ಸಿನಿಮಾ ಸುದ್ದಿ

ಮೈತ್ರಿ ಸಕ್ಸಸ್ ಸ್ಟೋರಿ

ಪ್ರೇಕ್ಷಕರಿಂದ ಹಾಗೂ ವಿಮರ್ಶಕರಿಂದ ಪ್ರಶಂಸೆಯ ಸುರಿಮಳೆಯನ್ನೇ ಕಾಣುತ್ತಿರುವ ಮೈತ್ರಿ ಚಿತ್ರ ಮಂಗಳವಾರದಂದು ಸಕ್ಸಸ್ ಮೀಟ್ ಆಚರಿಸಿದೆ.

ಮೈತ್ರಿ ಸಕ್ಸಸ್ ಸ್ಟೋರಿ
ಮೈತ್ರಿ ಚಿತ್ರದ ಸ್ಟಿಲ್
Published On :

ಪ್ರೇಕ್ಷಕರಿಂದ ಹಾಗೂ ವಿಮರ್ಶಕರಿಂದ ಪ್ರಶಂಸೆಯ ಸುರಿಮಳೆಯನ್ನೇ ಕಾಣುತ್ತಿರುವ ಮೈತ್ರಿ ಚಿತ್ರ ಮಂಗಳವಾರದಂದು ಸಕ್ಸಸ್ ಮೀಟ್ ಆಚರಿಸಿದೆ.

ಇದೊಂದು ಅರ್ಥಪೂರ್ಣ ಸಕ್ಸಸ್ ಮೀಟ್ ಅನ್ನಲಡ್ಡಿಯಿಲ್ಲ. ಯಾಕಂದ್ರೆ ಕೋಟ್ಯಧಿಪತಿ ಕಾನ್ಸೆಪ್ಟ್ ಇಟ್ಟುಕೊಂಡು ಮಾಡಿದ ಚಿತ್ರಕ್ಕೆ ಕೋಟಿಗಳು ಹರಿದುಬರುತ್ತಿದೆ. ಕೆಲವು ಮೂಲಗಳ ಪ್ರಕಾರ ಮೊದಲ ದಿನದ ಕಲೆಕ್ಷನ್ನೇ ಆರರಿಂದ ಎಂಟು ಕೋಟಿ ಎಂಬ ಮಾತುಗಳೂ ಕೇಳಿಬಂದಿವೆ. ಪುನೀತ್ ಚಿತ್ರಕ್ಕೆ ಈ ರೀತಿಯ ಓಪನಿಂಗ್ ಸಿಗುವುದು ಅಚ್ಚರಿಯೇನಲ್ಲವಾದರೂ, ಪುನೀತ್ ಕೇವಲ ಗೆಸ್ಟ್ ಅಪಿಯರೆನ್ಸ್ ಮಾಡಿದ್ದಾರೆ,

