ಹಾಫ್ ಡಾರ್ಲಿಂಗ್
ಪತ್ರಕರ್ತ ಗೌರೀಶ್ ಅಕ್ಕಿ ತಮ್ಮ ಮೊದಲ ನಿರ್ದೇಶನದ 'ಸಿನಿಮಾ ಮೈ ಡಾರ್ಲಿಂಗ್'.....

ಪತ್ರಕರ್ತ ಗೌರೀಶ್ ಅಕ್ಕಿ ತಮ್ಮ ಮೊದಲ ನಿರ್ದೇಶನದ 'ಸಿನಿಮಾ ಮೈ ಡಾರ್ಲಿಂಗ್' ಚಿತ್ರವನ್ನು 'ಅರ್ಧ' ಪೂರ್ಣಗೊಳಿಸಿದ್ದಾರೆ. ಹಾಗಾಗಿ ಚೇತನ್ ಭಗತ್‌ರ 'ಹಾಫ್ ಗರ್ಲ್‌ಫ್ರೆಂಡ್'ನಂತೆ ಅಕ್ಕಿ ಚಿತ್ರವನ್ನು ಈಗ ಹಾಫ್ ಡಾರ್ಲಿಂಗ್ ಎನ್ನಬಹುದು. ಈ ಸಂದರ್ಭದಲ್ಲಿ ನಿರ್ದೇಶಕರಾಗಿ ತಮ್ಮ ಅನಿಸಿಕೆಗಳನ್ನು ಅರ್ಥಪೂರ್ಣವಾಗಿ ಅಕ್ಕಿ ಇಲ್ಲಿ ಹಂಚಿಕೊಂಡಿದ್ದಾರೆ.
ಇದೀಗ ತಾನೆ ನಮ್ಮ ಚಿತ್ರದ ಎಡಿಟರ್ ಚಂದನ್ ವಾಟ್ಸಪ್‌ನಲ್ಲಿ ಮೆಸೇಜ್ ಒಂದನ್ನು ಕಳಿಸಿದರು. ಸರ್, ಈ ವರೆಗೂ ಶೂಟ್ ಮಾಡಿರುವುದನ್ನ ಎಡಿಟ್ ಮಾಡಿದೇನೆ, ಅದು 1.27 ನಿಮಿಷ ಬಂದಿದೆ ಅನ್ನುವ ಸುದ್ದಿ ಕೊಟ್ಟರು. ಮೈ ಗಾಡ್... ನನಗೆ ಒಂದು ಕ್ಷಣ ಹೃದಯವೇ ಬಾಯಿಗೆ ಬಂದ ಹಾಗಾಯಿತು.
ಕಾರಣ ಎರಡು, ಒಂದು ಖುಷಿ ಕೊನೆಗೂ ಸಿನೆಮಾ ಮೈ ಡಾರ್ಲಿಂಗ್ ಅನ್ನುವ ಈ ಹಳೆಯ ಕನಸಿನ ಮುಕ್ತಿ ಕಾರ್ಯ ಶುರುವಾಗಿ ಅರ್ಧ ಪೂರ್ಣಗೊಂಡಿದೆಯಲ್ಲಾ ಅಂತಾ, ಎರಡನೇ ಕಾರಣ ಆಘಾತ.
ಯಾಕೆಂದರೆ, ಇನ್ನೂ ಐದು ಹಾಡುಗಳು ಅರ್ಧ ಸಿನೆಮಾ ಶೂಟ್ ಮಾಡುವದು ಬಾಕಿ ಇರುವಾಗಲೇ ಒಂದುವರೆ ಗಂಟೆ ಸಿನೆಮಾ ಬಂದರೆ ಮುಂದೇನು ಕಥೆ ಅಂತಾ, ಹಾಡುಗಳನ್ನು ಹೊರತು ಪಡಿಸಿದರೆ ಉಳಿಯುವ ಅರ್ಧ ಗಂಟೆಯಲ್ಲಿ ಹೇಗಪ್ಪಾ ಉಳಿದರ್ಧ ಕಥೆಯನ್ನು ಹೇಳುವುದು ಅನ್ನುವ ಸಂಕಟ. ಇನ್ನೂ ಶಾರ್ಪ್ ಎಡಿಟಿಂಗ್ ಮಾಡಿ ಒಂದು ಗಂಟೆಗೆ ಇಳಿಸು' ಅಂತ ಮೆಸೆಜ್ ಮಾಡಿ ಕೂತವನ ಮನದಲ್ಲಿ ನೂರಾರು ನೆನಪುಗಳು.
