ಮಾಣಿಕ್ಯ ಮಾತು
ನಟ, ನಿರ್ದೇಶಕ ಸುದೀಪ್ ಒಂದು ಲಾಂಗ್ ಗ್ಯಾಪ್ ನಂತರ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ನಿರೀಕ್ಷೆ, ವಿಶ್ವಾಸ ಹಾಗೂ ಕನ್ನಡ ಪ್ರೇಕ್ಷಕರ ..

ನಟ, ನಿರ್ದೇಶಕ ಸುದೀಪ್ ಒಂದು ಲಾಂಗ್ ಗ್ಯಾಪ್ ನಂತರ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ನಿರೀಕ್ಷೆ, ವಿಶ್ವಾಸ ಹಾಗೂ ಕನ್ನಡ ಪ್ರೇಕ್ಷಕರ ಮೇಲಿನ ನಂಬಿಕೆಯೊಂದಿಗೆ 'ಮಾಣಿಕ್ಯ' ಚಿತ್ರವನ್ನು ಹೊತ್ತು ತರುತ್ತಿರುವ ಸುದೀಪ್‌ಗೆ ಇಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಕೂಡ ಜೊತೆಯಾಗಿದ್ದಾರೆ ಎಂಬುದು ವಿಶೇಷ. ಅದ್ಧೂರಿ ಮೇಕಿಂಗ್, ಬಿಗ್ ಬಜೆಟ್‌ನ ಹೆಗ್ಗಳಿಕೆಯೊಂದಿಗೆ ತೆಲುಗಿನಿಂದ ಕನ್ನಡಕ್ಕೆ ಬಂದಿರುವ 'ಮಾಣಿಕ್ಯ' ಚಿತ್ರದ್ದು ಎಂಟರ್‌ಟೈನ್‌ಮೆಂಟ್, ಸೆಂಟಿಮೆಂಟ್, ಫ್ಯಾಮಿಲಿ ಡ್ರಾಮಾ. ನಡುವೆ ಪುಟ್ಟ ಸಂದೇಶ.
ಹೆಚ್ಚೂಕಮ್ಮಿ ಒಂದು ವರ್ಷ ತೆಗೆದುಕೊಂಡಿರುವ 'ಮಾಣಿಕ್ಯ'ನ ಮೇಲೆ ಪ್ರೇಕ್ಷಕನ ಟಾಕ್ ಈಗಷ್ಟೇ ಶುರುವಾಗಬೇಕಿದೆ. ಆದರೆ, ಆಗಲೇ ಬ್ಯುಸಿನೆಸ್ ಸದ್ದು ಮಾಡಿದೆ. ಟಿವಿ ಹಾಗೂ ಡಬ್ಬಿಂಗ್ ರೈಟ್ಸ್ ದೊಡ್ಡ ಮೊತ್ತಕ್ಕೆ ಮಾರಾಟವಾಗಿದೆ. ರಿಮೇಕ್ ಚಿತ್ರವೊಂದು ಡಬ್ಬಿಂಗ್ ರೈಟ್ಸ್ ಮಾರಾಟವಾಗಿರುವುದಕ್ಕೆ 'ಈಗ' ಚಿತ್ರದ ನೆರಳು ಕಾರಣ ಅನ್ನಬಹುದು. ಇರುವೆಯ ದಂಡಿನಂತೆ ಚಿತ್ರರಂಗದ ಘಟಾನುಘಟಿ ಕಲಾವಿದರು 'ಮಾಣಿಕ್ಯ'ದಲ್ಲಿ ಸಂಗಮಗೊಂಡಿದ್ದಾರೆ. ಆಂಧ್ರದ 'ಮಿರ್ಚಿ'ಗೆ 'ಮಾಣಿಕ್ಯ' ಅಂತ ಕನ್ನಡದ ಹೆಸರಿಟ್ಟಿದ್ದು ಹಿರಿಯ ನಟ, ನಿರ್ದೇಶಕ ಹಾಗೂ ನಿರ್ಮಾಪಕ ದ್ವಾರಕೀಶ್. ರನ್ಯಾ ಚಿತ್ರದ ನಾಯಕಿ. ಉಳಿದಂತೆ ರಮ್ಯಾ ಕೃಷ್ಣ, ಶೋಭರಾಜ್, ಸಂಗೀತ, ಸಾಧು ಕೋಕಿಲಾ, ರಿಷಿಕಾ ಸಿಂಗ್, ಶ್ವೇತಾ ಪಂಡಿತ್, ರವಿಶಂಕರ್, ಚಿತ್ರಾ ಶೆಣೈ, ಸತ್ಯಜಿತ್ ಹೀಗೆ ಬಹಳಷ್ಟು ಕಲಾವಿದರು ಇಲ್ಲಿದ್ದಾರೆ. ಇವರ ನಡುವೆ ಸುದೀಪ್, ರವಿಚಂದ್ರನ್, ರಮ್ಯಾಕೃಷ್ಣ ಮುಖ್ಯ ಪಿಲ್ಲರ್‌ಗಳು. ಓವರ್ ಟು ಸುದೀಪ್...