ಇದು ಪುನೀತ್ ಚಿತ್ರವಲ್ಲ ಎಂಬಂತೆ ತಣ್ಣಗೆ ಬಿಡುಗಡೆಯಾದ ಚಿತ್ರ ಎಲ್ಲರ ನಿರೀಕ್ಷೆ ಮೀರಿ ಗೆದ್ದಿದೆ. ಪುನೀತ್ ಇರಾದೆಯೂ ಇದೇ ಆಗಿತ್ತಂತೆ. ಮೈತ್ರಿ ಪುನೀತ್ ಚಿತ್ರ ಎಂದು ಜನ ಅಂದ್ಕೊಳೋದು ಬೇಡ. ನನ್ನ ಸ್ಟಾರ್ ಇಮೇಜೇ ಉತ್ತಮ ಚಿತ್ರವೊಂದಕ್ಕೆ ಮುಳುವಾಗಬಾರದು ಇದು ಪುನೀತ್ ಚಿತ್ರ ಅಂತ ಗೊತ್ತಾದರೆ ಅಭಿಮಾನಿಗಳು ಫೈಟು, ಬಿಲ್ಡಪ್, ಡ್ಯಾನ್ಸು ಇತ್ಯಾದಿಗಳನ್ನೆಲ್ಲ ನಿರೀಕ್ಷಿಸಿ ಬಂದು ನಿರಾಶರಾಗುತ್ತಾರೆ. ಅದ್ಯಾವುದನ್ನೂ ನಿರೀಕ್ಷಿಸದೆಯೇ, ಗೆಸ್ಟ್ ಅಪಿಯರೆನ್ಸ್ ಅಂದ್ರೆ ಪುನೀತ್ ಏನು ಮಾಡಿರಬಹುದು ಎಂಬ ಚಿಕ್ಕ ಕುತೂಹಲದಲ್ಲಿ ಬಂದು ನೋಡಲಿ ಸಾಕು. ಒಳ್ಳೆಯ ಚಿತ್ರ ಪ್ರೇಕ್ಷಕರನ್ನು ತಾನಾಗಿ ಎಳಕೊಂಡು ಬರುತ್ತದೆ ಎಂಬುದು ಪುನೀತ್ ಅಭಿಪ್ರಾಯವಾಗಿತ್ತಂತೆ. ಅದೇ ಕಾರಣಕ್ಕೆ ಪುನೀತ್‍ಗೆ ಇಂಟ್ರೊಡಕ್ಷನ್ ಸಾಂಗ್ ಆಗಲೀ ಇನ್ಯಾವುದೇ ಇಮೇಜ್ ಬಿಲ್ಡಿಂಗ್ ಡೈಲಾಗುಗಳಾಗಲೀ ಇಡದೆಯೇ ಸಾಧ ಸೀದಾ ಚಿತ್ರವಾಗಿಸಲಾಯ್ತಂತೆ. ಆದರೆ ಪುನೀತ್‍ರ ಈ ಅಪಿಯರೆನ್ಸೇ ಅವರ ಇಮೇಜನ್ನು ಇನ್ನಷ್ಟು ಹೆಚ್ಚಿಸಿದೆ ಹಾಗೂ ಅವರ ಇಮೇಜಿಗೆ ಇನ್ನೊಂದು ಆಯಾಮ ನೀಡಿದೆ ಅನ್ನುವುದಂತೂ ಸತ್ಯ.

ಪುನೀತ್ ಮತ್ತು ರಾಜ್ ಕುಮಾರ್ ಕಾಂಬಿನೇಷನ್ ಚಿತ್ರಗಳ್ಯಾವುವೂ ಸೋತಿರುವ ಉದಾಹರಣೆಗಳೇ ಇರಲಿಲ್ಲ. ಈಗ ಆ ಇತಿಹಾಸ ಇನ್ನೊಂದು ರೀತಿಯಲ್ಲಿ ಪುನರಾವರ್ತನೆಯಾಗಿದೆ ಎಂಬುದು ವಿಶೇಷ. ಹೇಗೆ ಅಂತೀರಾ? ಚಿತ್ರದ ನಿರ್ಮಾಪಕರ ಹೆಸರು ಎನ್.ಎಸ್. ರಾಜ್ ಕುಮಾರ್! ಒಂದರ್ಥದಲ್ಲಿ ಇದು ರಾಜ್ ಕುಟುಂಬದ ಚಿತ್ರ. ನಿರ್ಮಾಪಕ, ನಟ, ನಿರ್ದೇಶಕ ಹಾಗೂ ಸಂಗೀತ ನಿರ್ದೇಶಕ ಎಲ್ಲರ ಹೆಸರಲ್ಲೂ ರಾಜ ಯೋಗವಿದೆ! ಈ ಯಶಸ್ಸಿನ ಸಮಯದಲ್ಲಿ ಎರಡು ಸಂತಸದ ಸುದ್ದಿಗಳು ಚಿತ್ರತಂಡದಿಂದ ಹೊರಬಂದಿದೆ. ಮೊದಲನೆಯದು, ಈ ಚಿತ್ರ ಮಲಯಾಳಂನಲ್ಲಿ ಮರುಚಿತ್ರಣವಾಗಲಿದೆ. ಮೊದಲು ಡಬ್ ಮಾಡಿದ್ರೆ ಸಾಕು ಎಂಬ ಯೋಚನೆಯಲ್ಲಿದ್ದ ನಿರ್ಮಾಪಕರು, ಯಶಸ್ಸಿನಿಂದ ಉತ್ತೇಜಿತರಾಗಿ ಮರುನಿರ್ಮಾಣಕ್ಕೆ ತಯಾರಾಗಿದ್ದಾರೆ.

