ತೋಳ ಬರ್ತಿದೆ ತೋಳ
ತೋಳ ಬಂತು ತೋಳ ಕತೆ ಎಲ್ಲರಿಗೂ...

ಬೆಂಗಳೂರು: ತೋಳ ಬಂತು ತೋಳ ಕತೆ ಎಲ್ಲರಿಗೂ ಗೊತ್ತೇ ಇದೆ. ಊಟ ಮಾಡಲು ಹಠ ಮಾಡುವ ಮಕ್ಕಳನ್ನ ಈಗಲೂ ತೋಳನ ಹೆಸರಲ್ಲಿ ಹಳ್ಳಿಗಳಲ್ಲಿ ಅಮ್ಮಂದಿರು ಹೆದರಿಸುವ ಪದ್ಧತಿ ಇದೆ. ತೋಳ ಅಂದರೆ ಭಯ... ತೋಳ ಅಂದರೆ ಅಪಶಕುನ... ತೋಳ ಅಂದರೆ ಅನಿಷ್ಟ ಎನ್ನುವ ಕಲ್ಪನೆಯನ್ನು ದೂರು ಮಾಡುವ ಕಾಲ ಈಗ ಬಂದಿದೆ. ಈಗ ನಿಜವಾಗಿಯೂ ತೋಳ ಬಂದಿದೆ ತೋಳ.
ವಿಶ್ವವಿಖ್ಯಾತ ವನ್ಯಜೀವಿ ಸಿನಿಮಾ ನಿರ್ಮಾಪಕ ಜೋಡಿ, ಮೈಸೂರಿನ ಕೃಪಾಕರ್-ಸೇನಾನಿ ಸತತ 3 ವರ್ಷ ಬೆವರು ಹರಿಸಿ ಈಗ ತೋಳಗಳ ಬಗ್ಗೆ ಅದ್ಭುತ ಸಾಕ್ಷ್ಯ ಚಿತ್ರವೊಂದನ್ನು ನಿರ್ಮಿಸಿದ್ದಾರೆ. ಜಗತ್ತಿನಲ್ಲೇ ಅತಿ ವಿರಳ ಹಾಗೂ ನಾಜೂಕು ಪ್ರಾಣಿ 'ಸೀಳು ನಾಯಿ'ಗಳ ಬಗ್ಗೆ ಕೃಪಾಕರ್-ಸೇನಾನಿ ನಿರ್ಮಿಸಿದ್ದ ಡಾಕ್ಯುಮೆಂಟರಿಗಳು ಗ್ರೀನ್ ಆಸ್ಕರ್ ಪ್ರಶಸ್ತಿಗೆ ಪಾತ್ರವಾಗಿದ್ದವು. ಸೀಳು ನಾಯಿಗಳ ನಂತರ ಅದೇ ರೀತಿ ನಾಜೂಕು ಸ್ವಭಾವದ ತೋಳಗಳ ಬಗ್ಗೆ ಈ ಜೋಡಿ ಅತೀವ ಕುತೂಹಲ ಹೊಂದಿತ್ತು. ಈ ಕುತೂಹಲ ಈಗ ತಣಿದು ಡಾಕ್ಯುಮೆಂಟರಿ ರೂಪ ತಳೆದಿದೆ.
