ಸಿನಿಮಾ ಲೇಖನ

ಜಗ್ಗಿ ನಡೆ ಮುಂದೆ ಎಲ್ವಿನ್ ಜೋಷ್

ಜಗ್ಗಿ ನಡೆ ಮುಂದೆ ಎಲ್ವಿನ್ ಜೋಷ್
Published On :

'ಜಗ್ಗಿ' ಚಿತ್ರ ಬಜೆಟ್ ಭಯಕ್ಕೆ ಜಗ್ಗದೆ, ಶೂಟಿಂಗ್ ಅವಧಿಯನ್ನು ಜಗ್ಗಾಡದೆ ಅಂದುಕೊಂಡಂತೆಯೇ ಚಿತ್ರವನ್ನು ಪೂರ್ಣಗೊಳಿಸಿದೆ. ಈಗ ಚಿತ್ರದ ಪ್ರಚಾರಕ್ಕೆ ಮುನ್ನುಡಿ ಬರೆಯುವ ಹೊತ್ತು. ಅದು ಹಾಡುಗಳ ಬಿಡುಗಡೆಯ ಮೂಲಕ. ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಹಾಡುಗಳ ವಿಶೇಷ ಸ್ಕ್ರೀನಿಂಗ್ ಏರ್ಪಡಿಸಿ ಆ ನಂತರ ಆಡಿಯೋ ಬಿಡುಗಡೆ ಮಾಡಿದ ಚಿತ್ರತಂಡ, ಜಗ್ಗಿಯ ಹಾಡುಗಳು ಸ್ಯಾಂಡಲ್‌ವುಡ್ ಇತಿಹಾಸದಲ್ಲೇ ಮೈಲಿಗಲ್ಲು ಸ್ಥಾಪಿಸಲಿದೆ ಎಂಬ ಓವರ್‌ಕಾನ್ಫಿಡೆನ್ಸ್‌ವ್ಯಕ್ತಪಡಿಸಿತು. ಎರಡು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಚಿತ್ರ ಒಟ್ಟು ಅರವತ್ತು ದಿನಗಳಲ್ಲಿ ಪೂರ್ಣಗೊಂಡಿದ್ದು,  ಚಿತ್ರದ ವಿಶೇಷ ಅಂಶವೇ ಸಂಗೀತ ಎಂಬುದು ಎಲ್ಲರ ಒಕ್ಕೊರಲ ನುಡಿ.
ಈಗಾಗಲೇ ತೂಫಾನ್ ಮತ್ತು ಪರಿಣಯ ಚಿತ್ರಗಳಿಗೆ ಸಂಗೀತ ನೀಡಿರುವ ಎಲ್ವಿನ್ ಜೋಶ್ವಾಗೆ ಈ ಮೂರನೇ ಚಿತ್ರದ ಮೂಲಕ ವೃತ್ತಿ ಜೀವನಕ್ಕೆ ತಿರುವು ಸಿಗುವ ಭರವಸೆ.  ಅವಿನಾಶ್ ಛೆಬ್ಬಿ ಹಾಡಿರುವ ಗೀತೆ ವಾಹಿನಿಗಳ  ಟಾಪ್ ಟೆನ್ ಲಿಸ್ಟುಗಳಲ್ಲಿ  ಸ್ಥಾನ ಪಡೆಯಲಿದೆ ಎಂಬುದು ಎಲ್ವಿನ್‌ರ ವಿಶ್ವಾಸ.  ವಾಣಿಜ್ಯ  ಮಂಡಳಿ ಅಧ್ಯಕ್ಷ ಗಂಗರಾಜು, ನಾರಾಯಣಪ್ಪ, ಎಸ್.ಎ. ಗೋವಿಂದರಾಜು, ಚಿತ್ರದ ನಾಯಕ ಸುನಿಲ್‌ರಾಜು, ನಾಯಕಿ ಅಹನ ಮತ್ತಿತರರ ಉಪಸ್ಥಿತಿಯಲ್ಲಿ ಚಿತ್ರದ ಹಾಡುಗಳ ಬಿಡುಗಡೆಯಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಗಂಗರಾಜು ಪೈರೆಸಿ ತಡೆಗಟ್ಟಲು ಅಗತ್ಯ ವ್ಯೂಹ ರಚಿಸಿದ್ದು ಈಗಾಗಲೇ ಅದರ ಫಲಶ್ರುತಿ ಕಾಣಲಾರಂಭಿಸಿದೆ  ಎನ್ನುವ ಹೊತ್ತಿಗೆ ಗಜಕೇಸರಿ ಸೇರಿದಂತೆ ಹಲವು ಹೊಸ ಚಿತ್ರಗಳ ಹಾಡುಗಳು ಅಲ್ಲಿ ನೆರದಿದ್ದವರ ಮೊಬೈಲುಗಳಲ್ಲಿ ನೆಟ್ ಮೂಲಕ ಸೇರಿಕೊಂಡಾಗಿತ್ತು.
ಮುಹೂರ್ತದ ಹೊತ್ತಲ್ಲಿ ಕಥೆಯೇ ಚಿತ್ರದ ಹೀರೋ ಎಂದಿದ್ದ ನಾಯಕ ಸುನಿಲ್‌ರಾಜ್, ಈಗ 'ಚಿತ್ರ ನೋಡಿ ಆಮೇಲೆ ಮಾತನಾಡಿ' ಎನ್ನುವಷ್ಟರ ಮಟ್ಟಿಗೆ ಬೆಳೆದಿದ್ದಾರೆ. ಕಥೆಯೇ ನಾಯಕ ಅಂದಿದ್ದರಿಂದ, ಜಗ್ಗಿ ಅನ್ನೋದು ನಾಮಪದವೋ ಕ್ರಿಯಾಪದವೋ ಎಂಬ ಪ್ರಶ್ನೆಯನ್ನು ಕೇಳಿ ಯಾರೂ ನಾಯಕನನ್ನು ಇಕ್ಕಟ್ಟಿಗೆ ಸಿಲುಕಿಸಲಿಲ್ಲ ಎಂಬುದು ಸಮಾಧಾನದ ಸಂಗತಿ. ದಿನಕ್ಕೆ ಐದು ಬಾರಿ  ಒತ್ತಾಯದಿಂದ ಊಟ ತಿಂಡಿ ಕೊಟ್ಟು ಮನೆ ಮಗಳಂತೆ ನೋಡಿಕೊಂಡಿದ್ದಾರೆ ಎಂದು ನಿರ್ಮಾಪಕರಿಗೆ ಕೃತಜ್ಞತೆ ಸಲ್ಲಿಸಿದ ನಾಯಕಿ ಅಹನಾಳನ್ನು ನೋಡಿದಾಗ ದಿನಕ್ಕೈದು ಬಾರಿ ಊಟಮಾಡಿದ ಆಳ್ತನವಂತೂ ಕಾಣಲಿಲ್ಲ. ಅಂದ ಹಾಗೆ ಜಗ್ಗಿ ಜೂನ್ ತಿಂಗಳ ಮೂರನೇ ವಾರದಲ್ಲಿ ಬಿಡುಗಡೆಗೆ ಸಿದ್ಧತೆ ನಡೆಸುತ್ತಿದೆ. ಈ ಮೊದಲು ರಾಜ್‌ಕಿಶೋರ್, ಹೆಚ್. ವಾಸು, ಆನಂದ್.ಪಿ.ರಾಜು ಮುಂತಾದವರೊಡನೆ ಸಹಾಯಕರಾಗಿ ದುಡಿದು ಅನುಭವವಿರುವ  ನಿರ್ದೇಶಕ ರಾಜು  ತಮ್ಮ ಚೊಚ್ಚಲ ಚಿತ್ರ ಪ್ರೇಕ್ಷಕರ ದುಡ್ಡಿಗೆ ಮತ್ತು ಸಮಯಕ್ಕೆ ಖಂಡಿತಾ ದೋಖಾ ಮಾಡುವುದಿಲ್ಲ ಎಂಬ ಮಾತನ್ನು ಪುನರುಚ್ಚರಿಸಿದರು.
ಇದೀಗ ಸುವರ್ಣ 24್ಢ7 ವಾಹಿನಿಯಲ್ಲಿ ಉಡೀಸ್ ಎಂಬ ಟಾಕ್‌ಶೋದಿಂದ ಜನಪ್ರಿಯರಾಗಿರುವ ವಿಶ್ವ, ಜಗ್ಗಿ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಹಾಸ್ಯದ ಜೊತೆಗೆ ಕಥೆಯಲ್ಲೂ ಒಂದು ಟ್ವಿಸ್ಟ್ ಕೊಡಲಿದ್ದಾರಂತೆ.

= ನವೀನ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.