ಪ್ರತಿ ನಿರ್ದೇಶಕನ ಪಾಲಿಗೆ ಪ್ರತಿ ಸಿನೆಮಾನೂ ಒಂದು ಪಯಣ. ಒಂದು ಯಾತ್ರೆ. ಒಂದು ಕನಸನ್ನು ಹೊತ್ತು ಹೆತ್ತು ಬೆಳೆಸಿ ಸಮಾಜಕ್ಕೆ ನೀಡುವ ಕೆಲಸ. ನೂರಾರು ದಿನಗಳ ಪರಿಶ್ರಮದ ಫಲವಾದ ಈ ಕನಸನ್ನು ಜನ ಒಪ್ಪಿಕೊಳ್ಳುತ್ತಾ ರೆಯೇ ಅನ್ನುವ ಆತಂಕ, ಒಪ್ಪಿಕೊಳ್ಳುತ್ತಾರೆ ಅನ್ನುವ ನಂಬಿಕೆ, ಒಪ್ಪಿಕೊಳ್ಳದಿದ್ದಾರೆ ಅನ್ನೋ ಅಪ್ಪಟ ಭಯ.
ಇದೆಲ್ಲಾ ಇದ್ದದ್ದೇ, ನಂಬಿಕೆಯಿಂದಲೇ ಪ್ರಪಂಚ ನಡಿತಾ ಇದೆ ಅನ್ನೋ ಸಮಾಧಾನದ ಮಾತನ್ನು ನನಗೆ ನಾನು ಹೇಳಿಕೊಳ್ಳುತ್ತಾ...ಸ್ವಲ್ಪ ಹಿಂದಕ್ಕೆ ಹೋಗ್ತೀನಿ...ಈ ನಿರ್ದೇಶನ ಮಾಡಬೇಕು, ಅನ್ನುವ ನನ್ನ ಹುಚ್ಚಿಗೆ ದಶಕಗಳ ಇತಿಹಾಸ ಇದೆ.
ಹೈಸ್ಕೂಲಿನಲ್ಲಿ ಸಂದೀಪ ಅನ್ನುವ ಗೆಳೆಯನೊಂದಿಗೆ ಈ ಕನಸನ್ನು ಮೊಟ್ಟ ಮೊದಲ ಬಾರಿಗೆ ಹಂಚಿಕೊಂಡದ್ದು, ಅವನು 'ಅದೇನೋ ಗೊತ್ತಿಲ್ಲ ದೋಸ್ತ, ಆದರೆ ನೀನು ಆಗ್ತಿಯಾ' ಅಂತ ಹೇಳಿದ್ದರಿಂದ ಹಿಡಿದು...ಕರ್ನಾಟಕ ವಿಶ್ವವಿದ್ಯಾಲಯದ ಶ್ಯಾಮಲಾ ಹಾಸ್ಟೇಲಿನ 123ನೇ ಕೊಠಡಿಯಲ್ಲಿ ಕುಳಿತು ಜಾವೆದ್ ಅನ್ನುವ ಗೆಳೆಯನೊಂದಿಗೆ ಇಡೀ ರಾತ್ರಿ ಸಿನೆಮಾಗಳ ಬಗ್ಗೆ ಮಾತಾಡ್ತಾ ಇದ್ದದ್ದು, 'ಆತ್ಮೀಯ'ರೊಂದಿಗೆ ನನ್ನ ಹುಚ್ಚನ್ನ ಹಂಚಿಕೊಂಡದ್ದು. ನಾನವರನ್ನು ಇಂಪ್ರೆಸ್ ಮಾಡಲೊ ಅಥವಾ ನಿಜಕ್ಕೂ ನನ್ನೊಳಗಡೆ ಅದು ಇತ್ತೋ ಗೊತ್ತಿಲ್ಲ.
