ವಿನಯ ಸಿದ್ಧ

ಕೊನೆಗೂ ಡಾ. ರಾಜ್‌ಕುಮಾರ್ ಕುಟುಂಬದ ಮೂರನೇ ತಲೆಮಾರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಾಗಿದೆ. ನಟ ಮತ್ತು ನಿರ್ಮಾಪಕ ರಾಘವೇಂದ್ರ ರಾಜ್‌ಕುಮಾರ್ ಪುತ್ರ ವಿನಯ್ ರಾಘವೇಂದ್ರ ಬಣ್ಣ ಹಚ್ಚಿದ್ದಾರೆ. ಮಿಲನ ಪ್ರಕಾಶ್ ನಿರ್ದೇಶನದ 'ಸಿದ್ಧಾರ್ಥ' ಚಿತ್ರದ ಮೂಲಕ ನಾಯಕ ನಟನಾಗುತ್ತಿರುವ ವಿನಯ್‌ರ ಚಿತ್ರ ಇತ್ತೀಚೆಗೆ ಸೆಟ್ಟೇರಿತು. ಬಾಂಬೆ ಬೆಡಗಿ ಅಪೂರ್ವ ಅರೋರಾ ವಿನಯ್‌ರಿಗೆ ಜೋಡಿ. ಚಿತ್ರದ ಮುಹೂರ್ತದಂದು ನಟ ಪುನೀತ್ ರಾಜ್‌ಕುಮಾರ್ ಕ್ಲಾಪ್ ಮಾಡಿದರೆ, ಹಿರಿಯ ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್ ಕ್ಯಾಮೆರಾ ಚಾಲನೆ ಮಾಡಿದರು.
ಚಿತ್ರದ ಮುಹೂರ್ತ ದಿನ ಕುರುಚುಲು ಗಡ್ಡ ಬಿಟ್ಟು ಕಂಠೀರವ ಸ್ಟುಡಿಯೋಗೆ ಪ್ರವೇಶವಾದ ವಿನಯ್ ರಾಘವೇಂದ್ರ ಅವರ ಹಿಂದೆ ಡಾ.ರಾಜ್‌ಕುಮಾರ್ ಕುಟುಂಬ ಬೆನ್ನೆಲುಬಾಗಿತ್ತು. ಜೊತೆಗೆ ಚಿತ್ರರಂಗದ ಗಣ್ಯರು ಕೂಡ ಆಗಮಿಸಿ ರಾಜ್ ಮನೆತನದ ಮೂರನೇ ತಲೆಮಾರಿನ ಕುಡಿಯ ಸಿನಿಮಾ ಪ್ರವೇಶಕ್ಕೆ ಶುಭ ಕೋರಿದರು. ಈಗಷ್ಟೆ 20 ವರ್ಷ ದಾಟಿರುವ ವಿನಯ್ ರಾಘವೇಂದ್ರ ಅವರಲ್ಲಿ ನಾಯಕನಟನಿಗೆ ಬೇಕಾದ ಲಕ್ಷಣಗಳು ಇವೆ. ಮೊದಲ ಬಾರಿಗೆ ವಿನಯ್ ಅವರ ತಂದೆ ರಾಘವೇಂದ್ರ ರಾಜ್‌ಕುಮಾರ್ ತಮ್ಮ ಪುತ್ರನ ಬಗ್ಗೆ ಪರಿಚಯ ಮಾಡುವ ಮೂಲಕ 'ಸಿದ್ಧಾರ್ಥ' ಚಿತ್ರತಂಡದ ಮಾತುಕತೆ ಆರಂಭವಾಯಿತು.
