ಬಾಹುಬಲಿಯ ಪರಾಕ್ರಮಕ್ಕೆ ಅಭಿಮಾನಿಗಳ ಉಘೇ ಉಘೇ
ತೆಲುಗಿನ ಹೆಸರಾಂತ ನಿರ್ದೇಶಕ ರಾಜಮೌಳಿ ನಿರ್ದೇಶನದ `ಬಾಹುಬಲಿ' ಚಿತ್ರ ಬಿಡುಗಡೆಗೂ ಮುನ್ನ ಮೂಡಿಸಿದ್ದ ಕುತೂಹಲವನ್ನು...

ಬೆಂಗಳೂರು: ತೆಲುಗಿನ ಹೆಸರಾಂತ ನಿರ್ದೇಶಕ ರಾಜಮೌಳಿ ನಿರ್ದೇಶನದ `ಬಾಹುಬಲಿ' ಚಿತ್ರ ಬಿಡುಗಡೆಗೂ ಮುನ್ನ ಮೂಡಿಸಿದ್ದ ಕುತೂಹಲವನ್ನು ಸಮರ್ಥಿಸಿದೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಸುಮಾರು 150 ಚಿತ್ರಮಂದಿರಗಳಲ್ಲಿ ಶುಕ್ರವಾರ ಬಿಡುಗಡೆಯಾದ ಈ ಚಿತ್ರಕ್ಕೆ ಎಲ್ಲ ಕಡೆಗಳಲ್ಲೂ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಬಿಡುಗಡೆಗೂ ಮುನ್ನವೇ ಬಹುತೇಕ ಚಿತ್ರ ಮಂದಿರಗಳಲ್ಲಿ ಆನ್‍ಲೈನ್ ಮೂಲಕ ಮುಂಗಡ ಟಿಕೆಟ್ ಕಾಯ್ದಿರಿಸಲಾಗಿತ್ತು. ಹೀಗಾಗಿ ಶುಕ್ರವಾರ ಮುಂಚಿತವಾಗಿ ಟಿಕೆಟ್ ಪಡೆದವರು ಮಾತ್ರ ಟಾಕೀಸ್‍ಗಳಿಗೆ ಬಂದಿದ್ದರಾದರೂ, ಚಿತ್ರ ನೋಡುವ ಕುತೂಹಲದಲ್ಲಿ ನಾ ಮುಂದೆ, ತಾ ಮುಂದೆ ಎನ್ನುವಂತೆ ಅಭಿಮಾನಿಗಳು ತವಕದಲ್ಲಿ ಟಾಕೀಸ್‍ಗಳಿಗೆ ದಾಳಿಯಿಟ್ಟರು.
ಇದರಿಂದಾಗಿ ಕೆಲ ಚಿತ್ರಮಂದಿರಗಳಲ್ಲಿ ನೂಕುನುಗ್ಗಲು ಉಂಟಾಯಿತು. ಬೆಂಗಳೂರು ನಗರ ಮಾತ್ರವಲ್ಲ ರಾಜ್ಯದ ಬಹುತೇಕ ಚಿತ್ರಮಂದಿರಗಳೂ ಇಂಥದ್ದೇ ಪರಿಸ್ಥಿತಿ ಎದುರಿಸಿದವು.