ಮಧುಚಂದ್ರ ಅನ್ನುವ ನನ್ನ ಗೆಳೆಯನ ಸಲುವಾಗಿ (ಮಧುರ ಪ್ರೇಮಕಾವ್ಯ ಚಿತ್ರದ ನಿರ್ದೇಶಕ, ನಾವಿಬ್ಬರೂ ಜೊತೆಯಾಗಿ ಬರೆದ ಕಥೆಯನ್ನು ಈಗ ವಾಸ್ಕೋಡಿಗಾಮಾ ಅನ್ನುವ ಹೆಸರಿನಲ್ಲಿ ನಿರ್ದೇಶನ ಮಾಡುತ್ತಿದ್ದಾರೆ) ಪ್ರೊಡ್ಯೂಸರನ್ನು ಹುಡುಕ್ತಾ ಇದ್ದಾಗ ಒಬ್ಬ ದೊಡ್ಡ ಪ್ರೊಡ್ಯೂಸರ್ ಮನೆಯಲ್ಲಿ ಕೂತು ಕಥೆಯನ್ನು ಹೇಳಿದ ನಂತರ ಅವರ ರಿಯಾಕ್ಷನ್ ನೋಡಿ ನನಗೆ ಹೊಳೆದ ಎಳೆಯೇ 'ಸಿನೆಮಾ ಮೈ ಡಾರ್ಲಿಂಗ್'.
ಒಂದು ದಿನ ಭಾನುವಾರ. ಹೇರ್ ಕಟಿಂಗ್ ಮಾಡಿಸಲು ಸಲೂನ್‌ಗೆ ಹೋದೆ. ಏನಾದರೂ ಮಾಡುತ್ತಿರು ತಮ್ಮ ಸುಮ್ಮನೆ ಇರದಿರು ಅನ್ನೋ ಕವಿವಾಣಿಯಿಂದ ದೂರಾಗಿ ನಾವೆಲ್ಲಾ ನಿಜಕ್ಕೂ ಸುಮ್ಮನೆ ಕುಳಿತುಕೊಳ್ಳವದು ಈ ಸಲೂನ್‌ನಲ್ಲಿ ಮಾತ್ರ. ಕಾರಣ ನಮ್ಮ ಸ್ಪ್ರೆಕ್ಟ್, ಮೊಬೈಲ್ ಎಲ್ಲಾ ದೂರ ಇರಿಸಿ ನಮ್ಮನ್ನ ಬಟ್ಟೆಯಿಂದ ಕಟ್ಟಿ ಅಲ್ಲಾಡದಂತೆ ಮಾಡುತ್ತಾನೆ ಕ್ಷೌರಿಕ. ನನ್ನ ತಲೆ ನಿರುಮ್ಮಳವಾಗಿ ಯಾವುದೇ ಅಟ್ರಾಕ್ಷನ್, ಡಿಸ್ಟ್ರಾಕ್ಷನ್ ಇಲ್ಲದೇ ನೆಮ್ಮದಿಯಾಗಿ ಯೋಚಿಸಲು ಶುರುವಿಟ್ಟಿತ್ತು.
ಅದೇ ಮೊದಲ ಬಾರಿಗೆ ಯೋಚನೆ ಮಾಡುತ್ತಿದೆಯೇನೋ ಎಂಬಂತೆ. ಕೆಲವೇ ನಿಮಿಷಗಳು....ಈ ಮನಸ್ಸು, ಈ ಮೆದುಳು ಅಂತಾರಲ್ಲ ಅದು ಗಟ್ಟಿಯಾದ, ಯಾರೂ ಕದಲಿಸಲಾಗದಂತಹ ನಿರ್ಧಾರಕ್ಕೆ ಬಂದಾಗಿತ್ತು.
ಅದುವೆ ನಿರ್ದೇಶನ ಮಾಡುವ ನಿರ್ಧಾರ, ಯಾರೂ ಏನೇ ಅನ್ನಲ್ಲಿ ಏನೇ ಕಷ್ಟನಷ್ಟ ಬರಲಿ, ನಿರ್ದೇಶನಕ್ಕೆ ಇಳಿಯುವದು ಶತ ಸಿದ್ಧ....ಆದರೆ ಅಂದು ಕೈ ಗೊಂಡ ಈ ನಿರ್ಧಾರ ಫಲಿಸಿದ್ದು, ಬರೋಬ್ಬರಿ ಮೂರುವರೆ ವರ್ಷಗಳ ನಂತರವಷ್ಟೆ. ಯಾಕೆಂದರೆ ನಿರ್ದೇಶನ ಅನ್ನೋದು ಬರೀ ನೀವು ಅಂದು ಕೊಂಡಾಕ್ಷಣ ಆಗುವಂತದಲ್ಲ. ಬೇರೆಯವರೂ ನಿಮ್ಮ ಬಗ್ಗೆ ಅದನ್ನೇ ಅಂದುಕೊಳ್ಳುವರೆಗೆ ಅದು ಸಾಧ್ಯವಾಗದ ಮಾತು.