ಸರಿ, ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಸುದೀಪ್ ಈ ಇಬ್ಬರಲ್ಲಿ 'ಮಾಣಿಕ್ಯ' ಯಾರು?
ನಾನು ವೈಯಕ್ತಿವಾಗಿ ಹೇಳುವುದಾದರೆ ಇಲ್ಲಿ ರವಿಚಂದ್ರನ್ ಅವರೇ ಮಾಣಿಕ್ಯ. ಆದರೆ, ಒಂದು ಚಿತ್ರವಾಗಿ ನೋಡಿದಾಗ ಅಲ್ಲಿ ಕಥೆ ಮತ್ತು ಮತ್ತು ಅದರ ನಾಯಕ ಮಾಣಿಕ್ಯನಾಗಿ ಪ್ರೇಕ್ಷಕರಿಗೆ ಕಾಣುತ್ತಾನೆ. ಅಂಥ ಮಾಣಿಕ್ಯ ಕೂಡ ಸೃಷ್ಟಿಯಾಗುವುದು ರವಿಚಂದ್ರನ್‌ರಂಥ ಮತ್ತೊಬ್ಬ ಗ್ರೇಟ್ ನಟನಿಂದಲೇ.
ತಂದೆಯ ಪಾತ್ರಕ್ಕೆ ರವಿಚಂದ್ರನ್ ಅವರೇ ಯಾಕೆ ಬೇಕಿತ್ತು? ಮೊದಲ ಬಾರಿಗೆ ಇಬ್ಬರು ತೆರೆ ಮೇಲೆ ಒಟ್ಟಾಗಿದ್ದೀರಿ. ಹೇಗನಿಸುತ್ತಿದೆ?
ಇದು ಒಳ್ಳೆಯ ಪ್ರಶ್ನೆಯಾಯಿತು... ಆ ಪಾತ್ರ ಮತ್ತು ಆ ಕಥೆಗೆ ಒಬ್ಬ ತೂಕದ ವ್ಯಕ್ತಿಯ ಅಗತ್ಯವಿತ್ತು. ನನ್ನ ತಂದೆಯ ಪಾತ್ರಕ್ಕೆ ರವಿಚಂದ್ರನ್‌ಗಿಂತ ಮೇರು ನಟ ಮತ್ತೊಬ್ಬರು ಕಾಣಲಿಲ್ಲ. ಅವರು ಒಪ್ಪಿಕೊಂಡು ಇಲ್ಲಿ ನಟಿಸಿದ್ದೇ ನಮ್ಮ ಚಿತ್ರದ ಅದೃಷ್ಟ. ಯಾಕೆಂದರೆ ರವಿಚಂದ್ರನ್ ಅವರು ಇನ್ನೂ ನಾಯಕರಾಗಿದ್ದಾರೆ. ಅಂಥದ್ದರಲ್ಲಿ ತಂದೆ ಪಾತ್ರಕ್ಕೆ ಒಪ್ಪಿ ಬರುವುದು ಅಂದ್ರೆ ಸುಲಭ ಅಲ್ಲ. ಇನ್ನು ಚಿತ್ರ ನೋಡಿದ ಮೇಲೆ ನಮ್ಮ ಕಾಂಬಿನೇಷನ್ ಬಗ್ಗೆ ನೀವೇ ಮಾತನಾಡುತ್ತೀರಿ. ನಾನು ನಿರ್ದೇಶಕ, ನಟ ಎನ್ನುವ ಭಾವನೆಗಿಂತ ಅವರ ಹುಡುಗನಾಗಿ ಇಲ್ಲಿ ಕೆಲಸ ಮಾಡಿದ್ದೇನೆ.
