ಮಂಜಣ್ಣನ ಹನಿ ಹೊಸ ರಾಗರಾಗಿಣಿ

'ನಿರ್ಭಯದಿಂದ ಈ ಬಾರಿ ಯುಗಾದಿ ಹಬ್ಬ ಮಾಡಿ. ನಿಮ್ಮ ಸೆಕ್ಯೂರಿಟಿಗೆ ರಾಗಿಣಿ ಐಪಿಎಸ್ ಇದ್ದಾರೆ'ಅಂತ ನಿರ್ಮಾಪಕ ಕೆ.ಮಂಜು ಹೆಣ್ಮಕ್ಕಳಿಗೆ ಅಭಯ ನೀಡುತ್ತಿದ್ದಾರೆ. ಹಬ್ಬದ ಪ್ರಯುಕ್ತ ಎರಡು ದಿನ ಮುಂಚಿತವಾಗಿಯೇ ಅಂದರೆ ಇದೇ ಇಪ್ಪತ್ತೆಂಟರಿಂದ 'ರಾಗಿಣಿ ಐಪಿಎಸ್' ರಾಜ್ಯಾದ್ಯಂತ ಡ್ಯೂಟಿ ಶುರು ಮಾಡಲಿದ್ದಾರೆ. ಮಹಿಳಾ ಶೋಷಣೆಯ ವಿರುದ್ಧ ದನಿಯೆತ್ತುವ ಮಹಿಳೆಯೇ ಪ್ರಧಾನ ಪಾತ್ರದಲ್ಲಿರುವ ಚಿತ್ರವನ್ನು ಮಹಿಳೆಯರಿಗಾಗಿಯೇ ಅರ್ಪಿಸುತ್ತಿದ್ದು, ಮಂಜು ಇದನ್ನು ಮಹಿಳಾ ದಿನದಂದೇ ಬಿಡುಗಡೆ ಮಾಡುವ ಆಸೆ ಹೊಂದಿದ್ದರು. 'ಲೇಟ್ ಆದರೂ ಲೇಟೆಸ್ಟ್ ಆಗಿ ಬರ್ತೀವಿ' ಅನ್ನೋ ಓಲ್ಡ್ ಡೈಲಾಗಲ್ಲಿ ಬಹುನಂಬಿಕೆ ಇಟ್ಟಿರುವ ತಂಡ, ಇದೀಗ ಭರ್ಜರಿಯಾಗಿಯೇ ಚಿತ್ರಬಿಡುಗಡೆ ಮಾಡುತ್ತಿದೆ.
ದಿಲ್ರಂಗೀಲದಿಂದ ರಂಗಾಗಿರುವ ಕೆ.ಮಂಜು, ರಾಗಿಣಿ ಐಪಿಎಸ್ ಬಗ್ಗೆ ಮಾತನಾಡಿಸಿದಾಗ ಖಡಕ್ ಪೊಲೀಸ್ ಆಫೀಸರ್ ರೀತಿಯಲ್ಲೇ ಉತ್ತರಿಸಿದರು.
ಹಳೇ ಪ್ರಶ್ನೆ ಆದರೂ ಹೊಸದಾಗಿ ಕೇಳ್ತಿದೀನಿ. ನಿಜಕ್ಕೂ ಚಿತ್ರ ತಡವಾಗಿದ್ದಕ್ಕೆ ಕಾರಣ ಏನು?
ತಡ ಏನಿಲ್ಲ. ಕಥೆ ಒಂಚೂರು ಅಪ್ಡೇಟ್ ಮಾಡಿಕೊಂಡ್ವಿ. ಗ್ರಾಫಿಕ್ ವರ್ಕ್ ತುಂಬಾ ಇತ್ತು. ಜೊತೆಗೆ, ರಾಜೇಶ್ ರಾಮ್ನಾಥ್ ಟೈಮ್ ತಗೊಂಡು ಅದ್ಭುತವಾಗಿ ರೀರೆಕಾರ್ಡಿಂಗ್ ಮಾಡಿದ್ದಾರೆ. ಅವೆಲ್ಲ ಆಗೋಕೆ ಇಷ್ಟು ದಿನ ಬೇಕಾಯ್ತು. ಬೇಗ ಲೇಟು ಅನ್ನೋದಕ್ಕಿಂತ ಚಿತ್ರ ಚೆನ್ನಾಗಿ ಬರೋದು ಮುಖ್ಯ.
