ಸಿನಿಮಾ ಲೇಖನ

ಸ್ಯಾಟಲೈಟ್ ಟೌನ್‌ನಲ್ಲಿ

ಸ್ಯಾಟಲೈಟ್ ಟೌನ್‌ನಲ್ಲಿ
Published On :

ಇತ್ತೀಚೆಗೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ಸಿನಿ ಸಮಾರಂಭವೊಂದರಲ್ಲಿ ಮಾತನಾಡುತ್ತ 'ನಮ್ಮ ಟಿವಿ ಚಾನೆಲ್‌ಗಳು ಸಿನಿಮಾಗಳ ಸ್ಯಾಟಲೈಟ್ ಹಕ್ಕುಗಳನ್ನು ಕೊಂಡುಕೊಳ್ಳುವ ವೇಳೆ ಕೆಲವು ವಿಭಿನ್ನ ಆಲೋಚನೆಯ ಹೊಸ ಅಲೆಯ ಚಿತ್ರಗಳಿಗೆ ಬೆಲೆ ಕೊಟ್ಟು ಅವುಗಳನ್ನು ಕಮರ್ಷಿಯಲ್ ಚಿತ್ರಗಳಿಗಿಂತ ಭಿನ್ನವಾಗಿ ನೋಡಬೇಕು' ಎಂದು ಅಭಿಪ್ರಾಯಪಟ್ಟಿದ್ದರು. ಆದರೆ ಟಿವಿ ಚಾನೆಲ್‌ಗಳಲ್ಲಿ ಇಂದು ಸ್ಯಾಟಲೈಟ್ ಹಕ್ಕುಗಳ ವ್ಯವಹಾರ ಹೇಗೆ ಆಗುತ್ತದೆ ಎಂಬುದು ಬಹುಷಃ ಮೇಷ್ಟರಿಗೆ ತಿಳಿದಿರಲಿಕ್ಕಿಲ್ಲ. ಇಲ್ಲದಿದ್ದರೆ ಅವರು ಇಷ್ಟೊಂದು ಆಶಾವಾದಿ ಹೇಳಿಕೆಯನ್ನು ಕೊಡುತ್ತಿರಲಿಲ್ಲ ಎಂಬುದು ಗಾಂಧಿನಗರದ ಕೆಲವು ನಿರ್ಮಾಪಕರ ಮಾತುಗಳನ್ನು ಕೇಳಿದ ಮೇಲೆ ಯಾರಿಗಾದರೂ ಮೂಡುವ ಆಲೋಚನೆ.
ಸಿನಿಮಾಗಳನ್ನು ಕೊಂಡುಕೊಳ್ಳುವ ವೇಳೆ ಟಿವಿ ಚಾನೆಲ್‌ಗಳು ಯಾವ ರೀತಿಯ ನೀತಿ ನಿಯಮಗಳನ್ನು ಅನುಸರಿಸುತ್ತವೆ ಎಂಬ ಪ್ರಶ್ನೆಗೆ ಉತ್ತರ ಹೇಳುವುದೇ ಕಷ್ಟ. ಏಕೆಂದರೆ ಎಲ್ಲರಿಗೂ ತಿಳಿದ ಹಾಗೆ ಇಲ್ಲಿ ಯಾವ ನೀತಿ ನಿಯಮಗಳೂ ಇಲ್ಲ!.
ಯಾರಾದರೂ ನಿರ್ಮಾಪಕರು ತಮ್ಮ ಚಿತ್ರವನ್ನು ಟಿವಿ ಚಾನೆಲ್‌ಗೆ ಮಾರಲು ಹೊರಟರೆ ಅಲ್ಲಿ ಹಲವಾರು ವಿಷಯಗಳು ಎದ್ದು ನಿಲ್ಲುತ್ತವೆ. ಎಲ್ಲೋ ಒಂದಿಬ್ಬರು ದೊಡ್ಡ ಸ್ಟಾರ್ ನಟರ ಚಿತ್ರಗಳನ್ನು ಬಿಟ್ಟರೆ ಉಳಿದೆಲ್ಲ ಚಿತ್ರಗಳಿಗೆ ಯಾವ ಕಾಮನ್ ಸೂತ್ರಗಳೂ ಇಲ್ಲಿಲ್ಲ. ಯಾವ ಚಿತ್ರಕ್ಕೆ ಎಷ್ಟು ಮೊತ್ತ ಕೊಡಬೇಕು ಎಂಬುದು ಅದು ಜಸ್ಟ್ ಅವರವರ ಮರ್ಜಿಗೆ ಬಿಟ್ಟದ್ದೇನೋ ಎನ್ನುವಂಥ ಅನುಮಾನ ಮೂಡುವ ಬೆಳವಣಿಗೆಗಳು ಇಲ್ಲಿವೆ. ಹಾಗಾಗಿಯೇ ಒಮ್ಮೊಮ್ಮೆ ಒಂದು ಸಾಧಾರಣ ಚಿತ್ರಕ್ಕೆ ಯಾರೂ ನಿರೀಕ್ಷಿಸಿರದಷ್ಟು ಹಣ ಸಂದಾಯವಾಗುತ್ತದೆ. ಇನ್ನೊಮ್ಮೆ ತಕ್ಕಮಟ್ಟಿಗೆ ಹೆಸರು ಮಾಡಿರುವ ಸಿನಿಮಾ ಕೂಡ ಒಳ್ಳೆಯ ಮೊತ್ತಕ್ಕೆ ಮಾರಾಟವಾಗಲು ಹೆಣಗುತ್ತದೆ. ಅದಕ್ಕೆ ಕಾರಣ ಅಲ್ಲಿ ಎಲ್ಲವೂ ಮಧ್ಯವರ್ತಿಗಳ ಕೈಲಿದೆ ಎಂಬ ಸತ್ಯ. ಹಾಗಾಗಿ ಒಂದು ಸಿನಿಮಾ ಎಷ್ಟೇ ಮೊತ್ತಕ್ಕೆ ಮಾರಾಟವಾದರೂ ಅದರಲ್ಲಿ ನಿರ್ಮಾಪಕರ ಕೈಗೆ ಹಣ ಸಿಗುವ ಹೊತ್ತಿಗೆ ಅದರಲ್ಲಿ ಗಣನೀಯ ಇಳಿಕೆಯಾಗಿರುತ್ತದೆ. ಸ್ಟಾರ್ ನಟರ ಚಿತ್ರಗಳ ವಿಷಯದಲ್ಲಿ ಮಧ್ಯವರ್ತಿಗಳ ಕೈಗೆ ಸೇರುವ ಹಣ ಒಮ್ಮೊಮ್ಮೆ 25 ಲಕ್ಷಕ್ಕೂ ಹೆಚ್ಚು. ಹಾಗಾಗಿ ಸ್ಟಾರ್ ಹೀರೋಗಳ ಚಿತ್ರಗಳೂ ಈ ಮಧ್ಯವರ್ತಿಗಳಿಂದ ಮುಕ್ತವಲ್ಲ.
ಇಂಥ ಅತಿ 'ಜನಪ್ರಿಯ' ಮಧ್ಯವರ್ತಿಗಳ ಪೈಕಿ ಮಹೇಶ್ ಕೊಠಾರಿ ಪ್ರಮುಖರು. ಬಹುತೇಕ ಟಿವಿ ಚಾನೆಲ್‌ಗಳಲ್ಲಿ ಇವರ ಮಾತು ನಡೆಯುತ್ತದೆ. ಅಲ್ಲಿ ಅವರು ಹೇಳಿದ್ದೇ ವೇದವಾಕ್ಯ. ಹಾಗಾಗಿ ನಿರ್ಮಾಪಕರು ಜನಕ್ಕೆ ಇಷ್ಟವಾಗುವಂಥ ಸಿನಿಮಾ ಮಾಡುವುದಕ್ಕಿಂಥ ಮಹೇಶ್ ಕೊಠಾರಿ ಅವರಿಗೆ ಇಷ್ಟವಾಗುವ ಸಿನಿಮಾಗಳನ್ನೇ ಮಾಡಬೇಕಾದ ಅನಿವಾರ್ಯತೆ ಇದೆ ಎಂಬ ಮಾತು ಗಾಂಧಿನಗರದಲ್ಲಿ ಚಾಲ್ತಿಯಲ್ಲಿದೆ. ಹಾಗಂತ ಅವರು ತಮಗಿಷ್ಟವಾದ ಸಿನಿಮಾಗಳಿಗೆ ಹೆಚ್ಚು ಹಣ ಕೊಡಿಸುತ್ತಾರೆ ಎಂದೇನಿಲ್ಲ ಬಿಡಿ. ಇಲ್ಲಿ ಮುಖ್ಯವಾಗುವುದು ಇಂಥ ಮಧ್ಯವರ್ತಿಗಳ ಜೊತೆಗೆ, ನಿರ್ಮಾಪಕರ ಅಥವಾ ಚಿತ್ರತಂಡದ ಯಾರಾದರೂ ಒಬ್ಬ ವ್ಯಕ್ತಿಯ ವೈಯಕ್ತಿಕ ಸಂಪರ್ಕಗಳು ಎಷ್ಟು ಚೆನ್ನಾಗಿವೆ ಎಂಬುದು ಮಾತ್ರ. ಕೆಲವೊಮ್ಮೆ ಉತ್ತಮ ಸಂಪರ್ಕ ಇದೆ ಎಂಬ ಕಾರಣಕ್ಕೇ ಟಿವಿ ಚಾನೆಲ್ ನಿರೂಪಕರು ಅಭಿನಯಿಸಿದ ಕಳಪೆ ಆಗಿರಬ ಹುದಾದ ಚಿತ್ರಗಳಿಗೂ ಒಳ್ಳೆಯ ರೇಟು ಕುದುರುವ ಸಾಧ್ಯತೆ ಇದೆ.
ಈಗೀಗ ಕೊಠಾರಿ ಅವರ ಜೊತೆಗೆ ಕಿರುತೆರೆಯ ಸ್ಟಾರ್ ನಿರ್ದೇಶಕ ರವಿ ಗರಣಿ ಅವರ ಹೆಸರೂ ಈ ಪಟ್ಟಿಯಲ್ಲಿ ಕೇಳಿಬರುತ್ತಿದೆ. ಅದೆಲ್ಲಾ ಸರಿ ಆದರೆ ಒಂದು ಚಿತ್ರದ ಬೆಲೆ ನಿಗದಿ ಮಾಡುವಾಗ ಚಾನೆಲ್‌ಗಳಿಗೆ ಈ ಮಧ್ಯವರ್ತಿಗಳ ಅವಶ್ಯಕತೆ ಏನಿರುತ್ತದೆ ಎಂಬುದು ಚಿತ್ರರಂಗದ ಹಲವಾರು ನಿರ್ಮಾಪಕರ ಪ್ರಶ್ನೆ. ಏಕೆಂದರೆ ಚಾನೆಲ್‌ಗಳಲ್ಲೇ, ಕ್ರಿಯೇಟಿವ್ ಹೆಡ್, ಎಂಟರ್‌ಟೈನ್‌ಮೆಂಟ್ ಹೆಡ್ ಎಂಬೆಲ್ಲಾ ನಿಪುಣರಿರುವಾಗ ಮಹೇಶ್ ಕೊಠಾರಿ ಅವರಂಥ ಹೊರಗಿನ ವ್ಯಕ್ತಿಯ ಅಭಿಪ್ರಾಯ ಮುಖ್ಯವಾಗುವುದು ಆಶ್ಚರ್ಯವೇ. ಹಾಗಂತ ಮಹೇಶ್ ಕೊಠಾರಿ ಅವರಂಥ ಮಧ್ಯವರ್ತಿಗಳಿಗೆ ಒಂದು ಚಿತ್ರದ ಯೋಗ್ಯತೆ ನಿರ್ಧರಿಸಲು ಇರುವ ಅರ್ಹತೆಯಾದರೂ ಏನು?

