ಬರಲಿದೆ ಕೃಷ್ಣವಾರ!

ಸೌಂಡು ಮಾಡದೇ ನಿರೀಕ್ಷೆ ಹೆಚ್ಚಿಸಿರುವ ಚಿತ್ರ, 'ಗಜಕೇಸರಿ'. ಯಶ್ ಹಾಗೂ ಅಮೂಲ್ಯ ಅಭಿನಯದ ಈ ಚಿತ್ರವನ್ನು ಛಾಯಾಗ್ರಾಹಕ ಕೃಷ್ಣ ನಿರ್ದೇಶಿಸಿದ್ದಾರೆ. ಇವರಿಗೆ ಇದು ಮೊದಲ ನಿರ್ದೇಶನದ ಭಾಗ್ಯ. ಛಾಯಾಗ್ರಾಹಕರಾಗಿ 'ಜೋಗ'ದಷ್ಟೆ ಅದ್ಭುತಗಳನ್ನು ತೆರೆ ಮೇಲೆ ಕಟ್ಟಿಕೊಟ್ಟ ಕೃಷ್ಣ, ಈಗ ನಿರ್ದೇಶಕರಾಗಿ ಅಂಥದ್ದೇ ಸಾಹಸಕ್ಕೆ ಕೈ ಹಾಕಿದ್ದಾರೆ. ಟ್ರೈಲರ್ ಹಾಗೂ ಪೋಸ್ಟರ್ಗಳ ಔಟ್ನಿಂದಲೇ 'ಗಜಕೇಸರಿ' ಚಿತ್ರ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಎಲ್ಲವೂ ಅಂದುಕೊಂಡಂತೆ ಆದರೆ, ಮುಂದಿನ ವಾರ 'ಗಜಕೇಸರಿ' ಚಿತ್ರ ಥಿಯೇಟರ್ಗಳಲ್ಲಿ ಸದ್ದು ಮಾಡಲಿದೆ. ಮೊದಲ ನಿರ್ದೇಶನದ ಚಿತ್ರದ ಬಿಡುಗಡೆಯ ತಯಾರಿಯಲ್ಲಿರುವ ಕೃಷ್ಣ, ಚೆನ್ನೈನಿಂದಲೇ 'ಚಿತ್ರಪ್ರಭ' ಜೊತೆ ಮಾತನಾಡಿದರು.
ಮೊದಲ ನಿರ್ದೇಶನದ ಜವಾಬ್ದಾರಿ ಹೇಗೆ ಅನಿಸುತ್ತಿದೆ?
ಛಾಯಾಗ್ರಾಹಕನಾದವನಿಗೆ ಸಿನಿಮಾ ನಿರ್ದೇಶನ ತುಂಬಾ ಸುಲಭ ಅಂದುಕೊಂಡಿದ್ದೆ. ಆದರೆ, ನಿರ್ದೇಶನ ಅಷ್ಟು ಸುಲಭಕ್ಕೆ ಒಲಿಯುವುದಿಲ್ಲ ಅಂತ ಗೊತ್ತಾಯಿತು. ತುಂಬಾ ರಿಸ್ಕ್ ತೆಗೆದುಕೊಂಡು ಮಾಡಿದ ಚಿತ್ರವಿದು. ಒಂದು ಹೊಸ ಪ್ರಪಂಚ ಕಟ್ಟಿಕೊಡುವುದು ನನಗೆ ಸವಾಲಿನ ಕೆಲಸವಾಗಿತ್ತು. ಆದರೆ, ನಮ್ಮ ಶ್ರಮದ ಫಲ ನಾವು ಅಂದುಕೊಂಡಂತೆ ಚಿತ್ರ ಮೂಡಿಬಂದಿದೆ. ಚಿತ್ರದ ತಾಂತ್ರಿಕ ಕೆಲಸಗಳಿಗಾಗಿ ಈಗ ಚೆನ್ನೈನಲ್ಲಿದ್ದೇನೆ. ಇಲ್ಲಿ ಚಿತ್ರ ನೋಡಿದವರು ತುಂಬಾ ಮೆಚ್ಚಿಕೊಂಡಿದ್ದಾರೆ. ಜವಾಬ್ದಾರಿ ಎನ್ನುವುದಕ್ಕಿಂತ ಒಂದು ಕನಸಾಗಿ ಈ ಚಿತ್ರವನ್ನು ಮಾಡಿದ್ದೇನೆ.