ಮಹಿಳಾಪ್ರಧಾನ ಚಿತ್ರ ಅಂತೀರ. ಚಿತ್ರ ಟ್ರೇಲರಲ್ಲಿ ರೇಪ್ ದೃಶ್ಯಗಳು, ಐಟಂ ಸಾಂಗ್ ಇವೇ ಕಾಣಿಸುತ್ತಿವೆ. ಮಹಿಳೆಯರು ಈ ಚಿತ್ರ ನೋಡೋಕೆ ಬರ್ತಾರೆ ಅನಿಸುತ್ತಾ?
ಅನಾವಶ್ಯಕ ಅಂತ ಯಾವ ದೃಶ್ಯಗಳೂ ಇಲ್ಲ. ಎಲ್ಲವೂ ಕಥೆಗೆ ಪೂರಕವಾಗಿದೆ. ಅತ್ಯಾಚಾರ ದೃಶ್ಯಗಳಿವೆ. ಯಾಕಂದ್ರೆ ಕಥೆ ನಿಂತಿರೋದೇ ಆ ಥರದ ಘಟನೆಗಳ ಮೇಲೆ. ಅಶ್ಲೀಲವಾಗಿ ಇಲ್ಲ ಅಂತ ಹೇಳಬಲ್ಲೆ.
ಚಿತ್ರಕ್ಕೆ ಎ ಸರ್ಟಿಫಿಕೇಟ್ ಸಿಕ್ಕಿದೆಯಲ್ಲ. ಇದರಿಂದ ಚಿತ್ರಕ್ಕೆ ಕಮರ್ಷಿಯಲಿ ಹೊಡೆತ ಬೀಳೋಲ್ವೇ?
ಹಿಂಸಾತ್ಮಕ ದೃಶ್ಯಗಳಿವೆ ಅನ್ನೋ ಕಾರಣಕ್ಕೆ ಒಂದಷ್ಟು ಕಟ್ಸ್ ಜೊತೆ ಯು/ಎ ಬೇಕೋ ಅಥವಾ ಯಾವುದೇ ಕಟ್ಸ್ ಇಲ್ಲದೆ ಎ ಸರ್ಟಿಫಿಕೇಟ್ ಬೇಕೋ ಅಂತ ನಮ್ಮನ್ನೇ ಕೇಳಿದ್ರು. ಕಥೆಯ ಆತ್ಮವನ್ನೇ ಕತ್ತರಿಸಿದರೆ ಹೇಗೆ ಅಂತ, ಯಾವುದೇ ಕಟ್ಸ್ ಇಲ್ಲದೆ ಎ ಸರ್ಟಿಫಿಕೇಟ್ಗೆ ಒಪ್ಕೊಂಡ್ವಿ ಅಷ್ಟೇ. ಇದರಿಂದ ಚಿತ್ರಕ್ಕೆ ಖಂಡಿತ ತೊಂದರೆ ಆಗೋಲ್ಲ.
ಹಿಂದೆ ಮಾಲಾಶ್ರೀ ಥರದ ನಟಿಯರು ಖಾಕಿ ಹಾಕಿ ಖಡಕ್ ಪಾತ್ರದಲ್ಲಿ ಅಭಿನಯಿಸಿದ್ದರು. ಇಲ್ಲಿ ಕೆಲವು ಸ್ಟಿಲ್ಸ್ ನೋಡಿದ್ರೆ ರಾಗಿಣಿ ಖಾಕಿ ಹಾಕಿದ್ದರೂ ಕೂಡ ಶರ್ಟಿನ ಬಟನ್ ತೆರೆದು ಎಕ್ಸ್ ಪೋಸ್ ಮಾಡಿದಂತಿದೆಯಲ್ಲ?
ಇಲ್ಲ. ನೀವು ಸಿನಿಮಾ ನೋಡಿದರೆ ಖಂಡಿತ ಅದಕ್ಕೆಲ್ಲ ಉತ್ತರ ಸಿಗುತ್ತೆ. ಮೊದಲನೆಯದಾಗಿ ರಾಗಿಣಿಯನ್ನು ರಫ್ ಅಂಡ್ ಟಫ್ ಆಗಿ ತೋರಿಸೋದೇ ಒಂದು ಸವಾಲು. ಆಕೆ ನೂರಕ್ಕೆ ಇನ್ನೂರು ಪರ್ಸೆಂಟ್ ಇನ್ವಾಲ್ವ್ ಆಗಿ ಅಭಿನಯಿಸಿದ್ದಾರೆ. ಹಾಗಾಗಿ ಪಾತ್ರಕ್ಕೊಂದು ಬಲ ಬಂದಿದೆ. ಅಲ್ಲದೆ ಇದರಲ್ಲಿ ಆಕೆಯ ಪಾತ್ರಕ್ಕೆ ಗ್ಲಾಮರ್ ಹಾಗೂ ಖಡಕ್ ಎರಡೂ ಶೇಡ್ ಇದೆ.
