ಈ ಸಲ ಬಿಗ್‍ಬಾಸ್ ಮನೆಯ ಸದಸ್ಯರಾರು?
ಕಿರುತೆರೆಯಲ್ಲಿ `ಬಿಗ್‍ಬಾಸ್' ಜ್ವರ ಹೆಚ್ಚಾಗುತ್ತಿದೆ. ಹತ್ತಾರು ಕ್ಯಾಮೆರಾಗಳಿಂದ ಸುತ್ತುವರಿದ ಆ `ಬಿಗ್‍ಬಾಸ್' ಕೋಟೆಗೆ ಈ ಬಾರಿ ಪ್ರವೇಶಿಸಲಿರುವವರು ಯಾರು ಎನ್ನುವ ಬಗ್ಗೆ...

ಕಿರುತೆರೆಯಲ್ಲಿ `ಬಿಗ್‍ಬಾಸ್' ಜ್ವರ ಹೆಚ್ಚಾಗುತ್ತಿದೆ. ಹತ್ತಾರು ಕ್ಯಾಮೆರಾಗಳಿಂದ ಸುತ್ತುವರಿದ ಆ `ಬಿಗ್‍ಬಾಸ್' ಕೋಟೆಗೆ ಈ ಬಾರಿ ಪ್ರವೇಶಿಸಲಿರುವವರು ಯಾರು ಎನ್ನುವ ಬಗ್ಗೆ ಅಂತೆ-ಕಂತೆಗಳ ಸಂತೆ ಶುರುವಾಗಿದೆ.
ಅಮೂಲ್ಯ ಸೇರಿದಂತೆ ಅನೇಕ ಜನಪ್ರಿಯ ನಟಿಯರ ಹೆಸರುಗಳೂ ಅತ್ತ ಕೇಳಿಬರುತ್ತಿವೆ. ಸ್ಟಾರ್ ನಟರ ವಿಚಾರದಲ್ಲೂ ಅಷ್ಟೇ. ಹಾಗಂತ, ಇನ್ನೂ ಯಾರೂ ಅಲ್ಲಿಗೆ ಫೈನಲ್ ಆಗಿಲ್ಲ. ಆದರೂ, ಅವರಂತೆ, ಇವರಂತೆ ಎನ್ನುವ ಮಾತುಗಳ ನಡುವೆ ನಟಿ ರಾಗಿಣಿ ದ್ವಿವೇದಿ, ಸುನಾಮಿ ಕಿಟ್ಟಿ, ಮಾಸ್ಟರ್ ಆನಂದ್, ಹುಚ್ಚ ವೆಂಕಟ್ ಹಾಗೂ ಮೈತ್ರಿಯಾ ಗೌಡ ಹೆಸರುಗಳು ತೂರಿ ಬರುತ್ತಿವೆ.
ರಾಗಿಣಿ ದ್ವಿವೇದಿ ಕೈಯಲ್ಲಿ ಸದ್ಯಕ್ಕೆ ಅಷ್ಟೊಂದು ಚಿತ್ರಗಳಿಲ್ಲ. ಹಾಗಾಗಿ ಬಿಗ್‍ಬಾಸ್ ಮನೆಗೆ ಹೋದರೂ ಆಚ್ಚರಿ ಪಡಬೇಕಿಲ್ಲ. ಇನ್ನು `ರಿಯಾಲಿಟಿ ಶೋ'ಗಳ ಮೂಲಕ ಮನೆ ಮಾತಾದ ಖ್ಯಾತಿ ಸುನಾಮಿ ಕಿಟ್ಟಿ ಅವರದ್ದು. ವಿಕಟ, ವಿಚಿತ್ರ ಮಾತುಗಳ ಮೂಲಕ ಅಷ್ಟೇ ಪ್ರಚಾರ ಪಡೆದವರು ಹುಚ್ಚ ವೆಂಕಟ್,
ಇತ್ತೀಚೆಗಷ್ಟೇ ಕಲರ್ಸ್ ಕನ್ನಡದಲ್ಲಿಯೇ ಪ್ರಸಾರವಾದ `ಡ್ಯಾನ್ಸಿಂಗ್ ಸ್ಟಾರ್' ರಿಯಾಲಿಟಿ ಶೋನಲ್ಲಿ ಗೆದ್ದ ಹೆಗ್ಗಳಿಕೆ ಮಾಸ್ಟರ್ ಆನಂದ್ ಅವರದ್ದು. ಹೀಗಾಗಿ ಇವರೆಲ್ಲ ಒಂದಲ್ಲ ಒಂದು ಕಾರಣಕ್ಕೆ`ಬಿಗ್‍ಬಾಸ್' ಸರಣಿಗೆ ಆಯ್ಕೆಯಾದರೂ ಆಚ್ಚರಿ ಪಡಬೇಕಿಲ್ಲ ಎನ್ನುತ್ತಿದೆ ಕಿರುತೆರೆ ಲೋಕ.
