ಬಾಹುಬಲಿ ಭಾಗ-2ರ ಕಥೆ ಲೀಕ್..?
ಭಾರತದ ಅತಿದೊಡ್ಡ ಮೋಷನ್ ಪಿಕ್ಚರ್ ಎಂಬ ಖ್ಯಾತಿಗೆ ಒಳಗಾಗಿರುವ ಎಸ್ ಎಸ್ ರಾಜಮೌಳಿ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಬಾಹುಬಲಿ ಭಾಗ-2ರ ಕಥೆ ಸೋರಿಕೆಯಾಗಿದೆ ಎಂದು ಹೇಳಲಾಗುತ್ತಿದೆ...

ಹೈದರಾಬಾದ್: ಭಾರತದ ಅತಿದೊಡ್ಡ ಮೋಷನ್ ಪಿಕ್ಚರ್ ಎಂಬ ಖ್ಯಾತಿಗೆ ಒಳಗಾಗಿರುವ ಎಸ್ ಎಸ್ ರಾಜಮೌಳಿ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಬಾಹುಬಲಿ ಭಾಗ-2ರ ಕಥೆ ಸೋರಿಕೆಯಾಗಿದೆ ಎಂದು ಹೇಳಲಾಗುತ್ತಿದೆ.
ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿ ಜುಲೈ 10ರಂದು ತೆರೆಕಂಡು ಭರ್ಜರಿ ಯಶಸ್ಸು ಗಳಿಸಿರುವ ಬಾಹುಬಲಿ ಚಿತ್ರದ ಎರಡನೇ ಭಾಗದ ಚಿತ್ರೀಕರಣ ಭರದಿಂದ ಸಾಗಿದ್ದು, ಇತ್ತ ಫಿಲ್ಮ್ ನಗರದಲ್ಲಿ ಬಾಹುಬಲಿ-2 ಚಿತ್ರದ ಕಥೆ ಸೋರಿಕೆಯಾಗಿದೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ. ಭಾಗ-1 ಮತ್ತು ಯೂಟ್ಯೂಬ್ ನಲ್ಲಿ ಹರಿದಾಡುತ್ತಿರುವ ಚಿತ್ರದ ವಿಡಿಯೋಗಳನ್ನು ಆಧರಿಸಿ ಭಾಗ-2ರ ಕಥೆಯನ್ನು ಹೆಣೆಯಲಾಗಿದೆ. ಭಾಗ-1ರಲ್ಲಿ ಅಧಿಕಾರಕ್ಕಾಗಿ ಸಹೋದರರಾದ ಅಮರೇಂದ್ರ ಬಾಹುಬಲಿ ಮತ್ತು ಬಲ್ಲಾಳದೇವ ಇಬ್ಬರೂ ಹೊಡೆದಾಡುತ್ತಾರೆಯಾದರೂ ಚಿತ್ರದ ಅಂತಿಮ ಭಾಗದಲ್ಲಿ ಬಾಹುಬಲಿಗೆ ರಾಜಮಾತೆ ಶಿವಗಾಮಿ ಪಟ್ಟಕಟ್ಟುತ್ತಾಳೆ. ಇದರಿಂದ ಕುಪಿತನಾಗುವ ಬಲ್ಲಾಳದೇವ ಬಾಹುಬಲಿ ವಿರುದ್ಧ ಕತ್ತಿ ಮಸೆಯುತ್ತಾನೆ. ಇದರ ಮುಂದುವರೆದ ಭಾಗವೇ ಬಾಹುಬಲಿ ಭಾಗ-2ರಲ್ಲಿದೆ ಎಂದು ಹೇಳಲಾಗುತ್ತಿದೆ.