ಚಿತ್ರದ ಬಗ್ಗೆ ಎಷ್ಟರ ಮಟ್ಟಿಗಿನ ಭರವಸೆ ಇಟ್ಕೊಂಡಿಂದೀರಿ?
ನನ್ನ ಹಿಂದಿನ ಎಲ್ಲ ಚಿತ್ರಗಳ ಮೇಲೆ ಎಷ್ಟು ಭರವಸೆ ಇಟ್ಟಿದ್ನೋ ಅದಕ್ಕಿಂತ ಹೆಚ್ಚು ಅನ್ಕೊಳ್ಳಿ. ನೂರಾ ಇಪ್ಪತ್ತಕ್ಕೂ ಹೆಚ್ಚು ಥೇಟರಲ್ಲಿ ಬಿಡುಗಡೆ ಮಾಡ್ತಿದೀನಿ. ಹಿಂದಿಗೆ ಹತ್ತು ಲಕ್ಷಕ್ಕೆ ಡಬ್ಬಿಂಗ್ ರೈಟ್ಸ್ ಮಾರಿದೀನಿ. ತೆಲುಗಿಗೆ ಇಪ್ಪತ್ತೈದು ಲಕ್ಷ ಡಿಮ್ಯಾಂಡಿದೆ. ಸದ್ಯದಲ್ಲೇ ಫೈನಲ್ ಆಗುತ್ತೆ. ಇನ್ನು ಜನ ಇಷ್ಟ ಪಡೋದು ಬಾಕಿಯಷ್ಟೇ.
ಟಿವಿ ರೈಟ್ಸ್ ಸೇಲ್ ಆಗಿದ್ಯೋ ಹೇಗೆ?
ಟೀವಿ ರೈಟ್ಸ್ ತುಂಬಾ ಹಿಂದೆಯೇ ಕೊಟ್ಟುಬಿಟ್ಟೆ. ಈಗಾಗಿದ್ರೆ ಭಾರೀ ಮೊತ್ತಕ್ಕೆ ಹೋಗ್ತಿತ್ತು. ಆದರೆ ನಾನು ಮಾತು ತಪ್ಪದ ಮಗ. ಒಂದ್ಸಲ ಮಾತು ಕೊಟ್ರೆ ಮುಗೀತು.
ಫಿಲ್ಮಲ್ಲಿ ಉಪೇಂದ್ರ ಧ್ವನಿ ಇದ್ಯಂತೆ. ಇದು ಸುಮ್ನೆ ಗಿಮಿಕ್ಕಾ ಅಥವಾ ಈ ಸ್ಟಾರ್ಸ್ ವಾಯ್ಸ್ ಬಳಸೋ ಟ್ರೆಂಡ್ ನಡೀತಿದೆ ಅಂತಾನಾ?
ಹಾಗೆಲ್ಲ ಏನಿಲ್ಲ. ಈ ಪರಿಕಲ್ಪನೆ ಕಥೆಯಿಂದ ಆಚೆ ಇಲ್ಲ.ದಕ್ಷ ಪೋಲಿಸ್ ಅಧಿಕಾರಿಯೊಬ್ಬಳ ಬಗ್ಗೆ ಪರಿಚಯ ಮಾಡಿಕೊಡೋಕೆ ಒಂದು ಗಟ್ಟಿಯಾದ ಫೋರ್ಸ್ ಇರೋ ಧ್ವನಿ ಬೇಕಿತ್ತು. ಉಪೇಂದ್ರ ಅವರನ್ನ ಬಿಟ್ಟು ಇನ್ಯಾರೂ ಸೂಟ್ ಆಗ್ತಿರಲಿಲ್ಲ. ಅದಕ್ಕೆ ಅವರ ಧ್ವನಿ ಬಳಸಿದೀವಿ.
-ನವೀನ್ ಸಾಗರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