'ಗಜಕೇಸರಿ' ಚಿತ್ರಕ್ಕೆ ಇಂಗ್ಲಿಷ್ ಸಿನಿಮಾವೊಂದು ಸ್ಫೂರ್ತಿ ಎನ್ನುತ್ತಿದ್ದಾರಲ್ಲ?
ಖಂಡಿತ ಇದು ಸತ್ಯಕ್ಕೆ ದೂರವಾದ ಮಾತು. 'ಗಜಕೇಸರಿ' ಅಪ್ಪಟ ಕನ್ನಡದ ಚಿತ್ರ. ನಮ್ಮದೇ ಸ್ವಂತ ಕಲ್ಪನೆಯ ಸಿನಿಮಾ. ನಮ್ಮ ನೆಲದ ಕಥೆ. ಎಲ್ಲಿಂದಲೂ ಕದ್ದಿಲ್ಲ. ಚಿತ್ರ ನೋಡಿದ ಮೇಲೆ ನೀವೇ ಹೇಳುತ್ತೀರಿ. ಆದರೆ, ಮಾತನಾಡೋರಿಗೆಲ್ಲ ನಾನು ಕಥೆ ಹೇಳಕ್ಕೆ ಆಗಲ್ಲ. ಚಿತ್ರ ನೋಡಿ ಮಾತನಾಡಲಿ. ಸಾಹಸ ದೃಶ್ಯಗಳಲ್ಲಿ ಮಾತ್ರ 'ಓಂಗ್ ಬ್ಯಾಕ್' ಚಿತ್ರದ ಸ್ಫೂರ್ತಿ ಇದೆ ಅಷ್ಟೆ. ಅದು ಕಥೆಗಲ್ಲ.
ಚಿತ್ರದ ಕಥೆ ಏನು? ಒಂದು ಕಡೆ ಯಶ್ ಮತ್ತೊಂದೆಡೆ ಆನೆ ಇವರ ನಡುವಿನ ಸಂಬಂಧ ಏನು?
ಸಂಭವಾಮಿ ಯುಗೇ ಯುಗೇ ಅಂತಾರಲ್ಲ. ಅನ್ಯಾಯ ಅಬ್ಬರಿಸಿದಾಗೆಲ್ಲ ಒಬ್ಬ ರಕ್ಷಕ ಹುಟ್ಟಿಕೊಳ್ಳುತ್ತಾನೆ. ಅಂಥದ್ದೇ ಕಥೆ. ಒಂದು ಕಾಮಿಕ್ ಕಾದಂಬರಿ ಓದಿದ ಅನುಭವವಾಗುತ್ತದೆ. ಫ್ಯಾಂಟಿಸಿ ಇದೆ. ಅದರಲ್ಲೇ ಒಂದು ಚಾರಿತ್ರಿಕ ಕಥೆ ಇದೆ. ದೇಶಕ್ಕಾಗಿ ಆನೆಗಳನ್ನು ಪಳಗಿಸುವ ನಾಯಕನ ಕಥೆ. ಆತನ ಭೂತ ಮತ್ತು ವರ್ತಮಾನದ ಸನ್ನಿವೇಶಗಳು ಇಲ್ಲಿವೆ. ಹೀಗಾಗಿ ನಾಯಕನ ಜೊತೆ ಆನೆ, ಆನೆಯೊಟ್ಟಿಗೆ ನಾಯಕ ಇದ್ದಾನೆ.
