ಭಟ್ ಈಸ್ ಬ್ಯಾಕ್ ವಿತ್ ಎಂ ಸಿಂಗಲ್ ಮೀನಿಂಗ್ ಜೋಕ್

ಅಲ್ಲಿ ನವರಸ ನಾಯಕ ಜಗ್ಗೇಶ್ ಮತ್ತು ನವನಾಯಕ ರಕ್ಷಿತ್ ಶೆಟ್ಟಿ ಇಬ್ಬರೂ ಇದ್ದರು. ನವರಸ ನಾಯಕ ಜಗ್ಗೇಶ್ ಹಿಂದೆ ತಮ್ಮ ಡಬಲ್ ಮೀನಿಂಗ್ ಡೈಲಾಗ್‌ಗಳಿಗೆ ಹೆಸರಾಗಿದ್ದರಬಹುದು. ಆದರೆ ಅವರೀಗ ಐ ಕ್ರ್ಯಾಕ್ಡ್ ಎಂ ಸಿಂಗಲ್ ಮೀನಿಂಗ್ ಜೋಕ್ ಎನ್ನುತ್ತಿದ್ದಾರೆ. ಅದಕ್ಕೆ ಕಾರಣ ಯೋಗರಾಜ ಭಟ್ಟರ ವಾಸ್ತುಪ್ರಕಾರ ಸಿನಿಮಾ.
ನಿಮ್ಮ ಜೊತೆ ಕೆಲಸ ಮಾಡಿ ಬಹಳನೇ ತೃಪ್ತಿ ಆಯ್ತು. ಆದಷ್ಟು ಬೇಗ ನನಗೆ ಇನ್ನೊಮ್ಮೆ ನಿಮ್ಮ ಸಿನಿಮಾದಲ್ಲಿ ಕೆಲಸ ಮಾಡುವ ಅವಕಾಶ ಕೊಡಿ ಎಂದು ಓಪನ್ ವೇದಿಕೆಯಲ್ಲಿ ಭಟ್ಟರನ್ನು ಕೇಳಿದರು ಜಗ್ಗೇಶ್.
ಅದು ವಾಸ್ತು ಪ್ರಕಾರ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ. ನಿರ್ದೇಶಕರಾಗಿರುವ ಯೋಗರಾಜ ಭಟ್ಟರು ಎಂದಿನಂತೆ ತಮ್ಮ ಸಿನಿಮಾ ಸಮಾರಂಭದ ನಿರೂಪಕರೂ ಆಗಿದ್ದರು. ತಮ್ಮ ತಂಡದ ಒಬ್ಬೊಬ್ಬರನ್ನೂ ಕರೆದು ವೇದಿಕೆಯ ಮೇಲೆ ಮಾತನಾಡಿಸಿದರು. ಮೊದಲು ಮಾತನಾಡಿದ ಜಗ್ಗೇಶ್ ವಾಸ್ತು ಪ್ರಕಾರ ತಮಗೆ ತುಂಬಾ ತೃಪ್ತಿ ಕೊಟ್ಟ ಚಿತ್ರ ಎಂದರು. ಜೊತೆಗೆ ನಿರ್ದೇಶಕರಾಗಿ ಭಟ್ಟರ ತಾಳ್ಮೆಯ ಬಗ್ಗೆಯೂ ಮಾತನಾಡಿದರು. ಒಬ್ಬ ನಟ ಹತ್ತು ಹದಿನೈದು ಟೇಕ್ ತಗೊಂಡಾಗಲೂ ಹೆಗಲ ಮೇಲೆ ಕೈ ಹಾಕಿ ಪಕ್ಕಕ್ಕೆ ಕರೆದು ಹಂಗಲ ಕಣೋ ಅಂತ ಶಾಂತವಾಗಿ ತಿಳಿಹೇಳುವ ಅವರ ಶೈಲಿಗೆ ಹ್ಯಾಟ್ಸ್ ಆಫ್ ಎಂದರು. ಅವರ ಜಾಗದಲ್ಲಿ ನಾವಿದ್ದಿದ್ದರೆ ಬಾಯಲ್ಲಿ ಬರೀ ಸಂಸ್ಕೃತನೇ ಬರ್ತಿತ್ತು ಅಂತನೂ ಸೇರಿಸಿದರು.
