಮಾಡೆಲ್ ಒಬ್ಬರು ಈ ಚಿತ್ರದ ನಾಯಕಿಯರಾಗಿದ್ದಾರೆ. ಕನ್ನಡ ಮತ್ತು ತಮಿಳು ಎರಡೂ ಭಾಷೆಯಲ್ಲಿ ಏಕಕಾಲಕ್ಕೆ ತಯಾರಾಗುತ್ತಿರುವ ಈ ಚಿತ್ರದಿಂದ ತಮಿಳು ಚಿತ್ರರಂಗದಲ್ಲಿ ಹೆಸರು ಮಾಡಿರುವ ಕನ್ನಡದ ಪ್ರತಿಭೆಯೊಂದು ರೀ ಎಂಟ್ರಿ ಪಡೆದಿರೋದಂತೂ ಸಂತಸದ ವಿಚಾರವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