ಪೋಸ್ಟರ್ಗಳ ಲುಕ್ನಿಂದಲೇ ಗಮನ ಸೆಳೆದಿರುವ 'ಗಜಕೇಸರಿ' ಚಿತ್ರದ ವಿಶೇಷತೆ ಏನು?
ದುಡಿದ ಹಣದಲ್ಲಿ ನಮ್ಮ ತಂದೆ ನಮಗೆ ಸಿನಿಮಾ ತೋರಿಸುತ್ತಿದ್ದರು. ಅಂದರೆ, ಒಳ್ಳೆಯ ಸಿನಿಮಾಕ್ಕಾಗಿ ದುಡಿಮೆಯನ್ನು ಖರ್ಚು ಮಾಡುತ್ತಿದ್ದರು. ನನ್ನ ತಂದೆ ಜೊತೆ ನಾನು ಸುಮ್ಮನೆ ಒಂದು ಸಿನಿಮಾ ನೋಡೋಣ ಅಂತ ಹೋಗುತ್ತಿರಲಿಲ್ಲ. ಒಳ್ಳೆಯ ಚಿತ್ರವನ್ನೇ ತೋರಿಸುತ್ತಾರೆಂಬ ನಂಬಿಕೆಯಲ್ಲಿ ಅವರ ಹಿಂದೆ ಹೋಗುತ್ತಿದ್ದೆ. ಈ ಚಿತ್ರ ಕೂಡ ಅಂಥದ್ದೇ ನಂಬಿಕೆ ಮೂಡಿಸುತ್ತದೆ. ಪಕ್ಕಾ ಕಮರ್ಷಿಯಲ್ ಚಿತ್ರವಾದರೂ ಅದರ ನಿರೂಪಣೆ ಅಪರೂಪ ಎನಿಸುತ್ತದೆ.
ಸರಿ, ಈ ಚಿತ್ರದ ಹೈಲೈಟ್ಗಳೇನು?
ನನ್ನ ಚಿತ್ರವನ್ನು ನಾನೇ ವಿಭಾಗಿಸಿ, 'ಇವು ಚಿತ್ರದ ಹೈಲೈಟ್ಗಳು' ಅಂತ ಪ್ರತ್ಯೇಕವಾಗಿ ಹೇಳಲಾರೆ. ನನ್ನ ಪ್ರಕಾರ ಇಡೀ ಚಿತ್ರವೇ ಒಂದು ಹೈಲೈಟ್. ನೀವು ತಮಿಳು ಚಿತ್ರಗಳಲ್ಲಿ ರಜನಿಕಾಂತ್, ಎಂಜಿಆರ್ ಹಾಗೂ ತೆಲುಗು ಚಿತ್ರಗಳಲ್ಲಿ ಎನ್ಟಿಆರ್ರನ್ನು ನೋಡಿ ಚಪ್ಪಾಳೆ ಹೊಡೆಯುತ್ತೀರಲ್ಲ, ಹಾಗೆ ನಮ್ಮ ಕನ್ನಡದಲ್ಲೂ ಅಂಥ ಐಕಾನ್ಗಳು ಇದ್ದಾರೆ. ನಾನು ಡಾ.ರಾಜ್ಕುಮಾರ್ ಅಭಿಮಾನಿಯಾಗಿ ಅವರನ್ನ ಇಲ್ಲಿ ತೋರಿಸಿದ್ದೇನೆ. ಆದರೆ, ರಾಜ್ ಇಮೇಜ್ ಅನ್ನು ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿಲ್ಲ. ಚಿತ್ರ ನೋಡಿದಾಗ ರಾಜ್ ಟ್ರ್ಯಾಕ್ ನಿಮಗೆ ಇಷ್ಟವಾಗಿ ನೀವೇ ಮಾತನಾಡುತ್ತೀರಿ.