ಕನ್ನಡದ ಕಿರುತೆರೆಯಲ್ಲಿ ಇದು ಬಿಗ್‍ಬಾಸ್ ಮೂರನೇ ಸರಣಿ. ಈ ಟಿವಿ ವಾಹಿನಿಯಿಂದ ರೂಪಾಂತರಗೊಂಡ ಕಲರ್ಸ್ ಕನ್ನಡ ವಾಹಿನಿಯಲ್ಲಿ ಆರಂಭವಾಗುತ್ತಿದೆ. ಒನ್ಸ್ ಎಗೇನ್ ಈಗಲೂ ನಟ ಕಿಚ್ಚ ಸುದೀಪ್ `ಬಿಗ್‍ಬಾಸ್' ಮನೆಯ ನಿರೂಪಕ ಎನ್ನುವುದು ಹಳೇ ಸುದ್ದಿ. ಈಗಾಗಲೇ ಸುದೀಪ್ ಕೂಡ ಅದರ ಸಿದ್ಧತೆಯಲ್ಲಿದ್ದಾರೆ. `ಬಿಗ್‍ಬಾಸ್' ಮನೆಯಲ್ಲಿ ತಯಾರಿಯ ಕಸರತ್ತುಗಳೂ ನಡೆದಿವೆ. ಆ ಕೋಟೆಯೊಳಗೆ ಸೆಲಿಬ್ರಿಟಿಗಳನ್ನು ತಳ್ಳುವುದಷ್ಟೇ ಬಾಕಿ ಉಳಿದಿದೆ.
ಸಾಮಾನ್ಯವಾಗಿ `ಬಿಗ್‍ಬಾಸ್' ವಿವಾದಕ್ಕೊಳಗಾದವರ ತಾಣವೆನಿಸಿದೆ. ಟಿಆರ್‍ಪಿಗಾಗಿ ವಾಹಿನಿಗಳು, ತೀರಾ ವಿವಾದಕ್ಕೆ ಸಿಲುಕಿದ ಗ್ಲಾಮರ್ ಜಗತ್ತಿನ ದಂತದ ಗೊಂಬೆಗಳು ಒಳಗೊಂಡಂತೆ ರಾಜಕಾರಣ, ಸಮಾಜ ಸೇವೆ ಇತ್ಯಾದಿ ಕ್ಷೇತ್ರದಲ್ಲಿನ ವಿವಾದಿತ ವ್ಯಕ್ತಿಗಳನ್ನು ಅಲ್ಲಿಗೆ ತಳ್ಳಿ, ಅವರ ಆಟಗಳನ್ನು ಬಿತ್ತರಿಸುತ್ತಾ ಟಿಆರ್‍ಪಿ ಹೆಚ್ಚಿಸಿಕೊಳ್ಳುವುದು ಹೊಸದಲ್ಲ.
ಟಿಆರ್‍ಪಿ ದೃಷ್ಟಿಯಿಂದ ಈ ಹಿಂದಿನಂತೆ ಜನಪ್ರಿಯತೆ ಇರುವ ನಟ-ನಟಿ, ರಾಜಕಾರಣಿ, ಜ್ಯೋತಿಷಿ... ಇತ್ಯಾದಿ ನಮೂನೆಯ ವ್ಯಕ್ತಿಗಳೇ ಬೇಕು. ಈಗಾಗಲೇ ಎರಡೂ ಸರಣಿಗಳನ್ನು ಎಡೆಬಿಡದೆ ನೋಡಿದವರಿಗೆ ಇದು ಗೊತ್ತೇ ಇದೆ. ಈಗಲೂ ಹಾಗೇನಾ..? ಎನ್ನುವುದು ಕುತೂಹಲ ಹುಟ್ಟಿಸಿದೆ. ಆದರೆ, `ಬಿಗ್‍ಬಾಸ್' ಮೂರನೇ ಆವೃತ್ತಿಯ ಸುತ್ತ ಈಗ ಕೇಳಿಬರುತ್ತಿರುವ ಅಂತೆ-ಕಂತೆಗಳನ್ನು ಸದ್ಯಕ್ಕೆ ಕಲರ್ಸ್ ಕನ್ನಡ ವಾಹಿನಿ ತಳ್ಳಿ ಹಾಕಿದೆ. `ವಾಸ್ತವದಲ್ಲಿ `ಬಿಗ್‍ಬಾಸ್' ಶುರುವಾಗುವ ಸಮಯವೇ ಇನ್ನೂ ಅಂತಿಮವಾಗಿಲ್ಲ. ಜುಲೈ ತಿಂಗಳಿನಿಂದಲೇ ಪ್ರಾರಂಭ, ಇಂಥವರೇ ಅಲ್ಲಿಗೆ ಹೋಗುತ್ತಾರೆ ಎನ್ನುವ ಅಂತೆ-ಕಂತೆಗಳು ಹೇಗೆ ಸುದ್ದಿಯಾಗಿದ್ದಾವೋ ತಮಗೆ ತಿಳಿದಿಲ್ಲ. ತಯಾರಿ ಮಾತ್ರ ನಡೆದಿದೆ. ಇಷ್ಟರಲ್ಲಿ ಎಲ್ಲವನ್ನೂ ಖಾತರಿಪಡಿಸುತ್ತೇವೆ. ಅದಕ್ಕೂ ಸಮಯ ಬೇಕಿದೆ' ಎನ್ನುತ್ತಾರೆ ಕಲರ್ಸ್ ಕನ್ನಡ ವಾಹಿನಿ ಮುಖ್ಯಸ್ಥ ಪರಮೇಶ್ವರ ಗುಂಡ್ಕಲ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