ಅವರು ಚಿತ್ರರಂಗದ ಪ್ರಮುಖ ನಿರ್ಮಾಪಕರೇ, ಅಥವಾ ಕ್ರಿಯಾಶೀಲ ನಿರ್ದೇಶಕರೇ? ಖಂಡಿತ ಅಲ್ಲ. ಒಂದು ವೇಳೆ ಕೊಠಾರಿ ಅವರಿಗೆ ಚಿತ್ರವೊಂದರ ಯೋಗ್ಯತೆ ನಿರ್ಧರಿಸುವ ಅರ್ಹತೆ ಇದ್ದರೂ, ಎಲ್ಲಾ ಚಾನೆಲ್‌ಗಳೂ ಅವರ ಮೂಲಕವೇ ಸ್ಯಾಟಲೈಟ್ ಹಕ್ಕುಗಳ ಮಾರಾಟ ಕಾರ್ಯ ನಿರ್ವಹಿಸುವುದೇಕೆ? ಅವರನ್ನು ಬಿಟ್ಟು ಇನ್ಯಾರಿಗೂ ಕನ್ನಡ ಸಿನಿಮಾಗಳ ಯೋಗ್ಯತೆ ತಿಳಿಯುವುದೇ ಇಲ್ಲವೇ ಎಂಬ ಪ್ರಶ್ನೆಗೆ ಉತ್ತರ ಇಲ್ಲ.
ಪಕ್ಕಾ ಕಮರ್ಷಿಯಲ್ ಚಿತ್ರಗಳ ಪರಿಸ್ಥಿತಿಯೇ ಹೀಗಿರುವಾಗ ಇನ್ನು ನಾಗತಿಹಳ್ಳಿ ಮೇಷ್ಟ್ರು ಹೇಳಿದಂತೆ ವಿಭಿನ್ನ ಚಿತ್ರಗಳಿಗೆ ಬೆಲೆ ಕೊಟ್ಟು ಅವುಗಳಿಗೆ ಸರಿಯಾದ 'ಬೆಲೆ' ಕೊಡುವ ಮಾತು ದೂರವೇ ಎನಿಸುವುದು ಸುಳ್ಳಲ್ಲ. ಆದರೂ, ಮಧ್ಯವರ್ತಿ ಮುಕ್ತವಾದ ಸ್ಯಾಟಲೈಟ್ ಹಕ್ಕುಗಳ ಮಾರಾಟ ಪದ್ಧತಿ ಬಂದು ಚಾನೆಲ್‌ಗಳಿಂದ ಸಂದಾಯವಾಗುವ ಹಣ ನಿರ್ಮಾಪಕರ ಕೈ ಸೇರುವ ಮೊದಲು ಆಗುವ ಸೋರಿಕೆಯನ್ನು ತಡೆಗಟ್ಟಲು ಸಾಧ್ಯವಾದರೆ ಅದು ಒಳ್ಳೆಯ ಬೆಳವಣಿಗೆ ಎಂಬುದು ಕೈ ಸುಟ್ಟುಕೊಂಡಿರುವ ಗಾಂಧಿನಗರದ ನಿರ್ಮಾಪಕರ ಅನಿಸಿಕೆ.

  ಹರಿ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.