'ಗಜಕೇಸರಿ' ಚಿತ್ರಕ್ಕೆ ನಿರ್ದೇಶಕ ಯೋಗರಾಜ್ ಭಟ್ಟರ ಕೊಡುಗೆ ಏನು?
ಈ ಚಿತ್ರ ಶುರುವಾಗಲಿಕ್ಕೆ ಮೂಲ ಕಾರಣಕರ್ತರು ಅವರೇ. ಕಥೆ ಅವರದ್ದೇ. ಆದರೆ, 'ಗಜಪತಿ' ಚಿತ್ರದ ಕಥೆಗೂ, 'ಗಜಕೇಸರಿ' ಚಿತ್ರದ ಕಥೆಗೂ ಸಂಬಂಧವಿಲ್ಲ. ಭಟ್ಟರು ಕೊಟ್ಟ ಕಥೆಗೆ ನಾನು, ನನ್ನ ಸ್ನೇಹಿತರ ಜೊತೆ ಸೇರಿ ಚಿತ್ರಕಥೆ ಮಾಡಿಕೊಂಡಿದ್ದೇನೆ.
ಚಿತ್ರದ ಕಲಾವಿದರ ಬಗ್ಗೆ ಹೇಳಿ?
45ರಿಂದ 50 ಮಂದಿ ದೊಡ್ಡ ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ನಾಯಕನಾಗಿ ಯಶ್, ನಾಯಕಿಯಾಗಿ ಅಮೂಲ್ಯ ಹಾಗೂ ಅನಂತ್ನಾಗ್, ದತ್ತಣ್ಣ, ಸಾಧುಕೋಕಿಲ, ಶಿವರಾಮ್, ರಾಜೇಶ್ ನಟರಂಗ್ ಮುಂತಾದವರು ಮುಖ್ಯ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ಛಾಯಾಗ್ರಾಹಕ ಕೃಷ್ಣ ಅವರು ಮುಂದೆ ನಿರ್ದೇಶನದ ಕಡೆ ಹೆಚ್ಚು ಗಮನ ಕೊಡುತ್ತಾರೆಯೇ?
ಈಗಾಗಲೇ ಎರಡ್ಮೂರು ಚಿತ್ರಗಳು ನಿರ್ದೇಶಿಸುವ ಅವಕಾಶ ಬಂದಿದೆ. ಆದರೆ, 'ಗಜಕೇಸರಿ' ಚಿತ್ರ ನೋಡಿದ ಮೇಲೆ ನಿರ್ಧಾರ ಮಾಡಿ ಅಂತ ನಿರ್ಮಾಪಕರಿಗೆ ಹೇಳಿದ್ದೇನೆ. ನನ್ನ ನಿರ್ದೇಶನದ ಮೇಲೆ ನನಗೆ ನಂಬಿಕೆ ಇದ್ದಂತೆ ನನ್ನ ಚಿತ್ರದ ಮೇಲೂ ನಂಬಿಕೆ ಉಂಟು. ಖಂಡಿತ ನಿರ್ದೇಶಕನಾಗಿ ಹೆಚ್ಚು ಹೆಚ್ಚು ಚಿತ್ರಗಳನ್ನು ಕೊಡುತ್ತೇನೆ. ಜೊತೆಗೆ ಕ್ಯಾಮೆರಾ ಇದ್ದೇ ಇರುತ್ತದೆ.
'ಗಜಕೇಸರಿ' ಚಿತ್ರವನ್ನು ಯಾಕೆ ನೋಡಬೇಕು ಎನ್ನುವವರಿಗೆ ನಿಮ್ಮ ಸಲಹೆ?
ಒಬ್ಬ ಸಾಮಾನ್ಯ ಕನ್ನಡಿಗನ ಸಿನಿಮಾ ಅಂತ ನೋಡಿ.
- ಆರ್. ಕೇಶವಮೂರ್ತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