ಚಿತ್ರಕಥೆಯಲ್ಲಿ ತುಂಬಾ ವಿಭಿನ್ನತೆ ಕಾಯ್ದುಕೊಂಡಿರುವ ನಿರ್ದೇಶಕ ಪ್ರಕಾಶ್, ವಿನಯ್ ಅವರಿಗೆ ಮೊದಲ ಚಿತ್ರದಲ್ಲಿ ದೊಡ್ಡ ಬ್ರೇಕ್ ನೀಡಬೇಕು ಎನ್ನುವ ಯೋಚನೆಯಲ್ಲಿದ್ದಾರೆ. ಅಲ್ಲದೆ ತುಂಬಾ ದಿನಗಳ ನಂತರ ಮತ್ತೆ ನಿರ್ದೇಶನಕ್ಕೆ ಬಂದಿರುವ ಪ್ರಕಾಶ್ ಅವರಿಗೆ 'ಸಿದ್ಧಾರ್ಥ' ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಜೊತೆಗೆ ಛಾಯಾಗ್ರಾಹಕ ಕೃಷ್ಣಕುಮಾರ್ ವಿನಯ್ ರಾಘವೇಂದ್ರ ಅವರನ್ನು ಸಾಕಷ್ಟು ಸ್ಟೈಲೀಶ್ ಹಾಗೂ ಬ್ಯೂಟಿಯಾಗಿ ತೋರಿಸಲು ಕಸರತ್ತು ಮಾಡುತ್ತಿದ್ದಾರೆ. 'ಇಲ್ಲಿ ನನ್ನ ಕೆಲಸವು ಸವಾಲಿನಿಂದ ಕೂಡಿದೆ. ಇಡೀ ಚಿತ್ರವನ್ನು ಅತ್ಯಂತ ಸುಂದರವಾಗಿ ಕಟ್ಟಿಕೊಡುವ ಪ್ರಯತ್ನ ಮಾಡುವುದಾಗಿ' ಕೃಷ್ಣಕುಮಾರ್ ತಿಳಿಸಿದರು.
ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ ಸಂಯೋಜನೆ. ಕೃಷ್ಣಕುಮಾರ್ ಕ್ಯಾಮೆರಾ. 'ವಂಶಿ', 'ಮಿಲನ' ನಂತರ ಪ್ರಕಾಶ್, ರಾಜ್ ಕುಟುಂಬಕ್ಕೆ ಚಿತ್ರ ನಿರ್ದೇಶಿಸುತ್ತಿದ್ದಾರೆ. 'ಕ್ಯೂಟ್ ಲವ್ ಸ್ಟೋರಿ. ಪಕ್ಕಾ ಸ್ಟೈಲೀಶ್ ಆಗಿರುತ್ತದೆ. ನನ್ನ ಮೇಲೆ ಹೆಚ್ಚು ಜವಾಬ್ದಾರಿ ಇದೆ. ಒಬ್ಬ ನಿರ್ದೇಶಕನಾಗಿ ಈ ಚಿತ್ರ ನನಗೆ ಒಂದು ಸವಾಲು' ಎಂದಷ್ಟೇ ಪ್ರಕಾಶ್ ಹೇಳಿಕೊಂಡರು. ಇನ್ನು ವಿನಯ್ ರಾಘವೇಂದ್ರ ನಟನಾಗಲು ಬೇಕಾದ ತಯಾರಿ ನಡೆಸಿಕೊಂಡು ಬಂದಿದ್ದಾರಂತೆ. 'ತುಂಬಾ ಹಿಂದೆಯೇ ನಟನೆಗೆ ಬೇಕಾದ ತರಬೇತಿ ಮಾಡಿಕೊಂಡಿದ್ದೇ. ಪ್ರಕಾಶ್ ಅವರು ಒಳ್ಳೆಯ ಕಥೆಯ ಮೂಲಕ ನನ್ನನ್ನು ಪರಿಚಸುತ್ತಿದ್ದಾರೆ' ಎಂದರು ವಿನಯ್. 'ನನ್ನ ಮಗ ಈಗ ನಿಮ್ಮನೆ ಹುಡುಗ. ಅವನ ಚಿತ್ರಕ್ಕೆ ನಿಮ್ಮ ಸಹಕಾರ ಇರಲಿ' ಎಂದರು ರಾಘವೇಂದ್ರ ರಾಜ್‌ಕುಮಾರ್.
ಕ್ಯಾಮೆರಾ ಚಾಲನೆ ಮಾಡಿದ ಪಾರ್ವತಮ್ಮ ರಾಜ್‌ಕುಮಾರ್, 'ನನ್ನ ಮೊಮ್ಮಗನ ಮೊದಲ ಚಿತ್ರ. ಅವನ ಅಭಿನಯದಲ್ಲಿ ಮುಂದೆ ಒಳ್ಳೆಯ ಚಿತ್ರಗಳು ಮೂಡಿಬರಲಿ' ಎಂದು ಶುಭ ಹಾರೈಸಿದರು. ವಿ. ಹರಿಕೃಷ್ಣ ಹಾಗೂ ಕೃಷ್ಣಕುಮಾರ್ ಅಭಿಪ್ರಾಯ ಹೇಳಿಕೊಂಡರು. ಮುಂಬೈ ನಟಿ ಅಪೂರ್ವ ಅರೋರಾ ಈಗಾಗಲೇ 'ಓ ಮೈ ಗಾಡ್' ಹಾಗೂ 'ಟೀನೇಜ್' ಚಿತ್ರಗಳಲ್ಲಿ ನಟಿಸಿದ್ದಾಳೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