ಬೆಂಗಳೂರಿನ ಮೆಜೆಸ್ಟಿಕ್‍ನಲ್ಲಿ `ಬಾಹುಬಲಿ' ಭರ್ಜರಿಯೇ ಆರಂಭ ಪಡೆಯಿತು. ತ್ರಿಭುವನ್, ಭೂಮಿಕಾ ಚಿತ್ರಮಂದಿರಗಳ ಮುಂದೆ ಶುಕ್ರವಾರ ನಸುಕಿನಿಂದಲೇ ಜನ ಜಾತ್ರೆ ನೆರೆದಿತ್ತು. ಟಿಕೆಟ್ ಸಿಗದಿದ್ದರೂ, ಕೆಲವರು ಅಭಿಮಾನಕ್ಕಾಗಿಯೂ ಚಿತ್ರ ಮಂದಿರಗಳತ್ತ ಬಂದಿದ್ದು ಇನ್ನೊಂದು ವಿಶೇಷ. ಹಾಲಿನ ಅಭಿಷೇಕ: ಬೆಂಗಳೂರಿನ `ಭೂಮಿಕಾ' ಚಿತ್ರಮಂದಿರದಲ್ಲಿ ಬೆಳಗ್ಗೆ 8 ಗಂಟೆಯಿಂದಲೇ ಚಿತ್ರಪ್ರದರ್ಶನ ಶುರುವಾಗಿತ್ತು. ಚಿತ್ರ ನೋಡಲು ಬಂದಿದ್ದ ಭಾರಿ ಸಂಖ್ಯೆಯ ಅಭಿಮಾನಿಗಳು, ನಟ ಪ್ರಭಾಸ್ ಅವರ ಬೃಹತ್ ಕಟೌಟ್‍ಗೆ ಹಾಲಿನ ಅಭಿಷೇಕ ಮಾಡಿದರು. ಚಿತ್ರದ ಮತ್ತೊಬ್ಬ ಪ್ರಮುಖ ನಟ ರಾಣಾ ದಗ್ಗುಬಾಟಿ ಹಾಗೂ ನಿರ್ದೇಶಕ
ರಾಜಮೌಳಿ ಅವರ ಪರವಾಗಿ ಜಯ ಘೋಷ ಮೊಳಗಿಸಿದರು. ಗಾಂಧಿನಗರದಲ್ಲಿರುವ ತ್ರಿಭುವನ್ ಚಿತ್ರಮಂದಿರದಲ್ಲಿ ಬೆಳಗ್ಗೆ 10ರಿಂದ ಪ್ರದರ್ಶನ ಶುರುವಾಗಲಿದ್ದರೂ ಆ ವೇಳೆಗೆ ಭಾರಿ ಸಂಖ್ಯೆಯ ಯಿಸಿದ್ದರು. ಚಿತ್ರಮಂದಿರಕ್ಕೆ ಹಾಕಿದ್ದ ತಳಿರು-ತೋರಣಗಳು `ಬಾಹುಬಲಿ'ಗೆ ಅದೂಟಛಿರಿ ಸ್ವಾಗತ ನೀಡಿದವು. ಚಿತ್ರ ಪ್ರದರ್ಶನ ಆರಂಭವಾಗುವ ಹೊತ್ತಿಗೆ ಅಭಿಮಾನಿಗಳು ಪಟಾಕಿ ಸಿಡಿಸಿ, ಸಂಭ್ರಮಿಸಿದರು. `ಬಾಹುಬಲಿ' ಚಿತ್ರ ಯಶಸ್ವಿ ನೂರು ದಿನದ ಪ್ರದರ್ಶನ ಕಾಣಲಿ ಎಂದು ಶುಭ ಹಾರೈಸಿದರು.