ಪ್ರಸ್ತುತ ಫಿಲ್ಮ್ ನಗರಗದಲ್ಲಿ ಹರಿದಾಡುತ್ತಿರುವ ಊಹಾಪೋಹಗಳ ಪ್ರಕಾರ ಭಾಗ-2ರಲ್ಲಿ ಬಾಹುಬಲಿ ಮತ್ತು ಬಲ್ಲಾಳದೇವ ಇಬ್ಬರೂ ದೇವಸೇನ (ಅನುಷ್ಕಾ)ಳನ್ನು ಪ್ರೀತಿಸುತ್ತಾರೆ. ಆದರೆ, ದೇವಸೇನ ಮಾತ್ರ ಬಾಹುಬಲಿಯನ್ನು ಮೆಚ್ಚಿ ಆತನನ್ನು ವರಿಸುತ್ತಾಳೆ. ಇತ್ತ ದೇವಸೇನಳ ಪ್ರೀತಿಪಾಷಕ್ಕೆ ಸಿಲುಕುವ ಬಾಹುಬಲಿ ದೇವಸೇನಳೊಂದಿಗೆ ರಾಜ್ಯವನ್ನು ಮತ್ತು ಅಧಿಕಾರವನ್ನು ತೊರೆಯುತ್ತಾನೆ. ಆಗ ಬಲ್ಲಾಳದೇವನಿಗೆ ಮಾಹಿಶ್ಮತಿ ರಾಜ್ಯದ ಪಟ್ಟ ಕಟ್ಟಲಾಗುತ್ತದೆ. ಒಂದೆಡೆ ಬಾಹುಬಲಿ ಮತ್ತು ದೇವಸೇನ ಸಂತೋಷದ ಜೀವನ ನಡೆಸುತ್ತಿದ್ದರೆ ಇತ್ತ ಮಾಹಿಶ್ಮತಿ ರಾಜ್ಯದ ರಾಜನಾದ ಬಲ್ಲಾಳದೇವ ತನ್ನ ದುರಾಡಳಿತದಿಂದಾಗಿ ರಾಜ್ಯದ ಜನತೆಗೆ ದುಸ್ವಪ್ನವಾಗಿ ಪರಿಣಮಿಸುತ್ತಾನೆ. ರಾಜ್ಯದ ಪ್ರಜೆಗಳನ್ನು ತನ್ನ ಗುಲಾಮರನ್ನಾಗಿ ಮಾಡಿಕೊಳ್ಳುತ್ತಾನೆ.
ಇದೇ ಸಂದರ್ಭದಲ್ಲಿ ಭಾಗ-1ರಲ್ಲಿ ಮಾಹಿಶ್ಮತಿ ರಾಜ್ಯದ ಮೇಲೆ ಯುದ್ಧ ಸಾರಿ ಸಾವನ್ನಪ್ಪಿದ್ದ ಬುಡಕಟ್ಟು ನಾಯಕ ಕಾಳಕೇಯನ ಸಹೋದರ ಮಾಹಿಶ್ಮತಿ ರಾಜ್ಯದ ಮೇಲೆ ಯುದ್ಧ ಸಾರುತ್ತಾನೆ. ತನ್ನ ಅಪಾರ ಪ್ರಮಾಣದ ಸೈನಿಕರೊಂದಿಗೆ ಮಾಹಿಶ್ಮತಿ ರಾಜ್ಯವನ್ನು ಸುತ್ತುವರೆಯುವ ಆತ ಯುದ್ಧದಲ್ಲಿ ಬಹುತೇಕ ಯಶಸ್ಸು ಸಾಧಿಸುತ್ತಾನೆ. ಇತ್ತ ರಾಜ ಬಲ್ಲಾಳದೇವ ತನ್ನ ಸಾವಿರಾರು ಸೈನಿಕರ ಸಾವು ಮತ್ತು ಯುದ್ಧ ಶಸ್ತ್ರಾಸ್ತ್ರಗಳ ಕೊರತೆಯಿಂದಾಗಿ ಯುದ್ಧದಲ್ಲಿ ಹಿನ್ನಡೆಯನ್ನುಭವಿಸುತ್ತಾನೆ. ಅಲ್ಲದೆ ಯುದ್ಧ ಸೋಲುವ ಭೀತಿಯಲ್ಲಿರುತ್ತಾನೆ.