'ಮಾಣಿಕ್ಯ'ದ ವಿಶೇಷತೆಗಳೇನು? ಜನ ಯಾಕೆ ಈ ಚಿತ್ರವನ್ನು ನೋಡಬೇಕು?
ಇದು ಪರಿಪೂರ್ಣ ಮನರಂಜನೆಯ ಚಿತ್ರ. ಕೌಟುಂಬಿಕ ಮೌಲ್ಯಗಳಿವೆ. ಹಳ್ಳಿಗಾಡಿನ ಜೀವನ ಇದೆ. ಸಂಬಂಧಗಳ ಮಹತ್ವ ಇದೆ. ಅಭಿಮಾನಿಗಳಿಗೆ ನಿರಾಸೆಯಾಗದಂತೆ ರೋಮಾಂಚನಗೊಳ್ಳುವ ಸಾಹಸ ದೃಶ್ಯಗಳಿವೆ. ಎಲ್ಲಕ್ಕಿಂತ ಮುಖ್ಯವಾಗಿ ಅರ್ಜುನ್ ಜನ್ಯರ ಸಂಗೀತದಲ್ಲಿ ಮೂಡಿ ಬಂದಿರುವ ಹಾಡುಗಳು ಪ್ರೇಕ್ಷಕನಿಗೆ ಕಚಗುಳಿ ಇಡುತ್ತವೆ. ಒಂದೊಂದು ಸಂಭಾಷಣೆಯೂ ನೋಡುಗನ ಮನ ಮುಟ್ಟುತ್ತದೆ. ಅದ್ಧೂರಿ ಸೆಟ್‌ಗಳಿವೆ. ಒಳ್ಳೆಯ ಕನ್ನಡ ಸಿನಿಮಾ ಅಂದುಕೊಂಡು ನೋಡಲಿ.
ಬೇರೆ ಭಾಷೆಯ ಚಿತ್ರಗಳ ಸುದ್ದಿ ಏನು? ತಮಿಳುನಾಡಿನಲ್ಲಿ 6 ಕೋಟಿ ಸಂಭಾವನೆ ತೆಗೆದುಕೊಳ್ಳುತ್ತೀದ್ದರಂತೆ, 'ಬಾಹುಬಲಿ'ಯಲ್ಲಿ ಮತ್ತೆ ವಿಲನ್ ಆಗಿದ್ದೀರಂತೆ?
ದಯವಿಟ್ಟು ಈಗ 'ಮಾಣಿಕ್ಯ'ದ ಕುರಿತು ಮಾತ್ರ ಮಾತನಾಡಿ. ಇನ್ನು 6 ಕೋಟಿ ಸಂಭಾವನೆ ವಿಚಾರಕ್ಕೆ ಬರುವುದಾದರೆ ನನಗಿಂತ ಜಾಸ್ತಿ ಸಂಭಾವನೆ ತೆಗೆದುಕೊಳ್ಳುವವರು ತಮಿಳು ಚಿತ್ರರಂಗದಲ್ಲಿದ್ದಾರೆ ಸ್ವಾಮಿ. ಉಳಿದ ವಿಚಾರಗಳ ಬಗ್ಗೆ ನೋ ಕಾಮೆಂಟ್ಸ್.
- ಆರ್. ಕೇಶವಮೂರ್ತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