ಅದು ಆಗಸ್ಟ್ 26, ಮಂಗಳವಾರ, 2014. ಬೆಂಗಳೂರಿನ ದೇವೇಗೌಡ ಪೆಟ್ರೋಲ್ ಬಂಕ್ ಮುಂದಿರುವ ಬನಗಿರಿ ನಗರದ ಮನೆಯೇ ನಮ್ಮ ಹೀರೋಗಳ ಮನೆ ಎಂದು ನಿರ್ಧರಿಸಲಾಗಿತ್ತು. ಪ್ರೀ ಪ್ರೊಡಕ್ಷನ್ ಕೆಲಸಗಳೆಲ್ಲವೂ ಮುಗಿದಿದ್ದವು. ಆರ್ಟ್ ಡಿಪಾರ್ಟ್‌ಮೆಂಟ್‌ನ ಹೊಣೆ ಹೊತ್ತಿದ್ದ ಪವನ ಆ ಖಾಲಿ ರೂಮನ್ನು ಒಂದು ಬ್ಯಾಚುಲರ್ ರೂಮ್ ಥರ ಮಾಡಿದ.
ಅಂದು ಬೆಳಿಗ್ಗೆ 6.00 ಗಂಟೆಗೆ ಮೊಟ್ಟ ಮೊದಲನೇಯದಾಗಿ ಲೋಕೇಶನ್‌ಗೆ ಬಂದು 1Am at location ಅಂತ ಮೆಸೇಜ್ ಮಾಡಿದ್ದು ನಮ್ಮ ಕ್ಯಾಮರಾಮೆನ್ ಎಸ್.ಕೆ.ರಾವ್ 7.00 ಗಂಟೆಗೆ ಎಲ್ಲರೂ ಅಸೆಂಬ್ಲ್ ಆಗಿ ಇನ್ನೇನು ಶೂಟಿಂಗ್ ಶುರು ಮಾಡಬೇಕು ಅನ್ನುವಷ್ಟರಲ್ಲಿ ನಮ್ಮ ನಟ ಶಶಿ ದೇಶಪಾಂಡೆ ಸತ್ಯ ನಾರಾಯಣ ಪೂಜೆ ಶುರು ಮಾಡಿದರು.
ಅದನ್ನು ಮುಗಿಸಿ ಪವನನ ತಾಯಿ ಕಳಿಸಿದ್ದ ಬಿಸಿ ಬಿಸಿಯಾದ,ರುಚಿ ರುಚಿಯಾದ ಪಾಯಸದ ಪ್ರಸಾದವನ್ನು ಸ್ವೀಕರಿಸಿ, ಒಂದೆರಡು ಸಲ ರಿಹರ್ಸಲ್ ಮಾಡಿಸಿ.. ನಮ್ಮ ಆರ್ಟಿಸ್ಟ್‌ಗಳ ಕಡೆಗೊಮ್ಮೆ, ಅಸೋಸಿಯೇಟ್ ಜೀವನ್ ಕಡೆಗೊಮ್ಮೆ ನೋಡಿ. ರೆಡಿ ಅಂದಾಗ ಎಸ್.ಕೆ.ರಾವ್ ಆರ್ಡರ್ ಅಂದ್ರು. ನಾನು ಕ್ಯಾಮರಾ ಅಂದೆ, ರಾವ್ ರೋಲಿಂಗ್ ಅಂದ್ರು, ನಾನು.....'ಆಕ್ಷನ್' ಅಂದೆ....ಅಲ್ಲಿಗೆ ಹೊಸ ಕಥೆ, ಹೊಸ ಪಯಣ, ಹೊಸ ಜೀವನ ಶುರುವಾಯಿತು. ಈಗ ಅದು ಅರ್ಧಕ್ಕೆ ಬಂದು ನಿಂತಿದೆ.
-ಗೌರೀಶ್ ಅಕ್ಕಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