ಕಾಳಕೇಯನ ಸಹೋದರ ಮಾಹಿಶ್ಮತಿ ರಾಜ್ಯದ ಮೇಲೆ ಯುದ್ಧ ಸಾರಿರುವ ಮತ್ತು ಯುದ್ಧದಲ್ಲಿ ಬಲ್ಲಾಳದೇವ ಸೋಲುತ್ತಿದ್ದಾನೆ ಎಂಬ ಮಾಹಿತಿ ಪಡೆದ ಬಾಹುಬಲಿ ರಂಗ ಪ್ರವೇಶ ಮಾಡುತ್ತಾನೆ. ತನ್ನ ಚಾಣಕ್ಷತೆಯಿಂದಾಗಿ ಸೋಲುವ ಹಂತದಲ್ಲಿದ್ದ ಮಾಹಿಶ್ಮತಿ ರಾಜ್ಯ ಗೆಲುವು ಸಾಧಿಸುವಲ್ಲಿ ಕಾರಣನಾಗುತ್ತಾನೆ. ಆದರೆ ಯುದ್ಧದಲ್ಲಿ ಮಾಹಿಶ್ಮತಿ ಗೆಲುವು ಖಚಿತ ಪಡಿಸಿಕೊಂಡ ಬಲ್ಲಾಳದೇವ ತನ್ನಿಂದ ಎಲ್ಲಿ ಅಧಿಕಾರ ಕೈಜಾರಿ ಹೋಗುತ್ತದೆಯೋ ಅಥವಾ ಮತ್ತೆ ಎಲ್ಲಿ ಬಾಹುಬಲಿಗೇ ರಾಜ್ಯದ ರಾಜನಾಗುತ್ತಾನೆಯೋ ಎಂಬ ಶಂಕೆಯಿಂದ ತನ್ನ ತಂದೆ ಬಿಜ್ಜಳದೇವನೊಂದಿಗೆ ಸೇರಿ ಸಂಚು ರೂಪಿಸಿ, ಮಾಹಿಶ್ಮತಿ ರಾಜ್ಯದ ಸೇನಾಧಿಪತಿ ಮತ್ತು ನಿಷ್ಟಾವಂತ ಸೈನಿಕನಾದ ಕಟ್ಟಪ್ಪನಿಂದ ಬಾಹುಬಲಿಯ ಹತ್ಯೆ ಮಾಡಿಸುತ್ತಾರೆ.
ಇದೇ ಸಂದರ್ಭದಲ್ಲಿ ಬಾಹುಬಲಿ ಪತ್ನಿ ದೇವಸೇನ ಮಗುವಿಗೆ ಜನ್ಮ ನೀಡುತ್ತಾಳೆ. ಈ ಮಗುವನ್ನು ಸಹ ಬಲ್ಲಾಳದೇವ ಕೊಲ್ಲಲೆತ್ನಿಸಿದಾಗ ರಾಜಮಾತೆ ಶಿವಗಾಮಿ ಮಗುವನ್ನು ಎತ್ತಿಕೊಂಡು ರಾಜ್ಯ ತೊರೆಯುತ್ತಾಳೆ. ಇವಿಷ್ಟೂ ಚಿತ್ರದ ಫ್ಲಾಷ್ ಬ್ಯಾಕ್ ಆದರೆ, ಬುಡಕಟ್ಟು ಜನರ ಮಧ್ಯೆ ಬೆಳೆಯುವ ಬಾಹುಬಲಿ ಮಗ (ಶಿವುಡು) ತನ್ನ ಇತಿಹಾಸವನ್ನು ತಿಳಿದು ತನ್ನ ತಾಯಿ (ದೇವಸೇನ) ಮತ್ತು ಮಾಹಿಶ್ಮತಿ ರಾಜ್ಯ ರಕ್ಷಣೆಗೆ ಮುಂದಾಗುತ್ತಾನೆ. ತನ್ನ ತಂದೆಯನ್ನು ಕೊಂದ ಬಲ್ಲಾಳದೇವನ ವಿರುದ್ಧ ಸೇಡು ತೀರಿಸಿಕೊಳ್ಳಲು ಕಟ್ಟಪ್ಪ ಮತ್ತು ಅಸ್ಲಂಖಾನ್ (ಸುದೀಪ್ ಪಾತ್ರ)ರೊಂದಿಗೆ ಸೇರಿ ಬಲ್ಲಾಳದೇವನೊಂದಿಗೆ ಯುದ್ಧ ಮಾಡಿ ಆತನನ್ನು ಕೊಂದು ಹಾಕುತ್ತಾನೆ ಮತ್ತು ತನ್ನ ರಾಜ್ಯವನ್ನು ವಾಪಸ್ ಪಡೆಯುತ್ತಾನೆ.
ಇವಿಷ್ಟೂ ಬಾಹುಬಲಿ ಭಾಗ-2 ಕಥೆ ಎಂದು ಸಾಕಷ್ಟು ಊಹಾಪೋಹಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