ಅಭಿಮಾನದ `ಮಳೆ': ಮತ್ತೊಂದೆಡೆ, ಬೆಂಗಳೂರಿನ ಮಲ್ಟಿಪ್ಲೆಕ್ಸ್‍ಗಳಾದ ಐನಾಕ್ಸ್, ಪಿವಿಆರ್‍ನಲ್ಲೂ `ಬಾಹುಬಲಿ'ಯ ಜಯಘೋಷ ಮೊಳಗಿತು. ಆರಂಭದ ಉತ್ಸಾಹ ಚಿತ್ರ ನೋಡುವಾಗಲೂ ಕಂಡಿತು. ಕುತೂಹಲ ಸನ್ನಿವೇಶಗಳು ಎದುರಾದಾಗ ಟಾಕೀಸ್ ಒಳಗಡೆ ಶಿಳ್ಳೆ, ಕೇಕೆಗಳೊಂದಿಗೆ ಸಂಭ್ರಮ ಸದ್ದು ಕೇಳಿಬಂದವು. `ಬಾಹುಬಲಿ' ಚಿತ್ರ ಕನ್ನಡ ಚಿತ್ರರಂಗದಲ್ಲೂ ತೀವ್ರ ಕುತೂಹಲ ಮೂಡಿಸಲು ಕನ್ನಡ ನಟ ಸುದೀಪ್ ಅದರಲ್ಲಿ ಅಬಿsನಯಿಸಿದ್ದು ಹಾಗೂ ರಾಜಮೌಳಿ ಅದನ್ನು ನಿರ್ದೇಶಿಸಿದ್ದೂ ಮುಖ್ಯ ಕಾರಣ. ಹೀಗಾಗಿ ಶುಕ್ರವಾರ ನಗರದ ಅನೇಕ ಚಿತ್ರಮಂದಿರಗಳಲ್ಲಿ ಕನ್ನಡದ ಹಲವು ನಟ, ನಟಿಯರು ಪ್ರೇಕ್ಷಕರ ಸಾಲಿನಲ್ಲಿ ಕುಳಿತು ಚಿತ್ರ ನೋಡಿದರು.
ಮತ್ತೆ ಡಬ್ಬಿಂಗ್ ಧ್ವನಿ?
ಕನ್ನಡದ ಮಟ್ಟಿಗೆ ಡಬ್ಬಿಂಗ್ ವಿವಾದ ಇನ್ನೂ ಬೂದಿ ಮುಚ್ಚಿದ ಕೆಂಡದಂತಿದೆ. ಸಿನೆಮಾ ನಿರ್ಮಾಣದಲ್ಲಿನ ಕಾರ್ಮಿಕರ ಹಿತದೃಷ್ಟಿ ಯನ್ನು ಮುಂದೆ ಮಾಡಿಕೊಂಡು ಚಿತ್ರೋದ್ಯಮ ಹಿಂದಿನಿಂದಲೂ ಡಬ್ಬಿಂಗ್ ವಿರೋಧಿಸುತ್ತಲೇ ಬಂದಿದೆ. ಈಗ ಮತ್ತೆ ಡಬ್ಬಿಂಗ್ ಕೂಗು ಕೇಳಿಬಂದಿರುವುದಕ್ಕೆ ಕಾರಣ, `ಬಾಹುಬಲಿ' ಸಿನೆಮಾ. ಈಗಾಗಲೇ ಸೋಷಿಯಲ್ ಮೀಡಿಯಾಗಳಲ್ಲಿ `ಬಾಹುಬಲಿ' ಚಿತ್ರದ ಬಿಡುಗಡೆಯ ಹಿನ್ನೆಲೆಯಲ್ಲಿ ಡಬ್ಬಿಂಗ್ ಪರ ಧ್ವನಿ ಜೋರಾಗಿದೆ. `ಬಾಹುಬಲಿ' ನೋಡಿ ಬಂದ ಅನೇಕ ಪ್ರೇಕ್ಷಕರು ಸಾಮಾಜಿಕ ಜಾಲತಾಣ ಗಳಲ್ಲಿ ಡಬ್ಬಿಂಗ್ ಪರವಾದ ಹೇಳಿಕೆಗಳನ್ನು ತೇಲಿಬಿಟ್ಟಿದ್ದಾರೆ. `ಬಾಹುಬಲಿ'ಯಂಥ ಚಿತ್ರಗಳು ಸ್ಥಳೀಯರಿಗೆ ಸುಲಭವಾಗಿ ಅರ್ಥವಾಗಬೇಕಾದರೆ, ಅದು ಕನ್ನಡಕ್ಕೆ ಡಬ್ ಆಗುವ ಅಗತ್ಯವಿದೆ ಎಂದು ವಾದಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