ಸಂಪೂರ್ಣವಾಗಿ ರೀಶೂಟ್ ಮಾಡಲಾಗುತ್ತದೋ ಅಥವಾ ಅಲ್ಲಲ್ಲಿ ಮಾತ್ರ ಮರುಚಿತ್ರಣ ಹಾಗೂ ಜೋಡಣೆ ನಡೆಯುತ್ತದೋ ಎಂಬ ವಿವರ ಸದ್ಯದಲ್ಲೇ ತಿಳಿಯಲಿದೆ. ಮಾರ್ಚ್‍ನಲ್ಲಿ ಮಲಯಾಳಂ ಅವತರಣಿಕೆ ಬಿಡುಗಡೆಯಾಗಲಿದೆಯಂತೆ. ಎರಡನೆಯ ಸುದ್ದಿ : ಮೈತ್ರಿ ತೆಲುಗಿಗೆ ರೀಮೇಕ್ ಆಗುವ ಬಗ್ಗೆಯೂ ಮಾತುಕತೆಗಳು ಶುರುವಾಗಿದೆಯಂತೆ. ತೆಲುಗಿನಲ್ಲಿ ಅಕ್ಕಿನೇನಿ ನಾಗಾರ್ಜುನ ನಟಿಸುವ ಸಾಧ್ಯತೆಯಿದ್ದು, ಈ ವಾರದಲ್ಲಿ ನಾಗಾರ್ಜುನ ಮೈತ್ರಿ ಚಿತ್ರವನ್ನು ನೋಡಲಿದ್ದಾರಂತೆ. ಆ ನಂತರ ಮುಂದಿನ ಅಪ್ಡೇಟ್ ಗಳು ಲಭ್ಯವಾಗಲಿವೆ.

ಚಿಕ್ಕ ಪಾತ್ರದಲ್ಲಿ ನಟಿಸಿದರೂ ಯಶಸ್ಸನ್ನು ಹಂಚಿಕೊಳ್ಳಲು ಸಂತಸದಿಂದ ಆಗಮಿಸಿದ್ದರು ಆ ದಿನಗಳು ಖ್ಯಾತಿಯ ನಟಿ ಅರ್ಚನಾ, ಚಿತ್ರದ ಅತಿ ದೊಡ್ಡ ಅಚ್ಚರಿ ಜಾನ್ಸನ್ ಅಲಿಯಾಸ್ ಜಗದೀಶ್ ಸೇರಿದಂತೆ ತಂಡದ ಹಲವು ಸದಸ್ಯರು ಸಂತೋಷಕೂಟದಲ್ಲಿ ಪಾಲ್ಗೊಂಡಿದ್ದರು. ಆದರೆ ಅಲ್ಲಿ ಎಲ್ಲರೂ ಇದ್ದರೂ ಕೋಟ್ಯಧಿಪತಿ ಮಾಸ್ಟರ್ ಆದಿತ್ಯನ ಗೈರು ಹಾಜರಿ ಮಾತ್ರ ಎದ್ದು ಕಾಣುತ್ತಿತ್ತು. ಸಿನಿಮಾ ಇಷ್ಟೊಂದು ಯಶಸ್ವಿಯಾಗಿರುವುದು, ತನ್ನ ಪಾತ್ರವನ್ನು ಕೊಂಡಾಡುತ್ತಿರುವುದು ಎಲ್ಲವನ್ನೂ ದೂರದ ಅಸ್ಸಾಮ್ ಬಳಿಯ ಹಳ್ಳಿಯಲ್ಲೇ ಕೇಳಿ ಖುಷಿಪಡುತ್ತಾ ಇವೆಲ್ಲವನ್ನೂ ಮಿಸ್ ಮಾಡಿಕೊಳ್ಳುತ್ತಿದ್ದಾನೆ ಆದಿತ್ಯ. ನಾಟಕ ತಂಡದ ತಿರುಗಾಟವೊಂದರಲ್ಲಿ ಬ್ಯುಸಿಯಾಗಿರುವ ಈ ಬಾಲಪ್ರತಿಭೆ ಕರ್ನಾಟಕಕ್ಕೆ ಬಂದಕೂಡಲೇ ಸಿನಿಮಾ ನೋಡಬೇಕೆಂಬ ಕಾತುರದಲ್ಲಿದೆಯಂತೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.