ಚಿತ್ರದ ನಾಯಕ ರಕ್ಷಿತ್ ಶೆಟ್ಟಿ ಜಗ್ಗೇಶ್ ಅಂಥ ನಟರೊಡನೆ ಕೆಲಸ ಮಾಡಿದ್ದು ಖುಷಿಯಾಯಿತು ಎಂದರೆ, ಇಂಥ ದೊಡ್ಡ ಬ್ಯಾನರ್‌ನಲ್ಲಿ ನಟಿಸುವ ಅವಕಾಶ ಸಿಗುತ್ತೆ ಅಂತ ಅಂದ್ಕೊಂಡಿರಲಿಲ್ಲ. ನನಗೆ ಈಗಲೂ ನಂಬಲಾಗುತ್ತಿಲ್ಲ ಎಂದಿದ್ದು ನಾಯಕಿ ಐಶಾನಿ ಶೆಟ್ಟಿ. ನಂತರ ಅಂದಿನ ಹೀರೋ ವಾಸ್ತು ಪ್ರಕಾರದ ಸಂಗೀತ ನಿರ್ದೇಶಕ ಹರಿಕೃಷ್ಣ, ಸಿನಿಮಾ ಮಾಡಿದ್ದೀವಿ ವಾಸ್ತು ಪ್ರಕಾರ, ಹಾಡು ಮಾಡಿದ್ದೀವಿ ವಸ್ತು ಪ್ರಕಾರ ಎನ್ನುತ್ತಾ ಸಿಂಪಲ್ಲಾಗಿ ತಮ್ಮ ಮಾತುಗಳನ್ನು ಮುಗಿಸಿದರು.
ನಮಗೆ ಮೊದಲ ಅವಕಾಶ ಕೊಟ್ಟವರನ್ನು ಮರೆಯಬಾರದು ಅಂತ ನಮ್ಮಪ್ಪ ಹೇಳ್ತಾ ಇದ್ರು. ಹಾಗಾಗಿ ಕರಿಸುಬ್ಬು ಅವರು ನಮ್ಮ ವಾಸ್ತು ಪ್ರಕಾರ ತಂಡದ ಹಿಂದೆ ನಿಂತಿದ್ದಾರೆ ಎಂದಿದ್ದು ಭಟ್ಟರು. ಈ ಮಾತಿಗೆ ಅವಕಾಶ ಕೊಟ್ಟವರನ್ನು ಮರೆಯದ ಭಟ್ಟರ ಗುಣ ದೊಡ್ಡದು ಎಂದು ಕರಿಸುಬ್ಬು ಮಾತಿನ ಋಣ ತೀರಿಸಿಕೊಂಡರು.
ಕೊನೆಯಲ್ಲಿ ಆಡಿಯೋ ಬಿಡುಗಡೆ ಸಮಾರಂಭಕ್ಕೆಂದೇ ಚೆನ್ನೈನಿಂದ ನೇರವಾಗಿ ಆಗಮಿಸಿದ್ದ ಯಶ್, ತಮ್ಮ ಹೆಸರಿನಿಂದಲೇ ಜನರನ್ನು ಚಿತ್ರ ಮಂದಿರಕ್ಕೆ ಕರೆದುಕೊಂಡು ಬರುವ ಕೆಪ್ಯಾಸಿಟಿ ಇರೋ ಜಗ್ಗೇಶ್ ನಿಜವಾದ ಸೂಪರ್ ಸ್ಟಾರ್ ಎನ್ನುತ್ತಾ ವಾಸ್ತು ಪ್ರಕಾರದ ಹಾಡುಗಳನ್ನು ಲೋಕಾರ್ಪಣೆ ಮಾಡಿದರು.
-ಹರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