ಉತ್ತರ ಕರ್ನಾಟಕದ ಬಯಲು ಪ್ರದೇಶಗಳು ಒಂದಾನೊಂದು ಕಾಲದಲ್ಲಿ ತೋಳಗಳು ಸಾಮ್ರಾಜ್ಯವಾಗಿದ್ದವು. ಆದರೆ, ಕೃಷಿ ಪ್ರದೇಶಗಳ ವಿಸ್ತರಣೆ, ಅಣೆಕಟ್ಟು ನಿರ್ಮಾಣ, ಅತಿಯಾದ ಕಲ್ಲು ಗಣಿಗಾರಿಕೆ ಹಾಗೂ ಕಡಿಮೆಯಾಗುತ್ತಿರುವ ಕುರಿಗಾಹಿ ಪದ್ಧತಿಯಿಂದಾಗಿ ತೋಳಗಳ ಸಂಖ್ಯೆ ಕ್ಷೀಣಿಸುತ್ತಾ ಬಂದಿತ್ತು. ಇದಕ್ಕೆ ಕಾರಣ ಹುಡುಕುವ ಪ್ರಯತ್ನವೇ 'ವಾಕಿಂಗ್ ವಿತ್ ವೂಲ್ಫ್ಸ್' ಸಾಕ್ಷ್ಯಚಿತ್ರ. ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ಬಯಲು ಪ್ರದೇಶಗಳಲ್ಲಿ ಇಡೀ ಸಾಕ್ಷ್ಯ ಚಿತ್ರದ ಶೂಟಿಂಗ್ ಮಾಡಲಾಗಿದೆ.
ರಾಯಚೂರು ಮತ್ತು ಕೊಪ್ಪಳದಲ್ಲಿನ 3 ತೋಳಗಳ ಗುಂಪಿನ ಮೇಲೆ ಇಡೀ ಸಾಕ್ಷ್ಯಚಿತ್ರ ನಿರ್ಮಿಸಲಾಗಿದೆ. ತೋಳಗಳ ಬಗ್ಗೆ ಅತೀವ ಕುತೂಹಲ ಹೊಂದಿರುವ ಯುವಕನೊಬ್ಬ ಅವುಗಳ ಅಧ್ಯಯನ ಮಾಡುತ್ತಾ ಹೋದಂತೆ ತೆರೆದುಕೊಳ್ಳುವ ಅಪರೂಪದ ಮಾಹಿತಿಗಳು ಇದರಲ್ಲಿ ದಾಖಲಾಗಿದೆ. 1 ಗಂಟೆ ಅವಧಿಯ ಈ ಡಾಕ್ಯುಮೆಂಟರಿಯಲ್ಲಿ ತೋಟಗಳ ಬಗ್ಗೆ ಈ ಹಿಂದೆ ಎಲ್ಲಿಯೂ ಕಂಡುಬಂದಿರದಂಥ ವಿಸ್ಮಯಕಾರಿ ಮಾಹಿತಿ ಸೆರೆಹಿಡಿಯಲಾಗಿದೆ. ಮಾಂಸಹಾರಿಯಾದ ಈ ಪ್ರಾಣಿ ಬಾಳೆಹಣ್ಣು, ಜೋಳ ಹಾಗೂ ಎಲಚಿ ಹಣ್ಣುಗಳನ್ನು ತಿನ್ನುವ ದೃಶ್ಯಗಳನ್ನು ಶೂಟ್ ಮಾಡಲಾಗಿದೆ.
ಕರ್ನಾಟಕವೇ ಇಡೀ ಜಗತ್ತಿನ ತೋಳಗಳ ತವರು. ಇಡೀ ವಿಶ್ವದ ತೋಳಗಳ ವಂಶವಾಹಿಯನ್ನು ಹೋಲಿಸಿ ನೋಡಿದಲ್ಲಿ ಕರ್ನಾಟಕದ ತೋಳಗಳ ವಂಶವಾಹಿ ಅವುಗಳಿಗೆ ಹೋಲಿಕೆಯಾಗುವುದರಿಂದ ಇಲ್ಲಿಂದಲೇ ತೋಳಗಳು ಜಗತ್ತಿನ ನಾನಾ ಭಾಗಗಳಿಗೆ ವಲಸೆ ಹೋಗಿರುವುದು ಖಚಿತವಾಗುತ್ತವೆ. ಆದರೆ, ಆ ತೋಳಗಳು ಈಗ ಅವುಗಳ ಸ್ವಂತ ನೆಲದಲ್ಲೇ ಅವನತಿಯತ್ತ ಸಾಗುತ್ತಿವೆ ಎನ್ನುತ್ತಾರೆ ಕೃಪಾಕರ್.
-ವಿನೋದಕುಮಾರ್ ಬಿ ನಾಯಕ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


